ರಾಜ್ಯದ ಹಲವೆಡೆ ಹೆದ್ದಾರಿ ತಡೆದು ರೈತರ ಪ್ರತಿಭಟನೆ: ನಮಗೆ ಸರಕಾರ ಮೋಸ ಮಾಡುತ್ತಿದೆ, ನಮ್ಮ ಬೇಡಿಕೆ ಈಡೇರಿಸುತ್ತಿಲ್ಲ ಎಂದು ಆಕ್ರೋಶ
ಪ್ರತಿಭಟನೆ ವೇಳೆ ದ್ವಿಚಕ್ರ ವಾಹನ ಸವಾರ ರಸ್ತೆಯಲ್ಲಿ ಹೋಗಲು ಯತ್ನಿಸಿದ್ದು ಸವಾರ ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದಿದೆ.
ಬೆಂಗಳೂರು: ಪ್ರತಿ ಟನ್ ಕಬ್ಬಿಗೆ ₹5,500 ದರ ನಿಗದಿ ಮಾಡುವಂತೆ ಆಗ್ರಹಿಸಿ ರಾಜ್ಯದ ಹಲವೆಡೆ ರಾಷ್ಟ್ರೀಯ, ರಾಜ್ಯ ಹೆದ್ದಾರಿ ತಡೆದು ರೈತರು ಧರಣಿ ನಡೆಸುತ್ತಿದ್ದಾರೆ. ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಮೈಸೂರಿನ ಎಪಿಎಂಸಿ ಬಳಿ ರಿಂಗ್ ರೋಡ್ನಲ್ಲಿ ಕಬ್ಬು ಬೆಳೆಗಾರರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆ ತಡೆಯಿಂದಾಗಿ ಮೈಸೂರು-ನಂಜನಗೂಡು ರಸ್ತೆ ಬಂದ್ ಆಗಿದೆ.
ಹೆದ್ದಾರಿಯಲ್ಲಿ ಉರುಳು ಸೇವೆ ಪ್ರತಿಭಟನೆ
ಜೊತೆಗೆ ಹುಬ್ಬಳ್ಳಿ-ಧಾರವಾಡ, ಉತ್ತರ ಕನ್ನಡ ಜಿಲ್ಲೆ ಹಳಿಯಾಳಲ್ಲೂ ರಸ್ತೆ ತಡೆದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೆದ್ದಾರಿಯಲ್ಲಿ ಉರುಳು ಸೇವೆ ಮಾಡುವ ಮೂಲಕ ರೈತರು ಪ್ರತಿಭಟನೆ ನಡೆಸಿದ್ದಾರೆ. ಕಬ್ಬು ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಆಕ್ರೋಶ ಹೊರ ಹಾಕಿದ್ದಾರೆ. ಪ್ರತಿಭಟನೆಯಲ್ಲಿ ನೂರಾರು ರೈತರು ಭಾಗಿಯಾಗಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಹಲವೆಡೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ. ಹಾಗೂ ವಾಹನ ದಟ್ಟಣೆ ಆಗದಂತೆ ಪೊಲೀಸರು ಕ್ರಮವಹಿಸಿದ್ದಾರೆ.
ಇನ್ನು ಪ್ರತಿಭಟನೆ ವೇಳೆ ದ್ವಿಚಕ್ರ ವಾಹನ ಸವಾರ ರಸ್ತೆಯಲ್ಲಿ ಹೋಗಲು ಯತ್ನಿಸಿದ್ದು ಸವಾರ ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಸುಮಾರು ಹೊತ್ತು ಜಗಳದ ಬಳಿಕ ಸವಾರ ಅಲ್ಲಿಂದ ತೆರಳಿದ್ದು ದ್ವಿಚಕ್ರ ವಾಹನ ಸವಾರನನ್ನು ನಿಯಂತ್ರಿಸಲಿಲ್ಲ ಎಂದು ಪೊಲೀಸರ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ಇನ್ಸಪೆಕ್ಟರ್ ರೈತರ ನಡುವೆ ಮತ್ತೆ ಮಾತಿನ ಚಕಮಕಿ ಶುರುವಾಗಿ ನಮಗೆ ರಕ್ಷಣೆ ಕೊಡದ ಮೇಲೆ ಪೊಲೀಸರು ಯಾಕೆ ಅಂತಾ ವಾಗ್ದಾಳಿಗಳು ನಡೆದವು. ಇದನ್ನೂ ಓದಿ: ರಸ್ತೆಯಲ್ಲಿ ಗುಂಡಿಯಿದ್ರೆ ಬಿಬಿಎಂಪಿ ಇಂಜಿನಿಯರ್ ಗೆ ದಂಡ ಹಾಕಿ: ಸಾರ್ವಜನಿಕ ಬೇಡಿಕೆ
ನಮಗೆ ಸರಕಾರ ಮೋಸ ಮಾಡುತ್ತಿದೆ
ನಾವು ಇದುವರೆಗೂ ತಾಳ್ಮೆ ತರಗೆದುಕೊಂಡಿದ್ದೇವೆ. ಇನ್ನು ಮುಂದೆ ತಾಳ್ಮೆ ಕಳೆದುಕೊಂಡರೆ ಹೇಗೆ? ನಮ್ಮ ಬೇಡಿಕೆ ತಕ್ಷಣವೇ ಈಡೇರಿಸಿ ಎಂದು ಧಾರವಾಡದಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಕುಮಾರ್ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ನಮಗೆ ಸರಕಾರ ಮೋಸ ಮಾಡುತ್ತಿದೆ. ನಮ್ಮ ಬೇಡಿಕೆ ಈಡೇರಿಸುತ್ತಿಲ್ಲ. ತಿಂಗಳಿಂದ ಸತ್ಯಾಗ್ರಹ ಮಾಡುತ್ತಿದ್ದೇವೆ. ಸ್ಥಳೀಯ ಶಾಸಕರಿಂದ ಸಿಎಂ ವರೆಗೆ ಎಲ್ಲರನ್ನೂ ಭೇಟಿಯಾಗಿದ್ದೇವೆ. ಆದರೂ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ರೈತರಿಗೆ ಬೆಂಬಲ ಸೂಚಿಸಿದ ಬಬಲೇಶ್ವರ ಮಠದ ಸ್ವಾಮೀಜಿ
ದೀಪಾವಳಿಗೆ ಸರಕಾರ ಖುಷಿ ವಿಚಾರ ಹೇಳುತ್ತೆ ಅಂದುಕೊಂಡಿದ್ದೆವು. ಆದರೆ ಸರಕಾರದಿಂದ ಸ್ಪಂದನೆ ಸಿಗಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಹೋರಾಟ ಮುಂದುವರೆಸಬೇಕಿದೆ. ಇದುವರೆಗೂ ಗಾಂಧೀಜಿ ಸಿದ್ಧಾಂತದಂತೆ ಸತ್ಯಾಗ್ರಹ ನಡೆದಿದೆ. ಮುಂದೆ ರೈತರು ಯಾವ ರೀತಿ ಹೋರಾಟ ಮಾಡುತ್ತಾರೋ ಗೊತ್ತಿಲ್ಲ. ಚುನಾವಣೆ ಬಂದ್ರೆ ರೈತರು ಬೇಕು. ಅವರಿಗೆ ಅನ್ಯಾಯವಾದಾಗ ನಿಮಗೆ ಅದು ಕಾಣೋದಿಲ್ಲವೇ? ಎಂದು ಬಬಲೇಶ್ವರ ಮಠದ ಪೀಠಾಧಿಪತಿ ಪರಮಾತ್ಮ ಸ್ವಾಮೀಜಿ ಜನ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
Published On - 1:09 pm, Thu, 27 October 22