
ಬೆಂಗಳೂರು, (ಆಗಸ್ಟ್ 06): ನಮ್ಮ ಮೆಟ್ರೋ ಹಸಿರು ಮಾರ್ಗದ ರೈಲುಗಳ (Green Line Namma Metro) ಸಂಚಾರದಲ್ಲಿ ನಾಳೆ (ಆಗಸ್ಟ್ 7) ಮಹತ್ವದ ಬದಲಾವಣೆ ಆಗಲಿದೆ. ನಿತ್ಯ ಸಾವಿರಾರು ಜನರು ಸಂಚರಿಸುವ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಸಿಆರ್‌ಆರ್‌ಸಿ (CRRC) ಸಂಸ್ಥೆಯ ನೂತನ ರೈಲುಗಳನ್ನು ಮೆಟ್ರೋ ನಿಗಮದ ಕಾರ್ಯಾಚರಣೆಗೆ ಸೇರ್ಪಡೆಗೊಳಿಸಲಾಗುತ್ತದೆ. ಹಾಗೇ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ (CMRS) ಮುಖ್ಯ ತಪಾಸಣೆಗೆ ಪೂರ್ವಭಾವಿಯಾಗಿ, ಬಿಎಂಆರ್‌ಸಿಎಲ್ ಹಾಗೂ ಸಿಎಂಆರ್‌ಎಸ್ ಅಧಿಕಾರಿಗಳ ತಂಡದೊಂದಿಗೆ ತಪಾಸಣೆ ನಡೆಸಲಾಗುತ್ತದೆ. ಹೀಗಾಗಿ ಶುಕ್ರವಾರ ಈ ಮಾರ್ಗದ ರೈಲು ಸಂಚಾರದಲ್ಲಿ ಬದಲಾವಣೆಯಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಯಶವಂತಪುರದಿಂದ ಮಾದಾವರದವರೆಗಿನ (ಅಪ್ ಲೈನ್) ರೈಲು ಸೇವೆಗಳು ರಾತ್ರಿ 10:30ರಿಂದ 11:00 ಗಂಟೆಯವರೆಗೆ, ಪ್ರಯಾಣಿಕ ಸೇವೆ ಮುಕ್ತಾಯಗೊಳ್ಳುವವರೆಗೆ, ನಿಯಮಿತ 10 ನಿಮಿಷಗಳ ಬದಲಾಗಿ 20 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ.
ಅದೇ ರೀತಿ ಮಾದಾವರದಿಂದ ರೇಷ್ಮೆ ಸಂಸ್ಥೆಯವರೆಗಿನ (ಡೌನ್ ಲೈನ್) ರೈಲು ಸೇವೆಗಳು ನಿಯಮಿತ ವೇಳಾಪಟ್ಟಿಯಂತೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ.
ರಾಜಧಾನಿ ಬೆಂಗಳೂರಿನ ಮೆಟ್ರೋ ಜಾಲವು 96 ಕಿಲೋ ಮೀಟರ್ ವಿಸ್ತರಿಸಿದೆ. ಹೆಚ್ಚಿನ ಪ್ರಯಾಣಿಕರ ನಿರ್ವಹಣೆಗೆ ಹಾಲಿ ರೈಲುಗಳು ಸಾಲುತ್ತಿಲ್ಲ. ಇದರಿಂದ ನಿತ್ಯ ದಟ್ಟಣೆ, ನೂಕು ನುಗ್ಗಲು ಉಂಟಾಗಿದೆ. ಇದರ ನಿಯಂತ್ರಣ, ಸಮಸ್ಯೆ ಪರಿಹಾರಾರ್ಥವಾಗಿ ಚೀನಾದಲ್ಲಿ ನಿರ್ಮಿಸಿದ ಸುಮಾರು 21 ರೈಲುಗಳು ಆಗಮಿಸಲಿವೆ. ಇದರಲ್ಲಿ ಮೂರು ರೈಲುಗಳು ಹಸಿರು ಮಾರ್ಗಕ್ಕೆ ಸೇರ್ಪಡೆಗೊಳ್ಳಲಿವೆ. ಇದರ ನಿಮಿತ್ತ ಒಂದಷ್ಟು ತಪಾಸಣೆ ಕೈಗೊಳ್ಳಲಾಗುತ್ತದೆ. ಹೀಗಾಗಿ ಶುಕ್ರವಾರ ಒಂದು ದಿನ ರಾತ್ರಿ ಹಸಿರು ಮಾರ್ಗದ ರೈಲುಗಳ (ಯಶವಂತಪುರ-ಮಾದಾವರ) ಸಂಚಾರದಲ್ಲಿ ಬದಲಾವಣೆ ಆಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಂದು ದಿನದ ಈ ತಾತ್ಕಾಲಿಕ ಅಡಚಣೆಗೆ ಸಹಕರಿಸುವಂತೆ ಬಿಎಂ ಆರ್ ಸಿ ಎಲ್ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದು, ಪ್ರಯಾಣಿಕರು ಈ ತಾತ್ಕಾಲಿಕ ಬದಲಾವಣೆಯನ್ನು ಗಮನಿಸಿ ಅದಕ್ಕನುಗುಣವಾಗಿ ಪ್ರಯಾಣ ಯೋಜಿಸಿಕೊಳ್ಳುವಂತೆ ಮನವಿ ಮಾಡಿದೆ.