ಗಣೇಶೋತ್ಸವ ಮೆರವಣಿಗೆಯ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್​​ ಸಿಬ್ಬಂದಿ ಮನೆಗೇ ಕಳ್ಳರಿಂದ ಕನ್ನ: ಹಣ, ಬಂಗಾರ ಕದ್ದು ಎಸ್ಕೇಪ್​

ಗಣೇಶೋತ್ಸವ ಮೆರವಣಿಗೆಯ ಭದ್ರತಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಯಲಹಂಕ ನ್ಯೂ ಟೌನ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಓರ್ವರ ಬಾಡಿಗೆ ಮನೆಗೆ ಕನ್ನ ಹಾಕಿರುವ ಖದೀಮರು, ಕಪಾಟಿನಲ್ಲಿದ್ದ 35 ಗ್ರಾಂ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ. ಬೆಂಗಳೂರಿನ ಹುಣಸಮಾರನಹಳ್ಳಿ ಸಮೀಪದ ಸುಗ್ಗಟ್ಟ ಗ್ರಾಮದಲ್ಲಿ ಸೆಪ್ಟೆಂಬರ್ 18ರಂದು ಘಟನೆ ನಡೆದಿದೆ ಎನ್ನಲಾಗಿದ್ದು, ಈ ಬಗ್ಗೆ ದೂರು ದಾಖಲಾಗಿದೆ.

ಗಣೇಶೋತ್ಸವ ಮೆರವಣಿಗೆಯ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್​​ ಸಿಬ್ಬಂದಿ ಮನೆಗೇ ಕಳ್ಳರಿಂದ ಕನ್ನ: ಹಣ, ಬಂಗಾರ ಕದ್ದು ಎಸ್ಕೇಪ್​
ಸಾಂದರ್ಭಿಕ ಚಿತ್ರ
Image Credit source: Getty Images

Updated on: Sep 24, 2026 | 6:39 AM

ಬೆಂಗಳೂರು, ಸೆಪ್ಟೆಂಬರ್​​ 24: ಕರ್ತವ್ಯದಲ್ಲಿ ನಿರತವಾಗಿದ್ದ ಪೊಲೀಸ್​​ ಸಿಬ್ಬಂದಿಯ ಬಾಡಿಗೆ ಮನೆಗೇ ಕಳ್ಳರು ಕನ್ನ ಹಾಕಿರುವ ಘಟನೆ ಈಶಾನ್ಯ ಬೆಂಗಳೂರಿನ ಹುಣಸಮಾರನಹಳ್ಳಿ ಸಮೀಪದ ಸುಗ್ಗಟ್ಟ ಗ್ರಾಮದಲ್ಲಿ ನಡೆದಿದೆ. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಗೆ ಸೇರಿದ ಹೆಡ್ ಕಾನ್‌ಸ್ಟೆಬಲ್‌ ರಂಗಪ್ಪ ಬಂಡಿವಡ್ಡರ ಎಂಬವರ ಮನೆಯ ಕಪಾಟಿನಲ್ಲಿದ್ದ ಬಂಗಾರದ ಆಭರಣ ಮತ್ತು ಹಣವನ್ನು ಕಳ್ಳರು ಕದ್ದೊಯ್ದಿದ್ದು, ಡ್ಯೂಟಿ ಮುಗಿಸಿ ಅವರು ಮನೆಗೆ ಹಿಂದಿರುಗಿದಾಗ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅವರು ದೂರು ದಾಖಲಿಸಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಲಾಗಿದೆ.

ಮನೆಗೆ ಮರಳಿದ ಪೊಲೀಸ್​​ ಹೆಡ್ ಕಾನ್‌ಸ್ಟೆಬಲ್​​ಗೆ ಕಾದಿತ್ತು ಶಾಕ್​​

ಹೆಡ್ ಕಾನ್‌ಸ್ಟೆಬಲ್ ರಂಗಪ್ಪ ಬಂಡಿವಡ್ಡರ ಅವರು ಕಳೆದ ಎರಡು ವರ್ಷಗಳಿಂದ ಈಶಾನ್ಯ ಬೆಂಗಳೂರಿನ ಹುಣಸಮಾರನಹಳ್ಳಿ ಸಮೀಪದ ಸುಗ್ಗಟ್ಟ ಗ್ರಾಮದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಚಿಕ್ಕಜಾಲ ಪೊಲೀಸರಿಗೆ ಅವರು ನೀಡಿದ ದೂರಿನ ಪ್ರಕಾರ, ಸೆಪ್ಟೆಂಬರ್ 18ರಂದು ಬೆಳಗ್ಗೆ ಸುಮಾರು 10.30ಕ್ಕೆ ಮನೆಯನ್ನು ಲಾಕ್ ಮಾಡಿ ಕರ್ತವ್ಯಕ್ಕೆ ತೆರಳಿದ್ದರು. ಅವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯ ಆರೈಕೆಗಾಗಿ ಸುಮಾರು ಒಂದು ತಿಂಗಳಿನಿಂದ ತವರು ಮನೆಯಲ್ಲಿದ್ದರು. ರಾತ್ರಿ ಸುಮಾರು 10 ಗಂಟೆಗೆ ರಂಗಪ್ಪ ಮನೆಗೆ ಮರಳಿದಾಗ, ಮುಖ್ಯ ಬಾಗಿಲಿನ ಬೀಗ ಒಡೆದಿರುವುದು ಕಂಡು ಆಘಾತಕ್ಕೊಳಗಾಗಿದ್ದಾರೆ. ಒಳಗೆ ಹೋಗಿ ನೋಡಿದಾಗ ಕಪಾಟು ತೆರೆದಿದ್ದು, ಅದರಲ್ಲಿದ್ದ ವಸ್ತುಗಳು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿದ್ದವು. ಕಳ್ಳರು ಬೆಲೆಬಾಳುವ ವಸ್ತುಗಳಿಗಾಗಿ ಮನೆಯನ್ನು ಜಾಲಾಡಿರುವುದು ಇದರಿಂದ ತಿಳಿದುಬಂದಿದೆ.

ಇದನ್ನೂ ಓದಿ: ಮಗನನ್ನು ಆಸ್ಪತ್ರೆಗೆ ದಾಖಲಿಸಿ ನೋಡಿಕೊಳ್ತಿದ್ದ ಕುಟುಂಬಕ್ಕೆ ಶಾಕ್​​: ಮನೆ ಬಾಗಿಲು ಮುರಿದು ಅರ್ಧ ಕೆಜಿ ಚಿನ್ನ ಕದ್ದ ಖದೀಮರು!

ಬಳಿಕ ಪರಿಶೀಲಿಸಿದಾಗ, ಕಳ್ಳರು ಸುಮಾರು 35 ಗ್ರಾಂ ಚಿನ್ನಾಭರಣ ಹಾಗೂ 6,000 ನಗದು ಕದ್ದೊಯ್ದಿರುವುದು ಗೊತ್ತಾಗಿದೆ. ಕಳುವಾದ ಆಭರಣಗಳಲ್ಲಿ ಅವರ ಪತ್ನಿ ಹಾಗೂ ಮಗನ ಚಿನ್ನದ ಸರಗಳು ಮತ್ತು ಉಂಗುರ ಸೇರಿವೆ. ಗಣೇಶೋತ್ಸವದ ಮೆರವಣಿಗೆಗಳ ಸಂದರ್ಭದಲ್ಲಿ ವಿಶೇಷ ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದರಿಂದ ದೂರು ನೀಡಲು ವಿಳಂಬವಾಯಿತು ಎಂದು ರಂಗಪ್ಪ ತಿಳಿಸಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us