
ಬೆಂಗಳೂರು, ನವೆಂಬರ್ 25: ಕರ್ನಾಟಕದ ಅಭಿವೃದ್ಧಿಗೆ ಜಪಾನ್ ಮಾದರಿಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಬೆಂಗಳೂರಿಗೆ ಜಾಗತಿಕ ಮಟ್ಟದ ಹೈಟೆಕ್ ಸ್ಪರ್ಶ ನೀಡುವುದು, ರಾಜ್ಯಕ್ಕೆ ಹೆಚ್ಚಿನ ಹೂಡಿಕೆ ಆಕರ್ಷಿಸುವುದು ಹಾಗೂ ಕೈಗಾರಿಕಾ ವಿಸ್ತರಣೆಗೆ ಅವಕಾಶ ಕಲ್ಪಿಸುವ ಬಗ್ಗೆ ಮೂರು ದಿನಗಳ ಜಪಾನ್ ಪ್ರವಾಸದ ವೇಳೆ ಅಧ್ಯಯನ ನಡೆಸಿದ್ದಾರೆ. ನವೆಂಬರ್ 23ರಿಂದ 25ರವರೆಗೆ ನಾಗೋಯಾ, ಒಸಾಕಾ ಮತ್ತು ಟೋಕಿಯೊ ನಗರಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಸಿಎಂ ನೇತೃತ್ವದ ಉನ್ನತ ಮಟ್ಟದ ನಿಯೋಗ ಭಾಗವಹಿಸಿದೆ. ಈ ವೇಳೆ, ಅಲ್ಲಿನ ತಂತ್ರಜ್ಞಾನ ಮತ್ತು ಅಭಿವೃದ್ಧಿ ಮಾದರಿಗಳನ್ನು ಅಧ್ಯಯನ ಮಾಡಿದೆ.
ಜಪಾನ್ನ ಅತ್ಯಾಧುನಿಕ ತಂತ್ರಜ್ಞಾನ, ವೇಗದ ಸಾರಿಗೆ ವ್ಯವಸ್ಥೆ, ಅಚ್ಚುಕಟ್ಟಾದ ನಗರ ಯೋಜನೆ ಮತ್ತು ಕೈಗಾರಿಕಾ ಮೂಲಸೌಕರ್ಯವನ್ನು ಕಂಡು ಸಿಎಂ ಡಿ.ಕೆ. ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮಾದರಿಗಳನ್ನು ಕರ್ನಾಟಕದಲ್ಲೂ ಅಳವಡಿಸಿಕೊಳ್ಳುವ ಸಾಧ್ಯತೆಗಳನ್ನು ಪರಿಶೀಲಿಸಿದ್ದಾರೆ.
ಜಪಾನ್ ಪ್ರವಾಸದ ಮೊದಲ ದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಾಗೋಯಾದಿಂದ ಒಸಾಕಾಗೆ ಶಿಂಕಾನ್ಸೆನ್ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದರು. ರೈಲಿನ ವೇಗ, ಸಮಯಪಾಲನೆ ಮತ್ತು ನಿಲ್ದಾಣಗಳ ಸ್ವಚ್ಛತೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲಿನ ರೈಲು ನಿಲ್ದಾಣಗಳು ವಿಮಾನ ನಿಲ್ದಾಣಗಳಂತೆಯೇ ಅಚ್ಚುಕಟ್ಟಾಗಿವೆ ಎಂದು ಬಣ್ಣಿಸಿದರು.
ಬುಲೆಟ್ ರೈಲು ಪ್ರಯಾಣದ ಅನುಭವ ಹಂಚಿಕೊಂಡ ಸಿಎಂ, ವಿಮಾನ ಪ್ರಯಾಣಕ್ಕಿಂತಲೂ ಉತ್ತಮ ಅನುಭವ ನೀಡಿತು ಎಂದು ಹೇಳಿದ್ದಾರೆ. ಇಂತಹ ಅತ್ಯಾಧುನಿಕ ರೈಲು ನಿಲ್ದಾಣಗಳು ಮತ್ತು ಸಾರಿಗೆ ವ್ಯವಸ್ಥೆಯನ್ನು ಕರ್ನಾಟಕದಲ್ಲೂ ಪರಿಚಯಿಸುವ ಆಶಯವಿದೆ ಎಂದು ತಿಳಿಸಿದ್ದಾರೆ. ರೈಲು ನಿಲ್ದಾಣದಲ್ಲಿ ಕನ್ನಡಿಗರೊಂದಿಗೆ ಆತ್ಮೀಯವಾಗಿ ಮಾತುಕತೆಯನ್ನೂ ನಡೆಸಿದರು.
ಬುಲೆಟ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ಆಶಾ ಕಾರ್ಯಕರ್ತೆಯರೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡಿದರು. ಅಹೋರಾತ್ರಿ ಧರಣಿಯನ್ನು ಕೈಬಿಡುವಂತೆ ಮನವಿ ಮಾಡಿದರು. ವಿದೇಶ ಪ್ರವಾಸದಲ್ಲಿದ್ದರೂ ರಾಜ್ಯದ ಪ್ರಮುಖ ವಿಚಾರಗಳ ಬಗ್ಗೆ ಗಮನಹರಿಸಿರುವ ಸಿಎಂ ನಡೆ ಗಮನ ಸೆಳೆಯಿತು.
ಕರ್ನಾಟಕಕ್ಕೆ ಜಪಾನ್ನಿಂದ ಹೆಚ್ಚಿನ ಹೂಡಿಕೆ ಆಕರ್ಷಿಸುವುದು, ಕೈಗಾರಿಕಾ ವಿಸ್ತರಣೆಗೆ ಅವಕಾಶ ಕಲ್ಪಿಸುವುದು ಪ್ರವಾಸದ ಪ್ರಮುಖ ಉದ್ದೇಶಗಳಾಗಿವೆ. ಈ ಹಿನ್ನೆಲೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಜಪಾನ್ನ ಟೊಯೊಟಾ ಕಾರ್ಪೊರೇಷನ್ನ ಮೊತೊಮಾಚಿ ಘಟಕಕ್ಕೆ ಭೇಟಿ ನೀಡಿದರು.
ಟೊಯೊಟಾ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ರಾಜ್ಯದಲ್ಲಿ ಮತ್ತಷ್ಟು ಹೂಡಿಕೆ ಹಾಗೂ ಉದ್ಯಮ ವಿಸ್ತರಣೆ ಕುರಿತು ಚರ್ಚೆ ನಡೆಸಿದರು. ಈಗಾಗಲೇ ಬಿಡಿಯಲ್ಲಿರುವ ಟೊಯೊಟಾದ ಎರಡು ಘಟಕಗಳಲ್ಲಿ ವಾರ್ಷಿಕ 3.31 ಲಕ್ಷ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯವಿದೆ. ರಾಜ್ಯದಲ್ಲಿ ಉದ್ಯಮ ವಿಸ್ತರಣೆಗೆ ಮತ್ತಷ್ಟು ಅವಕಾಶಗಳನ್ನು ಕಲ್ಪಿಸುವ ಕುರಿತು ಮಾತುಕತೆ ನಡೆದಿದೆ.
ಇದಲ್ಲದೆ, ಕ್ವಿನ್ ಸಿಟಿಯಲ್ಲಿ ಸುಮಾರು 1,200 ಕೋಟಿ ರೂ. ವೆಚ್ಚದಲ್ಲಿ ‘ಟಿಕೆಎಂ ಬಿಜಿಂಟೆಲ್ ಹಬ್’ ಸ್ಥಾಪಿಸುವ ಪ್ರಸ್ತಾಪವೂ ಚರ್ಚೆಯಾಗಿದೆ. ಕರ್ನಾಟಕವನ್ನು ಪ್ರಮುಖ ಉತ್ಪಾದನಾ ತಾಣ ಹಾಗೂ ರಫ್ತು ಕೇಂದ್ರವಾಗಿ ಬೆಳೆಸಲು ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸಿಎಂ ಭರವಸೆ ನೀಡಿದ್ದಾರೆ.
ಜಪಾನ್ ಪ್ರವಾಸದ ವೇಳೆ ಟೊಯೊಟಾ ಸಂಸ್ಥೆಯ ಎಲ್ಪಿಜಿ-ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ‘ಜೆಪಿಎನ್ ಟ್ಯಾಕ್ಸಿ’ ಮಾದರಿ ಸಿಎಂ ಗಮನ ಸೆಳೆದಿದೆ. ಪ್ರಯಾಣಿಕರ ಅನುಕೂಲಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಈ ಟ್ಯಾಕ್ಸಿಯಲ್ಲಿ ವಿಶಾಲ ಒಳಭಾಗ, ಅಗಲವಾದ ಸ್ಲೈಡಿಂಗ್ ಬಾಗಿಲುಗಳು ಮತ್ತು ಉತ್ತಮ ವ್ಯವಸ್ಥೆಯಿದೆ. ಹಿರಿಯ ನಾಗರಿಕರು, ದಿವ್ಯಾಂಗರು ಹಾಗೂ ಗಾಲಿಕುರ್ಚಿ ಬಳಕೆದಾರರು ಸುಲಭವಾಗಿ ಹತ್ತಿ ಇಳಿಯಲು ಅನುಕೂಲವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಇಂತಹ ಟ್ಯಾಕ್ಸಿ ಮಾದರಿಯನ್ನು ಕರ್ನಾಟಕದಲ್ಲೂ ಪರಿಚಯಿಸುವ ಸಾಧ್ಯತೆಗಳನ್ನು ಪರಿಶೀಲಿಸುವುದರ ಜೊತೆಗೆ, ರಾಜ್ಯದಲ್ಲೇ ತಯಾರಿಸುವ ಅವಕಾಶಗಳ ಬಗ್ಗೆಯೂ ಸಿಎಂ ಆಸಕ್ತಿ ತೋರಿದ್ದಾರೆ.
ಕರ್ನಾಟಕದ ನಗರಗಳಲ್ಲಿ ತ್ಯಾಜ್ಯ ನಿರ್ವಹಣೆ ಪ್ರಮುಖ ಸವಾಲಾಗಿರುವ ಹಿನ್ನೆಲೆಯಲ್ಲಿ, ಜಪಾನ್ನ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆಯನ್ನೂ ಸಿಎಂ ನೇತೃತ್ವದ ನಿಯೋಗ ಅಧ್ಯಯನ ಮಾಡಿದೆ. ಒಸಾಕಾದ ಮೈಶಿಮಾ ತ್ಯಾಜ್ಯ ದಹನ ಘಟಕಕ್ಕೆ ಭೇಟಿ ನೀಡಿದ ನಿಯೋಗ, ಅಲ್ಲಿನ ಅತ್ಯಾಧುನಿಕ ತಂತ್ರಜ್ಞಾನವನ್ನು ವೀಕ್ಷಿಸಿದೆ. 2001ರಿಂದ ಕಾರ್ಯನಿರ್ವಹಿಸುತ್ತಿರುವ ಈ ಘಟಕವು ಎರಡು ದಹನ ಯಂತ್ರಗಳ ಮೂಲಕ ಪ್ರತಿದಿನ ಸುಮಾರು 900 ಟನ್ ನಗರ ತ್ಯಾಜ್ಯವನ್ನು ಸಂಸ್ಕರಿಸುತ್ತದೆ. 32 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಘಟಕವು ತನ್ನದೇ ವಿದ್ಯುತ್ ಅಗತ್ಯಗಳನ್ನು ಪೂರೈಸಿಕೊಂಡು, ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್ಗೆ ಪೂರೈಸುತ್ತದೆ.
ಹೊಗೆ ಹೊರಸೂಸುವಿಕೆ ನಿಯಂತ್ರಣ, ಪರಿಸರ ಸಂರಕ್ಷಣೆ ಮತ್ತು ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆಗೆ ಇಲ್ಲಿ ಅಳವಡಿಸಿರುವ ವ್ಯವಸ್ಥೆಗಳನ್ನು ನಿಯೋಗ ಪರಿಶೀಲಿಸಿದೆ. ಕರ್ನಾಟಕದಲ್ಲೂ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಬಲಪಡಿಸಿ, ಸ್ವಚ್ಛ ಹಾಗೂ ಸುಸ್ಥಿರ ನಗರಗಳನ್ನು ನಿರ್ಮಿಸಲು ಇಂತಹ ಮಾದರಿಗಳಿಂದ ಕಲಿಯಬಹುದಾದ ಅಂಶಗಳ ಬಗ್ಗೆ ಸಿಎಂ ಆಸಕ್ತಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 5ನೇ ತರಗತಿಯ ಕ್ಯಾನ್ಸರ್ ಪೀಡಿತ ವಿದ್ಯಾರ್ಥಿನಿಗೆ ಜಪಾನ್ನಿಂದಲೇ ವಿಡಿಯೋ ಕರೆ ಮಾಡಿ ಧೈರ್ಯ ತುಂಬಿದ ಡಿಕೆ ಶಿವಕುಮಾರ್
ಒಟ್ಟಿನಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜಪಾನ್ ಪ್ರವಾಸ ಕೇವಲ ಕೈಗಾರಿಕಾ ಸಭೆಗಳಿಗೆ ಸೀಮಿತವಾಗಿಲ್ಲ. ಹೂಡಿಕೆ ಆಕರ್ಷಣೆ, ಆಧುನಿಕ ಸಾರ್ವಜನಿಕ ಸಾರಿಗೆ, ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ, ಕೈಗಾರಿಕಾ ವಿಸ್ತರಣೆ ಹಾಗೂ ನಗರ ಯೋಜನೆ ಸೇರಿದಂತೆ ಕರ್ನಾಟಕದ ಭವಿಷ್ಯದ ಅಭಿವೃದ್ಧಿಗೆ ಪೂರಕವಾದ ಹಲವು ಮಾದರಿಗಳನ್ನು ಅಧ್ಯಯನ ಮಾಡುವ ಪ್ರಯತ್ನವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ