ಬೆಂಗಳೂರು, ಜುಲೈ.07: ರಾಜ್ಯದಲ್ಲಿ ಡೆಂಗ್ಯೂ (Dengue) ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇವೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕಟ್ಟುನಿಟ್ಟಿನ ಗೈಡ್ಲೈನ್ಸ್ ಹೊರಡಿಸಿದ್ದಾರೆ. ಕುಡಿಯುವ ನೀರಿನ ಸರಬರಾಜು ಟ್ಯಾಂಕ್ಗಳು, ತೆರೆದ ತೊಟ್ಟಿಗಳು ಮತ್ತು ಸಾರ್ವಜನಿಕ ಶೌಚಾಲಯಗಳಲ್ಲಿ ನೀರು ಶೇಖರಣೆ ಮಾಡುವ ತೊಟ್ಟಿಗಳನ್ನು ವಾರಕ್ಕೊಮ್ಮೆ ಶುಚಿಗೊಳಿಸಿ ಗ್ರಾಮೀಣ ಭಾಗದ ಮನೆಗಳು, ಅಂಗಡಿ-ಮುಂಗಟ್ಟುಗಳು, ಹೊಟೇಲ್ಗಳು, ವಾಣಿಜ್ಯ ಸಂಕೀರ್ಣಗಳು, ಸಾರ್ವಜನಿಕ ಸ್ಥಳಗಳು ಹಾಗೂ ಖಾಲಿ ಜಾಗಗಳಲ್ಲಿ ನೀರು ದೀರ್ಘಕಾಲ ನಿಲ್ಲದಂತೆ ಕ್ರಮವಹಿಸಬೇಕು. ಆವರಣಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳುಬೇಕು ಎಂದು ತಿಳಿಸಿದ್ದಾರೆ.
ನಿರುಪಯುಕ್ತ ಮತ್ತು ತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಶೀಘ್ರವಾಗಿ ಹಾಗೂ ಸುರಕ್ಷಿತವಾಗಿ ವಿಲೇವಾರಿ ಮಾಡಬೇಕು. ಅಂಗನವಾಡಿ, ಶಾಲಾ-ಕಾಲೇಜುಗಳು, ವಸತಿ ಶಾಲೆಗಳ ಮೇಲ್ಪಾವಣಿಗಳು ಮತ್ತು ಆವರಣಗಳಲ್ಲಿ ಮಳೆನೀರು ಸಂಗ್ರಹವಾಗದಂತೆ ಹಾಗೂ ನೀರಿನ ಶೇಖರಣೆಗಳಲ್ಲಿ ಈಡಿಸ್ ಸೊಳ್ಳೆಗಳು ಉತ್ಪತ್ತಿಯಾಗದಂತೆ ಕ್ರಮವಹಿಸುವುದು. ಸಾರ್ವಜನಿಕ ಸ್ಥಳಗಳು, ರಸ್ತೆಗಳಲ್ಲಿ ಮಳೆಯ ನೀರು ನಿಲ್ಲದಂತೆ ಗುಂಡಿ ಹಾಗೂ ತಗ್ಗುಗಳನ್ನು ಮುಚ್ಚಬೇಕು. ಸಾರ್ವಜನಿಕ ನಲ್ಲಿಗಳು ಹಾಗೂ ಕೊಳವೆ ಬಾವಿಗಳಿಂದ ಹೆಚ್ಚುವರಿ ನೀರು ಸರಾಗವಾಗಿ ಹರಿಯುವಂತೆ ಸೂಕ್ತವಾದ ಚರಂಡಿ ವ್ಯವಸ್ಥೆ ಮಾಡಬೇಕು. ಜೊತೆಗೆ ಈಗಾಗಲೇ ಇರುವ ಚರಂಡಿಗಳಲ್ಲಿ ಶೇಖರಣೆಗೊಂಡಿರುವ ಹೂಳನ್ನು ಎತ್ತಿ ನೀರು ಸರಾಗವಾಗಿ ಹರಿಯುವಂತೆ ಮತ್ತು ಚರಂಡಿಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.
ಅಲ್ಲದೆ ಕುಡಿಯುವ ನೀರಿನ ಪೂರೈಕೆ ನಳಗಳಿಗೆ ಕಂಟ್ರೋಲ್ ವಾಲ್ಸ್ ಗಳನ್ನು ಕಡ್ಡಾಯವಾಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕು. ಇದರಿಂದ ನಳಗಳ ಸುತ್ತಲಿನ ಗುಂಡಿಗಳಲ್ಲಿ ನೀರು ಶೇಖರಣೆಯಾಗುವುದನ್ನು ಹಾಗೂ ಈಡಿಸ್ ಸೊಳ್ಳೆ ಉತ್ಪತ್ತಿಯಾಗುವುದನ್ನು ತಡೆಯಬಹುದು. ಕೊಳವೆ ಬಾವಿಗಳು ಹಾಗೂ ನೀರು ಸರಬರಾಜು ಪೈಪುಗಳು ಒಳಚರಂಡಿಯಿಂದ ದೂರದಲ್ಲಿರುವಂತೆ ಕ್ರಮವಹಿಸುವುದು. ಮತ್ತು ಪೈಪುಗಳಲ್ಲಿ ನೀರು ಸೋರಿಕೆಯಾಗದಂತೆ ನಿಗಾವಹಿಸಬೇಕು.
ಇದನ್ನೂ ಓದಿ: ಡೆಂಗ್ಯೂ ನಡುವೆ ಹಾವೇರಿಯಲ್ಲಿ ಇಲಿ ಜ್ವರ ಪತ್ತೆ; 12 ವರ್ಷದ ಬಾಲಕನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ
ಗ್ರಾಮಗಳಲ್ಲಿರುವ ಸಮುದಾಯದ ಶೌಚಾಲಯಗಳಲ್ಲಿ ಹಾಗೂ ಮನೆಗಳ ಶೌಚಾಲಯಗಳ ಪಕ್ಕದಲ್ಲಿರುವ ನೀರಿನ ತೊಟ್ಟಿಗಳಿಗೆ ಮುಚ್ಚಳವನ್ನು ಅಳವಡಿಸಬೇಕು. ಹಾಗೂ ತೊಟ್ಟಿಯನ್ನು ಸ್ವಚ್ಛಗೊಳಿಸಬೇಕು. ಗ್ರಾಮಗಳಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಕಟ್ಟಿಸಿರುವ ತೊಟ್ಟಿಗಳನ್ನು ವಾರಕ್ಕೊಮ್ಮೆ ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು. ಖಾಲಿ ನಿವೇಶನಗಳಲ್ಲಿ ಘನತ್ಯಾಜ್ಯ ವಸ್ತುಗಳು ಮತ್ತು ಮಳೆ ನೀರು ಸಂಗ್ರಹವಾಗದಂತೆ ಕ್ರಮವಹಿಸಲು ನಿವೇಶನಗಳ ಮಾಲೀಕರಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದಾರೆ.
ಎಳನೀರು ಮಾರಾಟಗಾರರು ಒಡೆದ ಎಳೆನೀರು ಚಿಪ್ಪುಗಳಲ್ಲಿ ಮಳೆ ನೀರು ಶೇಖರಣೆಯಾಗುವುದನ್ನು ತಡೆಗಟ್ಟಲು ಎಳೆನೀರು ಬುರುಡೆಗಳನ್ನು ನಾಲು, ಭಾಗಗಳಾಗಿ ಒಡೆದು, ಬೋರಲು ಇಡುವಂತೆ ಸೂಚಿಸಬೇಕು, ಪ್ರತಿದಿನ ಕಡ್ಡಾಯವಾಗಿ ವಿಲೇವಾರಿ ಮಾಡುವಂತೆ ನೋಡಿಕೊಳ್ಳಬೇಕು. ಆರೋಗ್ಯ ಸಿಬ್ಬಂದಿಯವರ ಜೊತೆಗೆ ಗ್ರಾಮ ಪಂಚಾಯತಿಗಳ ಸದಸ್ಯರು, ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯರು, ಅಂಗನವಾಡಿ, ಶಾಲೆ ಹಾಗೂ ಇತರ ಸ್ವಯಂ ಸೇವಾ ಸಂಸ್ಥೆಗಳನ್ನು ತೊಡಗಿಸಿಕೊಳ್ಳಿ. ಸೂಚನೆ ಪಾಲಿಸದವರಿಗೆ ನಿಯಮಾನುಸಾರ ದಂಡ ವಿಧಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ