ಬೆಂಗಳೂರಿನಲ್ಲಿ ಅಗ್ನಿ ಅವಘಡ: 20ಕ್ಕೂ ಹೆಚ್ಚು ಶೆಡ್‌ಗಳು ಬೆಂಕಿಗಾಹುತಿ, ತಪ್ಪಿದ ದುರಂತ
ಬೆಂಗಳೂರಿನ ವೀರಣ್ಣಪಾಳ್ಯದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಆಟಿಕೆ ಫ್ಯಾಕ್ಟರಿಯ ಕಾರ್ಮಿಕರು ವಾಸಿಸುತ್ತಿದ್ದ 50ಕ್ಕೂ ಹೆಚ್ಚು ಶೆಡ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡು 20ಕ್ಕೂ ಹೆಚ್ಚು ಶೆಡ್‌ಗಳು ಸಂಪೂರ್ಣವಾಗಿ ನಾಶವಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಂಗಳೂರು, ಏಪ್ರಿಲ್ 13: ಆಕಸ್ಮಿಕವಾಗಿ ಅಗ್ನಿ ಅವಘಡ (Fire Accident) ಸಂಭವಿಸಿ ಕೂಲಿ ಕಾರ್ಮಿಕರು ವಾಸವಿದ್ದ 20ಕ್ಕೂ ಹೆಚ್ಚು ಶೆಡ್‌ಗಳು (Sheds) ಬೆಂಕಿಗಾಹುತಿ ಆಗಿರುವಂತಹ ಘಟನೆ ನಗರದ ವೀರಣ್ಣಪಾಳ್ಯ ಮುಖ್ಯ ರಸ್ತೆಯ ಬಳಿ ನಡೆದಿದೆ. ಬೆಂಕಿ ಅವಘಡದಿಂದ ಆಟಿಕೆ ಫ್ಯಾಕ್ಟರಿಯ ಕಾರ್ಮಿಕರಿಗಾಗಿ ನಿರ್ಮಿಸಲಾಗಿದ್ದ 50 ಪೈಕಿ 20 ಶೆಡ್‌ಗಳು ಬೆಂಕಿಗಾಹುತಿ ಆಗಿವೆ. ಶೆಡ್ನಲ್ಲಿದ್ದ ಸಾಮಗ್ರಿಗಳು ಸಂಪೂರ್ಣ ಸುಟ್ಟುಹೋಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆಟಿಕೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಜನರಿಗಾಗಿ ವೀರನಪಾಳ್ಯ ಮುಖ್ಯ ರಸ್ತೆಯ ಖಾಸಗಿ ಶಾಲೆ ಪಕ್ಕದಲ್ಲಿದ್ದ ಶೆಡ್ಗಳನ್ನು ನಿರ್ಮಿಸಲಾಗಿದೆ. ಮೊದಲಿಗೆ ಒಂದು ಶೆಡ್ನಲ್ಲಿ ಬೆಂಕಿ ಕಾಣಿಸಿಕೊಂಡು ಬಳಿಕ ಇತರೆ ಶೆಡ್ಗಳಿಗೂ ಹಬ್ಬಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಜನರು ಹೊರಗೆ ಓಡಿ ಬಂದಿದ್ದಾರೆ. ಸದ್ಯ ಬೆಂಕಿ ಅವಘಡದಿಂದ ರಾಯಚೂರು ಮೂಲದ ಕೂಲಿ ಕಾರ್ಮಿಕರ ಜೀವನ ಬೀದಿಗೆ ಬಂದಿದೆ.
ಇದನ್ನೂ ಓದಿ: ಬೆಂಗಳೂರು ಕರಗ ಶಕ್ತ್ಯೋತ್ಸವ ವೇಳೆ ಗಲಾಟೆ: ಯುವಕರಿಗೆ ಥಳಿತ
ಅನೇಕ ವರ್ಷಗಳಿಂದ ಮಕ್ಕಳು, ಮಹಿಳೆಯರು ಚಿಕ್ಕ ಚಿಕ್ಕ ಶೆಡ್‌ಗಳಲ್ಲಿ 100ಕ್ಕೂ ಹೆಚ್ಚು ಜನರು ಇಲ್ಲೇ ವಾಸವಿದ್ದರು. ಬೆಂಕಿಯ ಜ್ವಾಲೆಗೆ ಶೆಡ್‌ಗಳು ಬೆಂಕಿಗಾಹುತಿ ಹಿನ್ನಲೆ ರಾತ್ರಿಯಿಡಿ ದೇಗುಲದ ಅಂಗಳದಲ್ಲಿ ಮಲಗಿದ್ದಾರೆ.
ಇತ್ತ ಬೆಳಗ್ಗೆ ಜಾಗದ ಮಾಲೀಕ ಸ್ಥಳಕ್ಕೆ ಬಂದು ಇತರೆ ಶಡ್ಗಳಲ್ಲಿರುವ ಜನರಿಗೆ ಆದಷ್ಟು ಬೇಗ ಎಲ್ಲರೂ ಮನೆ ಖಾಲಿ ಮಾಡಲು ಸೂಚಿಸಿದ್ದು, ಮಾಲೀಕನ ಮಾತು ಕೇಳಿ ಬಡ ಜನರು ತಬ್ಬಿಬ್ಬಾಗಿದ್ದಾರೆ. ಇದ್ದಕ್ಕಿದ್ದಂತೆ ಹೋಗಿ ಅಂದರೆ ಎಲ್ಲಿಗೆ ಹೋಗೋದು. ಮನೆಯಲ್ಲಿದ್ದ ಅಲ್ಪಸ್ವಲ್ಪ ಹಣ, ಸಾಮಾಗ್ರಿ ಕೂಡ ಬೆಂಕಿಗಾಹುತಿ ಆಗಿದೆ. ಸರ್ಕಾರ ಏನಾದರೂ ಸಹಾಯ ಮಾಡಬೇಕು ಅಂತ ಕಣ್ಣೀರು ಹಾಕಿದ್ದಾರೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಅವಘಡ: ನಾಲ್ಕು ಅಂಗಡಿಗಳು ಸುಟ್ಟು ಭಸ್ಮ
ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಅವಘಡ ಸಂಭವಿಸಿದ್ದು, ನಾಲ್ಕು ಅಂಗಡಿಗಳು ಸುಟ್ಟು ಕರಕಲಾಗಿರುವಂತಹ ಘಟನೆ ಕಲಬುರಗಿಯ ರಾಮ ಮಂದಿರ ಸರ್ಕಲ್ ಬಳಿ ನಡೆದಿದೆ. ಎಲೆಕ್ಟ್ರಿಕ್ ಶಾಪ್, ಗಾಣದ ಎಣ್ಣೆ ತಯಾರಿಕ ಘಟಕ, ಹಾರ್ಡ್ವೇರ್ ಶಾಪ್ ಮತ್ತು ಒಂದು ಟೀ ಸ್ಟಾಲ್ ಸುಟ್ಟು ಭಸ್ಮವಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಇದನ್ನೂ ಓದಿ: ಐತಿಹಾಸಿಕ ಬೆಂಗಳೂರು ಕರಗಕ್ಕೆ ಚಾಲನೆ: ಗೋವಿಂದ, ಗೋವಿಂದ ಜೈಕಾರ
ಸ್ಥಳಕ್ಕೆ ಬಂದ ಎರಡು ಅಗ್ನಿ ಶಾಮಕ ವಾಹನ ಸಿಬ್ಬಂದಿಗಳು ಮೂರು ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಬೆಂಕಿ ನಂದಿಸುವಲ್ಲಿ ಯಶಸ್ವಿ ಆದರು. ಅಗ್ನಿ ಅವಘಡದಿಂದ ಶಾಪ್ಗಳೆಲ್ಲಾ ಸುಟ್ಟು ಕರಕಲಾಗಿದ್ದು, ಮಾಲೀಕರು ಕಂಗಾಲಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:29 am, Sun, 13 April 25