ಕಾವೇರಿ ಜಲ ವಿವಾದ: ತಮಿಳುನಾಡಿಗೆ ನೀರು ಹರಿಸಬೇಕಿರುವ ಪ್ರಮಾಣ ಇಳಿಕೆಗೆ ಆಗ್ರಹಿಸಿ CWMAಗೆ ಕರ್ನಾಟಕ ಮನವಿ

ಕರ್ನಾಟಕದ ಜಲಾಶಯಗಳಿಗೆ ಒಳಹರಿವು ಕುಸಿದಿರುವ ಹಿನ್ನೆಲೆಯಲ್ಲಿ, ತಮಿಳುನಾಡಿಗೆ ಬಿಡುಗಡೆ ಮಾಡಬೇಕಾದ ನೀರಿನ ಪ್ರಮಾಣವನ್ನು ದಿನಕ್ಕೆ 9,000 ಕ್ಯೂಸೆಕ್‌ನಿಂದ 2,000 ಕ್ಯೂಸೆಕ್‌ಗೆ ಇಳಿಸುವಂತೆ ಕರ್ನಾಟಕ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಮನವಿ ಮಾಡಿದೆ. ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಸುಮಾರು 55 ಟಿಎಂಸಿ ನೀರು ಸಂಗ್ರಹವಿದ್ದು, ಮಧ್ಯಂತರ ಜಲಾನಯನ ಪ್ರದೇಶಗಳಿಂದ 45 ಟಿಎಂಸಿ ಅಥವಾ ಅದಕ್ಕಿಂತ ಹೆಚ್ಚಿನ ನೀರು ಹರಿದುಬರುವ ನಿರೀಕ್ಷೆಯಿದೆ ಎಂದೂ ಮನವಿಯಲ್ಲಿ ಉಲ್ಲೇಖಿಸಿದೆ.

ಕಾವೇರಿ ಜಲ ವಿವಾದ: ತಮಿಳುನಾಡಿಗೆ ನೀರು ಹರಿಸಬೇಕಿರುವ ಪ್ರಮಾಣ ಇಳಿಕೆಗೆ ಆಗ್ರಹಿಸಿ CWMAಗೆ ಕರ್ನಾಟಕ ಮನವಿ
ಕೆಆರ್​​ಎಸ್​​ ಜಲಾಶಯ
Image Credit source: PTI

Updated on: Sep 06, 2026 | 7:30 AM

ಬೆಂಗಳೂರು, ಸೆಪ್ಟೆಂಬರ್ 06: ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಿಗೆ ಒಳಹರಿವು ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ತಮಿಳುನಾಡಿಗೆ ಬಿಳಿಗುಂಡ್ಲು ಅಂತಾರಾಜ್ಯ ಗಡಿಯಲ್ಲಿ ಪ್ರತಿದಿನ 9,000 ಕ್ಯೂಸೆಕ್ ನೀರು ಹರಿಸುವಂತೆ ನೀಡಿರುವ ಆದೇಶವನ್ನು 2,000 ಕ್ಯೂಸೆಕ್‌ಗೆ ಇಳಿಸುವಂತೆ ಕರ್ನಾಟಕವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಮನವಿ ಮಾಡಿದೆ. ಆಗಸ್ಟ್ 24ರಂದು ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯ ನಿರ್ಧಾರವನ್ನು ಅನುಮೋದಿಸಿದ್ದ CWMA, ಆಗಸ್ಟ್ 25ರಂದು ಸೆಪ್ಟೆಂಬರ್ 8ರವರೆಗೆ ಪ್ರತಿದಿನ 9,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿತ್ತು.

ರಾಜ್ಯದಲ್ಲಿ ನೀರಿನ ಕೊರತೆಯ ಬಗ್ಗೆ ಕಳವಳ

ಸೆಪ್ಟೆಂಬರ್ 8ರಂದು CWRC ಸಭೆ ನಡೆಯಲಿದ್ದು, ಬಳಿಕ ಮಳೆ ಹಾಗೂ ಬೆಳೆ ಪರಿಸ್ಥಿತಿಯನ್ನು CWMA ಪರಿಶೀಲಿಸಲಿದೆ. ಕರ್ನಾಟಕದ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಸಲ್ಲಿಸಿರುವ ಮನವಿಯಲ್ಲಿ, ರಾಜ್ಯದ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ಒಟ್ಟು ನೀರಿನ ಸಂಗ್ರಹ ಕೇವಲ 66.629 ಟಿಎಂಸಿ ಇದೆ ಎಂದು ತಿಳಿಸಿದ್ದಾರೆ. ಅಸಾಮಾನ್ಯವಾಗಿ ಕಂಡುಬರುತ್ತಿರುವ ಸೂಪರ್ ಎಲ್ ನಿನೊ ಪರಿಣಾಮದಿಂದಾಗಿ ಒಳಹರಿವು 20 ಟಿಎಂಸಿಗಿಂತ ಹೆಚ್ಚಾಗುವ ಸಾಧ್ಯತೆ ಇಲ್ಲ. ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸದಿದ್ದರೂ ರಾಜ್ಯದಲ್ಲಿ ನೀರಿನ ಕೊರತೆ ಎದುರಾಗಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸದ್ದಿಲ್ಲದೆ ತಮಿಳುನಾಡಿಗೆ ಹರಿಯುತ್ತಿದೆ ಕಾವೇರಿ ನೀರು: ಕೆಆರ್​​​ಎಸ್​​ನಲ್ಲಿ ನೀರಿನ ಮಟ್ಟ ಕುಸಿತ

ಕರ್ನಾಟಕವು ಆಗಸ್ಟ್‌ನಲ್ಲೇ ನೀರಾವರಿಗಾಗಿ ನೀರು ಬಿಡುಗಡೆ ಮಾಡಲು ಆರಂಭಿಸಿದೆ. ಸೆಪ್ಟೆಂಬರ್ 4ರವರೆಗೆ ನಾಲ್ಕು ಜಲಾಶಯಗಳಿಂದ ಸುಮಾರು 15.124 ಟಿಎಂಸಿ ನೀರು ಕಾವೇರಿ ಜಲಾನಯನ ಪ್ರದೇಶದ ಕಡಿಮೆ ವ್ಯಾಪ್ತಿಯ ಕೃಷಿ ಪ್ರದೇಶಗಳಿಗೆ ನೀರಾವರಿ ಒದಗಿಸಲು ಹರಿಸಲಾಗಿದೆ. ನೀರಾವರಿ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸುವುದು ನಿಂತಿರುವ ಬೆಳೆಗಳನ್ನು ರಕ್ಷಿಸಲು ಅತ್ಯಗತ್ಯವಾಗಿದೆ. ರಾಜ್ಯದ ಉಳಿದ ನೀರಾವರಿ, ಬೆಂಗಳೂರು ಸೇರಿದಂತೆ ಕುಡಿಯುವ ನೀರು ಮತ್ತು ಪರಿಸರದ ಹರಿವಿನ ಅಗತ್ಯಗಳಿಗೆ ಒಟ್ಟು ಸುಮಾರು 154 ಟಿಎಂಸಿ ನೀರು ಬೇಕಾಗಿದೆ ಎಂದು ಕರ್ನಾಟಕ ತಿಳಿಸಿದೆ.

ತಮಿಳುನಾಡಲ್ಲಿ ಲಭ್ಯವಿದೆ ಬಳಕೆಗೆ ಅಗತ್ಯ ನೀರು

ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಸುಮಾರು 55 ಟಿಎಂಸಿ ನೀರು ಸಂಗ್ರಹವಿದ್ದು, ಮಧ್ಯಂತರ ಜಲಾನಯನ ಪ್ರದೇಶಗಳಿಂದ 45 ಟಿಎಂಸಿ ಅಥವಾ ಅದಕ್ಕಿಂತ ಹೆಚ್ಚಿನ ನೀರು ಹರಿದುಬರುವ ನಿರೀಕ್ಷೆಯಿದೆ. ಇತರ ಜಲಾಶಯಗಳಲ್ಲಿ ಸುಮಾರು 6 ಟಿಎಂಸಿ ನೀರು ಇರುವುದರಿಂದ ತಮಿಳುನಾಡಿನಲ್ಲಿ ಒಟ್ಟು ಸುಮಾರು 100 ಟಿಎಂಸಿ ನೀರು ಲಭ್ಯವಾಗಲಿದೆ ಎಂದು ಕರ್ನಾಟಕ ಉಲ್ಲೇಖಿಸಿದೆ. ಕಡಿಮೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿರುವ ಸಾಂಬಾ ಬೆಳೆಗೆ, ಮೆಟ್ಟೂರು ಜಲಾಶಯದಿಂದ ತಮಿಳುನಾಡಿಗೆ ಸುಮಾರು 95 ಟಿಎಂಸಿ ನೀರಿನ ಅಗತ್ಯವಷ್ಟೇ ಇರಲಿದೆ. ಹೀಗಾಗಿ ಕರ್ನಾಟಕದಿಂದ ಮತ್ತಷ್ಟು ನೀರು ಪಡೆಯದೇ ತಮಿಳುನಾಡು ತನ್ನ ಅಗತ್ಯವನ್ನು ನಿರ್ವಹಿಸಬಹುದು ಎಂದು ರಾಜ್ಯವು ತನ್ನ ಮನವಿಯಲ್ಲಿ ತಿಳಿಸಿದೆ.

ಜುಲೈ ಮತ್ತು ಆಗಸ್ಟ್‌ನಲ್ಲೇ CWRC ಹಾಗೂ CWMA ತುರ್ತಾಗಿ ನಿರ್ಧಾರಗಳನ್ನು ಕೈಗೊಂಡಿರುವುದಕ್ಕೂ ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿದೆ. ನೈಋತ್ಯ ಮುಂಗಾರು ಅಂತ್ಯವಾಗುವವರೆಗೆ ಕಾಯದೆ, ಬರ ಪರಿಸ್ಥಿತಿಯನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡದೇ ಇಂತಹ ತಾತ್ಕಾಲಿಕ ನಿರ್ಧಾರಗಳನ್ನು ಕೈಗೊಳ್ಳುವುದು ಏಕಪಕ್ಷೀಯವಾಗಿದ್ದು, ಕರ್ನಾಟಕದ ಸಮಾನ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ರಾಜ್ಯ ಸರ್ಕಾರ ಹೇಳಿರೋದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Loading...
Unable to load recommendations.
Follow Us