ಹೂಡಿಕೆದಾರರು, ಉದ್ಯಮಿಗಳಿಗೆ ಸಚಿವ ಮುರುಗೇಶ್ ನಿರಾಣಿಯಿಂದ ಹೊಸ ವರ್ಷದ ಬಂಪರ್ ಕೊಡುಗೆ

ಹೂಡಿಕೆದಾರರು, ಉದ್ಯಮಿಗಳಿಗೆ ಸಚಿವ ಮುರುಗೇಶ್ ನಿರಾಣಿಯಿಂದ ಹೊಸ ವರ್ಷದ ಬಂಪರ್ ಕೊಡುಗೆ
ಹೂಡಿಕೆದಾರರು, ಉದ್ಯಮಿಗಳಿಗೆ ಸಚಿವ ಮುರುಗೇಶ್ ನಿರಾಣಿಯಿಂದ ಹೊಸ ವರ್ಷದ ಬಂಪರ್ ಕೊಡುಗೆ

ಸಚಿವ ಸಂಪುಟ ಸಭೆಯಲ್ಲಿ ಉದ್ದೇಶಿತ ಕೆಐಎಡಿಬಿ ಕಾಯ್ದೆಗೆ ತಿದ್ದುಪಡಿ ಮಾಡುವ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಲಾಗಿದ್ದು, ಇನ್ನು ಮುಂದೆ 10 ವರ್ಷಗಳ ಅವಧಿಗೆ ಕೈಗಾರಿಕಾ ಉದ್ದೇಶಗಳಿಗೆ ನೀಡಲಾದ ಜಮೀನನ್ನು ಲೀಸ್ ಕಂ ಸೇಲ್‍ಗೆ ನೀಡಲು ಸಮ್ಮತಿಸಲಾಗಿದೆ.

TV9kannada Web Team

| Edited By: Sushma Chakre

Jan 01, 2022 | 3:26 PM

ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯ ಮೂಲಕ ಕೈಗಾರಿಕಾ ಉದ್ದೇಶಗಳಿಗೆ ಹಂಚಿಕೆಯಾದ 2 ಎಕರೆಗೂ ಹೆಚ್ಚಿನ ಭೂಮಿಯನ್ನು 10 ವರ್ಷಗಳ ಅವಧಿಯ ಭೋಗ್ಯ ಮತ್ತು ಮಾರಾಟಕ್ಕೆ ನೀಡಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನಿರ್ಧರಿಸಿದೆ. ಈ ಮೂಲಕ ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುವ ಉದ್ಯಮಿಗಳು ಹಾಗೂ ಕೈಗಾರಿಕೋದ್ಯಮಿಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ಆರ್. ನಿರಾಣಿ ‘ಹೊಸ ವರ್ಷದ ಬಂಪರ್ ಕೊಡುಗೆ’ ನೀಡಿದ್ದಾರೆ.

ಮುಂಬರುವ 2022ರ ಹೊಸ ವರ್ಷ ಕರ್ನಾಟಕಕ್ಕೆ ಉದ್ದಿಮೆದಾರರು ಹಾಗೂ ಹೂಡಿಕೆದಾರರನ್ನು ಕೈ ಬೀಸಿ ಕರೆಯುತ್ತಿದ್ದು, ರಾಜ್ಯದಲ್ಲಿ ಹೂಡಿಕೆದಾರರು ಮತ್ತು ಕೈಗಾರಿಕೋದ್ಯಮಿಗಳಿಗೆ ಹಿಂದೆಂದೂ ಸಿಗದಷ್ಟು ಪ್ರೋತ್ಸಾಹ ಹಾಗೂ ಕೈಗಾರಿಕಾ ಸ್ನೇಹಿ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಸಚಿವ ಮುರುಗೇಶ್ ನಿರಾಣಿಯವರು ಹೊಸ ವರ್ಷದಲ್ಲಿ ’10 ವರ್ಷಗಳ ಲೀಸ್ ಕಮ್ ಸೇಲ್‌ ಡೀಡ್‌’ ನೂತನ ನಿಯಮವನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸುವ ಸಂಕಲ್ಪ ತೊಟ್ಟಿದ್ದಾರೆ.

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಉದ್ದೇಶಿತ ಕೆಐಎಡಿಬಿ ಕಾಯ್ದೆಗೆ ತಿದ್ದುಪಡಿ ಮಾಡುವ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಲಾಗಿದ್ದು, ಇನ್ನು ಮುಂದೆ 10 ವರ್ಷಗಳ ಅವಧಿಗೆ ಕೈಗಾರಿಕಾ ಉದ್ದೇಶಗಳಿಗೆ ನೀಡಲಾದ ಜಮೀನನ್ನು ಲೀಸ್ ಕಂ ಸೇಲ್‍ಗೆ ನೀಡಲು ಸಮ್ಮತಿಸಲಾಗಿದೆ. ಕೆಐಎಡಿಬಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಬಂಡವಾಳ ಹೂಡಿಕೆದಾರರು ಮತ್ತು ಕೈಗಾರಿಕೋದ್ಯಮಿಗಳು ರಾಜ್ಯದಲ್ಲಿ ಸುಲಲಿತ ವಹಿವಾಟು ನಡೆಸಲು ಅನುಕೂಲವಾಗುವಂತೆ ಶೀಘ್ರದಲ್ಲೇ ಹೊಸ ನೀತಿ ನಿಯಮಗಳನ್ನು ರೂಪಿಸಲಾಗುವುದು ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ನಡೆದ ಸಚಿವ ಸಂಪುಟ ಸಭೆಗೂ ಮೊದಲು, ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಉದ್ಯಮ ತಜ್ಞರು ಇದರ ಬಗ್ಗೆ ‌ ಚರ್ಚಿಸಿದ್ದಾರೆ. ಕೆಐಎಡಿಬಿಯಿಂದ ಕೇವಲ 99 ವರ್ಷಗಳ ಲೀಸ್ ಆಧಾರದ ಮೇಲೆ 2 ಎಕರೆಗಿಂತ ಹೆಚ್ಚಿನ ಭೂಮಿಯನ್ನು ಮಂಜೂರು ಮಾಡುವುದರಿಂದ ಹಲವಾರು ಪ್ರಮುಖ ಖಾಸಗಿ ಕಂಪನಿಗಳು ಕೈಗಾರಿಕೆಗಳನ್ನು ಸ್ಥಾಪಿಸಲು ಹಿಂಜರಿಯುತ್ತಿದ್ದವು. ಮಂಜೂರು ಮಾಡಿದ ಭೂಮಿಯನ್ನು ಮಾರಾಟ ಮಾಡಲು ಎಂದಿಗೂ ಅವಕಾಶವಿರಲಿಲ್ಲ.

“ಈ ಹಿಂದಿನ ಷರತ್ತಿನ ಪ್ರಕಾರ, ಕೈಗಾರಿಕೆಗಳಿಗೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲ ಮತ್ತು ಬಂಡವಾಳದ ಒಳಹರಿವು ಪಡೆಯಲು ಹಾಗೂ ಗುತ್ತಿಗೆ ಪಡೆದ ಭೂಮಿಯನ್ನು ಅಡಮಾನಗೊಳಿಸಲು ತೊಂದರೆಗಳು ಎದುರಾಗಿತ್ತು. ಇದರ ಪರಿಣಾಮವಾಗಿ ರಾಜ್ಯದಲ್ಲಿ ಹೂಡಿಕೆಯ ಹರಿವಿಗೆ ಅಡ್ಡಿಯಾಗಿದ್ದರಿಂದ ಇಂತಹ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ” ಎಂದು ಸಚಿವ ಮುರುಗೇಶ್ ನಿರಾಣಿ ವಿವರಿಸಿದ್ದಾರೆ.

ಪ್ರಸ್ತಾವಿತ ತಿದ್ದುಪಡಿಯ ಮೂಲಕ, ಯಾವುದೇ ಕೈಗಾರಿಕಾ ಘಟಕವು ಭೂ ಹಂಚಿಕೆಯ ನಂತರ ಎರಡು ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರೆ, ಅವರು ಹತ್ತು ವರ್ಷಗಳವರೆಗೆ ಕಾಯದೆ ಕೆಐಎಡಿಬಿಯಿಂದ ಮಾರಾಟ ಪತ್ರದ ಶೀರ್ಷಿಕೆಯನ್ನು ಪಡೆಯಲು ಅರ್ಹತೆ ಪಡೆಯುತ್ತಾರೆ. ಇಲಾಖೆಯು ತನ್ನ ಅಧಿಕಾರಿಗಳ ಮೂಲಕ ಉದ್ಯಮದ 24 ತಿಂಗಳ ಬ್ಯಾಲೆನ್ಸ್‌ ಶೀಟ್‌ ಪರಿಶೀಲಿಸಿ ಎಲ್ಲವೂ ನಿಯಮಬದ್ಧವಾಗಿದ್ದರೆ, ಸೇಲ್‌ ಡೀಡ್‌ ಕೊಡಲಾಗುತ್ತದೆ. ಇದರಿಂದ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲು ಅನುಕೂಲವಾಗುತ್ತದೆ.

ಕೆಐಎಡಿಬಿ ನಿಯಮಗಳ ಪ್ರಕಾರ, ಎಂಎಸ್ಎಂಇ ವಲಯಗಳು ಭೂಮಿಯನ್ನು ಹಂಚಿಕೆ ಮಾಡಿದ ದಿನಾಂಕದಿಂದ ಮೂರು ವರ್ಷಗಳೊಳಗೆ ಉದ್ಯಮವನ್ನು ಸ್ಥಾಪಿಸಿ, ಉತ್ಪಾದನೆಯನ್ನು ಪ್ರಾರಂಭಿಸಬೇಕು. ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಐದು ವರ್ಷಗಳ ಸಮಯವನ್ನು ‌ನೀಡಲಾಗಿದೆ.

ಇದನ್ನೂ ಓದಿ: ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ನಡೆಯದ ಚರ್ಚೆ: ವಿರೋಧಪಕ್ಷಗಳ ಅಸಹಕಾರವೇ ಕಾರಣ ಎಂದ ಮುರುಗೇಶ್ ನಿರಾಣಿ

ಸಿಎಂ ಆಗ್ತಾರೆ ಎಂದ ಈಶ್ವರಪ್ಪ ಅಭಿಮಾನಕ್ಕೆ ಋಣಿ: ಸಚಿವ ಮುರುಗೇಶ್ ನಿರಾಣಿ

Follow us on

Related Stories

Most Read Stories

Click on your DTH Provider to Add TV9 Kannada