ಆಸ್ತಿ ತೆರಿಗೆ ‘ಒಟಿಎಸ್’ ಕಾಲಾವಕಾಶ ಒಂದು ತಿಂಗಳು ವಿಸ್ತರಣೆ: ಡಿಸಿಎಂ ಡಿಕೆ ಶಿವಕುಮಾರ್
ಬೆಂಗಳೂರು ನಗರ ಜನರಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಿಹಿ ಸುದ್ದಿ ನೀಡಿದ್ದಾರೆ. ಒಂದು ಬಾರಿ ಪರಿಹಾರ ಯೋಜನೆ (ಒಟಿಎಸ್)ಯ ಕಲಾವಾಧಿ ಮುಕ್ತಾಯಗೊಂಡಿತ್ತು. ಆದರೆ ಈ ಕಾಲಾವಧಿಯನ್ನು ವಿಸ್ತರಿಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಸಿಹಿ ಸುದ್ದಿ ನೀಡಿದ್ದಾರೆ. ಎಷ್ಟು ತಿಂಗಳ ಕಾಲ ವಿಸ್ತರಣೆ ಮಾಡಿದ್ದಾರೆ. ಇಲ್ಲಿದೆ ಓದಿ.
ಬೆಂಗಳೂರು, ಆಗಸ್ಟ್ 02: ಆಸ್ತಿ ತೆರಿಗೆ ಸುಸ್ತಿದಾರರಿಗಾಗಿ ಜಾರಿಗೆ ತರಲಾಗಿದ್ದ ‘ಒಂದು ಬಾರಿ ಪರಿಹಾರ ಯೋಜನೆ’ (ಒಟಿಎಸ್)ಯ ಕಾಲಾವಧಿ (ಜುಲೈ 31) ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಒತ್ತಡದ ಮೇರೆಗೆ ಇದನ್ನು ಒಂದು ತಿಂಗಳ ಕಾಲ ಅಂದರೆ ಆಗಸ್ಟ್ 31ರವರೆಗೆ ವಿಸ್ತರಣೆ ಮಾಡಲಾಗಿದೆಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದರು.
11ನೇ ನ್ಯಾನೋ ತಂತ್ರಜ್ಞಾನ ಅಂತಾರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜತೆ ಶುಕ್ರವಾರ ಮಾತನಾಡಿದ ಶಿವಕುಮಾರ್ ಅವರು, ಈವರೆಗೂ 3 ಸಾವಿರ ಕೋಟಿಯಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಹೆಚ್ಚುವಾರಿಯಾಗಿ 400 ಕೋಟಿ ತೆರಿಗೆ ಸಂಗ್ರಹವಾಗಿದೆ. ಕೆಲ ಬದಲಾವಣೆ ಮಾಡಿಕೊಳ್ಳಬೇಕು ಮತ್ತು ಒಟಿಎಸ್ ಕಾಲಾವಧಿ ಒಂದು ತಿಂಗಳು ವಿಸ್ತರಣೆ ಮಾಡಬೇಕು ಎಂದು ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಒತ್ತಡ ಬರುತ್ತಿದೆ. ಸರ್ವರ್ ಸಮಸ್ಯೆ ಹಾಗೂ ಮತ್ತೆ ಕೆಲವರು ಚೆಕ್ ನೀಡಿದ್ದು, ಜುಲೈ 31ರವರೆಗೆ ನೀಡಲಾಗಿದ್ದ ಕಾಲಾವಧಿಯನ್ನು ಒಂದು ತಿಂಗಳ ಕಾಲ ಅಂದರೆ ಆಗಸ್ಟ್ 31ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದರು.
ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುತ್ತಿರುವವರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಲಾಗುವುದು. ಒಂದು ವೇಳೆ ಯಾರಾದರೂ ಹೆಚ್ಚಿಗೆ ಹಣ ಪಾವತಿ ಮಾಡಿದ್ದರೆ, ಮುಂದಿನ ಬಾರಿ ಆಸ್ತಿ ತೆರಿಗೆ ಪಾವತಿ ವೇಳೆ ಅದನ್ನು ವಜಾಗೊಳಿಸಲಾಗುವುದು. ಈ ವಿಚಾರದಲ್ಲಿ ಅನಗತ್ಯವಾಗಿ ಗಾಬರಿಯಾಗುವುದು ಬೇಡ ಎಂದು ಹೇಳಿದರು.
ಇದನ್ನೂ ಓದಿ: Mekedatu project: ನೀವೇ ಬಗೆಹರಿಸಿಕೊಳ್ಳಿ: ಮೇಕೆದಾಟು ಬಗ್ಗೆ ಡಿಕೆ ಶಿವಕುಮಾರ್ಗೆ ಮೋದಿ ಸಲಹೆ
ಒಟಿಎಸ್ ಮೂಲಕ 1 ಲಕ್ಷ ಜನರು ತೆರಿಗೆ ಪಾವತಿಸಿದ್ದು ಬಿಬಿಎಂಪಿ ಬೊಕ್ಕಸಕ್ಕೆ 3200 ಕೋಟಿ ರೂ. ಹರಿದು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 800 ಕೋಟಿ ರೂ. ಹೆಚ್ಚಳವಾಗಿದೆ. ಕಳೆದ 10-12 ದಿನಗಳಲ್ಲಿ ಸುಮಾರು 1200 ಕೋಟಿ ರೂ ಸಂಗ್ರಹಿಸಲಾಗಿದೆ. ಲಕ್ಷಕ್ಕೂ ಹೆಚ್ಚು ಜನರು ಒನ್ ಟೈಮ್ ಸೆಟಲ್ಮೆಂಟ್ ಯೋಜನೆಯಡಿ ಆಸ್ತಿ ತೆರಿಗೆ ಪಾವತಿಸಿದ್ದು, ಹೀಗಾಗಿ ಸಂಗ್ರಹವಾದ ಒಟ್ಟು ಮೊತ್ತದಲ್ಲಿ 380 ಕೋಟಿ ರೂ. ಓಟಿಎಸ್ ಮೂಲಕ ಸಂಗ್ರಹವಾಗಿದೆ. ಇನ್ನೂ ಸುಮಾರು 150 ಕೋಟಿ ರೂ. ಚೆಕ್ ಮತ್ತು ಡಿಮ್ಯಾಂಡ್ ಡ್ರಾಫ್ಟ್ಗಳ ಮೂಲಕ ಸಂಗ್ರಹಿಸಲಾಗಿದೆ.
ಬಿಬಿಎಂಪಿಯ ಅಧಿಕಾರಿಗಳ ಮಾಹಿತಿ ಪ್ರಕಾರ ಏಪ್ರಿಲ್ 1 ರಿಂದ ಜುಲೈ 29 ರವರೆಗೆ ಆಸ್ತಿ ತೆರಿಗೆ ಪಾವತಿದಾರರ ಸಂಖ್ಯೆ ಗಮನಾರ್ಹ ಕುಸಿತ ಕಂಡಿದೆ. ಇದಕ್ಕೆ ಒನ್ ಟೈಮ್ ಸೆಟಲ್ಮೆಂಟ್ ಯೋಜನೆ ಕಾರಣ ಎಂದು ತಿಳಿದುಬಂದಿದೆ. ಇತ್ತೀಚೆಗೆ ಬಿಬಿಎಂಪಿ ಹಂಚಿಕೊಂಡ ಮಾಹಿತಿಯ ಪ್ರಕಾರ ಬೆಂಗಳೂರಿನ ಎಂಟು ವಲಯಗಳಲ್ಲಿ ಸುಮಾರು 2.88 ಲಕ್ಷಕ್ಕೂ ಹೆಚ್ಚು ಜನರು ತೆರಿಗೆ ಪಾವತಿಸಬೇಕಿದ್ದು, 548.94 ಕೋಟಿ ರೂ. ಮೌಲ್ಯದ ಆಸ್ತಿ ತೆರಿಗೆ ಬಾಕಿ ಇದೆ ಎಂದು ತಿಳಿಸಿದೆ.
ಯಾವ ಯಾವ ವಲಯದಲ್ಲಿ ಎಷ್ಟು ಆಸ್ತಿ ತೆರಿಗೆ ಸಂಗ್ರಹ ಮಾಹಿತಿ ಹೀಗಿದೆ
ವಲಯ ಏಪ್ರಿಲ್ 2023-ಜುಲೈ 2023 ಏಪ್ರಿಲ್ 2024-ಜುಲೈ 2024
- ಬೊಮ್ಮನಹಳ್ಳಿ 267.12 ಕೋಟಿ 316.10 ಕೋಟಿ
- ದಾಸರಹಳ್ಳಿ 70.58 ಕೋಟಿ 96.21 ಕೋಟಿ
- ಪೂರ್ವ 456.69 ಕೋಟಿ 544.46 ಕೋಟಿ
- ಮಹದೇವಪುರ 643.43 ಕೋಟಿ 808.40 ಕೋಟಿ
- ರಾಜರಾಜೇಶ್ವರಿನಗರ 163.99 ಕೋಟಿ 212.42 ಕೋಟಿ
- ದಕ್ಷಿಣ 385.86 ಕೋಟಿ 459.01 ಕೋಟಿ
- ಪಶ್ಚಿಮ 267.36 ಕೋಟಿ 337.82 ಕೋಟಿ
- ಯಲಹಂಕ 202.27 ಕೋಟಿ 291.40 ಕೋಟಿ
- ಒಟ್ಟು 2457.30 ಕೋಟಿ 3065.82 ಕೋಟಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:40 pm, Fri, 2 August 24