BMS ಕಾಲೇಜು ಅಕ್ರಮವನ್ನು ಬಿಚ್ಚಿಟ್ಟ ಎಚ್ಡಿ ಕುಮಾರಸ್ವಾಮಿ, ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ತಲೆದಂಡಕ್ಕೆ ಆಗ್ರಹ
ಸಿಎಂ, ಪ್ರಧಾನಿ, ಕಾಂಗ್ರೆಸ್ ಪರ್ಸೆಂಟೇಜ್ ಬಗ್ಗೆ ಚರ್ಚೆ ಮಾಡಿದ್ದರು. ನಿನ್ನೆ ಪೇ ಸಿಎಂ ಅನ್ನೋ ಬಗ್ಗೆ ಕೂಡ ಚರ್ಚೆಯಾಯ್ತು. ಆದರೆ ನಾಡಿನಲ್ಲಿ ತಾಂಡವವಾಡುತ್ತಿರುವ ಸಮಸ್ಯೆಗಳೇ ಬೇರೆ, ನಾವು ಇಲ್ಲಿ ಚರ್ಚೆ ಮಾಡೋದೇ ಬೇರೆಯಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿಷಾದದ ದನಿಯಲ್ಲಿ ಸದನಕ್ಕೆ ತಿಳಿಸಿದರು.
ಬೆಂಗಳೂರು: ಪ್ರಸಕ್ತ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಅಕ್ರಮಗಳು, ಭ್ರಷ್ಟಾಚಾರ ಪ್ರಕರಣಗಳ ಕುರಿತು ಆಗಾಗ ಪ್ರಸ್ತಾಪಗಳು ಆಗುತ್ತಿವೆ. ಇದು ಆಡಳಿತಾರೂ ಬಿಜೆಪಿ ಮತ್ತು ಪ್ರಮುಖ ವಿಪಕ್ಷ ಕಾಂಗ್ರೆಸ್ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಈ ಮಧ್ಯೆ ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ನಿನ್ನೆ ತಾವು ನೀಡಿದ್ದ ವಚನದಂತೆ ಇಂದು ವಿಧಾನಸಭೆಯಲ್ಲಿ ಖಾಸಗಿ ಕಾಲೇಜೊಂದರ ಬೃಹತ್ ಅಕ್ರಮವೊಂದನ್ನು ಪ್ರಸ್ತಾಪ ಮಾಡಿದ್ದಾರೆ. ಬಿಎಂಎಸ್ ಕಾಲೇಜು ಟ್ರಸ್ಟ್ ಮತ್ತು ಜಮೀನು ಅಕ್ರಮದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರಸ್ತಾಪ ಮಾಡಿದ್ದಾರೆ. ನಿಯಮ 69 ಅಡಿ ವಿಷಯ ಪ್ರಸ್ತಾಪಿಸಿ ಹೆಚ್‌ಡಿಕೆ ಚರ್ಚೆ ನಡೆಸಿದ್ದಾರೆ.
ಬಿಎಂಎಸ್ ಕಾಲೇಜು ಟ್ರಸ್ಟ್ ಮತ್ತು ಜಮೀನು ಅಕ್ರಮ
ಹಿಂದಿನ ಕೇಂದ್ರ ಸರ್ಕಾರದ ಅವಧಿಯಲ್ಲಿ 2 ಸ್ಪೆಕ್ಟ್ರಂ ಹಗರಣ ನಡೆದಿತ್ತು. ಸಿಎಜಿ ಕೊಟ್ಟ ರಿಪೋರ್ಟ್ ಸರ್ಕಾರವನ್ನೇ ಬದಲಿಸುವಂತೆ ಮಾಡಿತು. ಸರ್ಕಾರದ ಮೇಲೆ ಕಪ್ಪು ಚುಕ್ಕೆ ಬರುವಂತೆ ಮಾಡಿತು ಎಂದ ಹೆಚ್‌ಡಿಕೆ ಅವರು ನಮ್ಮ ರಾಜ್ಯದ ವಿಚಾರದಲ್ಲಿ 2008ರಲ್ಲಿ ರಾಜ್ಯ ಸರ್ಕಾರ ಕೆಲವೊಂದು ನಿರ್ಧಾರ ತೆಗೆದುಕೊಂಡಿತ್ತು. ಕೆಲವು ನಿರ್ಧಾರಗಳ ಬಗ್ಗೆ ದಾಖಲೆ ಇಟ್ಟು ಹೋರಾಟ ಮಾಡಿದ್ರು. ಯಡಿಯೂರಪ್ಪ ಸಿಎಂ ಆಗಿದ್ದಾಗ 23 ದಿನ ಜೈಲಿಗೆ ಹೋಗಬೇಕಾಯ್ತು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಚರ್ಚೆಗೆ ಮುಂದಾಗಿದ್ದಾರೆ.
ಯಡಿಯೂರಪ್ಪ ಜೈಲುವಾಸದ ಪ್ರಕರಣದಲ್ಲಿ ಕಾನೂನು ವ್ಯವಸ್ಥೆ ಹೋರಾಟದಲ್ಲಿ ಜೈಲಿನಿಂದ ಹೊರಗೆ ಬಂದರು. ಈ ವಿಷಯದ ಬಗ್ಗೆಯೇ ನಮ್ಮ ಕ್ಷೇತ್ರದ ಮಂತ್ರಿ ಒಂದು ಸವಾಲು ಹಾಕಿದ್ದರು. ನಾನು ಗಾಳಿಯಲ್ಲಿ ಗುಂಡು ಹಾರಿಸ್ತೇನೆ ಅಂತ ಸಣ್ಣತನದಲ್ಲಿ ಹೇಳಿದ್ದರು. ಹಾಗಾಗಿ ಅದರ ಬಗ್ಗೆಯೇ ಚರ್ಚೆ ಮಾಡುತ್ತಿದ್ದೇನೆ. ಯಾರ ಮೇಲಿನ ಈರ್ಷ್ಯೆಯಿಂದಾಗಲಿ, ಸರ್ಕಾರವನ್ನು ಇಕ್ಕಟ್ಟಿಗೆ ಸಲ್ಲಿಸಲು ಈ ಪ್ರಸ್ತಾವನೆ ಸಲ್ಲಿಸ್ತಿಲ್ಲ. ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ತಾಕತ್ತಿದ್ದರೆ, ಧಮ್ ಇದ್ದರೆ ಎಂದಿದ್ದಾರೆ. ಬಸವರಾಜ ಬೊಮ್ಮಾಯಿ ನನ್ನ ಸಹೋದರ ಇದ್ದಂತೆ. ಅವರಿಂದ ಇಂತಹ ಅಗ್ರೆಸ್ಸಿವ್ ಆದ ಮಾತು ನಿರೀಕ್ಷೆ ಮಾಡಿರಲಿಲ್ಲ. ನಿಮಗೆ ಧಮ್ಮಿದ್ದರೆ, ತಾಕತ್ತಿದ್ದರೆ ಎಂದು ಮುಖ್ಯಮಂತ್ರಿಗಳು ಆಹ್ವಾನ ನೀಡಿದ್ದರು. ಹಾಗಾಗಿ ಪಬ್ಲಿಕ್ ಟ್ರಸ್ಟ್ ಒಂದರ ದಾಖಲೆಯನ್ನು ನಾನು ಇಂದು ಸದನದ ಮುಂದೆ ಇಡುತ್ತಿದ್ದೇನೆ, ಸರ್ಕಾರದ ಮುಂದೆಯೂ ಇಡುತ್ತೇನೆ ಎಂದರು.
ಸಿಎಂ ಕೂಡ 40 % ಬಗ್ಗೆ, ಹಿಂದೆ ಪ್ರಧಾನಿ ಬಂದಾಗ ಕಾಂಗ್ರೆಸ್ 10 % ಬಗ್ಗೆ ಚರ್ಚೆ ಮಾಡಿದ್ದರು. ಅಲ್ಲಿಂದ ಚರ್ಚೆ ಆರಂಭವಾಗಿದೆ. ಪೇ ಸಿಎಂ ಅನ್ನೋ ಬಗ್ಗೆ ಕೂಡ ಬೆಳಗ್ಗೆ ಚರ್ಚೆಯಾಯ್ತು. ಆದರೆ ನಾಡಿನಲ್ಲಿ ತಾಂಡವವಾಡುತ್ತಿರುವ ಸಮಸ್ಯೆಗಳೇ ಬೇರೆ, ನಾವು ಇಲ್ಲಿ ಚರ್ಚೆ ಮಾಡೋದೇ ಬೇರೆಯಾಗಿದೆ ಎಂದು ವಿಷಾದದ ದನಿಯಲ್ಲಿ ಸದನಕ್ಕೆ ತಿಳಿಸಿದರು.
ಬಿಎಂಎಸ್ ಕಾಲೇಜು ಟ್ರಸ್ಟ್ ಮತ್ತು ಜಮೀನು ಅಕ್ರಮ ಬಿಚ್ಚಿಟ್ಟ ಮಾಜಿ ಸಿಎಂ ಕುಮಾರಸ್ವಾಮಿ
ಈ ಸಂಸ್ಥೆ ಮುಖ್ಯಸ್ಥರು ಬಿ.ಎನ್ . ಶ್ರೀನಿವಾಸಯ್ಯ ಪುಂಗನೂರಿನವರು. ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿಗೆ ಬಂದವರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೇಡಿಯಾಲಜಿ ಡಿಪಾರ್ಟ್ ಮೆಂಟ್ ಕಟ್ಟುತ್ತಾರೆ. ಅವರ ನಡವಳಿಕೆ ನೋಡಿ ಮಹಾರಾಜರು ಸಂಸ್ಥೆಗೆ ಅವಕಾಶ ಕೊಡ್ತಾರೆ. ಎಂಜಿನಿಯರಿಂಗ್ ಕಾಲೇಜು ಕಟ್ಟಲು ಅನುಮತಿ ಕೊಡ್ತಾರೆ. 1953 ರಲ್ಲಿ ಶ್ರೀನಿವಾಸಯ್ಯ ನಿಧನರಾಗ್ತಾರೆ. ಶ್ರೀನಿವಾಸ್ ಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಲಕ್ಷ್ಮಮ್ಮ, ಇನ್ನೊಬ್ಬರು ಲಕ್ಷ್ಮೀದೇವಮ್ಮ. ಲಕ್ಷ್ಮಮ್ಮನವರ ಮಗ ನಾರಾಯಣ್ 1957 ರಲ್ಲಿ ಒಂದು ಟ್ರಸ್ಟ್ ಸ್ಥಾಪನೆ ಮಾಡ್ತಾರೆ. ಟ್ರಸ್ಟ್ ನಲ್ಲಿ ಐವರು ಸದಸ್ಯರಿರಬೇಕು. ಇಬ್ಬರನ್ನು ನಾರಾಯಣ್ ಅವರೇ ನೇಮಕ ಮಾಡ್ತಾರೆ. 2-12-1957 ರಲ್ಲಿ ಈ ಟ್ರಸ್ಟ್ ಪ್ರಾರಂಭವಾಗುತ್ತದೆ. ವೆಂಕಟಾಚಲಯ್ಯ ಮಾರ್ಗದರ್ಶನದಲ್ಲಿ ಟ್ರಸ್ಟ್ ಪ್ರಾರಂಭವಾಗುತ್ತದೆ. ಮುಂದೆ ಮೈಸೂರು ಬ್ಯಾಂಕ್ ನ ನಾರಾಯಣ ರೆಡ್ಡಿ ಚೇರ್ಮನ್ ಆಗ್ತಾರೆ. ಬಿಎಂಎಸ್ ಕಾಲೇಜುಗಳು ಪ್ರಾರಂಭವಾಗುತ್ತವೆ. ಎಂಜಿನಿಯರಿಂಗ್ ಸೇರಿ ಹಲವು ಕಾಲೇಜುಗಳು ಪ್ರಾರಂಭಗೊಳ್ಳುತ್ತವೆ. ನಾರಾಯಣ್ ಅವರಿಗೆ ಗಂಡು ಮಕ್ಕಳು ಇರಲಿಲ್ಲ. ಡೋನರ್ ಟ್ರಸ್ಟಿ ನೇಮಕ ಮಾಡಲಾಗುತ್ತದೆ. ಕಡಿದಾಳ್ ಮಂಜಪ್ಪ ನೇತೃತ್ವದಲ್ಲಿ ನೇಮಕ ಮಾಡಲಾಗುತ್ತದೆ. ಕಡಿದಾಳ್ ಮಂಜಪ್ಪ ಅವರು ಟ್ರಸ್ಟಿ ಆಗಿ ಕೆಲಸ ಮಾಡ್ತಾರೆ ಎಂದು ಬಿಎಂಎಸ್ ಕಾಲೇಜು ಟ್ರಸ್ಟ್ ಮತ್ತು ಜಮೀನು ಅಕ್ರಮದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು.
ಬಿಎಂಎಸ್ ಹೆಸರಿನಲ್ಲಿ ವಿವಿಧ ಕಾಲೇಜುಗಳು ಈ ಟ್ರಸ್ಟ್ ಮೂಲಕ ನಡೆಯುತ್ತದೆ. ನಾರಾಯಣ್ ಅವರು ಲೈಫ್ ಟೈಮ್ ಹಾಗೂ ಡೋನರ್ ಟ್ರಸ್ಟ್ ಆಗಿ ಕೆಲಸ ಮಾಡ್ತಾರೆ. ಅವರ ನಂತರ ಅವರ ಕುಟುಂಬದ ವಂಶಾವಳಿಯವರು ಡೋನರ್ ಟ್ರಸ್ಟಿ ಆಗಿ ಕೆಲಸ ಮಾಡ್ತಾರೆ. ಇವರಿಗೆ 40 ವರ್ಷ ಆಗಿದ್ದಾಗ ಮಕ್ಕಳಾಗಲಿಲ್ಲ. ಕಡಿದಾಳ್ ಮಂಜಪ್ಪ ಅವರು ಟ್ರಸ್ಟಿ ಇದ್ದಾಗ, ಮೂಲ ಟ್ರಸ್ಟ್‌ಗೆ ತಿದ್ದುಪಡಿ ತರುತ್ತಾರೆ. 1978ರಲ್ಲಿ ದಾನಿಗಳ ಟ್ರಸ್ಟಿಗಳು ಕುಟುಂಬದವರು ಇಲ್ಲದಿದ್ದಾಗ ಶೆಡ್ಯೂಲ್ 4/1ರಲ್ಲಿ ನಾರಾಯಣ್ ಧರ್ಮ ಪತ್ನಿ ಮಿನಿ ನಾರಾಯಣ್ ಅವರನ್ನು ದಾನಿ ಟ್ರಸ್ಟಿ ಆಗಿ ನೇಮಕ ಮಾಡ್ತಾರೆ. ಮಿನಿ ನಾರಾಯಣ್ ಅವರ ವಂಶದವರು ಅಥವಾ ಅವರ ಕುಟುಂಬದವರು ಟ್ರಸ್ಟಿಗಳಾಗಿ ಎಂದು ನೇಮಕ ಮಾಡ್ತಾರೆ.
ನಾರಾಯಣ್ ಅವರು ರಾಗಿಣಿ ನಾರಾಯಣ್ ಅವರನ್ನು ಎರಡನೇ ಮದುವೆ ಆಗುತ್ತಾರೆ. ನಾರಾಯಣ್ ಅವರಿಗೆ ಕ್ಯಾನ್ಸರ್ ಆಗುತ್ತೆ. ಈ ವೇಳೆ ಸರ್ಕಾರಕ್ಕೆ ಡೀಡ್ ಮಾಡುತ್ತಾರೆ. ರಾಜ್ಯ ಸರ್ಕಾರವೇ ಡೋನರ್ ಟ್ರಸ್ಟಿಯಾಗಬೇಕು ಅಂತಾ ನಾರಾಯಣ್ 1995 ರಲ್ಲಿ ಡೀಡ್ ಮಾಡಿರುತ್ತಾರೆ. ಇದರ ವಿರುದ್ಧ ರಾಗಿಣಿ ನಾರಾಯಣ್ ಹೈಕೋರ್ಟ್ ಗೆ ಅರ್ಜಿ ಹಾಕ್ತಾರೆ. ಸಿವಿಲ್ ಕೋರ್ಟ್ ಗೆ ಕೇಸ್ ವರ್ಗಾವಣೆ ಆಗುತ್ತದೆ. ಹೈಕೋರ್ಟ್ ಕಮಿಟಿ ಮಾಡುತ್ತದೆ. ಇಬ್ಬರು ಸರ್ಕಾರಿ ಅಧಿಕಾರಿಗಳು ಮತ್ತು ರಾಗಿಣಿ ನಾರಾಯಣ್ ಕಮಿಟಿಯಲ್ಲಿ ಇರುತ್ತಾರೆ. ಶ್ರೀನಿವಾಸ್ ಮೂರ್ತಿ ಎಂಬುವವರು ಅಧಿಕಾರ ತೆಗೆದುಕೊಳ್ಳುತ್ತಾರೆ. 2005 ರಲ್ಲಿ ರಾಗಿಣಿ ನಾರಾಯಣ್ ಪರವಾಗಿ ಕೇಸ್ ಆಗುತ್ತದೆ. ಹೈಕೋರ್ಟ್ ನಲ್ಲಿ ಕೂಡ ರಾಗಿಣಿ ಕೇಸ್ ಗೆಲ್ಲುತ್ತಾರೆ. ಆಗ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೋಗುತ್ತದೆ. ರಾಗಿಣಿ ನಾರಾಯಣ್ ಗೆ ಹೈಕೋರ್ಟ್ ಜವಾಬ್ದಾರಿ ಕೊಡುತ್ತದೆ.
ಹೈಕೋರ್ಟ್ ತೀರ್ಪಿನ ಪ್ರಕಾರ ರಾಗಿಣಿ ನಾರಾಯಣ್ ಅವರಿಗೆ ಡೋನರ್ ಟ್ರಸ್ಟಿ ಆಗಲು ಸೂಚಿಸಲಾಗುತ್ತದೆ. 2010ರಲ್ಲಿ ಬಂದ ಆದೇಶ ಇದು. ಬಳಿಕ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಹೋಗಲಾಗುತ್ತದೆ. ಸರ್ಕಾರದ ಮೇಲೆ ಹಲವು ಒತ್ತಡ ಹಾಕಲಾಗಿದೆ. 26/11ರಲ್ಲಿ ರೆಹಮತ್ತುಲ್ಲ ಪತ್ರ ಬರೆದು ಬೋರ್ಡಿಗೆ ಟ್ರಸ್ಟಿಗಳನ್ನು ನೇಮಕ ಮಾಡಿಕೊಳ್ತಾರೆ. ವಿಜಯ್ ಗೋರೆ, ದಯಾನಂದ ಪೈ, ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಅವರನ್ನು ನೇಮಕ ಮಾಡಿಕೊಳ್ಳುತ್ತಾರೆ.
ಹಿಂದೆ ಶ್ರೀನಿವಾಸ್ ಮೂರ್ತಿ ಟ್ರಸ್ಟಿ ಆಗಿದ್ದಾಗ ಯಲಹಂಕದಲ್ಲಿ 2.5 ಕೋಟಿ ಖರ್ಚು ಮಾಡಿ ಇಂಜಿನಿಯರಿಂಗ್ ಕಾಲೇಜ್ ಕಟ್ಟಲು ಜಾಗ ಖರೀದಿ ಮಾಡ್ತಾರೆ. ಏರ್ ಪೋರ್ಟ್ ಬಳಿ ಕೂಡ ಐದು ಎಕರೆ ಜಮೀನು ಕೊಂಡುಕೊಳ್ತಾರೆ. ಸರ್ಕಾರದ ಗಮನಕ್ಕೆ ತರದೇ ಕೆಲಸ ಮಾಡ್ತಾರೆ. 2016ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬಂದು, ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿಯುತ್ತದೆ. ಅವಿರಾಮ್ ಶರ್ಮ ಎಂಬ ರಾಗಿಣಿ ನಾರಾಯಣ್ ಸೋದರಳಿಯನನ್ನು ಡೋನರ್ ಟ್ರಸ್ಟಿ ಆಗಿ ಮಾಡ್ತಾರೆ. ಸರ್ಕಾರದಲ್ಲಿ ತೀರ್ಮಾನ ಮಾಡುವಾಗಲೂ ಹಲವು ರೀತಿ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ನವೆಂಬರ್ 2008ರಲ್ಲಿ ಅಮೆಂಡ್‌ಮೆಂಟ್ ಡೀಡ್‌ಗೆ ಬಂತು. 1-1-2019ರಲ್ಲಿ ಹಿಂಬರಹ ಕೊಡಲಾಯ್ತು. ಬಿಎಂಎಸ್ ಎಜುಕೇಶನ್ ಟ್ರಸ್ಟ್ ಶೈಕ್ಷಣಿಕ ಸೌಲಭ್ಯ ಕಲ್ಪಿಸುವ ಉದೇಶದಿಂದ ಸ್ಥಾಪಿಸಿರುವ, ಸಾರ್ವಜನಿಕ ದತ್ತಿಯಾಗಿದ್ದು, ಖಾಸಗಿ ವ್ಯಕ್ತಿಗಳ ಲಾಭಕ್ಕಾಗಿ ಖಾಸಗಿ ಟ್ರಸ್ಟ್ ಎಂದು ಪರಿಗಣಿಸತಕ್ಕದಲ್ಲ. ಅಂಗರಚನೆ ಮೂಲಭೂತ ಪ್ರಸ್ತಾವಿತ ತಿದ್ದುಪಡಿ ಸಾರ್ವಜನಿಕ ಹಿತಕ್ಕೆ ಅನುಗುಣವಾಗಿವೆಯೇ ಎಂದು ಪರಿಗಣಿಸುವುದು. ಟ್ರಸ್ಟಿ ಅಧಿಕಾರವನ್ನ ಪ್ರಸ್ತಾವಿತ ತಿದ್ದುಪಡಿಯಿಂದ ಮೊಟಕುಗೊಳಿಸಿದಂತಾಗುತ್ತದೆ. ಏಕ ವ್ಯಕ್ತಿ ಕುಟುಂಬದಲ್ಲಿ ಅಧಿಕಾರ ಕೇಂದ್ರೀಕೃತ ಆಗಲಿದೆ. ಮೂರನೇ ವ್ಯಕ್ತಿ ಒಬ್ಬರಿಗೆ ಶಾಶ್ವತ ಟ್ರಸ್ಟಿ ಸ್ಥಾನವನ್ನು ಕಲ್ಪಿಸುತ್ತದೆ. ಪ್ರಸ್ತಾವಿತ ತಿದ್ದುಪಡಿ ಅನುಮೋದಿಸಲು ಸಮರ್ಥವಿಲ್ಲ ಅಂತ ಸರ್ಕಾರದಿಂದ ರಿಜೆಕ್ಟ್ ಮಾಡಲಾಯ್ತು.
ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಮಾಡಿದ ಸಹಿ ಇಂದಾಗಿ, ಈಗ ಕುಟುಂಬದ ಪರ ಆಗುತ್ತಿದೆ:
2018 ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಒಂದು ಮಸೂದೆ ಬಂತು. ಬಿಎಂಎಸ್ ಪರವಾಗಿ ಮಾಡಿಕೊಡಿ ಅಂದಾಗ ನಾನು ತಿರಸ್ಕಾರ ಮಾಡಿದೆ. 2019 ರಲ್ಲಿ ಬಿಲ್ ತರುವ ಪ್ರಯತ್ನ ನಡೆಯಿತು. ದಯಾನಂದ್ ಪೈ 10 ವರ್ಷ ಟ್ರಸ್ಟಿಯಾಗಿದ್ದರು. ಆದ್ರೆ ಬೈಲಾ ಪ್ರಕಾರ ಮೂರು ವರ್ಷದ ಮೇಲೆ ಟ್ರಸ್ಟಿ ಆಗಲು ಬರಲ್ಲ. ನಾನು ಜುಲೈ 23ಕ್ಕೆ ರಾಜೀನಾಮೆ ಕೊಟ್ಟೆ. ನನಗೆ ಹಲವು ಪ್ರಪೋಸಲ್ ಬಂದಿತ್ತು. ಸರ್ಕಾರದ ನನ್ನ ಸಹಿಯನ್ನು ನಾನು ಮಾರಾಟಕ್ಕೆ ಇಟ್ಟಿರಲಿಲ್ಲ. 23-08-2019 ರಲ್ಲಿ ಮತ್ತೆ ಅರ್ಜಿ ಬಂತು. ಅವತ್ತು ಯಡಿಯೂರಪ್ಪ ಸಿಎಂ ಆಗಿದ್ದರು. ತಳವಾರ್ ಅವರು ಸರ್ಕಾರಕ್ಕೆ ಟ್ರಸ್ಟ್ ಅವ್ಯವಹಾರದ ಬಗ್ಗೆ ಪತ್ರ ಬರೆದಿದ್ದರು. ಸರ್ಕಾರದ ನೆರಳಲ್ಲಿ ಬೆಳೆದ ಟ್ರಸ್ಟ್, ಈಗ ಕುಟುಂಬದ ಪರವಾಗಿ ಆಗುತ್ತಿದೆ.
ನಾಲ್ಕು ವಿಧೇಯಕ ಬಂದಾಗ ನಾವು ತಿರಸ್ಕಾರ ಮಾಡಿದ್ದೆವು. ಆ ನಂತರ ಶಿಕ್ಷಣ ಸಚಿವರು ತಿದ್ದುಪಡಿ ಅನುಮೋದನೆ ನೀಡಿದ್ರು. ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರು ಎಂದು ಸಹಿ ಹಾಕಿರುವುದನ್ನು ಕುಮಾರಸ್ವಾಮಿ ಸದನದಲ್ಲಿ ಓದಿ ಹೇಳಿದರು. ಈ ಟ್ರಸ್ಟ್ ಆರಂಭ ಆಗಿದ್ದು ಬಡ ಮಕ್ಕಳ ಅನುಕೂಲಕ್ಕಾಗಿ. ಆದರೆ ಇವರ ಈ ಸಹಿಯಿಂದಾಗಿ, ಸಾರ್ವಜನಿಕ ಟ್ರಸ್ಟ್ ಆಗಿದ್ದಂತದ್ದು, ಖಾಸಗಿ ಟ್ರಸ್ಟ್ ಆಗಿ ಪರಿವರ್ತನೆ ಆಯ್ತು ಎಂದರು.
ದನಿಗೂಡಿಸಿದ ಶಾಸಕ ಕೃಷ್ಣ ಬೈರೇಗೌಡ:
ಈ ಬಗ್ಗೆ ಕಾಂಗ್ರೆಸ್ ಶಾಸಕ ಕೃಷ್ಣ ಬೈರೇಗೌಡ ಅವರು ಸದನದಲ್ಲಿ ಮಾತನಾಡಿ, ಬಿಎಂಎಸ್ ಕಾಲೇಜು 10-15 ವರ್ಷಗಳ ಹಿಂದಿನವರೆಗೂ ಪಬ್ಲಿಕ್ ಟ್ರಸ್ಟ್ ಆಗಿದೆ. ಕಳೆದ 15 ವರ್ಷದಿಂದ ಪಬ್ಲಿಕ್ ಟ್ರಸ್ಟ್ ಬದಲು ಪ್ರೈವೇಟ್ ಟ್ರಸ್ಟ್ ಆಗಿದೆ. 2,000 ಕೋಟಿ ರೂ ಬೆಲೆ ಬಾಳುವ ಆಸ್ತಿಯು, ಖಾಸಗಿ ಆಸ್ತಿಯಾಗಿ ಬದಲಾಗಿದೆ. ದೊಡ್ಡ ಬಸವಣ್ಣ ದೇವಸ್ಥಾನ, ಇತರೇ ಮುಜರಾಯಿ ಇಲಾಖೆಗೆ ಸೇರಿದ ಆಸ್ತಿ ಕೂಡ ಇವರಿಗೆ ಹೋಗಿದೆ. ಮೂರೂವರೆ, ನಾಲ್ಕು ಎಕರೆ ಈ ಸಂಸ್ಥೆಗೆ ಹೋಗಿದೆ. ಒಂದು ಎಕರೆ ಕನಿಷ್ಟ 500 ಕೋಟಿ ರೂ ಬೆಲೆ ಬಾಳುತ್ತದೆ. ಅನೇಕ ಜಾಗ ಒತ್ತುವರಿ ಕೂಡಾ ಮಾಡಿಕೊಂಡಿದ್ದಾರೆ. ವಕ್ಫ್ ಆಸ್ತಿ ಬಗ್ಗೆ ಮಾತನಾಡುವ ಕೆಲವರು ಈ ರೀತಿಯ ಆಸ್ತಿ ಬಗ್ಗೆ ಯಾಕೆ ಮಾತನಾಡಲ್ಲ? ಎಂದು ಪ್ರಶ್ನಿಸಿದರು.
ಬಿಎಂಎಸ್ ಜಮೀನು ಅಕ್ರಮದಲ್ಲಿ ಸಚಿವ ಅಶ್ವತ್ಥ್ ನಾರಾಯಣ ಶಾಮೀಲು, ಒಂದು ಕ್ಷಣವೂ ಅವರು ಸಚಿವರಾಗಿ ಕೂರುವಂತಿಲ್ಲ
ಬಿಎಂಎಸ್ ಕಾಲೇಜು ಟ್ರಸ್ಟ್, ಜಮೀನು ಅಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ (Dr. CN Ashwathnarayan) ಶಾಮೀಲಾಗಿದ್ದಾರೆ ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ H.D.ಕುಮಾರಸ್ವಾಮಿ ಪ್ರಸ್ತಾಪ ಮಾಡಿದರು. ಈಗಿನ ಉನ್ನತ ಶಿಕ್ಷಣ ಸಚಿವರು ಯಾವ ರೀತಿ ಶಾಮೀಲಾಗಿದ್ದಾರೆ ಅಂದರೆ ಅವರು ನಿಜವಾಗಿ ಆ ಜಾಗದಲ್ಲಿ ಒಂದು ಕ್ಷಣವೂ ಕೂರುವಂತಿಲ್ಲ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು. ಕುಮಾರಸ್ವಾಮಿ ಅವರು ಈ ಆರೋಪಗಳ ಪ್ರಸ್ತಾಪ ಮಾಡುವ ವೇಳೆ ಸದನದಲ್ಲಿ ಸಚಿವ ಡಾ. ಅಶ್ವಥ್ ನಾರಾಯಣ್ ಉಪಸ್ಥಿತರಿದ್ದರು.
ಬಿಎಂಎಸ್ ಕಾಲೇಜು ಟ್ರಸ್ಟ್, ಜಮೀನು ಅಕ್ರಮದ ಬಗ್ಗೆ ದಾಖಲೆ ಕೊಡಿ ಅಂತಾ ರಾಮನಗರಕ್ಕೆ ಬಂದು ಸಚಿವ ಅಶ್ವತ್ಥನಾರಾಯಣ ಕೆಣಕಿದರು. ಈಗ ದಾಖಲೆ ಇಟ್ಟಿದ್ದೇನೆ ಈ ದಾಖಲೆ ಸಾಕಾ? ಇನ್ನೂ ಬೇಕಾ? ಎಂದು ಸಚಿವ ಅಶ್ವತ್ಥನಾರಾಯಣರನ್ನ ಉದ್ದೇಶಿಸಿ ಹೆಚ್‌ಡಿಕೆ ಹೇಳಿದರು.
ಇಷ್ಟೆಲ್ಲಾ ವಿಷಯ ಗೊತ್ತಿದ್ದೂ ಸರ್ಕಾರ ತೀರ್ಮಾನ ಯಾಕೆ ತೆಗೆದುಕೊಂಡಿತು ಅನ್ನೋದು ಪ್ರಶ್ನೆ. ಹಿಂದೆ ಸುಪ್ರೀಂ ಕೋರ್ಟ್ ಗೆ ಹೋಗಿ ಏನೆಲ್ಲಾ ಅನಾಹುತ ಆಗುತ್ತದೆ ಅಂತ ಹೇಳಲಾಗಿತ್ತು. ಇಲ್ಲಿ ಈಗಿನ ತಿದ್ದುಪಡಿ ಅಪ್ರೂವಲ್ ಮಾಡಲು ಈಗಿನ ಸಚಿವರೇ ಕಾರಣ. ಪಬ್ಲಿಕ್ ಟ್ರಸ್ಟ್ ಇದು. ಹಲವಾರು ಜನ ಕೊಟ್ಟಿರುವ ಕಾಣಿಕೆಯಿಂದ ಬೆಳೆದಿರುವ ಸಂಸ್ಥೆ ಇದು. ಇದನ್ನು ಖಾಸಗಿ ಟ್ರಸ್ಟ್ ಮಾಡಲು 31-3-2021ಕ್ಕೆ ಆದೇಶ ಮಾಡಿದರು. ಖಂಡಿಕೆ 167ನ್ನು ಅನುಮೋದಿಸಬಹುದು ಅಂತಾ ಸಿಎಂ ಕೂಡ ಅನುಮೋದನೆ ಕೊಟ್ಟಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಮೇಲೆ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಟ್ರಸ್ಟ್‌ಗೆ ದಯಾನಂದ ಪೈರನ್ನು ಅಜೀವ ಸದಸ್ಯರಾಗಿ ಹೇಗೆ ಕೂರಿಸಿದ್ರಿ? ಎಂದು ಸಚಿವ ಡಾ. ಅಶ್ವತ್ಥ್ ನಾರಾಯಣ ವಿರುದ್ಧ ಹೆಚ್‌ಡಿಕೆ ಗಂಭೀರ ಆರೋಪ ಮಾಡಿದರು. ಈ ವೇಳೆ ಹೆಚ್‌ಡಿಕೆ ಆರೋಪಕ್ಕೆ ಉತ್ತರಿಸಲು ಸಚಿವ ಡಾ. ಅಶ್ವತ್ಥ್ ನಾರಾಯಣ ಮುಂದಾದರು. ಆದರೆ ಕುಮಾರಸ್ವಾಮಿ ಮಾತು ಮುಗಿಸಲಿ ಎಂದು ಸ್ಪೀಕರ್ ಕಾಗೇರಿ ಅವರು ಸುಮ್ಮನಿರಿಸಿದರು.
ಸುಪ್ರೀಂ ಕೋರ್ಟ್ ಮುಂದೆ ಕಾಂಪ್ರಮೈಸ್ ಫಾರ್ಮುಲಾ ಮಾಡಿಕೊಂಡರು. ಬಿಸಿಲಯ್ಯ ಮತ್ತು ಎಂಟತ್ತು ಜನ ಇಂಪ್ಲೀಡೀಂಗ್ ಆದರು. ಸುಪ್ರೀಂ ಕೋರ್ಟ್ ಮುಂದೆ ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿರೋದಾಗಿ ಒಪ್ಪಿಕೊಂಡರು. ರಮೇಶ್ ಕುಮಾರ್ ಅವರು ಹೇಳಿದರು… ನಮಗೂ ಅರ್ಥ ಆಗುವ ರೀತಿ ಹೇಳಿ ಅಂದ್ರು. ಕಳೆದ ಒಂದು ತಿಂಗಳಿಂದ ನಾವು ಮಾಹಿತಿ ಪಡೆಯಲು ಹೋದೆವು. ಸುಪ್ರೀಂ ಕೋರ್ಟ್‌ನಲ್ಲೂ ಹೀಗೆ ಮೋಸ ಆಗಿದೆ. ಸದನದಲ್ಲಿ ಧೈರ್ಯದಿಂದ ಹೇಳ್ತಿದ್ದೇನೆ. ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಮಾಡಲು ಹೋಗಿ ನನ್ನ ಮೇಲೂ ನಾಲ್ಕು ಕೇಸ್ ಹಾಕಿದರು. 12 ವರ್ಷ ಆಯ್ತು, ಜಡ್ಜ್‌ಗೆ ಬಿಟ್ಟ ವಿಚಾರ ಅಂತ ಸುಮ್ಮನಾದೆ ಎಂದು ಕುಮಾರಸ್ವಾಮಿ ಹೇಳಿದರು.
ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ತಲೆದಂಡಕ್ಕೆ ಸದನದಲ್ಲಿ ಕುಮಾರಸ್ವಾಮಿ ಆಗ್ರಹ
ಇದಕ್ಕೆ ಸರ್ಕಾರ ಸ್ಪಷ್ಟನೆ ಕೂಡಲೇಬೇಕು. ಅಲ್ಲದೇ ಇದಕ್ಕೆ ದಂಡ ತೆರಲೇಬೇಕು. ಇದಕ್ಕೆ ಯಾರು ಹೊಣೆ ಹೊರಬೇಕು? ಯಾವ ತನಿಖೆ ಮಾಡ್ತೀರಿ? ಇದಕ್ಕಿಂತ ತನಿಖೆ ಬೇಕೇ? ನಿಮ್ಮ ಪ್ರಧಾನ ಮಂತ್ರಿಗಳು ಭ್ರಷ್ಟಾಚಾರ ತೊಲಗಿಸುವ ಭಾಷಣ ಮಾಡ್ತಾರೆ. ಇದರ ಬಗ್ಗೆ ನೈತಿಕತೆ ಇರಬೇಕು. ಎಜ್ಯುಕೇಶನ್ ಮಿನಿಸ್ಟರ್ ತಲೆದಂಡ ಆಗಬೇಕು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸದನದಲ್ಲಿ ಆಗ್ರಹ ಮಾಡಿದರು.
Published On - 5:54 pm, Thu, 22 September 22