ಕರ್ನಾಟಕದಲ್ಲಿ ಬಹುತೇಕ ಕಡೆ ಮಕ್ಕಳು ಮರಳಿ ಶಾಲೆಗೆ; 5 ಜಿಲ್ಲೆಗಳಲ್ಲಿ ಶಾಲೆ ಪುನರಾರಂಭ ಆಗಿಲ್ಲ, ಹಾಗಾದರೆ ಯಾವಾಗ?

| Updated By: ಸಾಧು ಶ್ರೀನಾಥ್​

Updated on: Aug 23, 2021 | 9:24 AM

ಯಾವ ಯಾವ ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಹೆಚ್ಚಿರುತ್ತದೆಯೋ ಆ ಜಿಲ್ಲೆಗಳಲ್ಲಿ ಶಾಲೆಗಳನ್ನು ಪುನರಾರಂಭಿಸಲ್ಲ ಅಂತ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಅದರಂತೆ ರಾಜ್ಯದ 5 ಜಿಲ್ಲೆಗಳಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿದೆ.

ಕರ್ನಾಟಕದಲ್ಲಿ ಬಹುತೇಕ ಕಡೆ ಮಕ್ಕಳು ಮರಳಿ ಶಾಲೆಗೆ; 5 ಜಿಲ್ಲೆಗಳಲ್ಲಿ ಶಾಲೆ ಪುನರಾರಂಭ ಆಗಿಲ್ಲ, ಹಾಗಾದರೆ ಯಾವಾಗ?
ಬಂದ್ ಆಗಿರುವ ಉಡುಪಿ ಶಾಲೆ
Follow us on

ಬೆಂಗಳೂರು: ಒಂದೂವರೆ ವರ್ಷದ ಬಳಿಕ ರಾಜ್ಯದಲ್ಲಿ ಬಂದ್ ಆಗಿದ್ದ ಶಾಲೆಗಳು (Schools) ಇಂದಿನಿಂದ (ಆಗಸ್ಟ್ 23) ಆರಂಭವಾಗುತ್ತಿದೆ. ಕೊರೊನಾ (Coronavirus) ಮೂರನೇ ಅಲೆ ಭೀತಿಯ ನಡುವೆ ಶಾಲೆಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಕೊರೊನಾ ಕಾರಣ ಸರ್ಕಾರ ಮಾರ್ಗಸೂಚಿಗಳನ್ನು ಕೂಡಾ ಬಿಡುಗಡೆ ಮಾಡಿ, ಪಾಲಿಸುವಂತೆ ಸೂಚಿಸಿದೆ. ಸುಮಾರು ಒಂದೂವರೆ ವರ್ಷದ ಬಳಿಕ ಆರಂಭವಾಗುತ್ತಿರುವ ಶಾಲೆಗಳು, ಮಕ್ಕಳನ್ನ ಸ್ವಾಗತಿಸಲು ಸಜ್ಜಾಗಿ ನಿಂತಿವೆ. ಆದರೆ ರಾಜ್ಯದ 5 ಜಿಲ್ಲೆಯ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗುವ ಭಾಗ್ಯ ಇನ್ನು ಒದಗಿ ಬಂದಿಲ್ಲ. ಕಾರಣ ಆ ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಹೆಚ್ಚಿದೆ.

ಯಾವ ಯಾವ ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಹೆಚ್ಚಿರುತ್ತದೆಯೋ ಆ ಜಿಲ್ಲೆಗಳಲ್ಲಿ ಶಾಲೆಗಳನ್ನು ಪುನರಾರಂಭಿಸಲ್ಲ ಅಂತ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಅದರಂತೆ ರಾಜ್ಯದ 5 ಜಿಲ್ಲೆಗಳಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿದೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಹಾಸನದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಹೆಚ್ಚಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಶಾಲೆಗಳನ್ನ ಆರಂಭಿಸಲು ಅನುಮತಿ ಇಲ್ಲ.

ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಾದರೆ ಸೆಪ್ಟೆಂಬರ್ ತಿಂಗಳಲ್ಲಿ ಶಾಲೆ ರೀಓಪನ್
ಉಡುಪಿಯಲ್ಲಿ ಸದ್ಯ ಕೊರೊನಾ ಪಾಸಿಟಿವಿಟಿ ರೇಟ್ ಶೇ.2.5 ರಷ್ಟಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗುವ ಅವಕಾಶವಿಲ್ಲ. ಉಡುಪಿಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಾದರೆ ಸೆಪ್ಟೆಂಬರ್ ತಿಂಗಳಲ್ಲಿ ಶಾಲೆಗಳನ್ನ ತೆರೆಯುವ ಸಾಧ್ಯತೆಯಿದೆ. ಇನ್ನು ಹಾಸನದಲ್ಲಿ ಆಗಸ್ಟ್ 18ರಂದು ಕೊರೊನಾ ಪಾಸಿಟಿವಿಟಿ ದರ ಶೇ.1.75 ರಷ್ಟಿತ್ತು. ಹೀಗಾಗಿ ಪಿಯು ಭೌತಿಕ ತರಗತಿ ನಡೆಸಲು ಜಿಲ್ಲಾಡಳಿತ ತೀರ್ಮಾನ ಮಾಡಿದೆ. ಆದರೆ ಶಾಲೆಗಳನ್ನ ತೆರೆಯಲು ಇನ್ನು ನಿರ್ಧರಿಸಲಿಲ್ಲ ಅಂತ ಟಿವಿ9ಗೆ ಹಾಸನ ಪಿಯು ಡಿಡಿ ಮಹಾಲಿಂಗಯ್ಯ ಮಾಹಿತಿ ನೀಡಿದ್ದಾರೆ. ಶಾಲೆಗಳನ್ನು ಪುನರಾರಂಭಿಸಲು ಒಂದು ವಾರ ಬೇಕಾಗಬಹುದು ಎಂದು ಹೇಳಲಾಗುತ್ತಿದೆ.

ಸಂತಸದಲ್ಲಿ ಮಕ್ಕಳು
ಸುಮಾರು ಒಂದೂವರೆ ವರ್ಷದ ನಂತರ ಮಕ್ಕಳು ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಕೊರೊನಾ ಸೋಂಕಿನ ಮೂರನೆ ಅಲೆಯ ಭೀತಿಯ ನಡುವೆಯೂ ಇಂದಿನಿಂದ 9ನೆ ತರಗತಿಯಿಂದ 12ನೇ ತರಗತಿವರೆಗೂ ಶಾಲೆ ಕಾಲೇಜುಗಳು ಆರಂಭವಾಗಿವೆ. ಪೋಷಕರು ಸಂತೋಷದಿಂದ ಮಕ್ಕಳನ್ನ ಶಾಲೆಗೆ ಕಳುಹಿಸಿ ಕೊಡುತ್ತಿದ್ದಾರೆ. ಬಹುತೇಕ ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಸಹ ಕುಣಿ ಕುಣಿದಾಡುತ್ತಾ ಶಾಲೆ ಆವರಣದಲ್ಲಿ ಜಮಾಯಿಸುತ್ತಿದ್ದು, ಏನೋ ಕಳೆದುಕೊಂಡಿದ್ದನ್ನು ಮರಳಿ ಪಡೆದವರಂತೆ ಸಂತಸ- ಸಂಭ್ರಮದಿಂದ ಇದ್ದಾರೆ.

ಇದನ್ನೂ ಓದಿ

School Reopening: ನಿಮ್ಮ ಹತ್ತಿರದ ಯಾವುದೇ ಶಾಲೆಗೆ ಹೋಗಿ ಪಾಠ ಕೇಳಿ; ವಲಸೆ ಮಕ್ಕಳಿಗೆ ಶಿಕ್ಷಣ ಸಚಿವರಿಂದ ಶುಭ ಸುದ್ದಿ

15ನೇ ವಸಂತಕ್ಕೆ ಕಾಲಿಟ್ಟ ರಾಮನಗರ ಜಿಲ್ಲೆ; ಏನೆಲ್ಲಾ ಅಭಿವೃದ್ಧಿಯಾಗಿದೆ, ಇನ್ನೂ ಏನಾಗಬೇಕು?

(Corona Positivity Rate is high and has not Reopening in 5 districts of Karnataka)

Published On - 9:01 am, Mon, 23 August 21