ಕಳೆದ ಐದು ವರ್ಷದಿಂದ ಪ್ರತಿಷ್ಠಿತ ಕಂಪನಿಗಳ ನಕಲು ದಂಧೆ ಮಾಡುತಿದ್ದ ಗ್ಯಾಂಗ್ ಸಿಸಿಬಿ ಬಲೆಗೆ
ನಾವು ತಿನ್ನೊ ಆಹಾರವಷ್ಟೇ ಅಲ್ಲ, ನಾವು ಬಳಸುವ ವಸ್ತುಗಳು ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರತ್ತೆ. ಕೊಂಚ ಯಾಮಾರಿದ್ರೂ ಮುಂದಾದ ಅನಾಹುತ ಎಲ್ಲಿಂದಾಯ್ತು ಅಂತ ಗೊತ್ತಾಗೊದೇ ಇಲ್ಲ. ಯಾಕೆ ಈ ಮಾತು ಹೇಳ್ತಾಯಿದ್ದೀವೆ ಅಂದ್ರೆ ನಗರದಲ್ಲಿ ಹೊಸದಾಗಿ ನಕಲಿ ದಂಧೆ ಶುರುವಾಗಿದೆ. ಪ್ರತಿಷ್ಠಿತ ಬ್ರ್ಯಾಂಡ್ ಗಳ ನಕಲಿ ವಸ್ತುಗಳ ತಯಾರಿಸಿ ಜನರಿಗೆ ಮಾರಾಟ ಮಾಡುವ ಮುಖಾಂತರ ವಂಚನೆ ಮಾಡುತಿದ್ದ ದೊಡ್ಡ ಜಾಲವೊಂದು ಬಯಲಾಗಿದೆ. ಈ ಮೂಲಕ ಸಿಸಿಬಿ ನಕಲಿ ದಂಧೆ ನಡೆಸುತಿದ್ದ ಗ್ಯಾಂಗ್ ಬಂಧಿಸಿದೆ.
ಬೆಂಗಳೂರು, ಮೇ.08: ನೋಡಲು ಥೇಟ್ ಓರಿಜಿನಲ್ ಅಂತೆ ಕಾಣುತ್ತೆ. ಆದರೇ ಆ ವಸ್ತುಗಳು ಓರಿಜಿನಲ್ ಆಗಿರಲ್ಲ. ಬಜಾರ್ ನಲ್ಲಿ ಅಸಲಿ ವಸ್ತುಗಳ ಬೆಲೆಗಿಂತ ಕಡಿಮೆ ಹಣಕ್ಕೆ ಬಿಕರಿಯಾಗೋ ಪ್ರತಿಷ್ಠಿತ ಕಂಪನಿಗಳ ವಸ್ತುಗಳು ಅಕ್ಷರಷಃ ನಕಲಿ. ದಿನ ನಿತ್ಯ ಜನರು ಬಳಸುವ ವಸ್ತುಗಳನ್ನೇ ಟಾರ್ಗೆಟ್ ಮಾಡಿಕೊಂಡ ಗ್ಯಾಂಗ್ವೊಂದು ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟಿತ್ತು. ಜೊತೆಗೆ ವ್ಯವಸ್ಥಿತವಾಗಿ ನಕಲಿ ವಸ್ತುಗಳ ಮಾರಾಟ ಮಾಡುತಿತ್ತು. ಸದ್ಯ ಈ ಗ್ಯಾಂಗ್ ಈಗ ಸಿಸಿಬಿ (Bengaluru CCB) ಬಲೆಗೆ ಬಿದ್ದಿದೆ. ಶಿವಪಾಟೀಲ್, ದೌಲತ್ ಸಿಂಗ್ ಹಾಗೂ ಶುಬಂ ಬಂಧಿತ ಆರೋಪಿಗಳು.
ಮೂಲತಃ ಉತ್ತರ ಭಾರತದ ಈ ಆರೋಪಿಗಳು ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ರು. ಈ ವೇಳೆ ವಸ್ತುಗಳ ನಕಲಿ ಮಾಡೊದ್ರಲ್ಲೇ ಕುಖ್ಯಾತಿ ಹೊಂದಿದ್ದಾನೆ ಎನ್ನಲಾದ ಮಹೇಶ್ ಗಾಂಧಿ ಎಂಬಾತನ ಬಳಿ ಒಂದಿಷ್ಟು ವರ್ಷ ಕೆಲಸ ಮಾಡಿದ್ದರು. ಈ ವೇಳೆ ವಸ್ತುಗಳ ನಕಲಿ ಮಾಡುವ ಅಸಲಿ ಕೆಲಸ ಕಲಿತ ಇವರು ಬಳಿಕ ತಮ್ಮದೇ ಆದ ವ್ಯವಸ್ಥಿತ ಜಾಲ ತೆರೆದಿದ್ದರು. ಅದರಂತೆ ರಾಜ್ಯ ಸೇರಿದಂತೆ ಹಲವು ಕಡೆ ತಮ್ಮದೇ ಆದ ಜಾಲ ರೂಪಿಸಿಕೊಂಡ ಇವರು ತಮ್ಮ ವ್ಯವಹಾರ ಶುರು ಮಾಡಿದ್ದರು. ಶಿವ ಪಾಟೀಲ್ ನಕಲಿ ವಸ್ತುಗಳ ತಯಾರಿ ಮಾಡಿದ್ರೆ ದೌಲತ್ ಸಿಂಗ್ ಅದರ ಡಿಸ್ಟ್ರಿಬ್ಯೂಟಿಂಗ್ ನೋಡಿ ಕೊಳ್ಳುತಿದ್ದ. ಹೀಗೆ ಐದು ವರ್ಷದಿಂದ ಕೃತ್ಯ ಎಸಗಿದ ಇವರ ಮೇಲೆ ಪ್ರತಿಷ್ಠಿತ ಕಂಪನಿಗಳಿಗೆ ಮಾಹಿತಿ ದೊರೆತಿದೆ. ಅದರಂತೆ ಹಿಂದೂಸ್ಥಾನ್ ಯುನಿಲಿವರ್ ಲಿಮಿಟೆಡ್ ಹಾಗೂ ರೆಕಿಟ್ ಬೆಂಕಿಸರ್ ಇಂಡಿಯಾ ಲಿಮಿಟೆಡ್ ಕಂಪನಿಗಳ ಅಧಿಕೃತ ಪ್ರತಿನಿಧಿ ಸಿಸಿಬಿಗೆ ದೂರು ನೀಡಿದ್ದು, ಈ ಮೂಲಕ ಪ್ರಕರಣದ ತನಿಖೆ ಕೈಗೊಂಡ ಸಿಸಿಬಿ ನಕಲಿ ಜಾಲವನ್ನು ಭೇದಿಸಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಡಬಲ್ ಮರ್ಡರ್; ಗಂಡ, ಮಕ್ಕಳನ್ನು ಬಿಟ್ಟು ತನ್ನ ಜೊತೆಗಿದ್ದ ಪ್ರಿಯತಮೆಯನ್ನೇ ಕೊಂದ ಪ್ರಿಯಕರ
ಸರ್ಳ್ ಎಕ್ಸೆಲ್, ವಿಮ್ ಲಿಕ್ವಡ್, ಲೈಫ್ ಬಾಯ್ ಹ್ಯಾಂಡ್ ವಾಶ್, ರಿನ್, ವೀಲ್ ಡಿಟರ್ಜಂಟ್ ಪೌಡರ್, ರೆಡ್ ಲೇಬಲ್ ಟಿ ಪೌಡರ್, ಲೈಜಾಲ್, ಹಾರ್ಪಿಕ್ ಸೇರಿದಂತೆ ಹಲವು ಉತ್ಪನ್ನಗಳ ನಕಲಿ ವಸ್ತುಗಳನ್ನು ಇರಿಸಲಾಗಿದ್ದ ವಿಲ್ಸನ್ ಗಾರ್ಡನ್ ನ ಗೋಡಾನ್ ಹಾಗೂ ಇದನ್ನು ತಯಾರಿಸುತಿದ್ದ ಆವಲಹಳ್ಳಿ ಬಳಿಯ ರಾಮಪುರ ಮತ್ತು ಬಿದರಹಳ್ಳಿಯ ಫ್ಯಾಕ್ಟರಿಗಳಿಗೆ ಸಿಸಿಬಿ ದಾಳಿ ಮಾಡಿ ನಕಲಿ ತಯಾರಿಕಾ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಸದ್ಯ ಈ ಬಗ್ಗೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರಿಂದ 95 ಲಕ್ಷ ಮೌಲ್ಯದ ನಕಲಿ ವಸ್ತುಗಳನ್ನು ಸಿಸಿಬಿ ವಶಕ್ಕೆ ಪಡೆದಿದೆ. ಆದ್ರೆ ಅದೇನೆ ಇರಲಿ ಅಸಲಿ ವಸ್ತುಗಳ ಅಸಲಿ ಬೆಲೆ ಬದಲಿಗೆ ನಕಲಿ ವಸ್ತುಗಳ ಕಡಿಮೆ ಬೆಲೆಗೆ ಖರೀದಿಸುವ ಜನ ಕೊಂಚ ಎಚ್ಚರದಿಂದಿರಿ. ಯಾಕಂದ್ರೆ ನಿಮ್ಮ ಆರೋಗ್ಯ ನಿಮ್ಮ ನಿರ್ಧಾರದಲ್ಲಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ