ತಮ್ಮದೇ ಯುಪಿಐ ಸ್ಕ್ಯಾನರ್ ನೀಡಿ ಹಣ ಜೇಬಿಗಿಳಿಸ್ತಾರೆ ಬಿಎಂಟಿಸಿ ಕೆಲ ಕಂಡಕ್ಟರ್​ಗಳು! ನಿಗಮಕ್ಕೆ ಲಕ್ಷಾಂತರ ರೂ. ನಷ್ಟ

‘ಶಕ್ತಿ’ ಯೋಜನೆ, ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಕೀಂ. ಈ ಯೋಜನೆಯ ಲಾಭವನ್ನು ರಾಜ್ಯದ ಕೋಟ್ಯಂತರ ಹೆಣ್ಣು ಮಕ್ಕಳು ಪಡೆಯುತ್ತಿದ್ದರೆ, ಇತ್ತ ಬಿಎಂಟಿಸಿಯ ಕೆಲ ಕಿಲಾಡಿ ಕಂಡಕ್ಟರ್​ಗಳು ಮಾತ್ರ, ಅನ್ನ ತಿಂದ ಮನೆಗೆ ಕನ್ನ ಹಾಕುವ ಕೆಲಸ ಮಾಡಿ ನಿಗಮಕ್ಕೆ ಸೇರಬೇಕಿದ್ದ, ಲಕ್ಷ ಲಕ್ಷ ರೂ. ಹಣವನ್ನು ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ. ಅದ್ಹೇಗೆಂದು ಇಲ್ಲಿದೆ ನೋಡಿ.

ತಮ್ಮದೇ ಯುಪಿಐ ಸ್ಕ್ಯಾನರ್ ನೀಡಿ ಹಣ ಜೇಬಿಗಿಳಿಸ್ತಾರೆ ಬಿಎಂಟಿಸಿ ಕೆಲ ಕಂಡಕ್ಟರ್​ಗಳು! ನಿಗಮಕ್ಕೆ ಲಕ್ಷಾಂತರ ರೂ. ನಷ್ಟ
ಸಾಂದರ್ಭಿಕ ಚಿತ್ರ
Edited By:

Updated on: Jan 20, 2026 | 7:15 AM

ಬೆಂಗಳೂರು, ಜನವರಿ 20: ಬಿಎಂಟಿಸಿ (BMTC) ಬಸ್​​ಗಳಲ್ಲಿ ಪ್ರಯಾಣಿಕರಿಗೆ ಸಹಾಯ ಆಗಲಿ ಎಂದು ನಿಗಮವು ಯುಪಿಐ ಸ್ಕ್ಯಾನರ್​​ಗಳನ್ನು ಹಾಕಿದೆ. ಆದರೆ ಕೆಲ ಕಿಲಾಡಿ ಕಂಡಕ್ಟರ್​​ಗಳು ಬಿಎಂಟಿಸಿ ಬಸ್​​​​ನಲ್ಲಿರುವ ಯುಪಿಐ ಸ್ಕ್ಯಾನರ್​​​ಗಳನ್ನು ಕಿತ್ತು, ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್​​​ಗಳನ್ನು (UPI Scanner) ನೀಡಿ, ತಮ್ಮ ಬ್ಯಾಂಕ್ ಅಕೌಂಟ್​​ಗೆ ಲಕ್ಷಾಂತರ ರೂಪಾಯಿ ಹಣ ಹಾಕಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಕನ್ನಡ ಬಾರದವರಿಗೆ ತಮ್ಮ ಮೊಬೈಲ್ ಯುಪಿಐ ಸ್ಕ್ಯಾನರ್ ನೀಡಿ ಹಣ ಪೀಕಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳಿವೆ.

ತನಿಖೆಯಲ್ಲಿ ಬಯಲಾಯ್ತು ಬಿಎಂಟಿಸಿ ಬಸ್ ಕಂಡಕ್ಟರ್​​ಗಳ ಕಳ್ಳಾಟ

ಇದೀಗ ತನಿಖೆ ವೇಳೆ ಕೂಡ, ಕಂಡಕ್ಟರ್​​ಗಳ ಕಳ್ಳಾಟ ಬಯಲಾಗಿದೆ. ಪ್ರತಿಯೊಬ್ಬರ ಅಕೌಂಟ್​ನಲ್ಲೂ ಸುಮಾರು 50 ಸಾವಿರಕ್ಕೂ ಹೆಚ್ಚು ಹಣ ಪ್ರಯಾಣಿಕರಿಂದ ಹಾಕಿಸಿಕೊಂಡಿರುವುದು ಬಯಲಿಗೆ ಬಂದಿದೆ.

ವಂಚನೆ ಎಸಗಲು ಉಪಯೋಗಿಸುವ ತಂತ್ರ ಇದುವೇ ನೋಡಿ!

ಶಕ್ತಿ ಯೋಜನೆಯ ಉಚಿತ ಟಿಕೆಟ್ ಮೇಲೆ ಕನ್ನಡದಲ್ಲಿ ಮಾತ್ರ ‘ಉಚಿತ ಟಿಕೆಟ್’ ಎಂದು ಪ್ರಿಂಟ್ ಮಾಡಲಾಗಿದೆ. ಇಂಗ್ಲಿಷ್​ನಲ್ಲಿ‘ಫ್ರೀ ಟಿಕೆಟ್’ ಎಂದು ಪ್ರಿಂಟ್ ಮಾಡಿಲ್ಲ. ಇದನ್ನು ಬಂಡವಾಳ ಮಾಡಿಕೊಂಡು ಕನ್ನಡ ಬಾರದ ಉತ್ತರ ಭಾರತದ ಹಾಗೂ ದಕ್ಷಿಣ ಭಾರತದ ಇತರ ರಾಜ್ಯಗಳ ಜನರಿಗೆ ಶಕ್ತಿ ಯೋಜನೆಯ ಟಿಕೆಟ್ ನೀಡುವ ಕಂಡಕ್ಟರ್​​ಗಳು ಅವರಿಂದ ವೈಯಕ್ತಿಕ ಯುಪಿಐ ಸ್ಕ್ಯಾನರ್​ಗೆ ದುಡ್ಡು ಹಾಕಿಸಿಕೊಳ್ಳುತ್ತಾರೆ.

ಈ ಕಿಲಾಡಿ ಕಂಡಕ್ಟರ್​​ಗಳು ಡಿಪೋದಿಂದ ಬಸ್​ಗಳು ಹೊರಗೆ ಬರುತ್ತಿದ್ದಂತೆಯೇ ಬಸ್​​​ನಲ್ಲಿರುವ ಬಿಎಂಟಿಸಿ ನಿಗಮದ ಯುಪಿಐ ಸ್ಕ್ಯಾನರ್​​ಗಳನ್ನು ಕಿತ್ತು ಇಟ್ಟುಕೊಳ್ಳುತ್ತಾರೆ. ಪ್ರಯಾಣಿಕರು ಯುಪಿಐ ಪೇಮೆಂಟ್ ಮಾಡಿ ಟಿಕೆಟ್ ಖರೀದಿ ಮಾಡಬೇಕು ಎಂದು ಕಂಡಕ್ಟರ್​​ಗಳ ಬಳಿ ಕೇಳಿದಾಗ, ತಮ್ಮ ಮೊಬೈಲ್​​ನಲ್ಲಿರುವಸ್ಕ್ಯಾನರ್​​​ಗಳನ್ನು ನೀಡಿ ಪ್ರಯಾಣಿಕರಿಂದ ಸ್ವಂತ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆ ಬಿಎಂಟಿಸಿಯ ಸೆಕ್ಯೂರಿಟಿ ಅಧಿಕಾರಿಗಳು ತಪಾಸಣೆ ಮಾಡಿದಾಗ ಹತ್ತಕ್ಕೂ ಹೆಚ್ಚು ಕಂಡಕ್ಟರ್​ಗಳು ಸಿಕ್ಕಿಹಾಕಿಕೊಂಡಿದ್ದಾರೆ. ಪ್ರತಿಯೊಬ್ಬರ ಅಕೌಂಟ್​​​ನಲ್ಲಿ 50 ಸಾವಿರ ರೂಪಾಯಿವರೆಗೆ ಯುಪಿಐ ಮಾಡಿಸಿಕೊಂಡಿರುವುದು ಬಯಲಾಗಿದೆ. ಈಗಾಗಲೇ ಬಿಎಂಟಿಸಿ ಸೆಕ್ಯೂರಿಟಿ ಅಧಿಕಾರಿಗಳು ಈ ಮಾಹಿತಿಯನ್ನು ಬಿಎಂಟಿಸಿ ಎಂಡಿ ಶಿವಕುಮಾರ್​ಗೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಬಿಎಂಟಿಸಿ ಚಾಲಕರ ಹೃದಯ ಹಿಂಡುತ್ತಿದೆಯೇ ಅಧಿಕಾರಿಗಳ ಒತ್ತಡ?

ಒಟ್ಟಿನಲ್ಲಿ ಶಕ್ತಿ ಯೋಜನೆಯ ಟಿಕೆಟ್​​ಗಳನ್ನು ಹೊರ ರಾಜ್ಯದವರಿಗೆ ಕೊಡುತ್ತಿರುವುದು, ನಿಗಮದ ಯುಪಿಐ ಸ್ಕ್ಯಾನರ್​ಗಳನ್ನು ಕಿತ್ತು ತಮ್ಮ ಸ್ವಂತ ಯುಪಿಐ ಸ್ಕ್ಯಾನರ್​​ಗಳನ್ನು ನೀಡಿ ಹಣ ಹಾಕಿಸಿಕೊಳ್ಳುತ್ತಿರುವ ಕಂಡಕ್ಟರ್​​ಗಳ ವಿರುದ್ಧ ಬಿಎಂಟಿಸಿ ನಿಗಮ ಕಠಿಣ ಕ್ರಮ ಕೈಗೊಳ್ಳದೇ ಹೋದರೆ ಮತ್ತಷ್ಟು ಕಂಡಕ್ಟರ್​​ಗಳು ಈ ದಾರಿ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Kiran Surya

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Follow Us