ಬೆಂಗಳೂರು, ಆಗಸ್ಟ್ 02: ಆಕಸ್ಮಿಕವಾಗಿ ನಮ್ಮ ಮೆಟ್ರೋದ (Namma Metro) ಹಳಿಗೆ ನಾಲ್ಕು ವರ್ಷದ ಮಗು ಜಿಗಿದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ. ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಮೆಟ್ರೋ ಹಳಿಗೆ ಮಗು ಜಿಗಿದಿದೆ. ಕೂಡಲೆ ಬಿಎಂಆರ್ಸಿಎಲ್ ಸಿಬ್ಬಂದಿ ಎರಡೂ ಮಾರ್ಗದ ರೈಲು ಸಂಚಾರ, ಹಳಿಯ ವಿದ್ಯುತ್ ಸಂಚಾರ ಸ್ಥಗಿತಗೊಳಿಸಿ ಮಗುವನ್ನು ರಕ್ಷಿಸಿದ್ದಾರೆ. ಮಗು ಪ್ರಾಣಾಪಾಯದಿಂದ ಪಾರಾಗಿದೆ. ಇದರಿಂದ ಕೆಲಹೊತ್ತು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಆಗಿತ್ತು. ಮತ್ತೆ ಸಂಚಾರ ಯಥಾಸ್ಥಿತಿಗೆ ಬಂದಿದೆ.
ಜೂನ್ ತಿಂಗಳಲ್ಲಿ ಯುವಕನೋರ್ವ ನೇರಳೆ ಮಾರ್ಗದ ಹೊಸಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದನು. ಕೂಡಲೆ ಮೆಟ್ರೋ ಸಿಬ್ಬಂದಿ ಯುವಕನನ್ನು ಸದ್ಯ ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದರು.
ಇದನ್ನೂ ಓದಿ: ಮೆಟ್ರೋ ಹಂತ-3 ಯೋಜನೆಗೆ ಕೇಂದ್ರ ಹಣಕಾಸು ಸಚಿವಾಲಯ ಅನುಮತಿ, ಡಬಲ್ ಡೆಕ್ಕರ್ ಮೇಲ್ಸೇತುವೆಗಳಿಗೆ ಚಿಂತನೆ
ಇದಕ್ಕೂ ಮುನ್ನ ನೇರಳೆ ಮಾರ್ಗದ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಇದೇ ರೀತಿ ಯುವಕನೊಬ್ಬ ಮೆಟ್ರೋ ಟ್ರ್ಯಾಕ್‌ಗೆ ಜಿಗಿದು ಪ್ರಾಣ ಬಿಟ್ಟಿದ್ದನು. ರೈಲು ಬರೋದನ್ನೇ ಕಾಯುತ್ತಿದ್ದ ಧ್ರುವ ಟಕ್ಕರ್ ಎಂಬ ಯುವಕ ನೋಡ ನೋಡುತ್ತಿದ್ದಂತೆ ಹಳಿಗೆ ಹಾರಿದ್ದನು. ಕ್ಷಣ ಮಾತ್ರದಲ್ಲೇ ಆತನ ಮೇಲಿ ರೈಲು ಹರಿದು ಅಲ್ಲೇ ಪ್ರಾಣ ಬಿಟ್ಟಿದ್ದನು. ಆತನ ದೇಹ ಎರಡು ತುಂಡಾಗಿತ್ತು.
ಅಷ್ಟಕ್ಕೂ ಧ್ರುವ ಹಳಿಗೆ ಜಿಗಿಯುತ್ತಿದ್ದಂತೆ ಜತೆಗಿದ್ದ ಸ್ನೇಹಿತರು ಎಳೆಯೋ ಪ್ರಯತ್ನ ಮಾಡಿದ್ದರು. ಆದರೆ ರೈಲು ಬರ್ತಿದ್ದಂತೆ ಅವರೆಲ್ಲಾ ಹಿಂದೆ ಸರಿದಿದ್ದರು. ಮುಂಬೈ ಮೂಲದ ಧ್ರುವ ಟಕ್ಕರ್, ನ್ಯಾಷನಲ್ ಕಾಲೇಜ್‌ನಲ್ಲಿ ಮೊದಲ ವರ್ಷದ ಲಾ ವ್ಯಾಸಂಗ ಮಾಡುತ್ತಿದ್ದ. ಆದರೆ ಅಂದು ಏನಾಯ್ತೋ ಏನೋ. ಸ್ನೇಹಿತರ ಜತೆ ಫೋನ್‌ನಲ್ಲಿ ಮಾತನಾಡ್ತಾ ಬಂದವನು ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದನು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:35 am, Fri, 2 August 24