Nirani VS Yatnal: ಸಿಎಂ ಆಗೋದಿಕ್ಕೆ ನಿರಾಣಿ ಸೂಟ್ ಹೊಲಿಸಿಕೊಂಡಿದ್ದಾರೆ: ಬಸನಗೌಡ ಯತ್ನಾಳ್ ಲೇವಡಿಗೆ ಮುರುಗೇಶ್ ನಿರಾಣಿ ತಿರುಗೇಟು
ಹೌದು, ನಾನು ಸೂಟ್ ಹೊಲಿಸಿಕೊಂಡಿದ್ದೇನೆ. ನಿತ್ಯ ಸೂಟ್ ಇಲ್ಲದೇ ಹೇಗೆ ಓಡಾಡಲಿ ಎಂದು ಬೇಸರದ ಧ್ವನಿಯಲ್ಲಿ ಪ್ರತಿಕ್ರಿಯಿಸಿದರು.
ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಸದಾ ಸುದ್ದಿಯಲ್ಲಿರುವ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಯುಗಾದಿ ವೇಳೆಗೆ ಬದಲಾವಣೆ ಆಗುತ್ತದೆ. ಬದಲಾವಣೆ ಜಗದ ನಿಯಮ. ಬದಲಾವಣೆ ಆಗದಿದ್ದರೆ ಯುಗಾದಿ ಎಂದು ಏಕೆ ಕರೆಯಬೇಕು ಎಂದು ಮುಗುಂ ಆಗಿ ಹೇಳಿದರು. ನಮಗೆ ದಿಲ್ಲಿಗೆ ಹೋಗುವ ಚಟ ಇದೆ, ಅಲ್ಲಿ ಹಳೇ ಸ್ನೇಹಿತರಿದ್ದಾರೆ. ಅವರ ಭೇಟಿಗಾಗಿ ನಾವು ದೆಹಲಿಗೆ ಹೋಗುತ್ತೇವೆ. ಸಂಪುಟ ಪುನಾರಚನೆ ಯಾವಾಗಾದರೂ ಮಾಡಲಿ, ಒಳ್ಳೆಯ ಆಡಳಿತ ನೀಡಲಿ ಎಂದು ಯತ್ನಾಳ್ ಮತ್ತೊಂದು ನಾನಾರ್ಥದ ಹೇಳಿಕೆ ನೀಡಿದರು. ಪಂಚಮಸಾಲಿ ಕೂಡಲಸಂಗಮ ಪೀಠದ ಸ್ವಾಮೀಜಿ ನಮ್ಮ ಸಮುದಾಯದ ಪರವಾಗಿ ಹೋರಾಟ ಮಾಡಿದ್ದಾರೆ. ಅವರ ಮಟ್ಟಕ್ಕೆ ಯಾವ ಪೀಠವೂ ಬರುವುದಿಲ್ಲ. ಹರಿಹರ ಪೀಠ ಹಾಗೂ ಪಂಚಮಸಾಲಿ 3ನೇ ಪೀಠ ನಿರಾಣಿ ಪೀಠಗಳು ಎಂದು ಮುಗುಮ್ಮಾಗಿ ಹೇಳಿದರು. ಕೂಡಲ ಸಂಗಮ ಪೀಠ ಮಾತ್ರ ಪಂಚಮಸಾಲಿ ಸಮುದಾಯದ ಪೀಠ. ಬ್ಲೇಜರ್ಗಳು ಎಂ.ಜಿ.ರೋಡ್ನಲ್ಲಿ ಮಾರಾಟಕ್ಕಿವೆ. ಸೂರ್ಯ ಚಂದ್ರ ಇರುವವರೆಗೂ ಮುರುಗೇಶ್ ನಿರಾಣಿ ಮುಖ್ಯಮಂತ್ರಿ ಆಗುವುದಿಲ್ಲ ಎಂದರು.
ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ಕೊಡುವ ಬಗ್ಗೆ ಪಕ್ಷದ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ವಿಜಯೇಂದ್ರರಂಥ ದೊಡ್ಡ ನಾಯಕರ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಯುಗಾದಿ ಹೊತ್ತಿಗೆ ರಾಜ್ಯದ ಆಡಳಿತದಲ್ಲಿ ಬದಲಾವಣೆ ಆಗುತ್ತದೆ. ಕೂಡಲ ಸಂಗಮ ಸ್ವಾಮೀಜಿ ನಮ್ಮ ಸಮುದಾಯದ ಪರವಾಗಿ ಹೋರಾಟ ಮಾಡಿದ್ದಾರೆ. ಸಮುದಾಯದ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ ಎಂದರು.
ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಯತ್ನಾಳ್ ತುಂಬಾ ದೊಡ್ಡವರು. ಅಂಥವರ ಬಗ್ಗೆ ನಾನು ಮಾತನಾಡಲಾರೆ. ಮುಖ್ಯಮಂತ್ರಿ ಆಗುವುದು-ಬಿಡುವುದು ನನ್ನ ಕೈಲಿಲ್ಲ ಎಂದು ಹೇಳಿದರು. ಸಿಎಂ ಆಗೋದಿಕ್ಕೆ ನಿರಾಣಿ ಸೂಟ್ ಹೊಲಿಸಿಕೊಂಡಿದ್ದಾರೆ ಎಂಬ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಹೌದು, ನಾನು ಸೂಟ್ ಹೊಲಿಸಿಕೊಂಡಿದ್ದೇನೆ. ನಿತ್ಯ ಸೂಟ್ ಇಲ್ಲದೇ ಹೇಗೆ ಓಡಾಡಲಿ ಎಂದು ಬೇಸರದ ಧ್ವನಿಯಲ್ಲಿ ಪ್ರತಿಕ್ರಿಯಿಸಿದರು.
ಮುಂದಿನ ಸಿಎಂ ಮುರುಗೇಶ್ ನಿರಾಣಿ: ಬಾಳೆಹಣ್ಣಿನ ಮೇಲೆ ಬರೆದು ರಥಕ್ಕೆ ತೂರಿದ ಬಿಜೆಪಿ ನಾಯಕ ಮುರುಗೇಶ್ ನಿರಾಣಿಯೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಅಭಿಮಾನಿಯೊಬ್ಬರು ಹರಕೆ ಸಲ್ಲಿಸಿದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕು ಮಂಗಳೂರು ಗ್ರಾಮದ ಭೀಮಾಶಂಕರ ಮಹಾರಾಜರ ರಥೋತ್ಸವದಲ್ಲಿ ಬಾಳೆಹಣ್ಣಿನ ಮೇಲೆ ಮುಂದಿನ ಸಿಎಂ ಮುರಗೇಶ್ ನಿರಾಣಿ ಎಂದು ಬರೆದು ದೇವರ ಮೇಲೆ ಬಾಳೆಹಣ್ಣು ಎಸೆದು ಬೇಡಿಕೆ ಇಟ್ಟಿದ್ದಾರೆ. ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಡಿಸೆಂಬರ್ 27ರಂದು ನಡೆದ ಭೀಮಾಶಂಕರ ಮಹಾರಾಜರ ರಥೋತ್ಸವದ ವೇಳೆ ಮುಂದಿನ ಸಿಎಂ ಮುರಗೇಶ್ ನಿರಾಣಿ ಎಂದು ಬಾಳೆ ಹಣ್ಣಿನ ಮೇಲೆ ಬರೆದು ಹರಕೆ ಮಾಡಿಕೊಂಡು ಬಾಳೆ ಹಣ್ಣನ್ನು ದೇವರ ಮೇಲೆ ತೂರಿದ್ದಾರೆ. ಬಿಜೆಪಿಯ ಯುವ ಮುಖಂಡ ಸಿದ್ದು ರೇವೂರ್ ಇಂತಹದೊಂದು ವಿಶೇಷ ಹರಕೆ ಮಾಡಿಕೊಂಡಿದ್ದಾರೆ. ಅದ್ದೂರಿ ರಥೋತ್ಸವಕ್ಕೆ ಸಾವಿರಾರು ಭಕ್ತ ವೃಂದ ಸಾಕ್ಷಿಯಾಗಿತ್ತು.
ಇದನ್ನೂ ಓದಿ: ಕರ್ನಾಟಕದಲ್ಲಿ ಕಾರು ಉತ್ಪಾದನಾ ಘಟಕ ತೆರೆಯಲು ಎಲಾನ್ ಮಸ್ಕ್ಗೆ ಮುರುಗೇಶ್ ನಿರಾಣಿ ಆಹ್ವಾನ ಇದನ್ನೂ ಓದಿ: ಹೂಡಿಕೆದಾರರು, ಉದ್ಯಮಿಗಳಿಗೆ ಸಚಿವ ಮುರುಗೇಶ್ ನಿರಾಣಿಯಿಂದ ಹೊಸ ವರ್ಷದ ಬಂಪರ್ ಕೊಡುಗೆ