15ನೇ ವಸಂತಕ್ಕೆ ಕಾಲಿಟ್ಟ ರಾಮನಗರ ಜಿಲ್ಲೆ; ಏನೆಲ್ಲಾ ಅಭಿವೃದ್ಧಿಯಾಗಿದೆ, ಇನ್ನೂ ಏನಾಗಬೇಕು?
ಜೆಡಿಎಸ್ - ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿರವರ ದಿಟ್ಟ ನಿರ್ಧಾರದ ಫಲವಾಗಿ 2007ರ ಆಗಸ್ಟ್ 23ರಂದು 9ನೇ ಜಿಲ್ಲೆಯಾಗಿ ರಾಮನಗರ ರೂಪ ತಾಳಿತು.
ರಾಮನಗರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ವಿಭಜನೆಗೊಂಡು ಪ್ರತ್ಯೆಕ ಜಿಲ್ಲೆಯಾಗಿ ರೂಪುಗೊಂಡಿರುವ ರಾಮನಗರ (Ramanagara) ಜಿಲ್ಲೆ ಇಂದು (ಜುಲೈ 23) 15ನೇ ವಸಂತಕ್ಕೆ ಕಾಲಿಟ್ಟಿದೆ. ಹೀಗಿದ್ದರೂ, ಜಿಲ್ಲೆ ಸಮಗ್ರ ಅಭಿವೃದ್ಧಿಗೆ ತವಕ ಪಡುತ್ತಿದೆ. ಜಾಗತಿಕ, ದೇಶ ಹಾಗೂ ರಾಜ್ಯಮಟ್ಟದಲ್ಲಿ ಕ್ಷಿಪ್ರಗತಿಯಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ತಕ್ಕಂತೆ ರಾಮನಗರ ಜಿಲ್ಲೆಯ ಅಭಿವೃದ್ಧಿಯ ವೇಗ ಇನ್ನೂ ಹೆಚ್ಚಾಗಬೇಕೆಂದು ಜನರು ಬಯಸುತ್ತಿದ್ದಾರೆ. ಜೆಡಿಎಸ್ – ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿರವರ ದಿಟ್ಟ ನಿರ್ಧಾರದ ಫಲವಾಗಿ 2007ರ ಆಗಸ್ಟ್ 23ರಂದು 9ನೇ ಜಿಲ್ಲೆಯಾಗಿ ರಾಮನಗರ ರೂಪ ತಾಳಿತು. ರಾಮನಗರ, ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ ತಾಲೂಕುಗಳನ್ನು ಒಳಗೊಂಡಿರುವ ರಾಮನಗರ ಜಿಲ್ಲೆಯ ಅಭಿವೃದ್ಧಿ ಶರವೇಗದಲ್ಲಿ ನಡೆಯದೆ ಆಮೆಗತಿಯಲ್ಲಿ ಸಾಗುತ್ತಿದೆ. ನಗರ ಮತ್ತು ಪಟ್ಟಣ ಕೇಂದ್ರೀತವಾಗಿರುವ ಅಭಿವೃದ್ಧಿ ಹಳ್ಳಿಗಳಿಗೆ ನಿರೀಕ್ಷಿತ ಮಟ್ಟದಲ್ಲಿ ವಿಸ್ತರಿಸಿಯೇ ಇಲ್ಲ. ಇದರೊಂದಿಗೆ ಹಾರೋಹಳ್ಳಿ ಸಹ ನೂತನ ತಾಲೂಕು ಕೇಂದ್ರವಾಗಿ ಘೋಷಣೆಗೊಂಡಿದ್ದರೂ, ಅನುಷ್ಠಾನಕ್ಕೆ ಮಾತ್ರ ಇದುವರೆಗೂ ಬಂದಿಲ್ಲ ಎಂಬುದು ವಿರ್ಪಯಾಸ.
ರಾಜಧಾನಿ ಬೆಂಗಳೂರಿನಿಂದ ಕೇವಲ 50 ಕಿ.ಮೀ ದೂರದಲ್ಲಿರ ರಾಮನಗರ ಜಿಲ್ಲೆ ಮೂಲ ಸೌಲಭ್ಯಗಳಿಂದ ಬಹಳಷ್ಟು ವಂಚನಗೆ ಒಳಗಾಗಿದೆ. ಇದಕ್ಕೆ ಅಭಿವೃದ್ಧಿ ವಿಚಾರದಲ್ಲಿ ತೀರಾ ನಿರಾಸಕ್ತಿ ಹೊಂದಿರುವ ರಾಜಕೀಯ ಮುಖಂಡರ ಹಗ್ಗ ಜಗ್ಗಾಟವೂ ಒಂದು ಕಾರಣವಾಗಿದೆ. ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಬಿರುಸಿನಿಂದ ಸಾಗಿದ್ದ ಅಭಿವೃದ್ಧಿ ವೇಗ ಆನಂತರ ನಡೆದ ರಾಜಕೀಯ ಬೆಳವಣಿಗೆಗಳಿಂದ ಮುಗ್ಗರಿಸಿತು. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಂದಿನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್, ಜಿಲ್ಲೆಯಲ್ಲಿ ಒಂದಿಷ್ಟು ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ಧಿಗೆ ಒತ್ತು ನೀಡಿದ್ದರು. ಮತ್ತೆ ಸಮ್ಮಿಶ್ರ ಸರಕಾರ ಅಸ್ತಿತ್ವದಲ್ಲಿ ಒಂದೂವರೆ ವರ್ಷಗಳ ಅವಧಿಯಲ್ಲಿ ಮತ್ತೆ ಅಭಿವೃದ್ಧಿಗೆ ಹಲವಾರು ಯೋಜನೆಗಳು ಘೋಷಣೆಗೊಂಡವು. ನಂತರ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು 2 ವರ್ಷ ಕಳೆದರೂ ಯೋಜನೆ ಮಾತ್ರ ವೇಗ ಪಡೆದುಕೊಂಡಿಲ್ಲ.
ಜಿಲ್ಲೆಯಲ್ಲಿ ಆಗಿರುವ ಅಭಿವೃದ್ದಿ ಕಾಮಗಾರಿಗಳು ಕಳೆದ 14 ವರ್ಷಗಳಲ್ಲಿ ಜಿಲ್ಲಾ ಕೇಂದ್ರವಾದ ರಾಮನಗರದಲ್ಲಿ ಕಂದಾಯ ಭವನ, ಪೊಲೀಸ್ ಭವನ, ಮಿನಿ ವಿಧಾನಸೌಧ, ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ, ಕೆಂಗಲ್ ಹನುಮಂತಯ್ಯ ಭವನದಂತಹ ದೊಡ್ಡ ಕಟ್ಟಡಗಳು ತಲೆ ಎತ್ತಿವೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ತಳ ಮಹಡಿಗೆ ಮಾತ್ರವೆ ಉದ್ಘಾಟನೆ ಭಾಗ್ಯ ಇತ್ತೀಚೆಗೆ ದೊರೆತ್ತಿದೆ. ಚನ್ನಪಟ್ಟಣದಲ್ಲಿ ಕೇಂದ್ರೀಯ ವಿದ್ಯಾಲಯ, ಕನಕಪುರದಲ್ಲಿ ನವೋದಯ ವಿದ್ಯಾಲಯ ಕಟ್ಟಡಗಳು ತಲೆ ಎತ್ತಿವೆ. ಜಿಲ್ಲೆಗೆ ಕಾನೂನು, ಎಂಜಿನಿಯರಿಂಗ್ ಕಾಲೇಜುಗಳು, ಕೇಂದ್ರೀಯ ವಿದ್ಯಾಲಯ, ನವೋದಯ ಶಾಲೆಗಳು ಜಿಲ್ಲೆಗೆ ಆಗಮಿಸಿವೆ.
ಏನೇನು ಆಗಿಲ್ಲ ಹೆಚ್.ಡಿ.ಕುಮಾರಸ್ವಾಮಿ ಅವರ ಕನಸಿನ ಕೂಸು, ರಾಜೀವ್ ಗಾಂಧಿ ಆರೋಗ್ಯ ವಿವಿ ಕಾಮಗಾರಿ ಉದ್ಘಾಟನೆಯ ಭಾಗ್ಯ ಸಿಗದೆ ಹಾಗೇಯೇ ಇದೆ. ಕನಕಪುರ, ಮಾಗಡಿ ಹಾಗೂ ಚನ್ನಪಟ್ಟಣಗಳಲ್ಲಿಯೂ ದೊಡ್ಡ ಕಟ್ಟಡಗಳ ಪೈಕಿ ಕೆಲವೊಂದು ನಿರ್ಮಾಣ ಹಂತದಲ್ಲಿದ್ದರೆ, ಕೆಲವು ಉದ್ಘಾಟನೆಗೊಂಡಿವೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ವಿದ್ಯುತ್ ದೀಪ, ಕುಡಿಯುವ ನೀರು, ಚರಂಡಿ ನಿರ್ಮಾಣ, ಶೌಚಾಲಯ ಸೇರಿದಂತೆ ಅಗತ್ಯ ಸೌಲಭಗಳಿಂದ ವಂಚಿತವಾಗಿವೆ. ಜಿಲ್ಲೆಯು ಕೃಷಿ, ತೋಟಗಾರಿಕೆ ಮುಂತಾದವುಗಳಲ್ಲಿ ಕಾಲಕ್ಕೆ ತಕ್ಕಂತೆ ಪ್ರಗತಿ ಸಾಧಿಸುವುದರಲ್ಲಿ ಹಿಂದೆ ಬಿದ್ದಿದೆ. ಪ್ರಮುಖವಾಗಿ ನೀರಿನ ಸಮಸ್ಯೆ ಇದ್ದರೂ ರೈತರು ಹೈನುಗಾರಿಕೆ, ರೇಷ್ಮೆ ಹುಳು ಸಾಕಣೆಯಲ್ಲಿ ಪ್ರಗತಿ ಕಂಡಿದ್ದಾರೆ.
ರಾಮನಗರ ಜಿಲ್ಲೆಯು ರೇಷ್ಮೆ ನಾಡು ಎಂದು ಪ್ರಸಿದ್ಧಿ ಪಡೆದಿದ್ದು, ಏಷ್ಯಾದಲ್ಲೇ ಅತಿದೊಡ್ಡ ರೇಷ್ಮೆ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರೇಷ್ಮೆ ಬೆಳೆಗಾರರ ಹಿತದೃಷ್ಟಿಯಿಂದ ರಾಮನಗರ-ಚನ್ನಪಟ್ಟಣ ಮಧ್ಯೆ 10 ಎಕರೆ ಜಾಗದಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ ನಿರ್ಮಾಣ ಮಾಡಲು ಸರಕಾರವು ಚಿಂತಿಸಿದ್ದು, ಪ್ರಕ್ರಿಯೆಯು ಚಾಲನೆಯಲ್ಲಿದೆ. ಹೈನುಗಾರಿಕೆಯು ಜಿಲ್ಲೆಯ ಪ್ರಮುಖ ಉಪ ಕಸುಬಾಗಿದ್ದು, ಹೈನುಗಾರಿಕೆಗೆ ಉತ್ತೇಜನ ನೀಡುವ ಹಾಗೂ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ದೃಷ್ಟಿಯಿಂದ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ ಕ್ಷೀರಭಾಗ್ಯ ಯೋಜನೆಯಡಿಯಲ್ಲಿ ಕನಕಪುರ ತಾಲೂಕಿನಲ್ಲಿ ಅತ್ಯಾದುನಿಕ ತಂತ್ರಜ್ಞಾನವುಳ್ಳ ಹಾಲು ಸಂಸ್ಕರಣ ಘಟಕ ಮತ್ತು ಹಾಲಿನ ಪುಡಿ ಘಟಕ ಸ್ಥಾಪನೆಯಾಗಿದೆ. ಚನ್ನಪಟ್ಟಣದಲ್ಲಿಯು ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಮೇಕೆದಾಟು ಯೋಜನೆ, ರಾಜೀವ್ ಗಾಂಧಿ ಆರೋಗ್ಯ ವಿವಿ, ನೀರಾವರಿ ಯೋಜನೆಗಳು ಬರೀ ಘೋಷಣೆಯಲ್ಲಿಯೇ ಮೊಳಗುತ್ತಿವೆ.
ಏನೇನಾಗಿದೆ? ಕಳೆದ 14 ವರ್ಷಗಳಲ್ಲಿ ಹೆಚ್.ಡಿ.ಕುಮಾರಸ್ವಾಮಿ 2 ಬಾರಿ ಮುಖ್ಯಮಂತ್ರಿಯಾಗಿದ್ದು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಕುಮಾರಸ್ವಾಮಿ ಹಾಗು ಡಿ.ಕೆ.ಶಿವಕುಮಾರ್ ಒಂದಾಗಿದ್ದರು. ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಶಾಸಕಿಯಾಗಿದ್ದು, ಸಂಸದ ಡಿ.ಕೆ.ಸುರೇಶ್ ಮತ್ತೊಮ್ಮೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಬಿಜೆಪಿ ಸರಕಾರದ ಬಳಿಕ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ. ಕೊವಿಡ್ ಮಹಾಮಾರಿ ವಿರುದ್ಧ ಹೋರಾಡುವಲ್ಲಿಯೂ ಜಿಲ್ಲೆ ಮೈಲುಗಲ್ಲು ಸಾಧಿಸಿದೆ.
ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಗಳು ಭರದಿಂದ ಸಾಗಿದೆ. ಅನೇಕ ನೀರಾವರಿ ಯೋಜನೆಗಳು ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಘೋಷಣೆಗೊಂಡಿದ್ದು, ಹಾರೋಹಳ್ಳಿ ಸಹ ನೂತನ ತಾಲೂಕು ಕೇಂದ್ರವಾಗಿ ಬಜೆಟ್ನಲ್ಲಿ ಘೋಷಣೆಯಾಗೊಂಡಿದೆ. ಇಬ್ಬರು ಶಂಕಿತ ಉಗ್ರರು ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಬಯಲು ಸೀಮೆ ಜಿಲ್ಲೆಯಾದ ರಾಮನಗರದಲ್ಲಿ ನೀರಿನ ಬವಣೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಮೇಕೆದಾಟು ಯೋಜನೆಯ ಡಿಪಿಆರ್ ಸಿದ್ಧಪಡಿಸುವ ಕಾರ್ಯ ನಡೆದಿದೆ. ಆದರೆ ಸಾಕಷ್ಟು ಅಡೆತಡೆಗಳು ಯೋಜನೆಗೆ ಎದುರಾಗಿದೆ. ಬೆಂಗಳೂರಿನಿಂದ ಮಾಗಡಿ ಮಾರ್ಗವಾಗಿ ಹಾಸನಕ್ಕೆ ರೈಲು ಸಂಚರಿಸುತ್ತಿದೆ. ಬೆಂಗಳೂರು-ಕನಕಪುರ ಮಾರ್ಗವಾಗಿ ಸತ್ಯಮಂಗಲಕ್ಕೆ ಹೋಗುವ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರಕಾರದ ಮಂಜೂರಾತಿ ದೊರೆತಿದ್ದು, ಸರ್ವೆ ಕಾರ್ಯ ನಡೆಯುತ್ತಲೇ ಇದೆ.
ಪ್ರವಾಸೋದ್ಯಮ ಇಲಾಖೆ ರಾಮನಗರ ಹಲವು ಕೌತುಕಗಳ ಹಾಗೂ ಪ್ರೇಕ್ಷಣೀಯ ಸ್ಥಳಗಳ ಬೀಡಾಗಿದ್ದು, ಪ್ರಸಿದ್ಧ ಪ್ರವಾಸಿ ತಾಣಗಳಿರುವ ಜಿಲ್ಲೆ. ಈ ಜಿಲ್ಲೆಯನ್ನು ಸುಂದರ ಪ್ರವಾಸಿ ತಾಣವನ್ನಾಗಿ ರೂಪಿಸಲು ಪ್ರವಾಸೋದ್ಯಮ ಇಲಾಖೆ ವತಿಯಿಂದ ಕಣ್ವ ಜಲಾಶಯದ ಬಳಿ ಮಕ್ಕಳ ಪಾರ್ಕ್ ನಿರ್ಮಾಣಕ್ಕೆ ಎರಡು ಕೋಟಿ ಅನುದಾನ ಬಿಡುಗಡೆಯಾಗಿದೆ. ಆದರೆ ಶಂಕುಸ್ಥಾಪನೆ ನೆರವೇರಿಲ್ಲ. ರಾಮನಗರ ಬಳಿ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ಸ್ಥಾಪಿಸಲು, ಸಾಹಸ ಪ್ರವಾಸೋದ್ಯಮ ಚಟುವಟಿಕೆ ಮತ್ತು ಕರ್ನಾಟಕದ ಸಂಪೂರ್ಣ ಇತಿಹಾಸ ಬಿಂಬಿಸುವ ವಸ್ತು ಪ್ರದರ್ಶನ ಹಾಗೂ ಕೌಶಲ್ಯ ತರಬೇತಿ ಕೇಂದ್ರಗಳ ಮೂಲಕ ಗ್ರಾಮೀಣ ಯುವಕರಿಗೆ ಕಲಾ ಕೌಶಲ್ಯವನ್ನು ಮತ್ತು ಸ್ವಯಂ ಉದ್ಯೋಗವನ್ನು ಕಲ್ಪಿಸುವ ಕಲಾ ಪ್ರಕಾರಗಳು ಒಳಗೊಂಡ ಟೂರಿಸಂ ಹಬ್ ನಿರ್ಮಾಣ ಮಾಡುವ ಪ್ರಸ್ತಾಪವು ಸರಕಾರದ ಮುಂದಿದೆ.
ರಾಮನಗರ ಹಾಗೂ ಚಿಕ್ಕಬಳ್ಳಾಪುರ ಕೇಂದ್ರಗಳು ಒಮ್ಮೆಗೆ ಜಿಲ್ಲೆಯಾಗಿ ಘೋಷಣೆಗೊಂಡಿತ್ತು. ದಶಕದ ಸಂಭ್ರಮದ ವೇಳೆ ಚಿಕ್ಕಬಳ್ಳಾಪುರ ದಶಮಾನೋತ್ಸವ ಕಾರ್ಯಕ್ರಮ ಆಚರಣೆ ಮಾಡಿದ್ದರೆ, ರಾಮನಗರದಲ್ಲಿ ಮಾತ್ರ ಯಾವ ಆಚರಣೆಯು ನಡೆದಿಲ್ಲ. ಇನ್ನು 15ರ ವಸಂತಕ್ಕೆ ಜಿಲ್ಲೆ ಕಾಲಿಟ್ಟರೂ, ಜಿಲ್ಲಾಡಳಿತ ಮಾತ್ರವಲ್ಲ ಸಾರ್ವಜನಿಕರು ಸಹ ಆಚರಣೆ ನಡೆಸಿಲ್ಲ. ಜಾಲತಾಣಗಳು ಮಾತ್ರ ಜಿಲ್ಲೆಗೆ ಶುಭಾಷಯ ಹೇಳುವುದಕ್ಕೆ ಸೀಮಿತಗೊಂಡಿವೆ. ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂಬುದು ವಿರ್ಪಯಾಸ.
ಬಿಜೆಪಿ ಸರಕಾರದಲ್ಲಿ ಆಗಿದ್ದೇನು? ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೊಸ ಜಿಲ್ಲಾಸ್ಪತ್ರೆ ನಿರ್ಮಾಣದಿಂದಾಗಿ ಇಲ್ಲಿನ ಆರೋಗ್ಯ ಸೇವೆ ವಿಸ್ತರಣೆ ಕಾಣುತ್ತಿದೆ. ಜನರು ಗುಣಮಟ್ಟದ ವೈದ್ಯಕೀಯ ಸೇವೆಗೆ ರಾಜಧಾನಿಗೆ ಅಲೆಯುವುದು ತಪ್ಪಿದೆ. ಆರೋಗ್ಯ ಕೇಂದ್ರಗಳಿಗೂ ಅಭಿವೃದ್ಧಿಯ ಚಿಕಿತ್ಸೆ ದೊರೆತಿದೆ. ಹೊಸ ಈಜುಕೊಳ ನಿರ್ಮಾಣ ಆಗಿದೆ. ನಗರದೊಳಗಿನ ಹಲವು ಉದ್ಯಾನಗಳು ಅಭಿವೃದ್ಧಿ ಕಂಡಿವೆ. ಕಣ್ವ ಬಳಿ ಹಾಲಿನ ಪೌಡರ್ ಉತ್ಪಾದನಾ ಘಟಕ ತಲೆ ಎತ್ತಿದ್ದು, ಈ ಭಾಗದ ರೈತರಿಗೆ ಅನುಕೂಲ ಆಗಿದೆ. ಜಿಲ್ಲಾ ಕೇಂದ್ರದಲ್ಲಿ ಇನ್ನೂ ಹಲವು ಕಾಮಗಾರಿಗಳು ಅರ್ಧದಲ್ಲೇ ನಿಂತಿವೆ. ಅವುಗಳಿಗೆ ಚುರುಕು ಮುಟ್ಟಿಸುವ ಅಗತ್ಯ ಇದೆ. ಹೈಟೆಕ್ ಚಿತಾಗಾರ ನಿರ್ಮಾಣ ಕಾಮಗಾರಿ ಇನ್ನಷ್ಟೇ ಮುಗಿದು ಜನರ ಬಳಕೆಗೆ ಲಭ್ಯವಾಗಬೇಕಿದೆ. ಈ ನೆಲದವರೇ ಆದ ಆದಿಚುಂಚನಗಿರಿ ಮಠದ ಪೀಠಾಧಿಪತಿ ದಿವಂಗತ ಬಾಲಗಂಗಾಧರನಾಥ ಶ್ರೀಗಳ ಹುಟ್ಟೂರಾದ ಬಾನಂದೂರು ಅಭಿವೃದ್ಧಿಗೆ ಸರಕಾರ ಈಚೆಗೆ ಶಂಕುಸ್ಥಾಪನೆ ನೆರವೇರಿಸಿದೆ. ಅಲ್ಲದೆ ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಸಿದ್ದಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ 111 ಅಡಿ ಎತ್ತರ ಪ್ರತಿಮೆಗೂ ಕೂಡ ಶಂಕು ಸ್ಥಾಪನೆ ನೆರವೇರಿದೆ.
ಅರ್ಕಾವತಿ ಶುದ್ಧಗೊಳ್ಳಲಿ ರಾಮನಗರದ ಜೀವನದಿ ಆಗಬೇಕಿದ್ದ ಅರ್ಕಾವತಿಯು ಮಲಿನವಾಗಿದ್ದು, ಇದರಿಂದ ಜಲಮೂಲ ಹಾಳಾಗಿರುವ ಜೊತೆಗೆ ನಗರದ ಅಂದಕ್ಕೂ ಅಡ್ಡಿಯಾಗಿದೆ. ಅರ್ಕಾವತಿಗೆ ಪುನರುಜ್ಜೀವನದ ಅಗತ್ಯ ಇದೆ. ಸದ್ಯ ನಗರದ ಒಳಗೆ ಇರುವ ಕೃಷಿ ಉತ್ಪನ್ನ ಮಾರುಕಟ್ಟೆ ಚಿಕ್ಕದಾಗಿದೆ. ಹೀಗಾಗಿ ವಿಸ್ತಾರವಾದ ಮಾರುಕಟ್ಟೆಯ ಅಗತ್ಯ ಇದೆ. ಜಿಲ್ಲಾ ಕೇಂದ್ರಕ್ಕೆ ತಕ್ಕಂತೆ ನಗರದೊಳಗೆ ಸುಸಜ್ಜಿತವಾದ ಬಸ್ ನಿಲ್ದಾಣ, ವ್ಯವಸ್ಥಿತವಾದ ಕ್ರೀಡಾಂಗಣ, ಇನ್ನಷ್ಟು ವನಗಳ ನಿರ್ಮಾಣ ಕಾರ್ಯ ಆಗಬೇಕು ಎಂಬುದು ಜನರ ಒತ್ತಾಯವಾಗಿದೆ.
ಕೈಗಾರಿಕೆಗಳ ಬೆಳವಣಿಗೆ ರಾಮನಗರ ತಾಲೂಕಿನ ಒಂದು ಭಾಗವೇ ಆದ ಬಿಡದಿಯು 2016ರಲ್ಲಿ ಗ್ರಾಮ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದೆ. ಸುತ್ತಲಿನ ಹತ್ತಾರು ಗ್ರಾಮಗಳನ್ನೂ ಒಳಗೊಂಡು ದೊಡ್ಡದಾಗಿ ಬೆಳೆಯತೊಡಗಿದೆ. ಬಿಡದಿಗೆ ಹೊಂದಿಕೊಂಡಂತೆ ಇರುವ ಕೈಗಾರಿಕಾ ಪ್ರದೇಶವು ರಾಮನಗರದ ಹೆಮ್ಮೆ. ದೊಡ್ಡ ದೊಡ್ಡ ಕಾರ್ಖಾನೆಗಳು ಇಲ್ಲಿವೆ. ಕೈಗಾರಿಕೆಗಳ ಬೆಳವಣಿಗೆಯಿಂದ ಸುತ್ತಲಿನ ಸಾವಿರಾರು ಮಂದಿಗೆ ಉದ್ಯೋಗ ಸಿಕ್ಕಿದೆ. ಬಿಡದಿ-ಬೈರಮಂಗಲ ಜನರಿಗೆ ಶಾಪವಾಗಿದ್ದ ವೃಷಭಾವತಿಯ ಶುದ್ಧೀಕರಣ ಕಾಮಗಾರಿಗಳು ಈಗಾಗಲೇ ನಡೆದಿದ್ದು, ಇದರಿಂದ ಜನರ ದಶಕಗಳ ಸಮಸ್ಯೆಗೆ ಮುಕ್ತಿ ದೊರೆಯಲಿದೆ. ಜೊತೆಗೆ ಹೊಸ ಪಟ್ಟಣದ ಬೆಳವಣಿಗೆಗೆ ತಕ್ಕಂತೆ ಮೂಲ ಸೌಕರ್ಯ ಒದಗಿಸಬೇಕು.
ವರದಿ: ಪ್ರಶಾಂತ್ ಹುಲಿಕೆರೆ
ಇದನ್ನೂ ಓದಿ
(Ramanagar district has spent 15 years and district has been in development from fifteen years)