ಯಲಹಂಕದಲ್ಲಿ ಒತ್ತುವರಿ: ಇಷ್ಟು ದೊಡ್ಡ ಕಟ್ಟಡಗಳು ರಾತ್ರೋರಾತ್ರಿ ನಿರ್ಮಾಣವಾದವೇ? ಸರ್ಕಾರಕ್ಕೆ ಹೈಕೋರ್ಟ್ ತರಾಟೆ
Karnataka High Court: ಸರ್ಕಾರಕ್ಕೆ ತನ್ನ ಆಸ್ತಿಯ ಮೇಲೆಯೇ ನಿಯಂತ್ರಣವಿಲ್ಲವೇ? ಇತರ ಇಲಾಖೆಗಳಲ್ಲಿಯೂ ಇಂಥದ್ದೇ ಅರಾಜಕತೆ, ನಿರ್ಲಕ್ಷ್ಯ ಇದೆಯೇ ಎಂದು ಹೈಕೋರ್ಟ್ ಪ್ರಶ್ನಿಸಿದೆ.
ಬೆಂಗಳೂರು: ನಗರದ ಯಲಹಂಕ ಸುತ್ತಮುತ್ತಲ (Yelahanka Encroachment) ಕೋತಿಹೊಸಹಳ್ಳಿ, ಕೊಡಿಗೇಹಳ್ಳಿ ಪ್ರದೇಶಗಳಲ್ಲಿ ಸರ್ಕಾರಿ ಜಮೀನು ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ಹೈಕೋರ್ಟ್ (Karnataka High Court) ವಿಚಾರಣೆಗೆ ಕೈಗೆತ್ತಿಕೊಂಡಿದೆ. ಈ ವೇಳೆ ಸರ್ಕಾರ ಮತ್ತು ಬಿಬಿಎಂಪಿಗೆ ಸಾಕಷ್ಟು ಪ್ರಶ್ನೆಗಳನ್ನು ನ್ಯಾಯಾಲಯವು ಕೇಳಿದೆ. ಸರ್ಕಾರಿ ಜಮೀನಿನಲ್ಲಿ ಕಟ್ಟಡಗಳು ನಿರ್ಮಾಣವಾಗಿವೆ. ಇಷ್ಟು ದೊಡ್ಡ ಕಟ್ಟಡಗಳು ರಾತ್ರೋರಾತ್ರಿ ನಿರ್ಮಾಣವಾದವೇ? ನಿಮ್ಮ ಅಧಿಕಾರಿಗಳು ಏನು ಮಾಡುತ್ತಿದ್ದರು? ಕಚೇರಿಯಲ್ಲಿ ಕುಳಿತು ಮೂಕಪ್ರೇಕ್ಷಕರಾಗಿದ್ದರೇ? ಸರ್ಕಾರಿ ಭೂಮಿಯಲ್ಲಿ ಕಟ್ಟಡ ನಿರ್ಮಿಸುವಾಗ ಸುಮ್ಮನಿದ್ದಿದ್ದೇಕೆ? ಅನುಮತಿ ನೀಡುವಾಗ ದಾಖಲೆ ಪರಿಶೀಲಿಸುವುದಿಲ್ಲವೇ ಎಂದು ಹೈಕೋರ್ಟ್ ಸರ್ಕಾರ ಮತ್ತು ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಸರ್ಕಾರಕ್ಕೆ ತನ್ನ ಆಸ್ತಿಯ ಮೇಲೆಯೇ ನಿಯಂತ್ರಣವಿಲ್ಲವೇ? ಇತರ ಇಲಾಖೆಗಳಲ್ಲಿಯೂ ಇಂಥದ್ದೇ ಅರಾಜಕತೆ, ನಿರ್ಲಕ್ಷ್ಯ ಇದೆಯೇ? ಇಲಾಖೆಗಳ ನಡುವೆ ಪರಸ್ಪರ ಸಮನ್ವಯತೆ ಇಲ್ಲದಿರಲು ಕಾರಣವೇನು ಎಂದು ಸರ್ಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ (Chief Justice) ಪ್ರಸನ್ನ ಬಿ ವರಾಳೆ ತರಾಟೆಗೆ ತೆಗೆದುಕೊಂಡರು.
ಒತ್ತುವರಿಗೆ ಅವಕಾಶಕೊಟ್ಟ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಿ, ಮೂರು ವಾರಗಳಲ್ಲಿ ವರದಿ ನೀಡಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಹೈಕೋರ್ಟ್ ಸೂಚನೆ ನೀಡಿದೆ. ಸರ್ಕಾರಿ ಆಸ್ತಿಯ ಒತ್ತುವರಿ ಪ್ರಶ್ನಿಸಿ ಅಶ್ವತ್ಥ ನಾರಾಯಣಗೌಡ ಎನ್ನುವವರು ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಎನ್‌ಟಿಐ ಹೌಸಿಂಗ್ ಸೊಸೈಟಿ, ಕೆ.ಎನ್.ಚಕ್ರಪಾಣಿ ಸೇರಿದಂತೆ ಹಲವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು.
ಒತ್ತುವರಿ ತೆರವುಗೊಳಿಸದಿದ್ದರೆ ವೇತನಕ್ಕೆ ತಡೆ
ಬೆಂಗಳೂರು ಮಹಾನಗರದಲ್ಲಿ ಶೀಘ್ರ ರಾಜಕಾಲುವೆ ಒತ್ತುವರಿ ತೆರವುಗೊಳಿಸದಿದ್ದರೆ ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ ಸೂಕ್ತ ಆದೇಶ ಹೊರಡಿಸಲಾಗುವುದು ಕರ್ನಾಟಕ ಹೈಕೋರ್ಟ್ ಎಚ್ಚರಿಸಿತ್ತು. ರಸ್ತೆ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಅ 1ರಂದು ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠವು ರಾಜಕಾಲುವೆಗಳ ಒತ್ತುವರಿ ತೆರವು ಹಾಗೂ ರಸ್ತೆಗಳ ಗುಂಡಿ ಮುಚ್ಚುವ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ತಾಕೀತು ಮಾಡಿತು. ಒತ್ತುವರಿ ತೆರವು ವಿಚಾರದಲ್ಲಿ ಪ್ರಗತಿ ಕಂಡುಬರದಿದ್ದರೆ ಎಂಜಿನಿಯರ್‌ಗಳ ವೇತನ ತಡೆಹಿಡಿಯಲು ಆದೇಶಿಸಲಾಗುವುದು ಎಂದು ಎಚ್ಚರಿಸಿತ್ತು.
Published On - 2:18 pm, Thu, 27 October 22