ಸಿನಿಮಾ ಕತೆಯನ್ನೂ ಮೀರಿಸುವಂತಿದೆ ಈ ರಿಯಲ್ ಸ್ಟೋರಿ: ಇನ್ನೊಬ್ಬನ ಹೆಸರಲ್ಲಿ 40 ವರ್ಷ ಬೆಸ್ಕಾಂ ಕೆಲಸ ಮಾಡಿದ ಕಿಲಾಡಿ!

ಇನ್ನೊಬ್ಬನ ಪ್ರಮಾಣಪತ್ರ ಬಳಸಿ 40 ವರ್ಷಗಳ ಕಾಲ ‘ಬೆಸ್ಕಾಂ’ ಉದ್ಯೋಗ ಅನುಭವಿಸಿದ ಕಿಲಾಡಿಯ ಕಥೆ ಬೆಂಗಳೂರಿನಲ್ಲಿ ಬಟಾಬಯಲಾಗಿದೆ. ನಿವೃತ್ತಿ ಬಳಿಕ ಹಣದ ಹಂಚಿಕೆಯ ಜಗಳದಲ್ಲಿ ಅಸಲಿ ಮತ್ತು ನಕಲಿ ಇಬ್ಬರೂ ಈಗ ಪೊಲೀಸರ ಅತಿಥಿಗಳಾಗುವ ಮುನ್ಸೂಚನೆ ಸಿಕ್ಕಿದೆ. ತ್ರಿ ಇಡಿಯಟ್ಸ್, ತೆಲುಗಿನ ಅತಡು, ಕನ್ನಡದ ಉಂಡೂ ಹೋದ ಕೊಂಡೂ ಹೋದ ಸಿನಿಮಾವನ್ನೂ ಮೀರಿಸುವ ರಿಯಲ್ ಕಹಾನಿಯ ವಿವರ ಇಲ್ಲಿದೆ.

ಸಿನಿಮಾ ಕತೆಯನ್ನೂ ಮೀರಿಸುವಂತಿದೆ ಈ ರಿಯಲ್ ಸ್ಟೋರಿ: ಇನ್ನೊಬ್ಬನ ಹೆಸರಲ್ಲಿ 40 ವರ್ಷ ಬೆಸ್ಕಾಂ ಕೆಲಸ ಮಾಡಿದ ಕಿಲಾಡಿ!
ಸಾಂದರ್ಭಿಕ ಚಿತ್ರ (ಎಐ)
Image Credit source: MediaForge AI

Updated on: May 18, 2026 | 7:00 AM

ಬೆಂಗಳೂರು, ಮೇ 16: ಒಬ್ಬನ ಐಡೆಂಟಿಟಿಯನ್ನು ಮತ್ತೊಬ್ಬ ಬಳಸಿಕೊಂಡ ಕೆಲವು ಕತೆಗಳು ಸಿನಿಮಾ ಆಗಿವೆ. ತೆಲುಗಿನ ‘ಅತಡು’ ಸಿನಿಮಾದಲ್ಲಿ ನಾಯಕ ಮಹೇಶ್ ಬಾಬು ಪೊಲೀಸರಿಂದ ಪಾರಾಗಲು, ವರ್ಷಗಳ ಬಳಿಕ ಮನೆಗೆ ಮರಳುತ್ತಿದ್ದ ವ್ಯಕ್ತಿಯೊಬ್ಬನ ಐಡೆಂಟಿಟಿಯನ್ನು ಬಳಸಿಕೊಂಡು ಕುಟುಂಬ ಒಂದನ್ನು ಸೇರಿಕೊಳ್ಳುತ್ತಾನೆ. ಅದೇ ‘ತ್ರಿ ಇಡಿಯಟ್ಸ್’ನಲ್ಲಿ ಆಮಿರ್ ಖಾನ್ ತನ್ನ ಮಾಲೀಕನ ಮಗನ ಹೆಸರು, ಗುರುತು ಬಳಸಿಕೊಂಡು ಎಂಜಿನಿಯರಿಂಗ್ ಕಾಲೇಜು ಸೇರುತ್ತಾರೆ. ಇದೀಗ ಇಂಥದ್ದೇ ಪ್ರಕರಣವೊಂದು ಬೆಂಗಳೂರಿನಲ್ಲಿ (Bengaluru) ರಿಯಲ್ ಆಗಿ ನಡೆದಿದ್ದು, ಸುಮಾರು 40 ವರ್ಷಗಳ ನಂತರ ಬೆಳಕಿಗೆ ಬಂದಿದೆ. ಈ ಅಪ್ಪಟ ಸಿನಿಮಾ ಶೈಲಿಯ ಮಹಾ ವಂಚನೆಯ ಪ್ರಕರಣ ಸದ್ಯ ರಾಜಾಜಿನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ತನಿಖೆ ನಡೆಯುತ್ತಿದೆ.

ಫ್ಲ್ಯಾಶ್‌ಬ್ಯಾಕ್: ಬಿದ್ದ ಪ್ರಮಾಣಪತ್ರ, ಬದಲಾದ ವಿಧಿಬರಹ!

ಈ ಅಸಲಿ ಕಥೆ ಶುರುವಾಗುವುದು 1982 ರಲ್ಲಿ. ಮಂಡ್ಯ ಜಿಲ್ಲೆ ಮಳವಳ್ಳಿಯ ಎಂ. ರಾಚಯ್ಯ ಎಂಬ ಯುವಕ ಶಿವಮೊಗ್ಗದ ಕರ್ನಾಟಕ ವಿದ್ಯುತ್ ಮಂಡಳಿಯ ಗ್ಯಾಂಗ್‌ಮನ್ ಹುದ್ದೆಯ ಇಂಟರ್‌ವ್ಯೂಗೆ ಹೋಗಿರುತ್ತಾರೆ. ಆದರೆ ಕಾರಣಾಂತರಗಳಿಂದ ಅಂದು ಸಂದರ್ಶನ ರದ್ದಾಗುತ್ತದೆ. ನಿರಾಸೆಯಿಂದ ವಾಪಸ್ ಹೋಗುವಾಗ ರಾಚಯ್ಯ ತಮ್ಮ ಮಾರ್ಕ್ಸ್‌ಕಾರ್ಡ್, ಪ್ರಮಾಣಪತ್ರವನ್ನು ಅಲ್ಲೇ ಬೀಳಿಸಿಕೊಂಡು ಹೋಗಿರುತ್ತಾರೆ. ಸಿನಿಮಾ ಟ್ವಿಸ್ಟ್ ಅಂದರೆ, ಅದೇ ಸಂದರ್ಶನಕ್ಕೆ ಬಂದಿದ್ದ ಹಾಸನ ಮೂಲದ ಬೊಮ್ಮೇಗೌಡನ ಕೈಗೆ ಈ ದಾಖಲೆ ಸಿಗುತ್ತದೆ. ಅಷ್ಟೇ, ಬೊಮ್ಮೇಗೌಡ ತಾನೇ ‘ರಾಚಯ್ಯ’ ಎಂದು ಸೋಗು ಹಾಕಿ, ಆ ನಕಲಿ ಐಡೆಂಟಿಟಿ ಮೂಲಕವೇ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳುತ್ತಾನೆ!

ಸಂಬಳ ಎಣಿಸಿ, ಕೋರ್ಟ್‌ನಲ್ಲೇ ಟ್ವಿಸ್ಟ್ ಕೊಟ್ಟ ಅಸಾಮಿ!

ಅಸಲಿ ರಾಚಯ್ಯ ಎಲ್ಲೋ ಕೂಲಿ ನಾಲಿ ಮಾಡುತ್ತಿದ್ದರೆ, ಇತ್ತ ಬೊಮ್ಮೇಗೌಡ ಮಾತ್ರ ‘ರಾಚಯ್ಯ’ನ ಹೆಸರಲ್ಲೇ ಬೆಸ್ಕಾಂನಲ್ಲಿ ಹಂತ ಹಂತವಾಗಿ ಪ್ರಮೋಷನ್ ಪಡೆಯುತ್ತಾ ಸರ್ಕಾರಿ ಸಂಬಳ ಎಣಿಸುತ್ತಾನೆ. ಕತೆಗೆ ಮತ್ತೊಂದು ರೋಚಕ ತಿರುವು ಸಿಗುವುದು 2003 ರಲ್ಲಿ. ಇಷ್ಟು ವರ್ಷ ರಾಚಯ್ಯನಾಗಿ ಬದುಕಿದ ಬೊಮ್ಮೇಗೌಡ, ಕೋರ್ಟ್‌ನಿಂದ ಅಫಿಡವಿಟ್ ತಂದು ಅಧಿಕೃತವಾಗಿ ತನ್ನ ಹೆಸರನ್ನು ‘ರಾಚೇಗೌಡ’ ಎಂದೇ ಬದಲಿಸಿಕೊಳ್ಳುತ್ತಾನೆ! ಇಲಾಖೆಯ ಕಣ್ಣಿಗೆ ಮಣ್ಣೆರಚಿ ಹತ್ತಾರು ವರ್ಷಗಳ ಕಾಲ ರಹಸ್ಯವನ್ನು ಕಾಪಾಡಿಕೊಳ್ಳುತ್ತಾನೆ.

ಬ್ಲ್ಯಾಕ್‌ಮೇಲ್, ರಾಜಿ ಸಂಧಾನ ಮತ್ತು ಕ್ಲೈಮ್ಯಾಕ್ಸ್ ಪ್ಲಾಪ್

ಸುಮಾರು 37 ವರ್ಷಗಳ ಬಳಿಕ, ಅಂದರೆ 2019 ರಲ್ಲಿ ಅಸಲಿ ರಾಚಯ್ಯನಿಗೆ ತನ್ನ ಹೆಸರಲ್ಲಿ ಬೊಮ್ಮೇಗೌಡ ಬೆಸ್ಕಾಂನಲ್ಲಿ ಹಿರಿಯ ಶ್ರೇಣಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಕಹಿ ಸತ್ಯ ಅದ್ಹೇಗೋ ಗೊತ್ತಾಗುತ್ತದೆ. ಜೈಲಿಗೆ ಕಳುಹಿಸುವುದಾಗಿ ಹೆದರಿಸಿದಾಗ ಕಂಗಾಲಾದ ಬೊಮ್ಮೇಗೌಡ, ವರ್ಷಕ್ಕೆ 2 ರಿಂದ 3 ಲಕ್ಷ ರೂ. ಕೊಡುವುದಾಗಿ ರಾಜಿ ಮಾಡಿಕೊಳ್ಳುತ್ತಾನೆ. 2022 ರಲ್ಲಿ ನಿವೃತ್ತಿಯಾದಾಗ ಬಂದ ಸೆಟಲ್‌ಮೆಂಟ್ ಹಣದಲ್ಲಿ ಭರ್ಜರಿ 10 ಲಕ್ಷ ರೂಪಾಯಿಯನ್ನು ನಿವೃತ್ತ ಎಂಜಿನಿಯರ್ ಸುಭಾಷ್ ಎಂಬುವವರ ಮಧ್ಯಸ್ಥಿಕೆಯಲ್ಲಿ ಅಸಲಿ ರಾಚಯ್ಯನಿಗೆ ತಲುಪಿಸುತ್ತಾನೆ.

ಆದರೆ, ದುರಾಶೆಯೇ ಈ ಇಡೀ ಅಸಲಿ ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ಉಲ್ಟಾ ಮಾಡಿದೆ. ಹತ್ತು ಲಕ್ಷ ರೂಪಾಯಿ ಜೇಬಿಗೆ ಇಳಿಸಿದ ಮೇಲೂ ಅಸಲಿ ರಾಚಯ್ಯ, ಬೊಮ್ಮೇಗೌಡನ ಪೆನ್ಷನ್‌ನಲ್ಲೂ ಅರ್ಧ ಪಾಲು ಬೇಕು ಎಂದು ಪಟ್ಟು ಹಿಡಿಯುತ್ತಾನೆ. ಇದಕ್ಕೆ ಬೊಮ್ಮೇಗೌಡ ಒಪ್ಪದಿದ್ದಾಗ, ಸಿಟ್ಟಿಗೆದ್ದ ರಾಚಯ್ಯ ಬೆಸ್ಕಾಂ ವಿಚಕ್ಷಣಾ ದಳಕ್ಕೆ ದೂರು ನೀಡುತ್ತಾನೆ. ಸದ್ಯ ತನಿಖೆಯಲ್ಲಿ ವಂಚನೆ ಸಾಬೀತಾಗಿದ್ದು, ರಾಜಾಜಿನಗರ ಪೊಲೀಸರು ಬೊಮ್ಮೇಗೌಡ, ರಾಚಯ್ಯ ಹಾಗೂ ಮಧ್ಯಸ್ಥಿಕೆ ವಹಿಸಿದ್ದ ಸುಭಾಷ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ದಾಖಲೆಗಳ ಕ್ರೋಢೀಕರಣ ನಡೆಸುತ್ತಿದ್ದಾರೆ. 40 ವರ್ಷಗಳ ಕಾಲ ನಡೆದ ಈ ಹೈಟೆಕ್ ವಂಚನೆಯ ಆಟ ಕೊನೆಗೂ ಜೈಲಿನ ಕಂಬಿ ಹಿಂದೆ ಮುಕ್ತಾಯವಾಗುವ ಹಂತ ತಲುಪಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:50 am, Sat, 16 May 26

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us