ಬೆಂಗಳೂರು, ಅಕ್ಟೋಬರ್ 10: ಕಳೆದ ಮೂರು ತಿಂಗಳುಗಳಿಂದ ಆಹಾರ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳು ವ್ಯಸ್ತವಾಗಿವೆ. ಜನರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಿವೆ. ಅಸುರಕ್ಷಿತರ ಆಹಾರಗಳ ಮೇಲೆ ಸಮರ ಸಾರಿರುವ ಆಹಾರ ಮತ್ತು ಗುಣಮಟ್ಟ ಸುರಕ್ಷತಾ ಇಲಾಖೆ, ಜನರ ಆರೋಗ್ಯಕ್ಕೆ ಕುತ್ತು ತರುತ್ತಿರುವ ಅಪಾಯಕರ ಆಹಾರಗಳನ್ನು ಪರೀಕ್ಷೆಗೆ ಒಳಪಡಿಸಿ ಸೂಕ್ತ ಕ್ರಮವಹಿಸುತ್ತಿದೆ. ಇದರ ಮಧ್ಯೆ ಇದೀಗ ಆನ್ಲೈನ್ ಮೂಲಕ ಜನರ ಮನೆ ಮನೆ ತಲುಪುತ್ತಿರುವ ಆಹಾರ ಎಷ್ಟು ಸುರಕ್ಷಿತ ಎಂಬ ಚರ್ಚೆ ಶುರುವಾಗಿದೆ. ಆನ್ಲೈನ್ ಮೂಲಕ ಆಹಾರ ಪೂರೈಸುವ ಕ್ಲೌಡ್ ಕಿಚನ್ಗಳಿಗೆ ಮಾರ್ಗಸೂಚಿಗಳನ್ನ ನೀಡುವಂತೆ ಆಹಾರ ಇಲಾಖೆಗೆ ಒತ್ತಾಯ ಕೇಳಿ ಬರುತ್ತಿದೆ.
ಇತ್ತಿಚ್ಚಿಗೆ ಎಫ್‌ಎಸ್‌ಎಸ್‌ಎಐ ಪರವಾನಗಿ ಇದ್ದರೆ ಯಾರೂ ಬೇಕಾದರೂ ಈ ಕ್ಲೌಡ್ ಕಿಚನ್ ಶುರು ಮಾಡಬಹುದಾಗಿದೆ. ಎಲ್ಲಿ ಬೇಕೋ ಅಲ್ಲಿ ಈ ಕ್ಲೌಡ್ ಕಿಚನ್ಗಳನ್ನ ಶುರು ಮಾಡಬಹುದಾಗಿದೆ. ಇದಕ್ಕೆ ಆಹಾರ ಇಲಾಖೆ ಪರವನಾಗಿಯನ್ನ ಕೂಡಾ ನೀಡುತ್ತಿದೆ. ಬಹುತೇಕ ಕ್ಲೌಡ್ ಕಿಚನ್ಗಳ ಬಗ್ಗೆ ಯಾವುದೇ ಮಾಹಿತಿ ಗ್ರಾಹಕರಿಗೆ ಇರುವುದಿಲ್ಲ. ಅವುಗಳ ಆಹಾರ ತಯಾರಿಕೆ ಹೈಜೀನ್ ಬಗ್ಗೆ ಗ್ರಾಹಕರಿಗೆ ಮಾಹಿತಿಯೇ ಇಲ್ಲದಾಗಿದೆ. ಯಾಕಂದರೆ ಎಲ್ಲಿ ಬೇಕೋ ಅಲ್ಲಿ ಈ ಕ್ಲೌಡ್ ಕಿಚನ್ ತೆರೆಯಲು ಸುಲಭವಾಗಿ ಅವಕಾಶ ಸಿಗುತ್ತಿದೆ. ಇದರಿಂದ ಆಹಾರದ ಗುಣಮಟ್ಟದ ಬಗ್ಗೆ ಚರ್ಚೆ ಶುರುವಾಗಿದೆ. ಹೀಗಾಗಿ ಆನ್ಲೈನ್ ಆ್ಯಪ್ಗಳಲ್ಲಿ ಆಹಾರ ಆಡರ್ ಮಾಡುವಾಗ ಇದು ಎಲ್ಲಿಂದ ಬರ್ತಿದೆ? ಹೋಟೆಲ್ ಅಥವಾ ಕ್ಲೌಡ್ ಕಿಚನ್ ಅಥವಾ ಬೇಕರಿ ಹೀಗೆ ವಿಭಾಗಿಸಿ ಗ್ರಾಹಕರಿಗೆ ನೀಡುವಂತೆ ಹಾಗೂ ಇದರ ಗುಣಮಟ್ಟದ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಿಯೇ ಆಹಾರ ನೀಡುವ ವಿಧಾನದ ಬಗ್ಗೆ ಒತ್ತಾಯ ಕೇಳಿ ಬರ್ತಿದೆ.
ಕ್ಲೌಡ್ ಕಿಚನ್ಗಳ ಸ್ವಚ್ಛತೆ ಹಾಗೂ ಗುಣಮಟ್ಟದ ಬಗ್ಗೆ ಆಹಾರ ಹಾಗೂ ಗಣಮಟ್ಟ ಇಲಾಖೆ ಪರಿಷ್ಕತವಾದ ಮಾರ್ಗಸೂಚಿಗಳನ್ನು ನೀಡುವಂತೆ ಒತ್ತಾಯ ಕೇಳಿಬಂದಿದೆ. ಆಹಾರ ತಜ್ಞರು ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಸೈಟ್ನಲ್ಲಿದ್ದ ಕಸ ಸ್ವಚ್ಚಗೊಳಿಸದೇ ಇದ್ದರೆ ದಂಡ ಹಾಕಿ: ಬಿಡಿಎಗೆ ನಿರ್ದೇಶನ
ಆಹಾರ ತಯಾರಿಸುವ ವಿಧಾನ, ತಯಾರಿ ಮಾಡುವವ ಆರೋಗ್ಯ, ಗಣಮಟ್ಟ ಹಾಗೂ ಶುಚಿತ್ವ ಎಲ್ಲವೂ ಮುಖ್ಯವಾಗುತ್ತದೆ. ಇಲ್ಲವಾದರೆ ಆರೋಗ್ಯಕ್ಕೆ ಅಪಾಯ ಖಂಡಿತ ಎಂದು ಆಹಾರ ತಜ್ಞ ಕೀರ್ತಿ ಹಿರಿಸಾವೆ ಅಭಿಪ್ರಾಯಪಟ್ಟಿದ್ದಾರೆ.
ಇನ್ಮುಂದೆ ಜನರು ಬಾಯಿ ರುಚಿಗಿಂತ ಆರೋಗ್ಯದ ಬಗ್ಗೆ ಕೊಂಚ ಗಮನ ಕೊಡಬೇಕಿದೆ. ಆನ್ಲೈನ್ ಮೂಲಕ ಬರು ಆಹಾರ ಎಲ್ಲಿಂದ ಬರುತ್ತಿದೆ? ಹೇಗೆ ತಯಾರಾಗುತ್ತದೆ ಎಂಬ ಬಗ್ಗೆಯೂ ಮುನ್ನೆಚ್ಚರಿಕೆ ವಹಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ