ಕಲಾಸಿಪಾಳ್ಯ ಬಸ್ ನಿಲ್ದಾಣ ಕೊನೆಗೂ ಉದ್ಘಾಟನೆ, ಇಲ್ಲಿಂದ ಯಾವೆಲ್ಲ ಬಸ್ ಸಂಚರಿಸಲಿವೆ?ಇಲ್ಲಿದೆ ಮಾಹಿತಿ
ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬೆಂಗಳೂರಿನ ಕಲಾಸಿಪಾಳ್ಯ ಬಸ್ ನಿಲ್ದಾಣ ಕೊನೆಗೂ ಉದ್ಘಾಟನೆಯಾಗಿದೆ. ಇನ್ನು ಇಲ್ಲಿಂದ ಯಾವೆಲ್ಲ ಬಸ್ ಸಂಚರಿಸಲಿವೆ ಎನ್ನುವ ಮಾಹಿತಿ ಇಲ್ಲಿದೆ
ಬೆಂಗಳೂರು: ರಾಜಧಾನಿಯ ಅಷ್ಟ ದಿಕ್ಕುಗಳಿಗೂ ಸಂಪರ್ಕ ಕಲ್ಪಿಸುವ ಬೆಂಗಳೂರಿನ ಕಲಾಸಿಪಾಳ್ಯ ಬಸ್ ನಿಲ್ದಾಣ(Kalasipalya bus stand) ಕೊನೆಗೂ ಉದ್ಘಾಟನೆಯಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು(BMTC) ಸಾರ್ವಜನಿಕರ ಅನುಕೂಲಕ್ಕಾಗಿ ಸುಮಾರು 63.17 ಕೋಟಿ ರೂ. ವೆಚ್ಚದಲ್ಲಿ ಕಲಾಸಿಪಾಳ್ಯದಲ್ಲಿ ನಿರ್ಮಿಸಿರುವ ನೂತನ ಸುಸಜ್ಜಿತ ಬಸ್ ನಿಲ್ದಾಣವನ್ನು ಇಂದು(ಫೆಬ್ರುವರಿ 24) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಉದ್ಘಾಟಿಸಿದರು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ. ಅಲ್ಲದೇ ಮುಖ್ಯವಾಗಿ ಟ್ರಾಫಿಕ್ ದಟ್ಟಣೆ ಕಡಿಮೆಯಾಗಲಿದೆ. ಈ ಬಸ್ ನಿಲ್ದಾಣಕ್ಕೆ 2016ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು.
ಕಲಾಸಿಪಾಳ್ಯದ ಕೋಟೆ ರಸ್ತೆಯಿಂದ ಕನಕಪುರ ರಸ್ತೆ, ಮಾಗಡಿ ರಸ್ತೆ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳು ಕಾರ್ಯಾಚರಣೆಗೊಳ್ಳುತ್ತವೆ. ಬನ್ನೇರುಘಟ್ಟ, ಜಿಗಣಿ, ಹೊಸೂರು, ಆನೇಕಲ್‌ಗೆ ತೆರಳುವ ಬಸ್‌ಗಳು ಕಲಾಸಿಪಾಳ್ಯ ಬಸ್ ನಿಲ್ದಾಣದಿಂದ ಹೊರಡುತ್ತವೆ. ಕೆ.ಆರ್. ಮಾರ್ಕೆಟ್ನ ಜಾಮೀಯಾ ಮಸೀದಿ ಬಳಿಯ ನಿಲ್ದಾಣದಿಂದ ಕೆ.ಆರ್.ಪುರ, ಹೊಸಕೋಟೆ, ಯಲಹಂಕ, ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ನೆಲಮಂಗಲ ಕಡೆ ಬಸ್‌ಗಳು ಸಂಚರಿಸುತ್ತವೆ.
ಮುಖ್ಯಮಂತ್ರಿ @BSBommai ಅವರು ಇಂದು ಬಿಎಂಟಿಸಿ ವತಿಯಿಂದ ನಿರ್ಮಿಸಿರುವ ಕಲಾಸಿಪಾಳ್ಯ ನೂತನ ಬಸ್ ನಿಲ್ದಾಣವನ್ನು ಉದ್ಘಾಟಿಸಿದರು.
ಸಚಿವರಾದ @RAshokaBJP ಹಾಗೂ @MunirathnaMLA, ಶಾಸಕ ಉದಯ್ ಗರುಡಾಚಾರ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. pic.twitter.com/DEr8uRep7L
— CM of Karnataka (@CMofKarnataka) February 24, 2023
ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಕಲಾಸಿಪಾಳ್ಯ ಬಸ್ ನಿಲ್ದಾಣ ಬಹಳ ವರ್ಷಗಳಿಂದ ಜನರ ಸೇವೆ ಮಾಡಿಕೊಂಡು ಬಂದಿದೆ. ಕೆಎಸ್ ಆರ್ ಟಿ ಸಿ ಮತ್ತು ಖಾಸಗಿ ಬಸ್ ಸೇವೆ ಸುತ್ತ ಮುತ್ತಲಿನ ಗ್ರಾಮದವರು ಮತ್ತು ವ್ಯಾಪಾರಸ್ಥರಿಗೆ ಬಹಳ ಅನುಕೂಲ ಕಲ್ಪಿಸಿರುವ ಬಸ್ ನಿಲ್ದಾಣ. ಇಲ್ಲಿನ ಸೌಲಭ್ಯಗಳನ್ನು ವ್ಯವಸ್ಥಿತಗೊಳಿಸಿ ನೂತನ ಬಸ್ ನಿಲ್ದಾಣ ನಿರ್ಮಿಸಿ ಜನರ ಸೇವೆಗೆ ಸಮರ್ಪಿಸಿರುವುದು ಜನರಿಗೆ ದೊಡ್ಡ ಅನುಕೂಲ ಕಲ್ಪಿಸಿದಂತಾಗಿದೆ ಹೇಳಿದರು.
ಬಿಎಂಟಿಸಿ ನಗರದ ಜನರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದೆ. ಮುಂಬರುವ ದಿನಗಳಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಬಿಎಂಟಿಸಿ ಪ್ರಮುಖ ಪಾತ್ರ ವಹಿಸಲಿದ್ದು, ಬಿಎಂಟಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವುದರಿಂದ ಬೆಂಗಳೂರಿನ ವಾಹನ ದಟ್ಟಣೆ ಕಡಿಮೆಯಾಗುತ್ತದೆ. ಕೋವಿಡ್ ನಿಂದಾಗಿ ಹಾಗೂ ಕೆಲವು ವರ್ಷಗಳಿಂದ ಬಿಎಂಟಿಸಿ ದರಗಳನ್ನು ಹೆಚ್ಚಿಸದ ಕಾರಣ, ಬಿಎಂಟಿಸಿ ನಷ್ಟದಲ್ಲಿದೆ ಕಳೆದ ಎರಡು ವರ್ಷಗಳಲ್ಲಿ ಸರ್ಕಾರ 2915 ಕೋಟಿ ರೂ.ಗಳನ್ನು ಸಂಸ್ಥೆಗೆ ನೀಡಿರುವುದರಿಂದ ಬಿಎಂಟಿಸಿ ಸಂಸ್ಥೆಗೆ ತನ್ನ ಸೇವೆಯನ್ನು ಸಲ್ಲಿಸಲು ಸಾಧ್ಯವಾಗಿದೆ. ಬಿಎಂಟಿಸಿಗೆ 3445 ಹೊಸ ಬಸ್ ಗಳನ್ನು ಒದಗಿಸಲಾಗುತ್ತಿದೆ ಎಂದರು.
ಇನ್ನಷ್ಟು ಬೆಂಗಳೂರು ನಗರ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 10:33 pm, Fri, 24 February 23