
ಬೆಂಗಳೂರು, ಸೆ.3: ರಾಜಧಾನಿ ಬೆಂಗಳೂರಿನ ಸಾರಿಗೆ ಜೀವನಾಡಿ ಎನಿಸಿರುವ ಬಿಎಂಟಿಸಿ (BMTC) ಸಂಸ್ಥೆಯಲ್ಲಿ ಬಿಡಿಭಾಗಗಳ (Spare Parts) ತೀವ್ರ ಅಭಾವ ಎದುರಾಗಿದ್ದು, ಬಸ್ಸುಗಳು ನಡುರಸ್ತೆಯಲ್ಲೇ ಕೆಟ್ಟು ನಿಲ್ಲುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಪ್ರಯಾಣಿಕರು ಹಾಗೂ ಚಾಲಕ-ನಿರ್ವಾಹಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂಬ ಆರೋಪ. ಬಿಎಂಟಿಸಿಯಲ್ಲಿ ಸುಮಾರು 5 ಸಾವಿರ ರೂ ಡೀಸೆಲ್ ಹಾಗೂ 1,760ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ಸುಗಳಿದ್ದು, ನಿತ್ಯ 40 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಾರೆ.
ಸಂಸ್ಥೆಯಲ್ಲಿ ಕಳೆದ ಕೆಲ ತಿಂಗಳುಗಳಿಂದ ಹೊಸ ಸ್ಪೇರ್ ಪಾರ್ಟ್ಸ್‌ಗಳ ಪೂರೈಕೆಯಾಗದ ಹಿನ್ನೆಲೆಯಲ್ಲಿ, ಗುಜರಿಗೆ ಹಾಕಿದ ಕೆಎಸ್‌ಆರ್‌ಟಿಸಿ (KSRTC) ಬಸ್ಸುಗಳಿಂದ ತೆಗೆದ ಹಳೆಯ ಬಿಡಿಭಾಗಗಳನ್ನು ತಂದು ಬಿಎಂಟಿಸಿ ಬಸ್ಸುಗಳಿಗೆ ಜೋಡಿಸಿ ಓಡಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹಳೆಯ ಮತ್ತು ಸವೆದುಹೋದ ಸ್ಪೇರ್ ಪಾರ್ಟ್ಸ್‌ಗಳನ್ನು ಬಳಸಿ ಬಸ್ಸುಗಳನ್ನು ರಸ್ತೆಗೆ ಇಳಿಸುತ್ತಿರುವುದರಿಂದ ಚಾಲಕರು ಜೀವ ಕೈಯಲ್ಲಿಡಿದು ಡ್ಯೂಟಿ ಮಾಡುವಂತಾಗಿದೆ.
ಡಿಪೋಗಳಲ್ಲಿ ಮೆಕಾನಿಕ್‌ಗಳಿಗೆ ಕೆಲಸ ಮಾಡಲು ಅಗತ್ಯವಿರುವ ಬಿಡಿಭಾಗಗಳು ಸಿಗದೆ ಕಂಗಾಲಾಗಿದ್ದಾರೆ. ಬ್ರೇಕ್ ಡ್ರಮ್, ಬ್ರೇಕ್ ಲೈನರ್, ರೇರ್ ಹಬ್, ಬೇರಿಂಗ್ ಗ್ರೀಸ್, ಇನ್ನರ್ ಹಾಗೂ ರೇರ್ ಇನ್ನರ್ ಬೇರಿಂಗ್‌ಗಳು. ಏರ್ ಬೆಲ್ಲೋಸ್‌ಗಳು, ಆಕ್ಸಲ್ ಪ್ಯಾಕಿಂಗ್, ಶಾಕ್ ಅಬ್ಸಾರ್ಬರ್, ಸ್ಪ್ರಿಂಗ್, ಪಿಕ್-ಅಪ್ ಬ್ಲೇಡ್ ಸೆಟ್‌ಗಳು. ಹೊಸ ಟೈರ್‌ಗಳು, ವೈಪರ್, ಹಾರ್ನ್, ಸ್ಟಡ್, ನಟ್, ಜಾಯಿಂಟ್ ಬೋಲ್ಟ್‌ಗಳು, ವಾಷರ್ ಹಾಗೂ ವೆಲ್ಡಿಂಗ್ ರಾಡ್‌ಗಳು ಡಿಪೋಗಳಲ್ಲಿ ಅಭಾವವಿದೆ ಎಂಬ ಆರೋಪ ಕೇಳಿ ಬಂದಿದೆ.
“ಕಳೆದ ಮೂರು ತಿಂಗಳಿನಿಂದ ಬಿಎಂಟಿಸಿ ಡಿಪೋಗಳಲ್ಲಿ ಯಾವುದೇ ಹೊಸ ಸ್ಪೇರ್ ಪಾರ್ಟ್ಸ್ ಖರೀದಿಯಾಗಿಲ್ಲ. ಹಳೆಯ ಭಾಗಗಳನ್ನು ಹಾಕಿ ಬಸ್ಸುಗಳನ್ನು ರಸ್ತೆಗೆ ಬಿಡುತ್ತಿರುವುದರಿಂದ ಚಾಲನೆ ಮಾಡುವುದು ಹರಸಾಹಸವಾಗಿದೆ. ಇದರಿಂದ ಯಾವುದೇ ಸಮಯದಲ್ಲಿ ದೊಡ್ಡ ಅಪಘಾತಗಳು ಸಂಭವಿಸುವ ಸಾಧ್ಯತೆಯಿದೆ.” ಎಂದು ಸಾರಿಗೆ ನೌಕರರ ಮುಖಂಡ ಜಗದೀಶ್ ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಮತ್ತೊಂದು ‘ಗೋಲ್ಡ್ ಸ್ಕ್ಯಾಮ್’: ಮೋಹನ್ ಜ್ಯುವೆಲರಿಯಿಂದ ನೂರಾರು ಗ್ರಾಹಕರಿಗೆ ಮೋಸ
“ಬಿಎಂಟಿಸಿ ಬಸ್ಸುಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿರುವುದರಿಂದ ಸಮಯಕ್ಕೆ ಸರಿಯಾಗಿ ಆಫೀಸ್, ಕಾಲೇಜುಗಳಿಗೆ ತಲುಪಲು ಆಗುತ್ತಿಲ್ಲ. ಸಂಸ್ಥೆಯ ಆರ್ಥಿಕ ಸಂಕಷ್ಟ ಹಾಗೂ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಸಾರ್ವಜನಿಕರ ಜೀವದ ಜೊತೆ ಆಟವಾಡಲಾಗುತ್ತಿದೆ. ಏನಾದರೂ ಅನಾಹುತ ಸಂಭವಿಸಿದರೆ ಬಿಎಂಟಿಸಿ ಎಂಡಿ ಸಾಹೇಬರೇ ನೇರ ಹೊಣೆ.” ಎಂದು ಪ್ರಯಾಣಿಕ ರಾಮು ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ