ಬೆಂಗಳೂರಿಗೆ ಕೇಂದ್ರ ನೀಡುವ 4,500 ಎಲೆಕ್ಟ್ರಿಕ್ ಬಸ್‌ಗಳಿಗೆ ರಾಜ್ಯದಿಂದ ಸಿಗ್ತಿಲ್ಲ ಅನುಮೋದನೆ: ತೇಜಸ್ವಿ ಸೂರ್ಯ ಗಂಭೀರ ಆರೋಪ

ಕೇಂದ್ರ ಸರ್ಕಾರ ಬೆಂಗಳೂರಿನ ಸಾರ್ವಜನಿಕ ಸಾರಿಗೆಗಾಗಿ ಮಂಜೂರು ಮಾಡಿರುವ 4,500 ಎಲೆಕ್ಟ್ರಿಕ್ ಬಸ್‌ಗಳ ಜಾರಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕ್ಯಾಬಿನೆಟ್ ಅನುಮೋದನೆ ನೀಡದೆ ವಿಳಂಬ ಮಾಡುತ್ತಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಗಂಭೀರ ಆರೋಪ ಮಾಡಿದ್ದಾರೆ. ಟನಲ್ ರಸ್ತೆಗಳಂತಹ ಐಷಾರಾಮಿ ಯೋಜನೆಗಳಿಗೆ ಸಾವಿರಾರು ಕೋಟಿ ರೂ. ಖರ್ಚು ಮಾಡುವ ಸರ್ಕಾರಕ್ಕೆ ಬಿಎಂಟಿಸಿ, ಮೆಟ್ರೋ ಪ್ರಯಾಣಿಕರು ಮತ್ತು ಪಾದಚಾರಿಗಳು ಆದ್ಯತೆಯಾಗಿ ಉಳಿದಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿಗೆ ಕೇಂದ್ರ ನೀಡುವ 4,500 ಎಲೆಕ್ಟ್ರಿಕ್ ಬಸ್‌ಗಳಿಗೆ ರಾಜ್ಯದಿಂದ ಸಿಗ್ತಿಲ್ಲ ಅನುಮೋದನೆ: ತೇಜಸ್ವಿ ಸೂರ್ಯ ಗಂಭೀರ ಆರೋಪ
ತೇಜಸ್ವಿ ಸೂರ್ಯ (ಚಿತ್ರ ಕೃಪೆ: ತೇಜಸ್ವಿ ಸೂರ್ಯ ಫೇಸ್​​ಬುಕ್ ಪುಟ)
Image Credit source: Facebook

Updated on: Jun 29, 2026 | 10:50 AM

ಮುಖ್ಯಾಂಶಗಳು

  • 4,500 ಎಲೆಕ್ಟ್ರಿಕ್ ಬಸ್‌ಗಳಿಗೆ ಸಿಗದ ಅನುಮೋದನೆ
  • ಟನಲ್ ರಸ್ತೆಗೆ ಹಣವಿದೆ, ಬಸ್‌ಗಳಿಗಿಲ್ಲವೇ?
  • ಬನಶಂಕರಿ ಸ್ಕೈವಾಕ್ ಕಾಮಗಾರಿ ಸ್ಥಗಿತಕ್ಕೂ ಆಕ್ರೋಶ

ಬೆಂಗಳೂರು, ಜೂನ್ 29: ಬೆಂಗಳೂರಿನ (Bengaluru) ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ ಸರ್ಕಾರವು ಬಿಎಂಟಿಸಿಗೆ (BMTC) ಬರೋಬ್ಬರಿ 4,500 ಎಲೆಕ್ಟ್ರಿಕ್ ಬಸ್‌ಗಳನ್ನು ಮಂಜೂರು ಮಾಡಿದೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರವು ಈ ಬಸ್‌ಗಳ ನಿಯೋಜನೆಗೆ ಅಗತ್ಯವಿರುವ ಕ್ಯಾಬಿನೆಟ್ ಅನುಮೋದನೆಯನ್ನು ನೀಡದೆ ಉದಾಸೀನತೆ ತೋರುತ್ತಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಸ್‌ಗಳನ್ನು ಪಡೆದುಕೊಳ್ಳಲು ರಾಜ್ಯ ಸರ್ಕಾರ ತನ್ನ ಪಾಲಿನ ಅತ್ಯಲ್ಪ ಮೊತ್ತದ ಹಣವನ್ನು ಹೂಡಿಕೆ ಮಾಡಬೇಕಿದೆ. ಆದರೆ, ಸಾರ್ವಜನಿಕ ಹಿತಾಸಕ್ತಿಯ ಈ ಯೋಜನೆಗೆ ಒಪ್ಪಿಗೆ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.

ಐಷಾರಾಮಿ ಟನಲ್ ಯೋಜನೆಗಳಿಗೆ ಹಣವಿದೆ, ಸಾರ್ವಜನಿಕ ಸಾರಿಗೆಗಿಲ್ಲವೇ?

ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ ಸೂರ್ಯ, ‘ಈ ಬಸ್ಸುಗಳ ವಿಳಂಬದ ಕುರಿತು ನಾನು ಈಗಾಗಲೇ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದು, ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರು ಸಹ ಇದಕ್ಕೆ ಪೂರಕವಾಗಿ ಉತ್ತರಿಸಿದ್ದಾರೆ. ಈ ಸರ್ಕಾರದ ಬಳಿ 1,300 ಕಿಲೋಮೀಟರ್ ಹಾಗೂ ಕೇವಲ ಐಷಾರಾಮಿ ಕಾರುಗಳ ಸಂಚಾರಕ್ಕಾಗಿ 2 ಕಿಲೋಮೀಟರ್ ಉದ್ದದ ಟನಲ್ ರಸ್ತೆಗಳಂತಹ ವಿಐಪಿ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲು ಹಣವಿದೆ. ಆದರೆ, ದಿನನಿತ್ಯ ಬಿಎಂಟಿಸಿ ಬಸ್ ಹಾಗೂ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಸಾಮಾನ್ಯ ಜನರಿಗಾಗಿ ಖರ್ಚು ಮಾಡಲು ಹಣವಿಲ್ಲವೇ’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರದ ದೃಷ್ಟಿಯಲ್ಲಿ ಸಾಮಾನ್ಯ ನಾಗಕರಿಕರು 2ನೇ ದರ್ಜೆ ಪ್ರಜೆಗಳು: ಸೂರ್ಯ

ಈ ಸರ್ಕಾರದ ದೃಷ್ಟಿಯಲ್ಲಿ ಸಾಮಾನ್ಯ ನಾಗರಿಕರು ಎರಡನೇ ದರ್ಜೆಯ ಪ್ರಜೆಗಳಾಗಿದ್ದಾರೆ. ಇವರಿಗೆ ದಿನಾಲೂ ಬಸ್‌ನಲ್ಲಿ ಓಡಾಡುವ ಮಹಿಳೆಯರಾಗಲಿ, ಪಾದಚಾರಿಗಳಾಗಲಿ ಆದ್ಯತೆಯಾಗಿ ಉಳಿದಿಲ್ಲ. ಕಮಿಷನ್ ದಂಡು ಹೊಡೆಯಬಹುದಾದ ‘ಬಿಳಿ ಆನೆ’ಯಂತಹ ದೊಡ್ಡ ಯೋಜನೆಗಳ ಬೆನ್ನತ್ತಿರುವ ವಿಐಪಿ ಸರ್ಕಾರ ಇದಾಗಿದೆ ಎಂದು ತೇಜಸ್ವಿ ಸೂರ್ಯ ಕಟುವಾಗಿ ಟೀಕಿಸಿದರು.

ತೇಜಸ್ವಿ ಸೂರ್ಯ ಮಾತಿನ ವಿಡಿಯೋ


ಬನಶಂಕರಿ ಸ್ಕೈವಾಕ್ ಕಾಮಗಾರಿ ಸ್ಥಗಿತಕ್ಕೆ ತೀವ್ರ ವಿರೋಧ

ಇದೇ ವೇಳೆ, ಬೆಂಗಳೂರಿನ ಸ್ಥಳೀಯ ಮೂಲಸೌಕರ್ಯಗಳ ಕುರಿತು ಮಾತನಾಡಿದ ತೇಜಸ್ವಿ ಸೂರ್ಯ, ಬನಶಂಕರಿ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕರು ಮತ್ತು ಪಾದಚಾರಿಗಳ ಅನುಕೂಲಕ್ಕಾಗಿ ಸ್ಕೈವಾಕ್ (ಪಾದಚಾರಿ ಮೇಲ್ಸೇತುವೆ) ನಿರ್ಮಾಣ ಮಾಡಲು ಅಂದು ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ ಅವರೇ ಸ್ವತಃ ಗುದ್ದಲಿ ಪೂಜೆ ನೆರವೇರಿಸಿದ್ದರು. ಆದರೆ, ಈಗ ಆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಯಾರೋ ಒಬ್ಬ ಗುತ್ತಿಗೆದಾರನ ಮಾತು ಕೇಳಿ, ಲಾಭದ ಉದ್ದೇಶದಿಂದ ಇಲ್ಲೊಂದು ಫ್ಲೈ ಓವರ್ ಮಾಡಲು ಸರ್ಕಾರ ಹೊರಟಿದೆ ಎಂದು ದೂರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us