ದಕ್ಷಿಣ ಕನ್ನಡದಲ್ಲಿ ತಂಬಾಕು ಮಾರಾಟಕ್ಕೆ ಕಡಿವಾಣ: ಅಂಗಡಿ, ಹೋಟೆಲ್‌ಗಳಲ್ಲಿ ‘ಸಿಗರೇಟ್ ಬಿಡಿಯಾಗಿ ಮಾರಾಟವಿಲ್ಲ’ ಬೋರ್ಡ್ ಕಡ್ಡಾಯ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಡಿ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಮಾರಾಟ ನಿಯಂತ್ರಿಸಲು ಜಿಲ್ಲಾಡಳಿತ ಮಹತ್ವದ ಕ್ರಮ ಕೈಗೊಂಡಿದೆ. ಇನ್ಮುಂದೆ ಅಂಗಡಿ ಮತ್ತು ಹೋಟೆಲ್‌ಗಳಲ್ಲಿ ತಂಬಾಕು ಮಾರಾಟಕ್ಕೆ ಸಂಬಂಧಿಸಿದ ಎಚ್ಚರಿಕೆ ಫಲಕ ಪ್ರದರ್ಶಿಸುವುದು ಕಡ್ಡಾಯ. ನಿಯಮ ಉಲ್ಲಂಘಿಸಿದರೆ ವ್ಯಾಪಾರ ಪರವಾನಗಿ ರದ್ದುಗೊಳಿಸುವ ಎಚ್ಚರಿಕೆ ನೀಡಲಾಗಿದೆ. ಅಪ್ರಾಪ್ತರಿಗೆ ತಂಬಾಕು ಮಾರಾಟ ಮಾಡಿದವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

ದಕ್ಷಿಣ ಕನ್ನಡದಲ್ಲಿ ತಂಬಾಕು ಮಾರಾಟಕ್ಕೆ ಕಡಿವಾಣ: ಅಂಗಡಿ, ಹೋಟೆಲ್‌ಗಳಲ್ಲಿ ‘ಸಿಗರೇಟ್ ಬಿಡಿಯಾಗಿ ಮಾರಾಟವಿಲ್ಲ’ ಬೋರ್ಡ್ ಕಡ್ಡಾಯ!
ಸಾಂದರ್ಭಿಕ ಚಿತ್ರ

Updated on: Nov 22, 2026 | 10:14 AM

ಮುಖ್ಯಾಂಶಗಳು

  • ದಕ್ಷಿಣ ಕನ್ನಡದಲ್ಲಿ ಬಿಡಿ ಸಿಗರೇಟ್ ಮಾರಾಟಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತದಿಂದ ಮಹತ್ವದ ಕ್ರಮ.
  • ಅಂಗಡಿ, ಹೋಟೆಲ್‌ಗಳಲ್ಲಿ ತಂಬಾಕು ಮಾರಾಟದ ಎಚ್ಚರಿಕೆ ಫಲಕ ಪ್ರದರ್ಶನ ಕಡ್ಡಾಯ.
  • ನಿಯಮ ಉಲ್ಲಂಘಿಸಿದ ವ್ಯಾಪಾರಿಗಳ ಪರವಾನಗಿ ರದ್ದತಿಗೆ ಅಧಿಕಾರಿಗಳಿಂದ ಖಡಕ್ ಎಚ್ಚರಿಕೆ.

ಮಂಗಳೂರು, ನವೆಂಬರ್ 22: ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಯುವಜನತೆ ತಂಬಾಕು ವ್ಯಸನಕ್ಕೆ ಬಲಿಯಾಗುತ್ತಿರುವ ಆತಂಕದ ನಡುವೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಜಿಲ್ಲೆಯಲ್ಲಿ ಬಿಡಿ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಇನ್ಮುಂದೆ ಅಂಗಡಿ, ಹೋಟೆಲ್‌ಗಳಿಗೆ ಹೊಸದಾಗಿ ವ್ಯಾಪಾರ ಪರವಾನಗಿ ನೀಡುವಾಗ ಅಥವಾ ನವೀಕರಿಸುವಾಗ ‘ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗಳನ್ನು ಬಿಡಿಯಾಗಿ ಮಾರಾಟ ಮಾಡುವಂತಿಲ್ಲ’ ಎಂಬ ಎಚ್ಚರಿಕೆ ಸಂದೇಶ ಪ್ರದರ್ಶಿಸುವುದು ಕಡ್ಡಾಯವಾಗಲಿದೆ. ನಿಯಮ ಉಲ್ಲಂಘಿಸುವ ವ್ಯಾಪಾರಿಗಳ ಪರವಾನಗಿಯನ್ನೇ ರದ್ದುಗೊಳಿಸುವ ಎಚ್ಚರಿಕೆಯನ್ನೂ ಅಧಿಕಾರಿಗಳು ನೀಡಿದ್ದಾರೆ

ಅಂಗಡಿ, ಹೋಟೆಲ್‌ಗಳಿಗೆ ಹೊಸ ನಿಯಮ ಜಾರಿ

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ. ರಾಜು ಈ ಮಹತ್ವದ ಸೂಚನೆ ನೀಡಿದ್ದಾರೆ. ಗ್ರಾಮ ಪಂಚಾಯಿತಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಹೊಸದಾಗಿ ವ್ಯಾಪಾರ ಪರವಾನಗಿ ನೀಡುವಾಗ ಮತ್ತು ನವೀಕರಿಸುವಾಗ ಈ ಷರತ್ತನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ನಿರ್ದೇಶಿಸಿದ್ದಾರೆ.

Loading...

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ಅವಕಾಶ ನೀಡುವ ಹೋಟೆಲ್‌ಗಳು, ಕೆಫೆಗಳು ಹಾಗೂ ಬಿಡಿಯಾಗಿ ಸಿಗರೇಟ್ ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳು ಜಂಟಿಯಾಗಿ ದಿಢೀರ್ ದಾಳಿ ನಡೆಸಬೇಕು. ಕೋಟ್ಪಾ (COTPA) ಕಾಯ್ದೆ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸುವುದರ ಜೊತೆಗೆ ವ್ಯಾಪಾರ ಪರವಾನಗಿ ರದ್ದುಗೊಳಿಸುವಂತಹ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಅಪ್ರಾಪ್ತರಿಗೆ ತಂಬಾಕು ಮಾರಾಟ ಮಾಡಿದರೆ ಕ್ರಮ!

ಸಭೆಯಲ್ಲಿ ಮಾತನಾಡಿದ ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕಿ, ಅಂಗಡಿಗಳಲ್ಲಿ ವಿದ್ಯಾರ್ಥಿಗಳು ಮತ್ತು ಅಪ್ರಾಪ್ತರಿಗೆ ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಯುವಜನತೆ ವ್ಯಸನಗಳಿಗೆ ಒಳಗಾಗುತ್ತಿರುವುದು ಕಳವಳಕಾರಿ ಸಂಗತಿ ಎಂದಿದ್ದಾರೆ.

ಶಾಲೆ ಮತ್ತು ಕಾಲೇಜುಗಳ 100 ಯಾರ್ಡ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ. ಅಪ್ರಾಪ್ತರಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

60 ದಿನಗಳ ತಂಬಾಕು ಮುಕ್ತ ಯುವ ಅಭಿಯಾನ

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಮಾತನಾಡಿ, ಅಕ್ರಮ ತಂಬಾಕು ಮಾರಾಟ ಮತ್ತು ಸಾರ್ವಜನಿಕ ಧೂಮಪಾನದ ವಿರುದ್ಧ ಈಗಾಗಲೇ ದಂಡ ವಿಧಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದಿದ್ದಾರೆ. ಇದೇ ವೇಳೆ ಅಪರ ಜಿಲ್ಲಾಧಿಕಾರಿ ಕೆ. ರಾಜು ಅವರು ಶಾಲಾ-ಕಾಲೇಜುಗಳಲ್ಲಿ 60 ದಿನಗಳ ಕಾಲ ನಡೆಯಲಿರುವ ತಂಬಾಕು ಮುಕ್ತ ಯುವ ಅಭಿಯಾನ 4.0 ಕ್ಕೆ ಚಾಲನೆ ನೀಡಿದ್ದಾರೆ. ಯುವಜನತೆಯನ್ನು ತಂಬಾಕು ವ್ಯಸನದಿಂದ ದೂರವಿಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us