ಬೆಂಗಳೂರು, ಮಾರ್ಚ್ 5: ಚಿಕ್ಕಬಳ್ಳಾಪುರ, ಬಳ್ಳಾರಿ ಜಿಲ್ಲೆಗಳ ನಂತರ ಇದೀಗ ಬೆಂಗಳೂರಿಗೂ ಹಕ್ಕಿಜ್ವರದ ಭೀತಿ ಕಾಡಲು ಶುರುವಾಗಿದೆ. ಪಕ್ಕದ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಹಕ್ಕಿಜ್ವರ ಧೃಡಪಟ್ಟಿದ್ದು, ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದೆ. ಹಕ್ಕಿಜ್ವರ ನಿಯಂತ್ರಣಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದೀಗ ಬೆಂಗಳೂರಿನ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿದ್ಧತೆಗೆ ಸೂಚನೆ ನೀಡಲಾಗಿದ್ದು, ಪ್ರತ್ಯೇಕ ವಾರ್ಡ್ ಮಾಡಲು ನಿರ್ದೇಶನ ನೀಡಲಾಗಿದೆ.
ಹಕ್ಕಿಜ್ವರದ ಗುಣಲಕ್ಷಣ ಕಂಡು ಬಂದರೆ ಅಂಥವರಿಗೆ RTPCR ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಇನ್ನು ಜ್ವರ ಬಂದಲ್ಲಿ ಜನರು ವೈದ್ಯರನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಜತೆಗೆ, ಫ್ಲೂ ಬಂದ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲರನ್ನೂ ಕೂಡ ಪರೀಕ್ಷೆಗೆ ಒಳಪಡಿಸಲು ಇಲಾಖೆ ಮುಂದಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಹಕ್ಕಿಜ್ವರ ಕೂಡ ಸಾಮಾನ್ಯ ಜ್ವರವಾಗಿದ್ದು, ಹೆಚ್ಚಿನ ಆತಂಕ ಪಡುವ ಅಗತ್ಯವಿಲ್ಲ. ಹಾಗೆಂದು ನಿರ್ಲಕ್ಷ್ಯ ವಹಿಸಲೇಬಾರದು ಎಂದು ವೈದ್ಯರು ಹೇಳಿದ್ದು, ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಿದ್ದಾರೆ. ಮಾಂಸವನ್ನು ಚೆನ್ನಾಗಿ ಬೇಯಿಸಿ ತಿಂದರೆ ಸಮಸ್ಯೆ ಇಲ್ಲ ಎಂದು ಕೆಸಿ ಜನರಲ್ ಆಸ್ಪತ್ರೆಯ ಜನರಲ್ ಮೆಡಿಸಿನ್ ವಿಭಾಗದ ಡಾ ರೇಖಾ ಹೇಳಿದ್ದಾರೆ.
ಹಕ್ಕಿ ಜ್ವರದ ಭೀತಿಯಿಂದ ನಗರದ ಜನ ಚಿಕನ್ ಬೇಡವೇ ಬೇಡ ಎನ್ನುತ್ತಿದ್ದಾರೆ. ಕಳೆದ ಭಾನುವಾರದಿಂದಲೇ ಜನ ಮಟನ್ ಕಡೆ ಮುಖ ಮಾಡಿದ್ದು, ಮಟನ್‌ಗೆ ಶೇಕಡಾ 20 ರಷ್ಟು ಬೇಡಿಕೆ ಹೆಚ್ಚಾಗಿದೆ ಎಂದು ಮಟನ್ ಸ್ಟಾಲ್ ಮಾಲೀಕ ಸಂತೋಷ್ ಎಂಬವರು ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ವ್ಯಾಪಿಸುತ್ತಲೇ ಇದೆ ಹಕ್ಕಿಜ್ವರ: ಬಳ್ಳಾರಿಯಲ್ಲಿ 17 ಸಾವಿರ ಕೋಳಿಗಳ ಮಾರಣಹೋಮ
ಸದ್ಯ ಹಕ್ಕಿಜ್ವರದ ಹಿನ್ನೆಲೆ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಮುಂಜಾಗ್ರತೆ ವಹಿಸಿದೆ. ಮತ್ತೊಂದ್ಕಡೆ ಚಿಕನ್ ಬಿಟ್ಟಿರುವ ಜನ ಮಟನ್ ಸವಿಯೋದಕ್ಕೆ ಮುಂದಾಗಿದ್ದಾರೆ.