Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದಲ್ಲಿ ಬೆಂಗಳೂರು ಪೊಲೀಸರನ್ನು ಆರೋಪಿಗಳೇ ಟ್ರ್ಯಾಪ್ ಮಾಡಿಸಿದ್ದು ಹೇಗೆ ಗೊತ್ತಾ?

ಸೈಬರ್ ಪ್ರಕರಣ ಬೇಧಿಸಲು ಕೇರಳಕ್ಕೆ ಹೋಗಿದ್ದ ಬೆಂಗಳೂರು ಪೊಲೀಸರನ್ನು ಕೇರಳ ಪೊಲೀಸರು ವಶಕ್ಕೆ ಪಡೆದಿದ್ದರು. ಹಾಗಿದ್ದರೆ ಆರೋಪಿಗಳೇ ಪೊಲೀಸರನ್ನು ಟ್ರ್ಯಾಪ್ ಮಾಡಿಸಿದ್ದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಕೇರಳದಲ್ಲಿ ಬೆಂಗಳೂರು ಪೊಲೀಸರನ್ನು ಆರೋಪಿಗಳೇ ಟ್ರ್ಯಾಪ್ ಮಾಡಿಸಿದ್ದು ಹೇಗೆ ಗೊತ್ತಾ?
ಕೇರಳದಲ್ಲಿ ಬೆಂಗಳೂರು ಪೊಲೀಸರನ್ನೇ ಟ್ರ್ಯಾಪ್ ಮಾಡಿಸಿದ ಆರೋಪಿಗಳು (ಸಾಂದರ್ಭಿಕ ಚಿತ್ರ)
Follow us
Kiran HV
| Updated By: Rakesh Nayak Manchi

Updated on: Aug 04, 2023 | 7:24 PM

ಬೆಂಗಳೂರು, ಆಗಸ್ಟ್ 4: ಆನ್​​ಲೈನ್ ಮೂಲಕ ಜಾಬ್ ಆಫರ್ ಮಾಡುವ ವ್ಯಕ್ತಿಗಳ್ನು ನಂಬಿ ಅದೆಷ್ಟೋ ಜನ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾರೆ. ಇಂತಹದ್ದೇ ವೈಟ್ ಫೀಲ್ಡ್ CEN ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಬೆನ್ನು ಬಿದ್ದ ಬೆಂಗಳೂರು (Bengaluru) ಪೊಲೀಸ್ ಸಿಕ್ಕ ಚೈನ್ ಲಿಂಕ್​ನಲ್ಲಿ ಕೇರಳದ (Kerala) ಆರೋಪಿಗಳ ಬಂಧಿಸಿ ಕರೆತರಲು ತೆರಳಿದ್ದರು. ಅಷ್ಟೊತ್ತಿಗಾಗಲೇ ಪೊಲೀಸರ ವಿರುದ್ಧವೇ ಗಂಭೀರ ಆರೋಪ ಕೇಳಿ ಬಂದು ಅಮಾನತುಗೊಂಡಿದ್ದಾರೆ.

ತಮ್ಮ ಬಳಿಯಿಂದ ಪೊಲೀಸರು ಹಣ ಪಡೆದಿದ್ದಾರೆ ಎಂದು ಆರೋಪಿಸಿ ಅಕಿಲ್ ಎಂಬಾತ ಕೇರಳ ಪೊಲೀಸರಿಗೆ ದೂರು ನೀಡಿದ್ದ. ಅದರಂತೆ ಅಲ್ಲಿನ ಪೊಲೀಸರು ಬೆಂಗಳೂರು ಪೊಲೀಸರ ವಿರುದ್ಧ ಎಫ್​ಐಆರ್ ದಾಖಲಿಸಿ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ವೈಟ್ ಫೀಲ್ಡ್​ನ ಸಿಇಎನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಹಾಗೂ ಮೂವರು ಸಿಬ್ಬಂದಿಗಳ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದೆ. ಉದ್ಯೋಗ ಕೊಡಿಸುವ ನೆಪದಲ್ಲಿ ಆನ್ ಲೈನ್ ಮೂಲಕ 26 ಲಕ್ಷ ವಂಚನೆಯಾದ ಬಗ್ಗೆ ಸಾಫ್ಟ್‌ವೇರ್ ಇಂಜಿನಿಯರ್ ಚಂದಕ್ ಶ್ರೀಕಾಂತ್ ಎಂಬವರು ವೈಟ್ ಫೀಲ್ಡ್ CEN ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿದ ಇನ್ಸ್​​ಪೆಕ್ಟರ್ ಶಿವಪ್ರಕಾಶ್ ಮತ್ತು ತಂಡ, ಮಡಿಕೇರಿ ಮೂಲದ ಐಸಾಕ್ ವಿಚಾರಣೆ ನಡೆಸಿತ್ತು. ಹಣ ವಂಚನೆ ಬಳಿಕ ವರ್ಗಾವಣೆ ಚೈನ್ ಲಿಂಕ್ ರೀತಿ ಒಬ್ಬರಿಂದಬ್ಬೊರಿಗೆ ಜಾಲ ಹರಡಿದ್ದು, ಇದರ ಜಾಡು ಹಿಡಿದ ಪೊಲೀಸರಿಗೆ ಕೇರಳ ಮೂಲದ ನೌಶದ್ ಹೆಸರು ತಿಳಿದುಬಂದಿದೆ. ಹೀಗಾಗಿ ಕಳೆದ ಮೂರು ದಿನಗಳ ಹಿಂದೆ ತೆರಳಿದ್ದ ಪೊಲೀಸರು ನೌಶಾದ್ ಹಿಡಿದು ಆತನ ಮೂಲಕ ಅಕಿಲ್ ಹಾಗೂ ಜೋಸೆಫ್ ನಿಕಲ್ ಮಾಹಿತಿ ಪಡೆದಿದ್ದರು.

ಇದನ್ನೂ ಓದಿ: ಕೇರಳದಲ್ಲಿ ಆರೋಪಿಯಿಂದ ಹಣ ಪಡೆದ ಆರೋಪ, ಬೆಂಗಳೂರಿನ ಇನ್ಸ್​ಪೆಕ್ಟರ್ ಸಹಿತ ನಾಲ್ವರು ಸಸ್ಪೆಂಡ್

ತನಿಖೆ ಮುಂದುವರಿಸಿದ ಪೊಲೀಸರು ಅಕಿಲ್ ಮತ್ತು ನಿಖಿಲ್ ಅವರನ್ನು ಕರೆತರಲು ಮುಂದಾಗಿದ್ದರು. ಅಷ್ಟೊತ್ತಿಗಾಗಲೇ ಕರ್ನಾಟಕ ಪೊಲೀಸರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಅಖಿಲ್​ಗೆ 3 ಲಕ್ಷ ಹಣ ಬೇಡಿಕೆ ಇಟ್ಟಿದ್ದಾಗಿ ಕೊಚ್ಚಿಯ ಕಲ್ಲಂಚೇರಿ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.

ನಿಖಿಲ್​ನಿಂದ 3 ಲಕ್ಷ ಹಣ ಪಡೆದು ಅಖಿಲ್​ನನ್ನ ಕಾರಿನಲ್ಲಿ ಕರೆದುಕೊಂಡು ಪೊಲೀಸರು ಬೆಂಗಳೂರು ಕಡೆಗೆ ಹೊರಟಿದ್ದರು. ಈ ವೇಳೆ ಅಖಿಲ್ ಹಣ ನೀಡದೆ, ಕರೆ ಮಾಡಿ ಸ್ನೇಹಿತರಿಂದ ಹಣ ಹೊಂದಿಸುವುದಾಗಿ ಹೇಳಿ ಬೆಂಗಳೂರು ಪೊಲೀಸರಿಂದ ತನ್ನ ಮೊಬೈಲ್ ಪಡೆದು ಆತ್ಮೀಯಳಾದ ವಕೀಲೆ ಸ್ನೇಹಿತೆಗೆ ಕರೆ ಮಾಡಿದ್ದಾನೆ. ಅಲ್ಲದೆ, ಅಪರಿಚಿತ ವ್ಯಕ್ತಿಗಳು ತನ್ನನ್ನು ಕಿಡ್ನಾಪ್ ಮಾಡಿದ್ದು, 3 ಲಕ್ಷ ಹಣಕ್ಕೆ ಕಿಡ್ನಾಪ್ ಮಾಡಿದ್ದಾಗಿ ಮಲಯಾಳಂನಲ್ಲಿ ಹೇಳಿದ್ದಾನೆ.

ನಿಖಿಲ್ ಸ್ನೇಹಿತೆ ವಕೀಲೆ ಕಲ್ಲಂಚೇರಿ ಠಾಣೆಯ ಪೊಲೀಸರಿಗೆ ಸ್ನೇಹಿತ ನಿಖಿಲ್ ಅನ್ನು ಅಪರಿಚಿತರು ಕಿಡ್ನಾಪ್ ಮಾಡಿದ್ದು, 3 ಲಕ್ಷಕ್ಕೆ ಬೇಡಿಕೆ ಇಟ್ಟು, ಕರೆದೊಯ್ಯುತ್ತಿದ್ದಾರೆಂದು ಮಾಹಿತಿ ನೀಡಿದ್ದಾರೆ. ಆ ಬಳಿಕ ತ್ರಿಶೂರ್ ಮಾರ್ಗವಾಗಿ ಬರುತ್ತಿದ್ದ ಬೆಂಗಳೂರು ಪೊಲೀಸರು ಕೇಳಿದ್ದ 3 ಲಕ್ಷ ಹಣ ಕೊಡುವುದಾಗಿ ಹೇಳಿ ಕರೆಸಿಕೊಂಡಿದ್ದಾರೆ.

ಅದರಂತೆ ಹಣ ಪಡೆಯುವ ಸಲುವಾಗಿ ಕೊಚ್ಚಿಗೆ ವಾಪಾಸ್ ಬಂದು ನಿಖಿಲ್ ಕಡೆಯವರಿಂದ 3 ಲಕ್ಷ ಹಣ ಪಡೆಯುವಾಗ ಬೆಂಗಳೂರು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಣದ ಸಮೇತ ಕೇರಳ‌ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಕೂಡಲೇ ಆರೋಪಿಗಳ ವಶಕ್ಕೆ ಪಡೆದ ಕಲ್ಲಂಚೇರಿ ಪೊಲೀಸರು ಸ್ವಿಫ್ಟ್ ಕಾರಿನಲ್ಲಿದ್ದ 3 ಲಕ್ಷ ಹಣವನ್ನು ಜಪ್ತಿಮಾಡಿದ್ದಾರೆ‌.

ಕಾರಿನ ಸಮೇತ ಬೆಂಗಳೂರು ಪೊಲೀಸರನ್ನ ಹಣದ ಸಮೇತ ಠಾಣೆಗೆ ಕರೆದೊಯ್ದಿದ್ದಾರೆ. ಈ ವೇಳೆ ನಿಖಿಲ್ ತನ್ನನ್ನ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಗಿ ಬೆಂಗಳೂರು ವೈಟ್ ಫೀಲ್ಡ್​ನ ನಾಲ್ವರು ಪೊಲೀಸರ ವಿರುದ್ಧ ಕೇರಳದ ಕಲ್ಲಂಚೇರಿ ಪೊಲೀಸ್ ಠಾಣೆಯಲ್ಲಿ ದೂರು‌ ನೀಡಿದ್ದು, ಕೇರಳ‌ ಪೊಲೀಸರು ಎಫ್​ಐಆರ್ ದಾಖಲಿಸಿ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ಕೇರಳ: ನಿಷೇಧಿತ PFI ನಡೆಸುತ್ತಿದ್ದ ಶಸ್ತ್ರಾಸ್ತ್ರ ತರಬೇತಿ ಕೇಂದ್ರ ಮೇಲೆ NIA ದಾಳಿ, ಗ್ರೀನ್ ವ್ಯಾಲಿಯ ಸತ್ಯ ಬಿಚ್ಚಿಟ್ಟ ತನಿಖಾ ಸಂಸ್ಥೆ

ಮತ್ತೊಂದೆಡೆ ಈ ರೀತಿಯ ಆರೋಪ ಕೇಳಿ ಬರುತ್ತಿದ್ದಂತೆ, ಬೆಂಗಳೂರಿನ ನಗರ ಪೊಲೀಸ್ ಆಯುಕ್ತರು ಘಟನೆಯ ಸಂಬಂಧ ವರದಿ ನೀಡುವಂತೆ ಸೂಚಿಸಿ ವೈಟ್ ಫೀಲ್ಡ್ ಎಸಿಪಿ ನೇತೃತ್ವದ ತಂಡವನ್ನು ಕೇರಳಕ್ಕೆ ಕಳಿಸಿದ್ದರು. ಅದರಂತೆ ಕೆಳಕ್ಕೆ ತೆರಳಿದ್ದ ಎಸಿಪಿ, ನಗರ ಪೊಲೀಸ್ ಆಯುಕ್ತರಿಗೆ ಪ್ರಾಥಮಿಕ ವರದಿ ನೀಡಿದ್ದಾರೆ.

ಇನ್ನು ವೈಟ್ ಫೀಲ್ಡ್ ಎಸಿಪಿ ನೀಡಿದ ವರದಿ ಆಧರಿಸಿ ಆರೋಪ ಕೇಳಿ ಬಂದ ಇನ್ಸ್ಪೆಕ್ಟರ್ ಪ್ರಕಾಶ್, ಹೆಡ್​ಕಾನ್​ಸ್ಟೇಬಲ್​ಗಳಾದ ವಿಜಯಕುಮಾರ್, ಶಿವಾನಿ, ಕಾನ್​ಸ್ಟೇಬಲ್ ಸಂದೇಶ್ ಅವರನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಅಸಲಿಗೆ ಪ್ರಕರಣದ ತನಿಖೆಯ ಕಾರ್ಯವಿಧಾನದಲ್ಲಿ ಲೋಪ ಹಿನ್ನಲೆ ನಗರ ಪೊಲೀಸ್ ಆಯುಕ್ತರಿಂದ ಈ ಆದೇಶ ಬಂದಿದೆ.

ತನಿಖಾ ಹಂತದ ವೇಳೆ ಆರೋಪಿಯನ್ನು ವಶಕ್ಕೆ ಪಡೆದು ಕರೆತರಬೇಕಾಗಿತ್ತು. ನಂತರ ಆರೋಪಿ ಬಂಧಿಸುವ ಪ್ರಕ್ರಿಯೆ ಬಳಿಕ ರಿಕವರಿ ಪ್ರಕ್ರಿಯೆ ನಡೆಸಬಹುದಿತ್ತು. ಆದರೆ ಪೊಲೀಸರು ಈ ಮಧ್ಯೆ ಹಣ ರಿಕವರಿ ಎಂದು ತೆರಳಿ ಹಣದ ಸಮೇತ ಅಲ್ಲಿನ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಹಿನ್ನಲೆ ನಗರ ಪೊಲೀಸ್ ಆಯುಕ್ತರಿಂದ ಅಧಿಕಾರಿ ಮತ್ತು ಸಿಬ್ಬಂದಿಗಳ ಅಮಾನತು ಆದೇಶವಾಗಿದ್ದು, ಇಲಾಖೆ ತನಿಖೆಗೂ ಸಹ ಸೂಚನೆ ನೀಡಲಾಗಿದೆ.

ಒಂದು ಕಡೆ ಕೇರಳ ಪೊಲೀಸರಿಂದ ಪ್ರಕರಣ ಸಂಬಂಧ ಮತ್ತೆ ವಿಚಾರಣೆಗೆ ಹಾಜರಾಗುವಂತೆ ನಾಲ್ವರಿಗೆ ನೋಟಿಸ್ ನೀಡಿ ಕಳಿಸಲಾಗಿದೆ. ಮತ್ತೊಂದೆಡೆ ನಗರ ಪೊಲೀಸ್ ಆಯುಕ್ತರಿಂದ ಪ್ರಕರಣದ ಕುರಿತು ಇಲಾಖಾ ತನಿಖೆ ಸಹ ಆದೇಶಿಸಿದ್ದು, ಸದ್ಯ ನಾಲ್ವರು ಅಮಾನತ್ತುಗೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ