ಬಿಎಂಟಿಸಿ ಚಾಲಕನ ಜೇಬಿನಲ್ಲಿದ್ದ ಹಣ ಸೀಜ್ ಮಾಡಿದ ಅಧಿಕಾರಿಗಳು; ಹೈಕೋರ್ಟ್ ಮೊರೆ ಹೋದ ಚಾಲಕ
ನೌಕರರಿಗೆ ಬಿಎಂಟಿಸಿ ಅಧಿಕಾರಿಗಳ ಕಿರುಕುಳ ಮುಂದುವರಿದಿದ್ದು, ಮಗಳ ಕಾಲೇಜು ಫೀಸ್ ಕಟ್ಟಲು ಜೇಬಲ್ಲಿ ಇಟ್ಟುಕೊಂಡಿದ್ದ ಹಣವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಹೀಗಾಗಿ ನ್ಯಾಯ ನೀಡುವಂತೆ ಬಸ್ ಚಾಲಕ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಬೆಂಗಳೂರು: ನೌಕರರಿಗೆ ಬಿಎಂಟಿಸಿ (BMTC) ಅಧಿಕಾರಿಗಳ ಕಿರುಕುಳ ಮುಂದುವರಿದಿದ್ದು, ಮಗಳ ಕಾಲೇಜು ಫೀಸ್ ಕಟ್ಟಲು ಜೇಬಲ್ಲಿ ಇಟ್ಟುಕೊಂಡಿದ್ದ ಹಣವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಹೀಗಾಗಿ ನ್ಯಾಯ ನೀಡುವಂತೆ ಬಸ್ ಚಾಲಕ ಹೈಕೋರ್ಟ್ (Karnataka High Court) ಮೊರೆ ಹೋಗಿದ್ದಾರೆ. ಸಾರಿಗೆ ನೌಕರರು ಅಧಿಕಾರಿಗಳ ಕಿರುಕುಳ ತಾಳಲಾರದೆ ಪ್ರತಿವರ್ಷ ಮುಷ್ಕರಕ್ಕೆ ಮುಂದಾಗುತ್ತಾರೆ. ಸರ್ಕಾರ ಕೂಡ ಅಧಿಕಾರಿಗಳ ಕಿರುಕುಳವನ್ನು ತಪ್ಪಿಸುತ್ತೇವೆ ಅಂತ ಸಾಲು ಸಾಲು ಭರವಸೆಯನ್ನು ಕೊಡುತ್ತದೆ. ಆದರೆ ಎಷ್ಟೇ ಭರವಸೆ ನೀಡಿದರೂ ಬಿಎಂಟಿಸಿಯಲ್ಲಿ ಅಧಿಕಾರಿಗಳ ಕಿರುಕುಳ ತಪ್ಪುತ್ತಿಲ್ಲ ಎನ್ನುವುದಕ್ಕೆ ಈ ಪ್ರಕರಣ ಉದಾಹರಣೆಯಾಗಿ ನಿಲ್ಲುತ್ತದೆ. ಬಿಎಂಟಿಸಿ ಡ್ರೈವರ್ ಲೋಕೇಶ್ ಎಂಬವರು ಮಗಳ ಕಾಲೇಜು ಫೀಸ್ ಕಟ್ಟಲು ಜೇಬಲ್ಲಿ ಹಣ ಇಟ್ಟುಕೊಂಡಿದ್ದರು. ಈ ಹಣ ಅಕ್ರಮ ಎಂದು ನೋಟಿಸ್ ನೀಡಿದ ಅಧಿಕಾರಿಗಳು ಹಣವನ್ನು ವಶಕ್ಕೆ ಪಡೆದಿದ್ದಾರೆ. ಇತ್ತ ಮಗಳಿಗೆ ಕಾಲೇಲು ಶುಲ್ಕ ಕಟ್ಟಲು ಹಣವು ಇಲ್ಲ, ಅತ್ತ ಮಾಡಲು ಕೆಲಸವೂ ಇಲ್ಲದೆ ಚಾಲಕ ಕಂಗಾಲಾಗಿದ್ದಾರೆ. ಮೊನ್ನೆ ಶನಿವಾರ ಮಧ್ಯಾಹ್ನ 3.30 ರ ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿಯ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಡೆದಿರುವ ಘಟನೆ ಇದಾಗಿದೆ.
ಬಿಎಂಟಿಸಿ ಡ್ರೈವರ್ ಲೋಕೇಶ್ ಮಗಳು ಚಾಮರಾಜಪೇಟೆಯ ಆದರ್ಶ ಸಮೂಹ ಸಂಸ್ಥೆಯಲ್ಲಿ ಬಿಬಿಎಂ ಮೂರನೇ ಸೆಮಿಸ್ಟರ್ ವ್ಯಾಸಾಂಗ ಮಾಡುತ್ತಿದ್ದಾರೆ. ಈಕೆಯ ಕಾಲೇಜು ಶುಲ್ಕ ಕಟ್ಟಲು ಲೋಕೇಶ್ ತಮ್ಮ ಜೇಬಿನಲ್ಲಿ ಐವತ್ತು ಸಾವಿರ ರೂಪಾಯಿ ಹಣ ಇಟ್ಟುಕೊಂಡಿದ್ದರು. ಕೆಂಗೇರಿ ಟೂ ಎಲೆಕ್ಟ್ರಾನಿಕ್ ಸಿಟಿ ಮಾರ್ಗ 378/ 30 ಬಸ್ ಡ್ರೈವಿಂಗ್ ಮಾಡುತ್ತಿದ್ದ ಲೋಕೇಶ್ ಎಲೆಕ್ಟ್ರಾನಿಕ್ ಸಿಟಿ ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ಅಧಿಕಾರಿಗಳು ಜೇಬು ಚೆಕ್ ಮಾಡಿ ಹಣ ಸೀಜ್ ಮಾಡಿದ್ದಾರೆ. ATI ವಿದ್ಯಾರಾಣಿ ಮತ್ತು ವೆಂಕಟೇಶ್ (assistant traffic inspector) ಎಂಬ ಅಧಿಕಾರಿಗಳು ಲೋಕೇಶ್ ಅವರ ಹಣ ವಶಕ್ಕೆ ಪಡೆದಿದ್ದಾರೆ. ಸದ್ಯ ನೊಂದ ಬಸ್ ಚಾಲಕ ಸುಪ್ರೀಂ, ಹೈಕೋರ್ಟ್ ವಕೀಲರ ಮೂಲಕ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಹಾಕಲು ಮುಂದಾಗಿದ್ದಾರೆ.
ಮಾರನೇ ದಿನ ಅಂದರೆ ಶನಿವಾರ ಮಗಳ ಕಾಲೇಜು ಪೀಜ್ ಕಟ್ಟಬೇಕಿತ್ತು. ಅದರಂತೆ ಹಣವನ್ನು ಜೇಬಿನಲ್ಲಿಟ್ಟುಕೊಂಡಿದ್ದರು. ಆದರೆ ಇದನ್ನು ಕೇಳದೆ ಶಿವರಾಜು, ಹೆಚ್ ಬಿ. ಅವರು ಶುಕ್ರವಾರ ಸಿಸಿ ಡ್ಯೂಟಿ (ಕ್ಯಾಷುವಲ್ ಕಾಂಟ್ರಾಕ್ಟ್ ) ಡ್ಯೂಟಿ ಮಾಡಿಸಿದ್ದಾರೆ. ವಿಧಿ ಇಲ್ಲದೆ ಡ್ಯೂಟಿ ಮುಗಿಸಿ ಕಾಲೇಜು ಶುಲ್ಕ ಕಟ್ಟಬಹುದು ಅಂತ ಲೋಕೇಶ್ ಅಂದುಕೊಂಡಿದ್ದರು. ಇವರ ಬಳಿ ಗೂಗಲ್ ಪೇ, ಪೋನ್ ಪೇ ಇಲ್ಲದ ಹಿನ್ನಲೆ ನಗದು ಹಣವನ್ನು ಬೇಜಿಬಲ್ಲಿ ಇಟ್ಟುಕೊಂಡಿದ್ದರು. ಸದ್ಯ ಈ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ನನಗೆ ನನ್ನ ಹಣ ಕೊಡಿಸಿ ಮಗಳ ಫೀಸ್ ಕಟ್ಟಬೇಕೆಂದು ಚಾಲಕ ಲೋಕೇಶ್ ಅಂಗಲಾಚುತ್ತಿದ್ದಾರೆ.
ಹೈಕೋರ್ಟ್ ನಲ್ಲಾದ್ರು ಡ್ರೈವರ್ ಲೋಕೇಶ್ ಗೆ ಸಿಗುತ್ತಾ ನ್ಯಾಯ..?
ಹಣ ಇಟ್ಟುಕೊಂಡಿದ್ದು ಅಕ್ರಮ ಎಂದು ಹಣ ಸೀಜ್ ಮಾಡಿ ಸಸ್ಪೆಂಡ್ ನೋಟಿಸ್ ನೀಡಿರುವ ಅಧಿಕಾರಿಗಳು, ಇತ್ತ ಮಗಳ ಕಾಲೇಜಿಗೆ ಕಟ್ಟಲು ಹಣವು ಇಲ್ಲ, ಅತ್ತ ಮಾಡಲು ಕೆಲಸವಿಲ್ಲದೆ ಡ್ರೈವರ್ ಲೋಕೇಶ್ ಮಾತ್ರ ಕಂಗಲಾಗಿದ್ದಾರೆ. ಈಗಾಗಲೇ ನ್ಯಾಯಕ್ಕಾಗಿ ಹೈಕೋರ್ಟ್ ಮೊರೆ ಹೋಗಿರುವ ಲೋಕೇಶ್ ಅವರಿಗೆ ನ್ಯಾಯಾಲಯದಲ್ಲಾದರೂ ನ್ಯಾಯ ಸಿಗುತ್ತಾ ಎಂದು ಕಾದು ನೋಡಬೇಕಿದೆ.
ವರದಿ: ಕಿರಣ್ ಸೂರ್ಯ ಟಿವಿ9 ಬೆಂಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:47 pm, Tue, 28 March 23