ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಸಂಸದ ತೇಜಸ್ವಿ ಸೂರ್ಯ: ಹುಡುಗಿ ಯಾರು ಗೊತ್ತಾ?
ಬೆಂಗಳೂರು ದಕ್ಷಿಣದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಚೆನ್ನೈ ಮೂಲದ ಗಾಯಕಿ, ಭರತನಾಟ್ಯ ಕಲಾವಿದೆ ಶಿವಶ್ರೀ ಸ್ಕಂದ ಪ್ರಸಾದ್ ಅವರನ್ನು ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಎರಡೂ ಕುಟುಂಬಗಳು ಮದುವೆಗೆ ಒಪ್ಪಿಗೆ ನೀಡಿವೆ ಎನ್ನಲಾಗಿದೆ. ಶಿವಶ್ರೀ ಅವರು ರಾಮಮಂದಿರ ಉದ್ಘಾಟನೆ ವೇಳೆ ಹಾಡು ಹಾಡಿದ್ದರು.
ಬೆಂಗಳೂರು, ಡಿಸೆಂಬರ್ 31: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಆ ಮೂಲಕ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎನಿಸಿಕೊಂಡಿದ್ದ ಯುವ ರಾಜಕಾರಣಿ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಅವರ ಮದುವೆ ಬಗ್ಗೆ ಈ ಹಿಂದೆ ಕೂಡ ಸುದ್ಧಿಗಳು ಹರಿದಾಡಿದ್ದವು. ಯಾವುದಕ್ಕೂ ತೇಜಸ್ವಿ ಸೂರ್ಯ ಅವರು ಮಾತನಾಡಿರಲಿಲ್ಲ. ಆದರೆ ಇದೀಗ ಚೆನ್ನೈ ಮೂಲದ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಕುಟುಂಬದ ಜತೆ ವಿವಾಹ ಮಾತುಕತೆ ನಡೆಯುತ್ತಿದೆ ಎನ್ನಲಾಗುತ್ತಿದೆ.
ಸಂಸದ ತೇಜಸ್ವಿ ಸೂರ್ಯ ಅವರು ಚೆನ್ನೈ ಮೂಲದ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರನ್ನು ವರಿಸಲಿದ್ದಾರೆ. ರಾಮಮಂದಿರ ಉದ್ಘಾಟನೆ ವೇಳೆ ಪೂಜಿಸಲೆಂದೇ ಹೂಗಳ ತಂದೆ ಹಾಡಿನ ಮೂಲಕ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆಗೆ ಶಿವಶ್ರೀ ಸ್ಕಂದ ಪ್ರಸಾದ್ ಪಾತ್ರವಾಗಿದ್ದರು. ಸದ್ಯ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದ ಪ್ರಸಾದ್ ಕುಟುಂಬದ ನಡುವೆ ವಿವಾಹ ಮಾತುಕತೆ ನಡೆಯುತ್ತಿದೆ.
ಇದನ್ನೂ ಓದಿ: ರಾಜ್ಯದ ಪ್ರಮುಖ ರಾಜಕಾರಣಿಗಳು ಹೊಸ ವರ್ಷವನ್ನು ಎಲ್ಲೆಲ್ಲಿ ಆಚರಿಸುತ್ತಿದ್ದಾರೆ ಗೊತ್ತಾ?
ಮಾಹಿತಿ ಪ್ರಕಾರ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದ ಪ್ರಸಾದ್ ಅವರ ಮದುವೆ ಮಾರ್ಚ್ 4,2025 ರಂದು ನಿಗದಿಯಾಗಿದೆ ಎನ್ನಲಾಗುತ್ತಿದೆ. ಅಧಿಕೃತ ಪ್ರಕಟಣೆ ಹೊರಡಿಸದಿದ್ದರೂ, ಎರಡೂ ಕುಟುಂಬಗಳು ಈ ಮದುವೆಗೆ ಒಪ್ಪಿಗೆ ಸೂಚಿಸಿರುವುದಾಗಿ ವರದಿಯಾಗಿದೆ. ಬೆಂಗಳೂರಿನಲ್ಲಿ ಮದುವೆ ಸಮಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.
ಶಿವಶ್ರೀ ಸ್ಕಂದ ಪ್ರಸಾದ್ ಯಾರು?
ಶಿವಶ್ರೀ ಸ್ಕಂದ ಪ್ರಸಾದ್ ಅವರು ಚೆನ್ನೈ ಮೂಲದವರು. ಗಾಯಕಿ ಮಾತ್ರವಲ್ಲದೆ ನುರಿತ ಭರತನಾಟ್ಯ ಕಲಾವಿದರೂ ಆಗಿದ್ದಾರೆ. ಅವರು ಶಾಸ್ತ್ರ ವಿಶ್ವವಿದ್ಯಾಲಯದಿಂದ ಜೈವಿಕ ಎಂಜಿನಿಯರಿಂಗನಲ್ಲಿ ಬಿ.ಟೆಕ್ ಪದವಿಯನ್ನು ಪಡೆದುಕೊಂಡಿದ್ದಾರೆ. ಚೆನ್ನೈ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಎಂಎ ಮತ್ತು ಚೆನ್ನೈ ಸಂಸ್ಕೃತ ಕಾಲೇಜಿನಿಂದ ಸಂಸ್ಕೃತದಲ್ಲಿ ಎಂಎ ಪದವಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಸುಳ್ಳು ಮಾಹಿತಿ ಹರಡಿದ ಆರೋಪ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿಯಲ್ಲಿ ಎಫ್ಐಆರ್
ಇದರ ಹೊರತಾಗಿ ಶಿವಶ್ರೀ ಸ್ಕಂದ ಪ್ರಸಾದ್ ಅವರು ಸೈಕ್ಲಿಂಗ್, ಟ್ರೆಕ್ಕಿಂಗ್ನಲ್ಲಿ ಆಸಕ್ತಿ ಹೊಂದಿದ್ದಾರೆ. “ಪೊನ್ನಿಯಿನ್ ಸೆಲ್ವನ್-ಪಾರ್ಟ್ 2” ಚಿತ್ರದ ಕನ್ನಡ ಭಾಷೆಯ ಹಾಡನ್ನು ಹಾಡಿದ್ದಾರೆ. ಇನ್ನು ಅವರು ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದು, ಎರಡು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:13 pm, Tue, 31 December 24