
ಬೆಂಗಳೂರು, ನವೆಂಬರ್ 07: ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಭರ್ತಿ ಮಾಡುವಾಗ ಡೆನ್ಸಿಟಿ ನೋಡಿ ತೃಪ್ತಿಪಡುತ್ತಿದ್ದ ವಾಹನ ಸವಾರರಿಗೆ ಈಗ ಹೊಸ ಆತಂಕ ಶುರುವಾಗಿದೆ. ಪೆಟ್ರೋಲ್‌ನಲ್ಲಿ ನಿಗದಿಗಿಂತ ಹೆಚ್ಚು ಎಥೆನಾಲ್ ಮಿಶ್ರಣ ಮಾಡುತ್ತಿರುವ ಪರಿಣಾಮ ವಾಹನಗಳ ಎಂಜಿನ್‌ಗಳು ಹಾಳಾಗುತ್ತಿದ್ದು, ವಾಹನ ಸವಾರರು ಮತ್ತು ರಾಜ್ಯ ಸರ್ಕಾರ ಈ ವಿಚಾರವನ್ನು ತೀವ್ರ ಗಂಭೀರವಾಗಿ ಪರಿಗಣಿಸಿದೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅವರು ಈ ಕುರಿತು ಕೇಂದ್ರ ಸರ್ಕಾರದ ಮುಂದೆ ಪ್ರಮುಖ ಬೇಡಿಕೆಗಳನ್ನಿಟ್ಟಿದ್ದಾರೆ.
ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದ ಸಂಗ್ರಹಿಸಲಾದ 63 ಪೆಟ್ರೋಲ್ ಸ್ಯಾಂಪಲ್‌ಗಳನ್ನು ISO ಪ್ರಮಾಣೀಕೃತ ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪರೀಕ್ಷೆಯ ವರದಿಯಲ್ಲಿ ಪ್ರಮುಖ ತೈಲ ಕಂಪನಿಗಳ ಪೆಟ್ರೋಲ್‌ನಲ್ಲಿ ನಿಗದಿತ ಶೇ 20ಕ್ಕಿಂತಲೂ ಹೆಚ್ಚಿನ ಪ್ರಮಾಣದ ಎಥೆನಾಲ್ ಪತ್ತೆಯಾಗಿದೆ ಎಂದು ಸಚಿವರು ಆರೋಪಿಸಿದ್ದಾರೆ.
ಹೆಚ್ಚಿನ ಎಥೆನಾಲ್ ಮಿಶ್ರಣದಿಂದ ವಾಹನಗಳ ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಫ್ಯೂಯಲ್ ಪಂಪ್ ಹಾಗೂ ಎಂಜಿನ್‌ಗಳು ರಿಪೇರಿಗೆ ಬರುತ್ತಿವೆ. ವಾಹನಗಳ ದುರಸ್ತಿಗೆ ಪ್ರತಿ ಸವಾರರಿಗೆ 2,000 ರೂ. ದಿಂದ 3,000 ರೂ. ರವರೆಗೆ ಹೆಚ್ಚುವರಿ ಖರ್ಚು ತಗುಲುತ್ತಿದ್ದು, ಸಾರ್ವಜನಿಕರ ಮೇಲೆ ಆರ್ಥಿಕ ಹೊರೆ ಬೀಳುತ್ತಿದೆ. E20 ಇಂಧನ ಬಳಕೆಯಿಂದ ಉಂಟಾಗುವ ಎಂಜಿನ್ ಹಾನಿಗೆ ಇನ್ಶೂರೆನ್ಸ್ ಕಂಪನಿಗಳು ಅಥವಾ ವಾಹನ ತಯಾರಕರು ವಾರಂಟಿ ನೀಡುತ್ತಾರೆಯೇ ಎಂಬ ಪ್ರಶ್ನೆಯನ್ನು ಸಚಿವರು ಎತ್ತಿದ್ದಾರೆ.
ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಈ ಗಂಭೀರ ವಿಚಾರವು ಈಗ ರಾಜ್ಯ ಮತ್ತು ಕೇಂದ್ರ ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಗಿದ್ದು, ರಾಜ್ಯದ ವರದಿಗೆ ಕೇಂದ್ರ ಸರ್ಕಾರ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.
ವರದಿ: ಅನಿಲ್, ಟಿವಿ9 ಬೆಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ