ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ (Coronavirus) ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ನಾಲ್ಕನೇ ಅಲೆ ಆತಂಕ ಶುರುವಾಗಿದೆ. ದಾಸರಹಳ್ಳಿ ವಲಯದ 2 ಶಾಲೆಗಳಲ್ಲಿ (Schools) ಸುಮಾರು 31 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದ್ದು, ಶಾಲೆಗಳಿಗೆ ರಜೆ ನೀಡಲಾಗಿದೆ. ಪೀಣ್ಯ 2ನೇ ಹಂತದಲ್ಲಿರುವ ಖಾಸಗಿ ಶಾಲೆಯಲ್ಲಿ 6ನೇ ತರಗತಿಯ 10 ವಿದ್ಯಾರ್ಥಿಗಳಿಗೆ ಮತ್ತು ರಾಜಗೋಪಾಲನಗರದ ಖಾಸಗಿ ಶಾಲೆಯ 4 ಮತ್ತು 5ನೇ ತರಗತಿಯ ಒಟ್ಟು 21 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ.
ವಿದ್ಯಾರ್ಥಿಗಳಿಗೆ ಜೂನ್ 9ರಂದು ಸೋಂಕು ದೃಢಪಟ್ಟಿದೆ. ಮಕ್ಕಳಿಗೆ ಕೊರೊನಾ ತಗುಲಿರುವ ಕಾರಣ 2 ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.
ಮಕ್ಕಳಿಗೆ ಕೊರೊನಾ ತಗುಲಿದ ಹಿನ್ನೆಲೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ಮಕ್ಕಳಲ್ಲಿ ಕೊವಿಡ್ ಬಂದ ತಕ್ಷಣ ಏನು ಆಗುವುದಿಲ್ಲ. ಕಳೆದ 2-3 ತಿಂಗಳಿಂದ ಶಾಲೆಗಳಲ್ಲಿ ಗಮನಿಸುತ್ತಿದ್ದೇವೆ. 15 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಆಗಿದ್ಯಾ ಪರಿಶೀಲನೆ ಆಗಿದೆಯಾ ಅನ್ನೋದನ್ನು ಪರಿಶೀಲನೆ ಮಾಡುತ್ತೇವೆ. ಸೋಂಕು ಕಾಣಿಸಿಕೊಂಡ ಮಕ್ಕಳ ಕ್ಲಾಸ್ ಸಸ್ಪೆಂಡ್ ಮಾಡುತ್ತೇವೆ. ಯಾರೂ ಆತಂಕಕ್ಕೆ ಒಳಗಾಗಬಾರದು. ಇದೆಲ್ಲವೂ ಒಮಿಕ್ರಾನ್ ಪ್ರಭೇದವೇ ಆಗಿದೆ. ನಮ್ಮಲ್ಲಿ BA4 ತರಹದ ತಳಿ ಪತ್ತೆಯಾಗಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಕಬಿನಿ ದಮ್ಮನಕಟ್ಟೆ ವನ್ಯಜೀವಿಧಾಮದಲ್ಲಿ ಸಫಾರಿಗೆ ಹೋದ ಹುಲುಮಾನವರಿಗೆ ಹುಲಿ ಕುಟುಂಬದ ದರ್ಶನ!
ಸದ್ಯಕ್ಕೆ ಎಲ್ಲಾ ಮಕ್ಕಳಿಗೂ ಮತ್ತು ಶಾಲಾ ಸಿಬ್ಬಂದಿಗೆ ಕೊವಿಡ್ ಟೆಸ್ಟ್ ಮಾಡಲಾಗಿದೆ. ಸದ್ಯ ಶಾಲೆಗಳನ್ನ ಕಂಟೈನ್ಮೆಂಟ್ ಅಂತಾ ಘೋಷಣೆ ಮಾಡಲಾಗಿದೆ. ಪಾಸಿಟಿವ್ ಆಗಿರುವ ಮಕ್ಕಳು ಎಲ್ಲರೂ ಕೂಡ ಆರಾಮಾಗಿ ಇದ್ದಾರೆ, ಆತಂಕ ಪಡುವಂತಹದಿಲ್ಲ ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಹೇಳಿದರು.
ಹೆಚ್ಚಾಗುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ:
ನಿನ್ನೆ (ಜೂನ್ 13) ರಾಜ್ಯದಲ್ಲಿ 415 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಬೆಂಗಳೂರಿನಲ್ಲಿಯೇ 400 ಪ್ರಕರಣಗಳು ವರದಿಯಾಗಿವೆ. ಉಳಿದಂತೆ ದಕ್ಷಿಣ ಕನ್ನಡದಲ್ಲಿ ಐದು, ಕಲಬುರಗಿ ಮೂರು ಹಾಗೂ ಬಳ್ಳಾರಿಯ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಬೆಳಗಾವಿ, ಧಾರವಾಡ, ಕೋಲಾರ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆಯು 39,56,749ಕ್ಕೆ ಮುಟ್ಟಿದೆ. ಪ್ರಸ್ತುತ ರಾಜ್ಯದಲ್ಲಿ 3,688 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ. ಈವರೆಗೆ ಒಟ್ಟು 40,066 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದರೆ, 39,12,953 ಜನರು ಚೇತರಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:28 am, Tue, 14 June 22