AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

EPFO ಸ್ಟಾಫ್ ಕೋ-ಆಪರೇಟಿವ್ ಸೊಸೈಟಿ ವಂಚನೆ ಪ್ರಕರಣ: ಸಿಇಒ​ಗಿಂತಲೂ ಅಧಿಕ ಆಸ್ತಿ ಗಳಿಸಿರುವ ಅಕೌಂಟೆಂಟ್ ಜಗದೀಶ್!

ಬೆಂಗಳೂರಿನ ಇಪಿಎಫ್‌ಒ ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ನಡೆದ 70 ಕೋಟಿ ರೂ. ವಂಚನೆಯಲ್ಲಿ ಅಕೌಂಟೆಂಟ್ ಜಗದೀಶ್ ಮಾಸ್ಟರ್‌ಮೈಂಡ್ ಎಂಬುದು ಬಯಲಾಗಿದೆ. 21,000 ರೂ. ಸಂಬಳ ಪಡೆಯುತ್ತಿದ್ದ ಜಗದೀಶ್ ಮತ್ತು ಪತ್ನಿ ಲಕ್ಷ್ಮೀ ಐಷಾರಾಮಿ ಜೀವನ ನಡೆಸುತ್ತಿದ್ದು, ಹೂಡಿಕೆದಾರರ ಹಣವನ್ನು ಬೇನಾಮಿ ಖಾತೆಗಳಿಗೆ ವರ್ಗಾಯಿಸಿದ್ದರು. ಸದ್ಯ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಸರ್ಕಾರ ನಿರ್ಧರಿಸಿದೆ.

EPFO ಸ್ಟಾಫ್ ಕೋ-ಆಪರೇಟಿವ್ ಸೊಸೈಟಿ ವಂಚನೆ ಪ್ರಕರಣ: ಸಿಇಒ​ಗಿಂತಲೂ ಅಧಿಕ ಆಸ್ತಿ ಗಳಿಸಿರುವ ಅಕೌಂಟೆಂಟ್ ಜಗದೀಶ್!
ಸಾಂದರ್ಭಿಕ ಚಿತ್ರ
Shivaprasad B
| Updated By: Ganapathi Sharma|

Updated on: Nov 06, 2025 | 10:32 AM

Share

ಬೆಂಗಳೂರು, ನವೆಂಬರ್ 6: ಬೆಂಗಳೂರಿನಲ್ಲಿ ಸಂಚಲನ ಸೃಷ್ಟಿಸಿರುವ ಇಪಿಎಫ್​ಒ ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ 70 ಕೋಟಿ ರೂ. ವಂಚನೆ (EPFO Staff Cooperative Society Scam) ಪ್ರಕರಣ ಸಂಬಂಧ ಆಘಾತಕಾರಿ ಮಾಹಿತಿ ತನಿಖೆ ವೇಳೆ ಬಯಲಾಗಿದೆ. ಇಪಿಎಫ್​ಒ ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಿಇಒ ಗೋಪಿನಾಥ್ ಈ ಕೇಸ್‌ನ ಮಾಸ್ಟರ್‌ಮೈಂಡ್ ಎಂದು ಈ ಹಿಂದೆ ಭಾವಿಸಿದ್ದ ಪೊಲೀಸರು ಅಕೌಂಟೆಂಟ್ ಜಗದೀಶ್‌ನ ಆಸ್ತಿ, ಖಾತೆಗಳು ಹಾಗೂ ವಂಚನೆ ವಿಧಾನ ನೋಡಿ ಆಘಾತಕ್ಕೊಳಗಾಗುವಂತಾಗಿದೆ. ಕೇವಲ 21,000 ರೂ. ಸಂಬಳ ಪಡೆಯುತ್ತಿದ್ದ ಜಗದೀಶ್ ಕೋಟ್ಯಂತರ ಮೌಲ್ಯದ ಮನೆ, ಕಾರು, ಫಾರ್ಮ್‌ಹೌಸ್ ಸೇರಿದಂತೆ ಹಲವು ಆಸ್ತಿಗಳನ್ನು ಹೊಂದಿರುವುದು ಪತ್ತೆಯಾಗಿದೆ.

ಅಕೌಂಟೆಂಟ್ ಜಗದೀಶ್ ಹಾಗೂ ಅವನ ಪತ್ನಿ ಲಕ್ಷ್ಮೀ ಈ ವಂಚನೆ ಪ್ರಕರಣದ ಪ್ರಮುಖ ಆರೋಪಿಗಳು ಎಂದು ಗುರುತಿಸಲಾಗಿದ್ದು, ಇಬ್ಬರೂ ಹೂಡಿಕೆದಾರರ ಹಣವನ್ನು ಬೇನಾಮಿ ಖಾತೆಗಳಲ್ಲಿ ಹಾಕಿ ಐಷಾರಾಮಿ ಜೀವನ ನಡೆಸಿದ್ದಾರೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಜಗದೀಶ್ ಪತ್ನಿ ಲಕ್ಷ್ಮೀ ಅಕೌಂಟ್‌ಗಳ ಸಂಪೂರ್ಣ ನಿರ್ವಹಣೆ ಮಾಡುತ್ತಿದ್ದಳು ಮತ್ತು ಹೂಡಿಕೆದಾರರ ಹಣ ಬ್ಯಾಂಕ್‌ಗೆ ಹೋಗದೆ ನೇರವಾಗಿ ಇವರ ಖಾತೆಗಳಿಗೆ ಸೇರುತ್ತಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಅನುಮಾನಗೊಂಡ ಹೂಡಿಕೆದಾರರು ಪ್ರಶ್ನೆ ಮಾಡುತ್ತಿದ್ದಂತೆಯೇ ಜಗದೀಶ್ ಪರಾರಿಯಾಗಿದ್ದಾನೆ.

ಇದನ್ನೂ ಓದಿ: EPFO ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ವಂಚನೆ: ಆರೋಪಿಗಳ ಐಷಾರಾಮಿ ಜೀವನ ಕಂಡು ಪೊಲೀಸರಿಗೇ ಶಾಕ್​!

ಮಂಗಳವಾರ ಅಂಜನಾಪುರದಲ್ಲಿರುವ ಜಗದೀಶ್ ಮನೆಯಲ್ಲಿ ಪೊಲೀಸರು ದಾಳಿ ನಡೆಸಿ, ದಾಖಲೆಗಳು ಹಾಗೂ ಅರ್ಧ ಕೆ.ಜಿ. ಚಿನ್ನಾಭರಣ ವಶಪಡಿಸಿಕೊಂಡಿದ್ದರು. ಸದ್ಯ ಪತ್ನಿ ಲಕ್ಷ್ಮೀ ಬಂಧನದಲ್ಲಿದ್ದು, ವಿಚಾರಣೆ ನಡೆಯುತ್ತಿದೆ. ಸಿಇಒ ಗೋಪಿನಾಥ್ ಹಾಗೂ ಲಕ್ಷ್ಮೀ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

EPFO ಸ್ಟಾಫ್ ಕೋ-ಆಪರೇಟಿವ್ ಸೊಸೈಟಿ ವಂಚನೆ ಪ್ರಕರಣ ತನಿಖೆ ಸಿಐಡಿ ಹೆಗಲಿಗೆ

EPFO ಸ್ಟಾಫ್ ಕೋ-ಆಪರೇಟಿವ್ ಸೊಸೈಟಿ ವಂಚನೆ ಪ್ರಕರಣದ ಗಂಭೀರತೆಯನ್ನು ಮನಗಂಡ ಸರ್ಕಾರ, ತನಿಖೆಯನ್ನು ಸಿಐಡಿಗೆ ವರ್ಗಾಯಿಸಲು ನಿರ್ಧರಿಸಿದೆ. ಪ್ರಾಥಮಿಕ ತನಿಖೆಯನ್ನು ಮುಗಿಸಿದ ನಂತರ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ಈ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಿದ್ದಾರೆ. ಪ್ರಸ್ತುತ ತನಿಖೆ ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಅವರ ಮೇಲ್ವಿಚಾರಣೆಯಲ್ಲಿ ಮುಂದುವರಿದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ