ಸಿ.ಜೆ ರಾಯ್ ಸಾವಿನ ಕೊನೆಯ ಕ್ಷಣ ಹೇಗಿತ್ತು; ಏನೆಲ್ಲಾ ಆಯ್ತು ಗೊತ್ತಾ?
CJ Roy Death:ಕಾನ್‌ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಸಿ.ಜೆ. ರಾಯ್ ಶುಕ್ರವಾರ ತಮ್ಮ ಕಚೇರಿಯಲ್ಲಿ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಐಟಿ ದಾಳಿಯ ನಂತರ ತಮ್ಮ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅವರ ಸಾವಿನ ಬೆನ್ನಲ್ಲೇ ಹಲವಾರು ಊಹಾಪೋಹಗಳು ಹರಿದಾಡುತ್ತಿದ್ದು, ರಾಯ್ ಸಾವಿನ ಕೊನೆಯ ಕ್ಷಣ ಹೇಗಿತ್ತು, ಏನೆಲ್ಲಾ ಆಯ್ತು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು, ಜನವರಿ 31: ಸಾವಿರಾರು ಕೋಟಿ ಆಸ್ತಿಯ ಒಡೆಯ, ಕಾನ್‌ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಸಿ.ಜೆ. ರಾಯ್ (CJ Roy Death) ಲಾಂಗ್‌ಫೋರ್ಡ್ ಟೌನ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ಶುಕ್ರವಾರ ಸಾವನ್ನಪ್ಪಿದ್ದಾರೆ. 57 ವರ್ಷದ ಈ ರಿಯಲ್ ಎಸ್ಟೇಟ್ ಉದ್ಯಮಿ ತಮ್ಮ ಪಿಸ್ತೂಲಿನಿಂದ ತಾವೇ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಹಲವಾರು ಅನುಮಾನಗಳು ಕಾಡುತ್ತಿವೆ. ಅದರಲ್ಲದೆ ಅವರು ಬಳಸಿದ ಪಿಸ್ತೂಲಿಗೆ ಲೈಸೆನ್ಸ್ ಇರಲಿಲ್ಲವೆಂಬ ಶಂಕೆಯೂ ವ್ಯಕ್ತವಾಗಿದೆ.
ಕೇರಳದ ಕೊಚ್ಚಿಯಿಂದ ಬಂದ ಆದಾಯ ತೆರಿಗೆ (ಐಟಿ) ಅಧಿಕಾರಿಗಳ ತಂಡವು ಬೆಂಗಳೂರಿನ ತಮ್ಮ ಸಹೋದ್ಯೋಗಿಗಳೊಂದಿಗೆ ಕಳೆದ ಮೂರು ದಿನಗಳಿಂದ ಕಾನ್‌ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿತ್ತು. ಕಳೆದ ತಿಂಗಳು ಕಚೇರಿಯಲ್ಲಿ ನಡೆದ ದೊಡ್ಡ ಮಟ್ಟದ ದಾಳಿಯಲ್ಲಿ ಕೆಲವು ದಾಖಲೆಗಳನ್ನು ಐಟಿ ಅಧಿಕಾರಿಗಳು ಪರಿಶೀಲಿಸಿ ವಶಪಡಿಸಿಕೊಂಡಿದ್ದರು. ಅದರ ಬೆನ್ನಲ್ಲೇ ಮತ್ತೊಮ್ಮೆ ದಾಳಿ ನಡೆದಿತ್ತು.
ಐಟಿ ದಾಳಿ ವೇಳೆ ನಡೆದಿದ್ದೇನು?
- ಮಧ್ಯಾಹ್ನ 12 ಗಂಟೆ: ಬೆಂಗಳೂರಿನ ಕಾನ್‌ಫಿಡೆಂಟ್ ಗ್ರೂಪ್ ಕಚೇರಿಗೆ ಐ-ಟಿ ಅಧಿಕಾರಿಗಳ ಆಗಮನ
- ಮಧ್ಯಾಹ್ನ 2 ಗಂಟೆ: ಕಚೇರಿಗೆ ಸಿ.ಜೆ. ರಾಯ್ ಆಗಮನ
- ಮಧ್ಯಾಹ್ನ 2–3 ಗಂಟೆ:ಕೆಲವು ದಾಖಲೆಗಳಿಗೆ ಸಹಿ ಹಾಕಲು ಮತ್ತು ಪರಿಶೀಲಿಸಲು ಅಧಿಕಾರಿಗಳ ಸೂಚನೆ
- ಮಧ್ಯಾಹ್ನ 3 ಗಂಟೆ: ರಾಯ್ ತಮ್ಮ ಖಾಸಗಿ ಕೇಬಿನ್‌ಗೆ ತೆರಳುತ್ತಾರೆ
- ಮಧ್ಯಾಹ್ನ 3–3:10: ಪಿಸ್ತೂಲ್ ತೆಗೆದು ಎದೆಗೆ ಗುಂಡು ಹಾರಿಸಿಕೊಂಡು ಕುಸಿದು ಬೀಳುತ್ತಾರೆ
- ಸಂಜೆ 3:10–4 ಗಂಟೆ: ಉದ್ಯೋಗಿಗಳು ಮತ್ತು ಅಧಿಕಾರಿಗಳು ರಾಯ್ ಅವರನ್ನು ಆಂಬ್ಯುಲೆನ್ಸ್ ಮೂಲಕ ಎಚ್‌ಎಸ್‌ಆರ್ ಲೇಔಟ್‌ನ ಆಸ್ಪತ್ರೆಗೆ ಕರೆದೊಯ್ಯುತ್ತಾರೆ; ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಯುತ್ತದೆ.
ಸುಮಾರು ಮಧ್ಯಾಹ್ನ 3 ಗಂಟೆಗೆ, ತಮ್ಮ ಕೇಬಿನ್‌ನಲ್ಲಿ ಕೆಲವು ದಾಖಲೆಗಳಿವೆ ಎಂದು ಹೇಳಿ ರಾಯ್ ಒಳಗೆ ತೆರಳಿದ್ದರು. ಕೆಲವೇ ನಿಮಿಷಗಳಲ್ಲಿ ಗುಂಡಿನ ಶಬ್ದ ಕೇಳಿಬಂದಿತ್ತು. ಕೇಬಿನ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಇತ್ತೋ ಇಲ್ಲವೋ ಎಂಬುದನ್ನು ಪೊಲೀಸರು ದೃಢಪಡಿಸಿಲ್ಲ.
ಅಧಿಕಾರಿಗಳು ಹೇಳಿದ್ದೇನು?
ಐಟಿ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿದ ಪೊಲೀಸರು, ಅಧಿಕಾರಿಗಳು ಕೇವಲ ಅವರ ಸಂಸ್ಥೆಯ ಮೇಲಿದ್ದ ನಿರ್ಬಂಧ ಆದೇಶಗಳನ್ನು ತೆರವುಗೊಳಿಸುವ ಸಲುವಾಗಿ ದಾಖಲೆ ಪರಿಶೀಲನೆ ನಡೆಸುತ್ತಿದ್ದರು. ರಾಯ್ ಅವರ ದಿನನಿತ್ಯದ ಕಾರ್ಯಗಳಿಗೆ ಯಾವುದೇ ನಿರ್ಬಂಧ ಇರಲಿಲ್ಲ. ರಾಯ್ ಎಷ್ಟು ಸುತ್ತು ಗುಂಡು ಹಾರಿಸಿಕೊಂಡಿದ್ದಾರೆ ಎಂಬುದನ್ನು ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಒಬ್ಬ ಹಿರಿಯ ತನಿಖಾಧಿಕಾರಿ ಮಾತನಾಡಿ, ಗುಂಡಿನ ಶಬ್ದ ಕೇಳಿದ ತಕ್ಷಣ ಉದ್ಯೋಗಿಗಳು ಮತ್ತು ಅಧಿಕಾರಿಗಳಲ್ಲಿ ಗೊಂದಲ ಸೃಷ್ಟಿಯಾಗಿತ್ತು. ನಂತರ ರಾಯ್ ಅವರನ್ನು ಎಚ್‌ಎಸ್‌ಆರ್ ಲೇಔಟ್‌ನ ನಾರಾಯಣ ಆಸ್ಪತ್ರೆಗಳಿಗೆ ಕರೆದೊಯ್ದರು. ಅಲ್ಲಿ ವೈದ್ಯರು ಅವರನ್ನು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆಂದರು ಎಂದು ಹೇಳಿದ್ದಾರೆ.
ಇದನ್ನೂ ಓದಿ ಸಿಜೆ ರಾಯ್ಗೆ ಪ್ರಭಾವಿ ಶಾಸಕರ ಲಿಂಕ್, ಚಿತ್ರರಂಗದ ಗಣ್ಯರ ಜತೆ ನಂಟು: ಡೈರಿಯಲ್ಲಿ ಸಿಕ್ತು ಮಹತ್ವದ ಮಾಹಿತಿ!
ಪಿಸ್ತೂಲ್ ಮತ್ತು ದಾಖಲೆಗಳಿರುವ ಬ್ರೀಫ್‌ಕೇಸ್ ಸದಾ ಜೊತೆಗೇ ಇಟ್ಟುಕೊಳ್ಳುತ್ತಿದ್ದ ರಾಯ್
ರಾಯ್ ಅವರ ಆಪ್ತ ಸಹಾಯಕ ಹೇಳುವಂತೆ, ಪಿಸ್ತೂಲ್ ಇದ್ದ ಕಾರಣ ರಾಯ್ ಸದಾ ತಮ್ಮ ಬ್ರೀಫ್‌ಕೇಸ್ ಅನ್ನು ಜೊತೆಗೇ ಇಟ್ಟುಕೊಳ್ಳುತ್ತಿದ್ದರು. ಅಪರೂಪಕ್ಕೆ ಅವುಗಳನ್ನು ಮರೆತರೂ ಸಹ ತಕ್ಷಣ ತಮ್ಮ ಭದ್ರತಾ ಸಿಬ್ಬಂದಿಯನ್ನು ಕಳುಹಿಸಿ ತರಿಸಿಕೊಳ್ಳುತ್ತಿದ್ದರು.
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ, ಸಿ.ಜೆ ರಾಯ್ ಆತ್ಮಹತ್ಯೆಗೆ ಬಳಸಿದ ಪಿಸ್ತೂಲಿನ ತಯಾರಿಕೆ ಮತ್ತು ಕ್ಯಾಲಿಬರ್ ಅನ್ನು ಬಾಲಿಸ್ಟಿಕ್ ತಜ್ಞರ ತಂಡ ಪರಿಶೀಲಿಸಿ ದೃಢಪಡಿಸಬೇಕಿದೆ ಎಂದಿದ್ದಾರೆ.
ಕಾನ್‌ಫಿಡೆಂಟ್ ಗ್ರೂಪ್‌ನ ಸ್ಥಾಪಕ ನಿರ್ದೇಶಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ.ಎ. ಜೋಸೆಫ್ ಅವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದ್ದು, ಯಾವುದೇ ಐಟಿ ಅಧಿಕಾರಿಗಳ ವಿರುದ್ಧ ಆರೋಪಗಳನ್ನು ದೂರಿನಲ್ಲಿ ಮಾಡಿಲ್ಲ. ಆದ್ದರಿಂದ ನಾವು ಅಸಹಜ ಮರಣ ಪ್ರಕರಣವನ್ನು ದಾಖಲಿಸಿದ್ದೇವೆ. ಕುಟುಂಬದವರು ಹೊಸ ಆರೋಪಗಳನ್ನು ಮಾಡಿದರೆ ಪ್ರತ್ಯೇಕ ಎಫ್‌ಐಆರ್ ದಾಖಲಿಸುವ ಸಾಧ್ಯತೆಯಿದೆ ಎಂದು ತನಿಖಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಅವರ ಸಹಾಯಕರೊಬ್ಬರು, ಇಷ್ಟು ವರ್ಷಗಳ ಕಾಲ ರಾಯ್ ಅವರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಅವರು ದುರ್ಬಲ ಮನಸ್ಸಿನವರಾಗಿ ಎಂದಿಗೂ ಕಾಣಿಸಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ ದೇಶ ವಿದೇಶಗಳಲ್ಲಿ ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ, ಕಮಿಷನರ್ ಹೇಳಿದ್ದಿಷ್ಟು
ಐ-ಟಿ ಅಧಿಕಾರಿಗಳೇ ಅವರ ಸಾವಿಗೆ ಕಾರಣವೆಂದ ಸಹೋದರ!
ರಾಯ್ ಅವರ ಸಹೋದರ ಮತ್ತು ವೈಟ್‌ಗೋಲ್ಡ್ ಸಂಸ್ಥೆಯ ಮಾಲೀಕ ಸಿ.ಜೆ. ಬಾಬು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಕಳೆದ ಮೂರು ದಿನಗಳಿಂದ ಕೇರಳದ ಆದಾಯ ತೆರಿಗೆ ಅಧಿಕಾರಿಗಳು ಬೆಂಗಳೂರಿನಲ್ಲಿ ಶೋಧ ನಡೆಸುತ್ತಿದ್ದರು ಎಂದು ಹೇಳಿದರು. ಅಧಿಕಾರಿಗಳಿಂದ ಒತ್ತಡದ ಆರೋಪ ಮಾಡಿರುವ ಅವರು, ರಾಯ್ ಅವರು ಪಿಸ್ತೂಲ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಾವಿಗೆ ಐಟಿ ತಂಡವೇ ಕಾರಣ ಎಂದು ಆರೋಪಿಸಿದ್ದಾರೆ.
ರಾಯ್ ಅವರ ಪತ್ನಿ, ಇಪ್ಪತ್ತರ ವಯಸ್ಸಿನ ಮಗ ಮತ್ತು ಮಗಳು ದುಬೈನಲ್ಲಿ ನೆಲೆಸಿದ್ದು, ಶನಿವಾರ ಬೆಳಿಗ್ಗೆ ಬೆಂಗಳೂರಿಗೆ ಆಗಮಿಸುತ್ತಾರೆಂದು ಹೇಳಲಾಗಿದೆ. ರಾಯ್ ಅವರ ತಾಯಿ ಕೊರಮಂಗಲದ ನೆಕ್ಸಸ್ ಮಾಲ್ ಸಮೀಪ ವಾಸಿಸುತ್ತಿದ್ದು, ಅವರು ಅಲ್ಲಿ ಅಪರೂಪಕ್ಕೆ ಮಾತ್ರ ತಂಗುತ್ತಿದ್ದರು ಎಂದು ಸಹಾಯಕರು ತಿಳಿಸಿದ್ದಾರೆ. ಬೆಂಗಳೂರಿಗೆ ಬಂದಾಗ ಸಾಮಾನ್ಯವಾಗಿ ಅವರು ಕೇಂದ್ರ ವ್ಯಾಪಾರ ವಲಯದ ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:41 am, Sat, 31 January 26
