ಮೈಸೂರು ಕಡೆಗೆ ಪರ್ಯಾಯ ರಸ್ತೆ ನಿರ್ಮಾಣಕ್ಕೆ ಯೋಜನೆ: ವೃಷಭಾವತಿ ರಾಜಕಾಲುವೆ ಮೇಲೆ ತಲೆಎತ್ತಲಿದೆ ರಸ್ತೆ
ವೃಷಭಾವತಿ ನದಿಯ ಪುನರುತ್ಥಾನ ಮತ್ತು ಟ್ರಾಫಿಕ್ ಕಿರಿಕಿರಿಗೆ ಮುಕ್ತಿ ಕಾಣಿಸುವುದಕ್ಕಾಗಿ ಬಿಬಿಎಂಪಿ ಹೊಸದೊಂದು ಯೋಜನೆ ಹಮ್ಮಿಕೊಂಡಿದೆ. ಅದರಂತೆ, ವೃಷಭಾವತಿ ರಾಜಕಾಲುವೆ ಮೇಲೆ ಮೈಸೂರು ಕಡೆಗೆ ತೆರಳಲು ಹೊಸ ರಸ್ತೆ ನಿರ್ಮಾಣವಾಗಲಿದೆ! ಹೌದು, ರಾಜಕಾಲುವೆ ಮೇಲೆಯೇ ರಸ್ತೆ ನಿರ್ಮಾಣದ ಸಾಹಸಕ್ಕೆ ಪಾಲಿಕೆ ಮುಂದಾಗಿದೆ. ಏನಿದು ಯೋಜನೆ ಎಂಬುದನ್ನು ತಿಳಿಯಲು ಮುಂದೆ ಓದಿ.
ಬೆಂಗಳೂರು, ಜನವರಿ 6: ಬೆಂಗಳೂರಿನ ಜೀವನದಿಯಾಗಿದ್ದ ವೃಷಭಾವತಿ ನದಿಗೆ ಮರುಜೀವ ಕೊಡಲು ಬಿಬಿಎಂಪಿ ಸಜ್ಜಾಗಿದೆ. 28 ಕಿಲೋಮೀಟರ್ ಉದ್ದದ ವೃಷಭಾವತಿ ನದಿ ಮಾರ್ಗದ ರಾಜಕಾಲುವೆಯಲ್ಲಿ ತ್ಯಾಜ್ಯ ಸಂಗ್ರಹ ತಡೆಯುವುದರ ಜೊತೆಗೆ ವೃಷಭಾವತಿ ರಾಜಕಾಲುವೆ ಮೇಲೆ ಮೈಸೂರು ಕಡೆಗೆ ತೆರಳಲು ರಸ್ತೆ ನಿರ್ಮಾಣ ಮಾಡಲು ಸಿದ್ಧತೆ ನಡೆದಿದೆ. ಸದ್ಯ ಪಾಲಿಕೆಯ ಈ ಯೋಜನೆಗೆ ಸಕಲ ಸಿದ್ಧತೆಗಳು ನಡೆಸಿದ್ದು, ಕೆಂಗೇರಿಯಿಂದ ಮೈಸೂರು ಕಡೆಗೆ ರಸ್ತೆ ನಿರ್ಮಿಸಲು ಚಿಂತನೆ ನಡೆದಿದೆ.
ಬೆಂಗಳೂರು ಟ್ರಾಫಿಕ್ಗೆ ಕಡಿವಾಣ ಹಾಕಲು ಯೋಜನೆ
ರಾಜಧಾನಿ ಬೆಂಗಳೂರಿನ ಟ್ರಾಫಿಕ್ಗೆ ಲಗಾಮು ಹಾಕುವುದಕ್ಕಾಗಿ ಬಿಬಿಎಂಪಿ ಹೊಸ ಯೋಜನೆ ಮಾಡಲು ಹೊರಟಿದೆ. ಹಿಂದೆ ಬೆಂಗಳೂರಿನ ಪ್ರಮುಖ ನದಿಗಳಲ್ಲಿ ಒಂದಾಗಿದ್ದ ವೃಷಭಾವತಿ ನದಿಮಾರ್ಗದಲ್ಲಿ ಸ್ವಚ್ಛತೆ ಕಾಪಾಡುವುದಕ್ಕೂ ಸಜ್ಜಾಗಿರುವ ಪಾಲಿಕೆ, ಸಮಗ್ರ ಯೋಜನೆ ಮೂಲಕ ವೃಷಭಾವತಿ ನದಿ ಮಾರ್ಗದ ರಾಜಕಾಲುವೆಗಳನ್ನು ನಿರ್ವಹಣೆ ಮಾಡಲು ಹೊರಟಿದೆ.
ಇತ್ತ ಕೆಂಗೇರಿ ಬಳಿ ಇರುವ ರಾಜಕಾಲುವೆ ಮೇಲೆ ಹೊಸದಾಗಿ ಮೈಸೂರು ಕಡೆಗೆ ರಸ್ತೆ ನಿರ್ಮಾಣ ಮಾಡಲು ಹೊರಟಿರುವ ಬಿಬಿಎಂಪಿ, ಆ ಮೂಲಕ ಮೈಸೂರು ರಸ್ತೆ ಕಡೆಗಿನ ಸಂಚಾರ ಸುಗಮಗೊಳಿಸಲು ಮುಂದಾಗಿದೆ.
ಒತ್ತುವರಿ ತೆರವಿಗೂ ಸಜ್ಜಾದ ಪಾಲಿಕೆ
ವೃಷಭಾವತಿ ನದಿಪಾತ್ರದಲ್ಲಿರುವ ರಾಜಕಾಲುವೆಗಳ ಬಳಿ ಒತ್ತುವರಿ ತೆರವಿಗೂ ಸಜ್ಜಾಗಿರೋ ಬಿಬಿಎಂಪಿ, ಎಲ್ಲೆಲ್ಲೆ ಒತ್ತುವರಿಯಾಗಿದೆ ಎಂಬುದನ್ನು ಗುರುತಿಸಿ ತೆರವು ಮಾಡುವುದಕ್ಕೂ ಯೋಜನೆ ರೂಪಿಸಲು ಹೊರಟಿದೆ. ಸದ್ಯ ಈ ಬಗ್ಗೆ ಎಲ್ಲಾ ವಲಯದ ವಲಯ ಆಯುಕ್ತರ ಜೊತೆ ಚರ್ಚಿಸಿರುವ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವೃಷಭಾವತಿ ಪಾತ್ರದಲ್ಲಿ ರಸ್ತೆ ನಿರ್ಮಿಸುವುದರಿಂದ ಟ್ರಾಫಿಕ್ ಕಿರಿಕಿರಿಗೆ ಮುಕ್ತಿ ಸಿಗುತ್ತದೆ. ಜೊತೆಗೆ ರಾಜಕಾಲುವೆಗಳ ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಕೂಡ ಚಿಂತನೆ ನಡೆದಿದೆ ಎಂದಿದ್ದಾರೆ.
ಇದನ್ನೂ ಓದಿ: ವಸತಿ ಯೋಜನೆಯಲ್ಲಿ 55% ಬೆಲೆ ಏರಿಕೆ, ಮುಂಬರುವ ದುಬಾರಿ ಮನೆಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಎರಡನೇ ಸ್ಥಾನ ಸಿಗಲಿದೆ; ವರದಿ
ಕೆಂಗೇರಿ ಬಳಿ ಹರಿಯುತ್ತಿರುವ ವೃಷಭಾವತಿ ನದಿ ಮಾರ್ಗದ ಬೃಹತ್ ರಾಜಕಾಲುವೆಯಲ್ಲಿ ಈಗಾಗಲೇ ಸ್ವಚ್ಛತಾಕಾರ್ಯ ಶುರುವಾಗಿದೆ. ಯಾವ್ಯಾವ ಅಪಾರ್ಟ್ಮೆಂಟ್ಗಳಿಂದ ರಾಜಕಾಲುವೆಗೆ ನೀರು ಹರಿಯುತ್ತದೆ, ಕಸ ಎಲ್ಲಿಂದ ಸೇರ್ಪಡೆಯಾಗುತ್ತದೆ ಎಂಬ ಅಂಶಗಳನ್ನ ಗುರುತಿಸುವ ಕೆಲಸ ನಡೆಯುತ್ತಿದೆ. ಈ ಮೂಲಕ ರಾಜಕಾಲುವೆಯ ಸ್ವಚ್ಛತೆ ಕಾಪಾಡುವುದರ ಜೊತೆಗೆ ಹೊಸ ರಸ್ತೆ ನಿರ್ಮಾಣವಾದರೆ ರಾಜಧಾನಿಯ ವಾಹನ ದಟ್ಟನೆಗೆ ಪರಿಹಾರ ಸಿಗುವ ನಿರೀಕ್ಷೆ ಕೂಡ ಪಾಲಿಕೆ ಮುಂದಿದೆ.
ಸದ್ಯ ಬ್ರ್ಯಾಂಡ್ ಬೆಂಗಳೂರಿನ ರಾಜಕಾಲುವೆ ಮೇಲೆ ಮಾಡಲು ಹೊರಟಿರುವ ಪ್ರಯೋಗ ಎಷ್ಟರಮಟ್ಟಿಗೆ ಫಲ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ