ಬಿಟ್‌ಕಾಯಿನ್ ಹಗರಣ: ಮೊಹಮ್ಮದ್ ನಲಪಾಡ್‌ಗೆ ಇಡಿ ಇಕ್ಕಳ, ವಿಚಾರಣೆಗೆ ಹಾಜರಾಗಲು ಕಟ್ಟುನಿಟ್ಟಿನ ಆದೇಶ
ಬಹುಕೋಟಿ ಬಿಟ್‌ಕಾಯಿನ್ ಹಗರಣ ಹಾಗೂ ಅದಕ್ಕೆ ಸಂಬಂಧಿಸಿದ ಮನಿ ಲಾಂಡ್ರಿಂಗ್ ಕೇಸ್ನಲ್ಲಿ ಕಿಂಗ್‌ಪಿನ್ ಶ್ರೀಕಿ ಜೊತೆ ಅಕ್ರಮ ನಂಟು ಹೊಂದಿರುವ ಆರೋಪದ ಮೇಲೆ ಶಾಸಕ ಎನ್ಎ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್‌ಗೆ ಇಡಿ ಅಧಿಕಾರಿಗಳು 2ನೇ ಬಾರಿ ನೋಟಿಸ್ ನೀಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಕಟ್ಟಿನಿಟ್ಟಿನ ಸೂಚನೆ ನೀಡಿದ್ದಾರೆ.

ಬೆಂಗಳೂರು, ಜೂನ್ 1: ರಾಜ್ಯದಲ್ಲಿ ಒಂದೆಡೆ ಡಿಕೆ ಶಿವಕುಮಾರ್ ಅವರ ಮುಖ್ಯಮಂತ್ರಿ ಪಟ್ಟಾಭಿಷೇಕಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿದ್ದು, ಅವರ ಆಪ್ತ ವಲಯದಲ್ಲಿ ಸಂಭ್ರಮ ಮನೆಮಾಡಿದೆ. ಆದರೆ, ಇದೇ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಹಾಗೂ ಯೂತ್ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್‌ಗೆ ಜಾರಿ ನಿರ್ದೇಶನಾಲಯ (ED) ಬಿಗ್ ಶಾಕ್ ನೀಡಿದೆ. ಬಹುಕೋಟಿ ಬಿಟ್‌ಕಾಯಿನ್ ಹಗರಣ (Bitcoin Scam) ಮತ್ತು ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ನಲಪಾಡ್‌ಗೆ ಎರಡನೇ ಬಾರಿಗೆ ನೋಟಿಸ್ ಜಾರಿ ಮಾಡಿದ್ದು, ಇಂದು (ಜೂನ್ 1) ವಿಚಾರಣೆಗೆ ಹಾಜರಾಗುವಂತೆ ಕಟ್ಟುನಿಟ್ಟಿನ ಬುಲಾವ್ ನೀಡಿದ್ದಾರೆ.
ಮುಖ್ಯಾಂಶಗಳು
- ಬಿಟ್‌ಕಾಯಿನ್ ಪ್ರಕರಣದ ಕಿಂಗ್‌ಪಿನ್ ಶ್ರೀಕಿ ಜೊತೆಗಿನ ನಂಟಿನ ಹಿನ್ನೆಲೆ, ಮೊಹಮ್ಮದ್ ನಲಪಾಡ್‌ಗೆ 2ನೇ ಬಾರಿಗೆ ಇಡಿ ಸಮನ್ಸ್.
- ರಾಜಕೀಯ ಕಾರ್ಯಗಳ ನೆಪವೊಡ್ಡಿ ಮೊದಲ ಇಡಿ ವಿಚಾರಣೆಗೆ ಗೈರಾಗಿದ್ದ ನಲಪಾಡ್.
- ಜೂನ್ 1 ರಂದೇ ವಿಚಾರಣೆಗೆ ಹಾಜರಾಗಲು ಕಟಟುನಿಟ್ಟಿನ ಸೂಚನೆ.
ಶ್ರೀಕಿಗೆ ಹೋಟೆಲ್ ರೂಂ ಬುಕಿಂಗ್, ಆರ್ಥಿಕ ನಂಟಿನ ಆರೋಪ
ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಬಿಟ್‌ಕಾಯಿನ್ ಹಗರಣದ ಪ್ರಮುಖ ಸೂತ್ರಧಾರಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಈಗಾಗಲೇ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿರುವ ಇಡಿ ಅಧಿಕಾರಿಗಳು, ಮೊಹಮ್ಮದ್ ನಲಪಾಡ್ ವಿರುದ್ಧ ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಶ್ರೀಕಿ ಜೊತೆ ನಲಪಾಡ್ ನಿರಂತರ ಸಂಪರ್ಕದಲ್ಲಿದ್ದರು ಹಾಗೂ ಆತನ ಅಕ್ರಮ ಚಟುವಟಿಕೆಗಳಿಗೆ ಐಷಾರಾಮಿ ಹೋಟೆಲ್‌ಗಳಲ್ಲಿ ರೂಮ್ ಬುಕ್ ಮಾಡಿಕೊಟ್ಟಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿಂದೆ ನಲಪಾಡ್, ರಹೀಮ್ ಖಾನ್ ಸೇರಿದಂತೆ ಮೂವರ ನಿವಾಸ ಹಾಗೂ ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ಸತತ ಮೂರು ದಿನಗಳ ಕಾಲ ಜಂಟಿ ದಾಳಿ ನಡೆಸಿ, ಡಿಜಿಟಲ್ ಪುರಾವೆ ಹಾಗೂ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದರು.
ಮೊದಲ ನೋಟಿಸ್ ನೀಡಿದಾಗ ರಾಜಕೀಯ ಕೆಲಸಗಳ ಕಾರಣ ನೀಡಿ ನಲಪಾಡ್ ವಿಚಾರಣೆಯಿಂದ ನುಣುಚಿಕೊಂಡಿದ್ದರು. ಆದರೆ, ಈ ಬಾರಿ ಶ್ರೀಕಿ ಜೊತೆಗಿನ ಆರ್ಥಿಕ ವ್ಯವಹಾರಗಳ ಪಕ್ಕಾ ದಾಖಲೆಗಳು ಸಿಕ್ಕಲ್ಲಿ ಇಡಿ ಅಧಿಕಾರಿಗಳು ನಲಪಾಡ್‌ನನ್ನು ವಶಕ್ಕೆ ಪಡೆಯುವ ಸಾಧ್ಯತೆ ದಟ್ಟವಾಗಿದೆ.
ಏನಿದು ಬಿಟ್‌ಕಾಯಿನ್ ಹಗರಣ?
ರಾಜ್ಯದಲ್ಲಿ ತಲ್ಲಣ ಮೂಡಿಸಿದ್ದ ಈ ಬಿಟ್‌ಕಾಯಿನ್ ಹಗರಣವು ಸರ್ಕಾರಿ ವೆಬ್‌ಸೈಟ್‌ಗಳು, ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್‌ಗಳು ಮತ್ತು ಆನ್‌ಲೈನ್ ಗೇಮಿಂಗ್ ಸೈಟ್‌ಗಳನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ಮೌಲ್ಯದ ಡಿಜಿಟಲ್ ಹಣವನ್ನು ಲೂಟಿ ಮಾಡಿದ ಆರೋಪಕ್ಕೆ ಸಂಬಂಧಿಸಿದ್ದಾಗಿದೆ. ಹ್ಯಾಕರ್ ಶ್ರೀಕಿ ವಿವಿಧ ಅಕ್ರಮ ಮಾರ್ಗಗಳ ಮೂಲಕ ಗಳಿಸಿದ್ದ ಬಿಟ್‌ಕಾಯಿನ್‌ಗಳನ್ನು ಮನಿ ಲಾಂಡ್ರಿಂಗ್ ಮಾಡಲು ಸುನೀಶ್ ಹೆಗ್ಡೆ ಮತ್ತು ರಾಬಿನ್ ಖಂಡೇವಾಲ ಸಹಾಯ ಮಾಡಿದ್ದರು. ಇತ್ತೀಚೆಗಷ್ಟೇ ಇಡಿ ಅಧಿಕಾರಿಗಳು ಇವರಿಂದ 47 ಲಕ್ಷ ರೂ. ಮೌಲ್ಯದ ಬಿಟ್‌ಕಾಯಿನ್‌ಗಳನ್ನು ವಶಪಡಿಸಿಕೊಂಡಿದ್ದರು. ಶ್ರೀಕಿಗೆ ರಾಜಕೀಯ ನಾಯಕರ ಪುತ್ರರ ಆಶ್ರಯವಿತ್ತು ಎಂಬ ಆರೋಪದಡಿಯಲ್ಲಿ ಶಾಸಕ ಎನ್.ಎ. ಹ್ಯಾರಿಸ್ ಹಾಗೂ ನಲಪಾಡ್ ನಿವಾಸದ ಮೇಲೆ ದಾಳಿ ನಡೆದಿತ್ತು.
ಇದನ್ನೂ ಓದಿ: ಬಿಟ್ ಕಾಯಿನ್ ಹಗರಣಕ್ಕೂ ಶಾಸಕ ಹ್ಯಾರಿಸ್ಗೂ ಏನು ಸಂಬಂಧ? ಕಾಂಗ್ರೆಸ್ ಶಾಸಕರ, ನಲಪಾಡ್ ಮನೆ ಮೇಲೆ ಇಡಿ ದಾಳಿ ಮಾಡಿದ್ದೇಕೆ?
ಸದ್ಯ ಶ್ರೀಕಿ, ಸುನೀಶ್ ಹಾಗೂ ರಾಬಿನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಇವರ ವಿಚಾರಣೆಯ ಬೆನ್ನಲ್ಲೇ ನಲಪಾಡ್‌ಗೆ ಇಡಿ ಇಕ್ಕಳ ಬಿಗಿಗೊಳಿಸಿದೆ.
ವರದಿ: ವಿಕಾಸ್, ಟಿವಿ9, ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





