AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂದಿನಿ ಹಾಲಿನ ಪ್ಯಾಕೆಟ್‌ನಲ್ಲಿ ಸತ್ತ ಜೇಡ ಪತ್ತೆ!: ಕೆಎಂಎಫ್‌ಗೆ ದೂರು ನೀಡಿದ ಡಾ. ಅಬ್ದುಲ್ ಕಲಾಂ ಅವರ ಸಂಬಂಧಿ

ಬೆಂಗಳೂರಿನಲ್ಲಿ ನಂದಿನಿ ಹಾಲಿನ ಪ್ಯಾಕೆಟ್‌ನಲ್ಲಿ ಸತ್ತ ಜೇಡ ಪತ್ತೆಯಾಗಿದ್ದು, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸಂಬಂಧಿ ನಾಗೂರ್ ರೋಜಾ ಅವರು ಈ ಬಗ್ಗೆ ಕೆಎಂಎಫ್ (KMF) ಮದರ್ ಡೇರಿಗೆ ದೂರು ನೀಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಸಂಬಂಧ ಸೋಮವಾರ ಕೆಎಂಎಫ್‌ನ ಇಬ್ಬರು ಅಧಿಕಾರಿಗಳು ರೋಜಾ ಅವರ ಮನೆಗೆ ಭೇಟಿ ನೀಡಿ ಹಾಲಿನ ಮಾದರಿ ಮತ್ತು ಪ್ಯಾಕೆಟ್‌ ಅನ್ನು ಪರಿಶೀಲನೆಗಾಗಿ ಸಂಗ್ರಹಿಸಿದ್ದಾರೆ.

ನಂದಿನಿ ಹಾಲಿನ ಪ್ಯಾಕೆಟ್‌ನಲ್ಲಿ ಸತ್ತ ಜೇಡ ಪತ್ತೆ!: ಕೆಎಂಎಫ್‌ಗೆ ದೂರು ನೀಡಿದ ಡಾ. ಅಬ್ದುಲ್ ಕಲಾಂ ಅವರ ಸಂಬಂಧಿ
ಸಾಂದರ್ಭಿಕ ಚಿತ್ರImage Credit source: PTI
ಪ್ರಸನ್ನ ಹೆಗಡೆ
|

Updated on:Nov 10, 2026 | 8:58 AM

Share

ಬೆಂಗಳೂರು, ನವೆಂಬರ್​​ 10: ಹಾಲಿನ ದರ ಏರಿಕೆಯಿಂದಾಗಿ ಭಾರಿ ಸುದ್ದಿಯಲ್ಲಿದ್ದ ಕರ್ನಾಟಕ ಹಾಲು ಮಹಾಮಂಡಳಿಗೆ (ಕೆಎಂಎಫ್) ಈಗ ಮತ್ತೆ ಸುದ್ದಿಯಲ್ಲಿದೆ. ಅರ್ಧ ಲೀಟರ್​​ನ ನಂದಿನಿ ಹಸುವಿನ ಹಾಲಿನ ಪ್ಯಾಕೆಟ್‌ನಲ್ಲಿ ಸತ್ತ ಜೇಡ ಪತ್ತೆಯಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಮಹಿಳೆಯೊಬ್ಬರು ಕೆಎಂಎಫ್​​ಗೆ ದೂರು ನೀಡಿದ್ದಾರೆ. ಈ ಘಟನೆ ಹಾಲಿನ ಸಂಸ್ಕರಣಾ ಘಟಕಗಳಲ್ಲಿನ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣದ ಬಗ್ಗೆಯೇ ಆತಂಕ ಮೂಡಿಸಿದೆ.

ಪಾತ್ರೆಗೆ ಹಾಲು ಸುರಿಯುತ್ತಿದ್ದಾಗ ಸತ್ತ ಜೇಡ ಪತ್ತೆ

ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸಂಬಂಧಿ ನಾಗೂರ್ ರೋಜಾ ಅವರು ಭಾನುವಾರ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ಫ್ರಿಡ್ಜ್‌ನಲ್ಲಿಟ್ಟಿದ್ದ ಹಾಲಿನ ಪ್ಯಾಕೆಟ್ ತೆರೆದು, ಕುದಿಸಲು ಪಾತ್ರೆಗೆ ಹಾಲು ಸುರಿಯುತ್ತಿದ್ದಾಗ ಅದರೊಂದಿಗೆ ಸಣ್ಣ ಸತ್ತ ಜೇಡವೊಂದು ಪತ್ತೆಯಾಗಿದೆ. ಇದನ್ನು ಕಂಡು ಆಘಾತವಾಯಿತು ಎಂದು ಅವರು ಹೇಳಿದ್ದಾರೆ. ಕಳೆದ ಸುಮಾರು ಎರಡು ದಶಕಗಳಿಂದ ತಮ್ಮ ಕುಟುಂಬ ನಂದಿನಿ ಹಾಲು ಮತ್ತು ಕೆಎಂಎಫ್‌ನ ಇತರ ಉತ್ಪನ್ನಗಳನ್ನು ಖರೀದಿಸುತ್ತಿದೆ. ಸಾಮಾನ್ಯವಾಗಿ ಹಾಲಿನ ಪ್ಯಾಕೆಟ್‌ಗಳನ್ನು ಮಾರಾಟಗಾರರಿಂದ ಮುಚ್ಚಿದ ಬಾಕ್ಸ್‌ನಲ್ಲಿ ಪಡೆಯಲಾಗುತ್ತದೆ. ಬಳಿಕ ನೀರಿನಲ್ಲಿ ತೊಳೆದು ಫ್ರಿಡ್ಜ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಈ ಬಾರಿಯೂ ಅದೇ ಕ್ರಮ ಅನುಸರಿಸಿದ ನಂತರ ಪ್ಯಾಕೆಟ್ ತೆರೆದಿದ್ದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ದೀಪಾವಳಿ ಹೊತ್ತಲ್ಲೇ ಜನರಿಗೆ ಮತ್ತೊಂದು ಶಾಕ್: ನಂದಿನಿ ತುಪ್ಪ, ಬೆಣ್ಣೆ, ಪನ್ನೀರ್ ಬೆಲೆ ಭಾರೀ ಏರಿಕೆ

ಮದರ್ ಡೇರಿಯ ಮಾರ್ಕೆಟಿಂಗ್ ಮ್ಯಾನೇಜರ್‌ಗೆ ದೂರು

ಜೇಡ ಪತ್ತೆಯಾದ ತಕ್ಷಣ ಅದರ ವಿಡಿಯೋ ಚಿತ್ರೀಕರಿಸಿ ರೋಜಾ ಅವರು ಹಾಲಿನ ಮಾರಾಟಗಾರರಿಗೆ ಕಳುಹಿಸಿದ್ದು, ಪ್ಯಾಕೆಟ್ ಅನ್ನು ಎಸೆಯುವಂತೆ ಮಾರಾಟಗಾರರು ಸಲಹೆ ನೀಡಿದ್ದಾರೆ. ಆದರೆ, ಆಹಾರ ಉತ್ಪನ್ನದಲ್ಲಿ ಇಂತಹ ಹೊರಗಿನ ವಸ್ತು ಪತ್ತೆಯಾಗಿರುವುದು ಗಂಭೀರ ಆಹಾರ ಸುರಕ್ಷತಾ ವಿಚಾರವಾಗಿರುವುದರಿಂದ ಅವರು ಪ್ಯಾಕೆಟ್ ಎಸೆಯಲು ನಿರಾಕರಿಸಿದ್ದಾರೆ. ನಂತರ ಕೆಎಂಎಫ್‌ನ ಘಟಕವಾದ ಮದರ್ ಡೇರಿಯ ಮಾರ್ಕೆಟಿಂಗ್ ಮ್ಯಾನೇಜರ್‌ಗೆ ಇಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಸೆಕ್ಷನ್ 26, 27 ಮತ್ತು 54ರ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಹಾಲಿನ ಮಾದರಿ ಮತ್ತು ಪ್ಯಾಕೆಟ್‌ ಪರಿಶೀಲನೆ

ಈ ಸಂಬಂಧ ಸೋಮವಾರ ಕೆಎಂಎಫ್‌ನ ಇಬ್ಬರು ಅಧಿಕಾರಿಗಳು ರೋಜಾ ಅವರ ಮನೆಗೆ ಭೇಟಿ ನೀಡಿ ಹಾಲಿನ ಮಾದರಿ ಮತ್ತು ಪ್ಯಾಕೆಟ್‌ ಅನ್ನು ಪರಿಶೀಲನೆಗಾಗಿ ಸಂಗ್ರಹಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸಿ, ಹಾಲು ಪ್ಯಾಕಿಂಗ್ ಮಾಡಿದ ಘಟಕವನ್ನು ಪತ್ತೆಹಚ್ಚುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ರೋಜಾ ತಿಳಿಸಿರುವುದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 8:54 am, Tue, 10 November 26

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More