ಉಕ್ರೇನ್​ನಲ್ಲಿ ವಿದ್ಯಾಭ್ಯಾಸ ಮಾಡಿದ ಭಾರತೀಯ ವಿದ್ಯಾರ್ಥಿಗಳ ಭವಿಷ್ಯವೇನು? ರಾಜೀವ್ ಗಾಂಧಿ ಆರೋಗ್ಯ ವಿವಿ ವಿಶ್ರಾಂತ ಕುಲಪತಿ ನೀಡಿದ ಸಲಹೆ ಇಲ್ಲಿದೆ

ಉಕ್ರೇನ್​ನಲ್ಲಿ ವಿದ್ಯಾಭ್ಯಾಸ ಮಾಡಿದ ಭಾರತೀಯ ವಿದ್ಯಾರ್ಥಿಗಳ ಭವಿಷ್ಯವೇನು? ರಾಜೀವ್ ಗಾಂಧಿ ಆರೋಗ್ಯ ವಿವಿ ವಿಶ್ರಾಂತ ಕುಲಪತಿ ನೀಡಿದ ಸಲಹೆ ಇಲ್ಲಿದೆ
ರಾಜೀವ್ ಗಾಂಧಿ ಆರೋಗ್ಯ ವಿವಿ ಮಾಜಿ ಕುಲಪತಿ ಪ್ರೊ.ಎಸ್ ಸಚ್ಚಿದಾನಂದ

ಭಾರತೀಯ ಮೆಡಿಕಲ್ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಸಲಹೆ ನೀಡಿದ ರಾಜೀವ್ ಗಾಂಧಿ ಆರೋಗ್ಯ ವಿವಿ ಮಾಜಿ ಕುಲಪತಿ ಪ್ರೊ.ಎಸ್ ಸಚ್ಚಿದಾನಂದ, ಕೊರೊನಾ ರೀತಿ ಯುದ್ಧ ಪರಿಣಾಮ ಎದುರಿಸಿದ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ನೀಡಬೇಕು ಎಂದರು.

TV9kannada Web Team

| Edited By: sandhya thejappa

Mar 06, 2022 | 12:36 PM

ಬೆಂಗಳೂರು: ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ (War) ಮುಂದುವರಿದಿದೆ. ವಿದ್ಯಾಭ್ಯಾಸಕ್ಕೆಂದು ತೆರಳಿದ್ದ ಭಾರತೀಯ ವಿದ್ಯಾರ್ಥಿಗಳು ದೇಶಕ್ಕೆ ಮರಳುತ್ತಿದ್ದಾರೆ. ಊಟವಿಲ್ಲದೆ, ವಸತಿ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ವೈದ್ಯರಾಗಬೇಕೆಂಬ ಕನಸು ಹೊತ್ತು ಉಕ್ರೇನ್​ಗೆ ಎಂಬಿಬಿಎಸ್ (MBBS) ಮುಗಿಸಲು ಹೋಗಿದ್ದ ವಿದ್ಯಾರ್ಥಿಗಳಿಗೆ ಯುದ್ಧ ಶಾಕ್ ನೀಡಿದೆ. ಉಕ್ರೇನ್​ನಲ್ಲಿ ವಿದ್ಯಾಭ್ಯಾಸ ಮಾಡಿದ ಭಾರತೀಯ ಮೆಡಿಕಲ್ ವಿದ್ಯಾರ್ಥಿಗಳ ಭವಿಷ್ಯವೇನು? ಎಂಬ ಪ್ರಶ್ನೆ ಸದ್ಯ ಕಾಡುತ್ತಿದೆ.

ಭಾರತೀಯ ಮೆಡಿಕಲ್ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಸಲಹೆ ನೀಡಿದ ರಾಜೀವ್ ಗಾಂಧಿ ಆರೋಗ್ಯ ವಿವಿ ಮಾಜಿ ಕುಲಪತಿ ಪ್ರೊ.ಎಸ್ ಸಚ್ಚಿದಾನಂದ, ಕೊರೊನಾ ರೀತಿ ಯುದ್ಧ ಪರಿಣಾಮ ಎದುರಿಸಿದ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ನೀಡಬೇಕು. ಕೊರೊನಾ ವೇಳೆ ಖಾಸಗಿ ಮೆಡಿಕಲ್ ಕಾಲೇಜು, ಆಸ್ಪತ್ರೆ ಬೆಡ್ ಕಾಯ್ದಿರಿಸಿತ್ತು. ಇದೇ ರೀತಿ ಎಂಬಿಬಿಎಸ್ ಸೀಟು ಹೆಚ್ಚಳ ಮಾಡಬೇಕಿದೆ. ಪ್ರತಿ ಕಾಲೇಜಿಗೆ 10 ರಿಂದ 20 ಮೆಡಿಕಲ್ ಸೀಟು ಈ ವರ್ಷದಿಂದಲೇ ಹೆಚ್ಚಳ ಮಾಡಬೇಕು. ಸರ್ಕಾರಿ ಕೋಟಾ, ಖಾಸಗಿ ಖಾಲೇಜುಗಳಲ್ಲಿ ಸರ್ಕಾರಿ ಕೋಟಾ ಮತ್ತು ಖಾಸಗಿ ಕೋಟಾದಡಿ ಸೀಟು ನೀಡಬಹುದು. ಉಕ್ರೇನ್ ವೈದ್ಯಕೀಯ ವಿದ್ಯಾರ್ಥಿಗಳ ಸರ್ಟಿಫಿಕೇಟ್, ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ನೋಂದಣಿ ಮಾಡಬೇಕು. ನೀಟ್ ರೀತಿ ಕೌನ್ಸಲಿಂಗ್ ಮೂಲಕ ಸೀಟು ಹಂಚಿಕೆ ಮಾಡಬಹುದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ, ನ್ಯಾಷನಲ್‌ ಮೆಡಿಕಲ್ ಕೌನ್ಸಲ್ ಜೊತೆ ಈಗಾಗಲೇ ಯೋಜನೆ ರೂಪಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಈ ಕುರಿತು ಮಹತ್ವದ ನಿರ್ಧಾರ ಮಾಡುತ್ತಾರೆ. ಕೇಂದ್ರ, ರಾಜ್ಯ ಸರ್ಕಾರ ಖಡಕ್ ನಿರ್ಧಾರ ಮಾಡಿ, ಎಲ್ಲ ಮೆಡಿಕಲ್‌ ಕಾಲೇಜು ಸಹಕಾರ ನೀಡಿದರೆ, ಯಾವುದೇ ತೊಂದರೆಯಾಗದಂತೆ ಭಾರತದಲ್ಲಿಯೇ 20 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಬಹುದು ಅಂತ ವಿಶ್ರಾಂತ ಕುಲಪತಿ ಪ್ರೊ.ಎಸ್ ಸಚ್ಚಿದಾನಂದ‌ ಹೇಳಿದರು.

ಉಕ್ರೇನ್​ನಲ್ಲಿ ಭಾರತದ 20 ಸಾವಿರಕ್ಕೂ ಹೆಚ್ಚು ಎಂಬಿಬಿಎಸ್ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರಿಗೆ ಭಾರತದಲ್ಲಿ ವೈದ್ಯಕೀಯ ಸೀಟು ಕೊಡಿಸಲು ವಿಶೇಷ ಯೋಜನೆ ರೂಪಿಸಬೇಕಿದೆ. ಭಾರತದಲ್ಲಿರುವ 520 ಮೆಡಿಕಲ್ ಕಾಲೇಜಿಗೆ ಹೆಚ್ಚುವರಿ ಸೀಟು ಹೆಚ್ಚಳ ಮಾಡಬೇಕಿದೆ. ಭಾರತದಲ್ಲಿ ಒಟ್ಟು 520 ಮೆಡಿಕಲ್ ಕಾಲೇಜುಗಳಿವೆ. ಇದರಲ್ಲಿ 280 ಸರ್ಕಾರಿ ಸ್ವಾಯತ್ತ ಸಂಸ್ಥೆಯ ಮೆಡಿಕಲ್‌ ಕಾಲೇಜು. 240 ಖಾಸಗಿ ಮೆಡಿಕಲ್ ಕಾಲೇಜುಗಳಿವೆ. ಕರ್ನಾಟಕದಲ್ಲಿ 60 ಮೆಡಿಕಲ್‌ ಕಾಲೇಜಿದ್ದರೆ, 18 ಸರ್ಕಾರಿ ಸ್ವಾಯತ್ತ ಮೆಡಿಕಲ್‌ ಕಾಲೇಜುಗಳಿವೆ ಎಂದು ಸಚ್ಚಿದಾನಂದ‌ ತಿಳಿಸಿದರು.

ಕೆಲ ವಿದ್ಯಾರ್ಥಿಗಳು ನಾಪತ್ತೆ: 7 ಕನ್ನಡಿಗರು ಉಕ್ರೇನ್‌ನ ಸುಮಿಯಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಖಾರ್ಕಿವ್‌ನಲ್ಲಿ ಕೆಲ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದು, ಕರ್ನಾಟಕದ ಕೆಲ ವಿದ್ಯಾರ್ಥಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಕೆಲ ಕನ್ನಡಿಗರು ಖಾರ್ಕಿವ್ ಖಾಲಿ ಮಾಡಿದ ಮಾಹಿತಿ ಇಲ್ಲ. ಕನ್ನಡಿಗರು ಉಕ್ರೇನ್ ಗಡಿಗೆ ಬಂದಿರುವ ಮಾಹಿತಿ ಇಲ್ಲ. ಆರಂಭದಲ್ಲಿ ರಾಯಭಾರ ಕಚೇರಿ ಸಂಪರ್ಕದಲ್ಲಿದ್ದರು. ಆದರೆ ಈಗ ಸಂಪರ್ಕಕ್ಕೆ ಸಿಗದಿರುವ ಹಿನ್ನೆಲೆ ಆತಂಕಕ್ಕೆ ಕಾರಣವಾಗಿದೆ.

ಕನ್ನಡಿಗರ ಅಳಲು: ಉಕ್ರೇನ್‌ನ ಸುಮಿಯಲ್ಲಿ ಸಿಲುಕಿರುವ ಕನ್ನಡಿಗರು ಕಣ್ಣೀರು ಹಾಕುತ್ತಿದ್ದಾರೆ. ಬೆಂಗಳೂರಿನ ಬಸವನಗುಡಿಯ ನಿವಾಸಿಗಳು ಪರದಾಡುತ್ತಿದ್ದಾರೆ. ಕುಡಿಯುವುದಕ್ಕೆ ನೀರು ಕೂಡ ಸಿಗುತ್ತಿಲ್ಲ. ತಿನ್ನುವುದಕ್ಕೆ ಅಕ್ಕಿ ಬಿಟ್ಟರೆ ನಮ್ಮ ಬಳಿ ಬೇರೆ ಏನೂ ಇಲ್ಲ. ನೀರು ಸಿಗುತ್ತಿದ್ದ ಕಟ್ಟಡದ ಮೇಲೆ ಬಾಂಬ್ ದಾಳಿಯಾಗಿದೆ. ಕುಡಿಯುವ ನೀರು ಕೆಂಪು ಮತ್ತು ಕಪ್ಪು ಬಣ್ಣಕ್ಕೆ ತಿರುಗಿದೆ. ನಿನ್ನೆ ಬೆಳಗ್ಗೆ 11 ಗಂಟೆಯವರೆಗೆ ಯುದ್ಧ ನಡೆಯುತ್ತಿತ್ತು ಅಂತ ಸುಮಿಯಲ್ಲಿ ಸಿಲುಕಿರುವ ಕನ್ನಡಿಗರ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ

ಉಕ್ರೇನ್ ಸೈನಿಕರು ನಮ್ಮ ತಲೆ ಮೇಲೆ ಗನ್ ಇಟ್ಟು ಪ್ರಶ್ನಿಸಿದ್ದರು; ಬೆಂಗಳೂರಿನಲ್ಲಿ ಕಣ್ಣೀರು ಹಾಕಿದ ವಿದ್ಯಾರ್ಥಿನಿ

ಉಕ್ರೇನ್​ ನೆರೆಯ ದೇಶಗಳಿಂದ ಭಾರತೀಯರ ಏರ್​ಲಿಫ್ಟ್; ಎಲ್ಲಾ ಭಾರತೀಯರು ಖಾರ್ಕಿವ್ ನಗರ ತೊರೆದಿದ್ದಾರೆ ಎಂದ ಭಾರತೀಯ ವಿದೇಶಾಂಗ ಸಚಿವಾಲಯ

Follow us on

Related Stories

Most Read Stories

Click on your DTH Provider to Add TV9 Kannada