
ಬೆಂಗಳೂರು, ಸೆಪ್ಟೆಂಬರ್ 16: ಭಾರತೀಯ ವಾಯುಪಡೆಯಲ್ಲಿ (ಐಎಎಫ್) ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಯುವಕನೊಬ್ಬನಿಂದ ಬರೋಬ್ಬರಿ ಲಕ್ಷಾಂತರ ಮೌಲ್ಯದ ಚಿನ್ನದ ಚೈನ್ ದೋಚಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಪಟ್ಟೇಗಾರ್ ಪಾಳ್ಯದ ನಿವಾಸಿ, 25 ವರ್ಷದ ಸುಜನ್ ಆರ್.ಕೆ. ವಂಚನೆಗೊಳಗಾದ ಯುವಕ. ತಾನು ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ‘ರಾವ್ ಪವಾರ್’ ಎಂಬ ನಕಲಿ ಆಫೀಸರ್ ಈ ಕೃತ್ಯ ಎಸಗಿದ್ದಾನೆ. ವಾಯುಪಡೆಯಲ್ಲಿ ಕೆಲಸ ಖಾಲಿ ಇದೆ ಎಂದು ಸಂಬಂಧಿಕರೊಬ್ಬರು ನೀಡಿದ ಮಾಹಿತಿಯಂತೆ ಸುಜನ್, ಆರೋಪಿ ರಾವ್ ಪವಾರ್‌ನನ್ನು ಸಂಪರ್ಕಿಸಿದ್ದರು.
ಸಂಕಷ್ಟಕ್ಕೆ ಸಿಲುಕಿದ ಯುವಕನನ್ನು ಶೆಟ್ಟಿಹಳ್ಳಿ ಕ್ರಾಸ್ ಹಾಗೂ ಗಂಗಮ್ಮನಗುಡಿ ಬಳಿಯ ಕೆನರಾ ಬ್ಯಾಂಕ್ ಹತ್ತಿರ ಕರೆಸಿಕೊಂಡಿದ್ದ ವಂಚಕ, ಉದ್ಯೋಗದ ಅರ್ಜಿಗಾಗಿ ಅಗತ್ಯ ದಾಖಲೆಗಳನ್ನು ಪಡೆದುಕೊಂಡಿದ್ದ. ತದನಂತರ, “ವಾಯುಪಡೆ ಕ್ಯಾಂಪಸ್ ಒಳಗೆ ಹೋಗುವಾಗ ಶರೀರದ ಮೇಲೆ ಯಾವುದೇ ಚಿನ್ನಾಭರಣ ಅಥವಾ ಲೋಹದ ವಸ್ತುವಿರಬಾರದು, ಅದನ್ನು ಬ್ಯಾಂಕ್ ಲಾಕರ್‌ನಲ್ಲಿ ಇಡಬೇಕು” ಎಂದು ನಂಬಿಸಿದ್ದ. ಸಂದರ್ಶನದ ನಂತರ ಚೈನ್ ವಾಪಸ್ ಪಡೆಯಬಹುದು ಎಂದು ನಂಬಿಸಿ, ಯುವಕನ ಕೊರಳಲ್ಲಿದ್ದ ಚಿನ್ನದ ಚೈನ್ ಅನ್ನು ಬಿಚ್ಚಿಸಿಕೊಂಡಿದ್ದ.
ಚೈನ್ ಪಡೆದ ನಂತರ, ಯುವಕನಿಗೆ ಆಧಾರ್ ಕಾರ್ಡ್‌ನ ಜೆರಾಕ್ಸ್ ಕಾಪಿ ತೆಗೆದುಕೊಂಡು ಬರುವಂತೆ ಹೇಳಿ ವಂಚಕ ಅಲ್ಲಿಂದ ಕ್ಷಣಾರ್ಧದಲ್ಲಿ ಕಾಲ್ತೆಗೆದುಕೊಂಡಿದ್ದ. ಜೆರಾಕ್ಸ್ ಪ್ರತಿಯೊಂದಿಗೆ ಹಿಂತಿರುಗಿದ ಯುವಕನಿಗೆ ವಂಚಕ ಸಿಗದೆ, ಆತನ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ತಾನು ವಂಚನೆಗೊಳಗಾಗಿರುವುದನ್ನು ಅರಿತ ಯುವಕ ಗಂಗಮ್ಮನಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 318ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ