ಅನುಮಾನದ ಭೂತಕ್ಕೆ ಯುವತಿ ಬಲಿ: ರೆಜೆನ್ಸಿ ಲಾಡ್ಜ್‌ನಲ್ಲಿ ಕೇರಳ ಮೂಲದ ಯುವತಿಯನ್ನು ಕೊಂದ ಪ್ರಿಯಕರ

ಬೆಂಗಳೂರಿನ ಕಾಟನ್‌ಪೇಟೆಯಲ್ಲಿ ನಡೆದ ಭೀಕರ ಕೊಲೆ ಪ್ರಕರಣದಲ್ಲಿ, ಕೇರಳ ಮೂಲದ ಗಂಗಾ ಎಂಬುವವರನ್ನು ಆಕೆಯ ಪ್ರಿಯಕರ ಗೋಕುಲ್ ಲಾಡ್ಜ್ ರೂಮಿನಲ್ಲಿ ಹತ್ಯೆಗೈದಿದ್ದಾನೆ. ನಾಲ್ಕು ವರ್ಷಗಳ ಪ್ರೇಮ ಸಂಬಂಧದಲ್ಲಿದ್ದ ಇವರಿಬ್ಬರ ನಡುವೆ ಅನೈತಿಕ ಸಂಬಂಧದ ಅನುಮಾನದಿಂದ ಜಗಳ ನಡೆದು ಕೊಲೆಯಲ್ಲಿ ಅಂತ್ಯಗೊಂಡಿದೆ. ಪೊಲೀಸರು ಗೋಕುಲ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ನಗರದಲ್ಲಿ ತೀವ್ರ ಆಘಾತ ಮೂಡಿಸಿದೆ.

ಅನುಮಾನದ ಭೂತಕ್ಕೆ ಯುವತಿ ಬಲಿ: ರೆಜೆನ್ಸಿ ಲಾಡ್ಜ್‌ನಲ್ಲಿ ಕೇರಳ ಮೂಲದ ಯುವತಿಯನ್ನು ಕೊಂದ ಪ್ರಿಯಕರ
ಯುವತಿಯನ್ನು ಕೊಲೆ ಮಾಡಿದ ಯುವಕ
Image Credit source: Tv9 kannada
Edited By:

Updated on: Nov 27, 2026 | 2:30 PM

ಬೆಂಗಳೂರು, ನ.27: ರಾಜಧಾನಿ ಬೆಂಗಳೂರಿನಲ್ಲಿ ನಾಲ್ಕು ವರ್ಷಗಳ ಪ್ರೇಮಕಥೆಯೊಂದು ಅತ್ಯಂತ ಭೀಕರ ದುರಂತದಲ್ಲಿ ಅಂತ್ಯಕಂಡಿದೆ. ಅನೈತಿಕ ಸಂಬಂಧದ ಅನುಮಾನದಿಂದ ಪ್ರಿಯಕರನೇ ತನ್ನ ಪ್ರಿಯತಮೆಯನ್ನು ಲಾಡ್ಜ್ ರೂಮಿನೊಳಗೆ ಬರ್ಬರವಾಗಿ ಕೊಲೆಗೈದಿರುವ ಆಘಾತಕಾರಿ ಘಟನೆ ಇಂದು (ನವೆಂಬರ್ 27) ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೇರಳ ಮೂಲದ ಗಂಗಾ ಕೊಲೆಯಾದ ದುರ್ದೈವಿ ಯುವತಿಯಾಗಿದ್ದು, ಕೃತ್ಯ ಎಸಗಿದ ಪ್ರಿಯಕರ ಗೋಕುಲ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೇರಳ ಮೂಲದವರಾದ ಗಂಗಾ ಮತ್ತು ಗೋಕುಲ್ ಇಬ್ಬರೂ ನರ್ಸಿಂಗ್ ಕೋರ್ಸ್ ವ್ಯಾಸಂಗ ಪೂರ್ಣಗೊಳಿಸಿದ್ದರು. ಕಳೆದ 4 ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಬೆಂಗಳೂರಿನಲ್ಲಿ ಉದ್ಯೋಗ ಹುಡುಕುವ ಸಲುವಾಗಿ ನಗರಕ್ಕೆ ಬಂದಿದ್ದ ಈ ಜೋಡಿ, ಗುರುವಾರ (ನಿನ್ನೆ) ಕಾಟನ್‌ಪೇಟೆಯ ಮಸ್ತಾನ್ ದರ್ಗಾ ಬಳಿಯಿರುವ ‘ರೆಜೆನ್ಸಿ ಲಾಡ್ಜ್’ ನಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದು ಉಳಿದುಕೊಂಡಿದ್ದರು.

Loading...

ಗುರುವಾರ ಲಾಡ್ಜ್‌ಗೆ ಬಂದಿದ್ದ ಇಬ್ಬರ ನಡುವೆ ಗಂಗಾಳಿಗೆ ಬೇರೊಬ್ಬ ಯುವಕನ ಜೊತೆಗೆ ಸಂಬಂಧವಿದೆ ಎಂಬ ವಿಚಾರವಾಗಿ ತೀವ್ರ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ. ಈ ಜಗಳ ವಿಕೋಪಕ್ಕೆ ಹೋಗಿ ಗೋಕುಲ್, ಲಾಡ್ಜ್‌ನ ರೂಮಿನೊಳಗೆ ಗಂಗಾಳನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ ಎಂದು ಶಂಕಿಸಲಾಗಿದೆ.

ಕೊಲೆ ನಡೆದ ರೆಜೆನ್ಸಿ ಲಾಡ್ಜ್‌ನ ಕೊಠಡಿಯ ಹಾಸಿಗೆಯ ಮೇಲೆ ಹಾಗೂ ಹೊರಗಿನ ಮೆಟ್ಟಿಲುಗಳ ತುಂಬೆಲ್ಲಾ ರಕ್ತ ಬಿದ್ದಿರುವುದು ಕಂಡುಬಂದಿದ್ದು, ಕೃತ್ಯದ ಭೀಕರತೆಗೆ ಸಾಕ್ಷಿಯಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕಾಟನ್‌ಪೇಟೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಆಶ್ರಯ ಯೋಜನೆ ಭೂ ವಿವಾದಕ್ಕೆ ಯುವಕ ಬಲಿ, ಮಾಜಿ ಪಂಚಾಯಿತಿ ಸದಸ್ಯನ ಬಂಧನ

ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಸದ್ಯ ಕೊಲೆ ಆರೋಪಿ ಗೋಕುಲ್‌ನನ್ನು ವಶಕ್ಕೆ ಪಡೆದಿರುವ ಕಾಟನ್‌ಪೇಟೆ ಪೊಲೀಸರು, ಕೊಲೆಗೆ ನಿಖರ ಕಾರಣವೇನು? ಯಾವ ಆಯುಧದಿಂದ ಹತ್ಯೆ ಮಾಡಲಾಗಿದೆ? ಪೂರ್ವನಿಯೋಜಿತ ಕೃತ್ಯವೇ ಅಥವಾ ಆಕಸ್ಮಿಕ ಜಗಳದಲ್ಲಿ ನಡೆದ ಕೊಲೆಯೇ ಎಂಬ ಆಯಾಮಗಳಲ್ಲಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
Loading...
Unable to load recommendations.
Follow Us