ಸಿಎಂ ಅಭ್ಯರ್ಥಿಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಫೈಟ್ ವಿಚಾರ: ರಾಜ್ಯದಲ್ಲಿ ಮತ್ತೆ ನೂರಕ್ಕೆ ನೂರರಷ್ಟು ಬಿಜೆಪಿ ಅಧಿಕಾರಕ್ಕೆ ಬರಲಿದೆ: ಯಡಿಯೂರಪ್ಪ
ಕಾಂಗ್ರೆಸ್ನವರಿಗೆ ಒಂದು ಮಾತು ಹೇಳಲು ಇಚ್ಚೆ ಪಡುತ್ತೇನೆ. ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದ ರೀತಿಯಲ್ಲಿ ನಾನು ಮುಖ್ಯಮಂತ್ರಿ, ನೀನು ಮುಖ್ಯಮಂತ್ರಿ ಅಂತಾ ಬಡಿದಾಡುತ್ತಿದ್ದಾರೆ.

ಬೆಂಗಳೂರು: ಕಾಂಗ್ರೆಸ್ನ (Congress) ಕೆಲ ನಾಯಕರು ಸಿಎಂ ಕನಸು ಕಾಣುತ್ತಿದ್ದಾರೆ. ನಾನು ಸಿಎಂ ಆಗ್ಬೇಕು, ನಾನು ಸಿಎಂ ಆಗಬೇಕೆಂದು ಹೇಳುತ್ತಿದ್ದಾರೆ. ಕಾಂಗ್ರೆಸ್ನವರ ಕನಸು ನನಸು ಆಗುವುದಿಲ್ಲ ಎಂದು ನಗರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದರು. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ರಾಜ್ಯದಲ್ಲಿ ಮತ್ತೆ ನೂರಕ್ಕೆ ನೂರರಷ್ಟು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು. ಕೆ.ಆರ್. ಪೇಟೆ ಮತ್ತು ಸುತ್ತಮುತ್ತ ಪ್ರವಾಸ ಮಾಡಿಕೊಂಡು ಬರುತ್ತೇನೆ. ಕೆ.ಆರ್. ಪೇಟೆಯಲ್ಲಿ ಬಹಳ ಶ್ರಮ ಹಾಕಿ ವಿಜಯೇಂದ್ರನ ಪ್ರಯತ್ನದಿಂದ ನಮ್ಮ ಅಭ್ಯರ್ಥಿ ಗೆದ್ದಿದ್ದಾರೆ. ಈಗ ನಾರಾಯಣ ಗೌಡರು ಜಿಲ್ಲೆಯಲ್ಲಿ ಮೂರ್ನಾಲ್ಕು ಕ್ಷೇತ್ರ ಗೆಲ್ಲುವ ವಾತಾವರಣ ಸೃಷ್ಟಿ ಮಾಡಿದ್ದಾರೆ. ಹೀಗಾಗಿ ಬಹಳ ದೊಡ್ಡ ಪ್ರಮಾಣದಲ್ಲಿ ಇಂದು ಸಭೆ ಆಗುತ್ತಿದೆ.
ಕಾಂಗ್ರೆಸ್ನವರಿಗೆ ಒಂದು ಮಾತು ಹೇಳಲು ಇಚ್ಚೆ ಪಡುತ್ತೇನೆ. ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದ ರೀತಿಯಲ್ಲಿ ನಾನು ಮುಖ್ಯಮಂತ್ರಿ, ನೀನು ಮುಖ್ಯಮಂತ್ರಿ ಅಂತಾ ಬಡಿದಾಡುತ್ತಿದ್ದಾರೆ. ಯಾವ ಕಾರಣಕ್ಕೂ ಅವರು ಮುಖ್ಯಮಂತ್ರಿ ಆಗಲು ನಾವು ಬಿಡುವುದಿಲ್ಲ. ಬಿಜೆಪಿಯವರೇ ರಾಜ್ಯದ ಮುಖ್ಯಮಂತ್ರಿಯಾಗೋದು. ನೂರಕ್ಕೆ ನೂರು ಬಹುಮತದಿಂದ ಮುಂದಿನ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.




