ಬಿಬಿಎಂಪಿ ಎಡವಟ್ಟು: ಅವೈಜ್ಞಾನಿಕ ಕಾಮಗಾರಿಯಿಂದ ಬಿಳೇಕಹಳ್ಳಿ ಏರಿಯಾ ಜನ ಹೈರಾಣು

| Updated By: ಗಂಗಾಧರ​ ಬ. ಸಾಬೋಜಿ

Updated on: Jan 06, 2025 | 6:41 PM

ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯ ಅವೈಜ್ಞಾನಿಕ ರಾಜಕಾಲುವೆ ಕಾಮಗಾರಿಯಿಂದ ಬಿಟಿಎಂ ಲೇಔಟ್‌ನಲ್ಲಿನ ನಿವಾಸಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ರಸ್ತೆ ಬಂದ್ ಆಗಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಮಳೆಗಾಲದಲ್ಲಿ ಇನ್ನಷ್ಟು ಸಮಸ್ಯೆ ಎದುರಾಗುವ ಆತಂಕವಿದೆ. ಪಾಲಿಕೆಯ ಕಾರ್ಯಕ್ಷಮತೆಯ ಕುರಿತು ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ಎಡವಟ್ಟು: ಅವೈಜ್ಞಾನಿಕ ಕಾಮಗಾರಿಯಿಂದ ಬಿಳೇಕಹಳ್ಳಿ ಏರಿಯಾ ಜನ ಹೈರಾಣು
ಬಿಬಿಎಂಪಿ ಎಡವಟ್ಟು: ಅವೈಜ್ಞಾನಿಕ ಕಾಮಗಾರಿಯಿಂದ ಬಿಳೇಕಹಳ್ಳಿ ಏರಿಯಾ ಜನ ಹೈರಾಣು
Follow us on

ಬೆಂಗಳೂರು, ಜನವರಿ 06: ಬಿಬಿಎಂಪಿಯ (BBMP) ಎಡವಟ್ಟಿನ ಕಾಮಗಾರಿಯಿಂದ ಆ ಏರಿಯಾದ ಜನ ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದಾಗ ಅವಾಂತರ ಸೃಷ್ಟಿಸುತ್ತಿದ್ದ ಮಿನಿ ರಾಜಕಾಲುವೆಗೆ ಪರಿಹಾರ ಕೊಡುತ್ತೇವೆ ಅಂತಾ ಹೊರಟಿರುವ ಬಿಬಿಎಂಪಿ, ಇದೀಗ ಇದ್ದ ಚರಂಡಿಯನ್ನ ಅಗೆದು ಕಾಮಗಾರಿ ನಡೆಸ್ತಿರೋದು ಜನರ ಸಂಚಾರಕ್ಕೆ ಅಡೆತಡೆ ತಂದಿಟ್ಟಿದೆ. ಇತ್ತ ಬೃಹತ್ ಚರಂಡಿ ಪಕ್ಕದಲ್ಲೇ ಖಾಸಗಿ ಅಪಾರ್ಟ್ ಮೆಂಟ್ ತಲೆ ಎತ್ತಿದ್ರೂ ಪಾಲಿಕೆ ಸೈಲೆಂಟ್ ಆಗಿದ್ರೆ, ಅವೈಜ್ಞಾನಿಕ ಕಾಮಗಾರಿಯಿಂದ ಮತ್ತೆ ಸಂಕಷ್ಟ ಎದುರಾಗೋ ಆತಂಕದಲ್ಲೇ ಏರಿಯಾ ಜನ ದಿನದೂಡುತ್ತಿದ್ದಾರೆ.

ಬಿಟಿಎಂ ಲೇ ಔಟ್ 2ನೇ ಹಂತದಲ್ಲಿರುವ ಬಿಳೇಕಹಳ್ಳಿ ಜನರಿಗೆ ಪಾಲಿಕೆಯ ಕಾಮಗಾರಿ ಸಂಕಷ್ಟ ತಂದಿಟ್ಟಿದೆ. ಈ ಏರಿಯಾದಲ್ಲಿ ಇದ್ದ ಸಣ್ಣ ಚರಂಡಿಯಿಂದ ಪದೇ ಪದೇ ನೀರು ಹೊರಬರ್ತಿದ್ದರಿಂದ ಬೇಸತ್ತಿದ್ದ ಜನರು, ಚರಂಡಿಯನ್ನ ಸರಿಪಡಿಸುವಂತೆ ಪಾಲಿಕೆಗೆ ಮನವಿ ಮಾಡಿದ್ದರು. ಅದರಂತೆ ಬಿಬಿಎಂಪಿಯ ಸಿಬ್ಬಂದಿ ಕೆಲಸ ಕೂಡ ಆರಂಭಿಸಿದ್ದಾರೆ, ಆದರೆ ಇದೀಗ ಒಂದೆರಡು ದಿನದಲ್ಲಿ ಕಾಮಗಾರಿ ಮುಗಿಯೋ ಲಕ್ಷಣ ಕಾಣದಂತಾಗಿದೆ.

ಇದನ್ನೂ ಓದಿ: ಸಾರಿಗೆ ನೌಕರರ ಕನಸು ನನಸು: ನಗದು ರಹಿತ ವೈದ್ಯಕೀಯ ಚಿಕಿತ್ಸೆ ಆರಂಭ

ರಸ್ತೆ ಬಂದ್ ಆಗಿರೋದರಿಂದ ಜನರು ಮುಖ್ಯರಸ್ತೆಗೆ ಹೋಗೋಕೆ ಪರದಾಡೋ ಸ್ಥಿತಿ ನಿರ್ಮಾಣವಾಗಿದೆ. ನಿತ್ಯ ಕೆಲಸ ಕಾರ್ಯಗಳಿಗೆ ತೆರಳುವವರು ಮುಖ್ಯರಸ್ತೆಗೆ ಬರೋಕೆ ಸುತ್ತಾಡಿಕೊಂಡು ಬರೋ ಸ್ಥಿತಿ ಇದ್ರೆ, ಇತ್ತ ಓಡಾಡೋ ಜನರು ಚರಂಡಿ ಮೇಲೆ ಹಾಕಿರುವ ಮರದ ಹಲಗೆ ಮೇಲೆ ಸರ್ಕಸ್ ಮಾಡಿಕೊಂಡು ಓಡಾಡೋ ಸ್ಥಿತಿ ಎದುರಾಗಿದೆ.

ಇನ್ನು ಈ ಹಿಂದೆ ಮಳೆ ಬಂದಾಗ ಇಡೀ ಏರಿಯಾದ ಮನೆಗಳಿಗೆ ಕೊಳಚೆನೀರು ನುಗ್ಗಿ ಅವಾಂತರ ಸೃಷ್ಟಿಯಾಗ್ತಿದ್ದು, ಆದರೆ ಇದೀಗ ಕಾಮಗಾರಿ ಮಾಡಿದ ಮೇಲೂ ಮತ್ತೆ ಅದೇ ಅವಾಂತರ ಎದುರಾಗೋ ಆತಂಕ ನಿವಾಸಿಗಳಿಗೆ ಎದುರಾಗಿದೆ. ಮಿನಿ ರಾಜಕಾಲುವೆಯ ಬಳಿಯೇ ಖಾಸಗಿ ಅಪಾರ್ಟ್ ಮೆಂಟ್ ತಲೆಎತ್ತಿದ್ದು, ಚರಂಡಿಯಿಂದ ಅಂತರ ಕಾಯ್ದುಕೊಳ್ಳದೇ ಇರೋದು ನಿಯಮಗಳ ಉಲ್ಲಂಘನೆಯನ್ನ ಅನಾವರಣ ಮಾಡ್ತಿದೆ. ಇತ್ತ ಕಾಮಗಾರಿಯಿಂದ ಮತ್ತೆ ಸಮಸ್ಯೆ ಎದುರಾಗೋ ಭೀತಿ ನಿವಾಸಿಗಳಿಗೆ ಎದುರಾಗಿದೆ.

ಇದನ್ನೂ ಓದಿ: ಮೈಸೂರು ಕಡೆಗೆ ಪರ್ಯಾಯ ರಸ್ತೆ ನಿರ್ಮಾಣಕ್ಕೆ ಯೋಜನೆ: ವೃಷಭಾವತಿ ರಾಜಕಾಲುವೆ ಮೇಲೆ ತಲೆಎತ್ತಲಿದೆ ರಸ್ತೆ

ಸದ್ಯ ಕಾಮಗಾರಿಯಿಂದ ವಾಹನ ಸವಾರರು ರಸ್ತೆ ಬದಲಿಸಿ ಪರದಾಡಿಕೊಂಡು ಓಡಾಡ್ತಿದ್ರೆ, ಇತ್ತ ಜನರು ಕೂಡ ಏರಿಯಾಗೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿರೋದರಿಂದ ಪರದಾಡುತ್ತಿದ್ದಾರೆ. ಇತ್ತ ಮಿನಿ ರಾಜಕಾಲುವೆ ಮಾರ್ಗ ಅವೈಜ್ಞಾನಿಕವಾಗಿ ನಿರ್ಮಾಣ ಆಗ್ತಿರೋದು ಪಾಲಿಕೆಯ ಕಾಟಾಚಾರದ ಕೆಲಸವನ್ನ ಬಿಚ್ಚಿಡ್ತಿದೆ. ಸದ್ಯ ಗಬ್ಬುವಾಸನೆ, ಬಂದ್ ಆದ ರಸ್ತೆಯಿಂದ ಕಂಗೆಟ್ಟಿರೋ ಏರಿಯಾ ಜನರಿಗೆ ಪಾಲಿಕೆ ಮುಕ್ತಿ ನೀಡುತ್ತ ಅನ್ನೋದನ್ನ ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.