ಬೆಂಗಳೂರು ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ಆರಂಭ: ರೈಲಿನ ವೇಳಾಪಟ್ಟಿ, ಟಿಕೆಟ್ ದರ ಮಾಹಿತಿ ಇಲ್ಲಿದೆ
Ernakulam - Bengaluru Vande Bharat: ಬೆಂಗಳೂರು ಮತ್ತು ಕೇರಳದ ಕೊಚ್ಚಿ (ಎರ್ನಾಕುಲಂ) ನಡುವೆ ವಾರಕ್ಕೆ 3 ದಿನ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ವಿಶೇಷ ರೈಲಿನ ಪ್ರಯಾಣ ಗುರುವಾರದಿಂದ ಆರಂಭಗೊಂಡಿದೆ. ರೈಲು ಸಂಚಾರದ ವಿಡಿಯೋವನ್ನು ಬೆಂಗಳೂರು ವಿಭಾಗೀಯ ರೈಲ್ವೆ ಮ್ಯಾನೇಜರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ರೈಲಿನ ಪ್ರಯಾಣದ ಸಮಯ, ಟಿಕೆಟ್ ದರ ಇತ್ಯಾದಿ ವಿವರ ಇಲ್ಲಿದೆ.
ಬೆಂಗಳೂರು, ಆಗಸ್ಟ್ 2: ಬೆಂಗಳೂರು ಮತ್ತು ಕೇರಳದ ಕೊಚ್ಚಿಯನ್ನು (ಎರ್ನಾಕುಲಂ) ಸಂಪರ್ಕಿಸುವ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆಗಸ್ಟ್ 1 ರಂದು ಎರ್ನಾಕುಲಂನಿಂದ ಬೆಂಗಳೂರು ಕಂಟೋನ್ಮೆಂಟ್‌ಗೆ ಪ್ರಯಾಣ ಬೆಳೆಸಿತು. ಆ ಮೂಲಕ ಸೇವೆಗ ಚಾಲನೆ ದೊರೆಯಿತು. ದಕ್ಷಿಣ ರೈಲ್ವೆಯಿಂದ ನಿರ್ವಹಿಸಲ್ಪಡುವ ಈ ರೈಲು ವಾರಕ್ಕೆ ಮೂರು ಬಾರಿ ಉಭಯ ನಗರಗಳ ಮಧ್ಯೆ ಸಂಚರಿಸುತ್ತದೆ.
ಬೆಂಗಳೂರು – ಕೊಚ್ಚಿ ವಂದೇ ಭಾರತ್ ರೈಲಿನ ಉದ್ಘಾಟನಾ ಪ್ರಯಾಣದ ವಿಡಿಯೋವನ್ನು ಬೆಂಗಳೂರು ವಿಭಾಗೀಯ ರೈಲ್ವೆ ಮ್ಯಾನೇಜರ್ (ಡಿಆರ್‌ಎಂ) ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪ್ರಕಟಿಸಿದ್ದಾರೆ.
ವಾರಕ್ಕೆ ಮೂರು ಬಾರಿ ಸೇವೆ ಒದಗಿಸುವ ರೈಲು ಸಂಖ್ಯೆ 06002 ವಂದೇ ಭಾರತ್ ವಿಶೇಷ ಎಕ್ಸ್‌ಪ್ರೆಸ್ ಬೆಂಗಳೂರು ಕಂಟೋನ್ಮೆಂಟ್‌ನಿಂದ ಎರ್ನಾಕುಲಂ ಕಡೆಗೆ ತೆರಳಿದೆ. ಕುಪ್ಪಂ ಬಳಿ ಸಾಗುತ್ತಿರುವ ರೈಲಿನ ವಿಡಿಯೋ ಇಲ್ಲಿದೆ ಎಂದು ಬೆಂಗಳೂರು ಡಿಆರ್‌ಎಂ ವಿಡಿಯೋ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ವಂದೇ ಭಾರತ್ ರೈಲಿನ ವಿಡಿಯೋ ಇಲ್ಲಿ ನೋಡಿ
Train No. 06002 Tri weekly Vande Bharat Special Express departs from Bangalore Cantonment, heading towards Ernakulam near Kuppam. Here’s to a swift and smooth journey! 🚂💨 @SWRRLY @RailMinIndia @GMSRailway @airnewsalerts @PIBBengaluru @AshwiniVaishnaw @VSOMANNA_BJP pic.twitter.com/MSscgUnq1H
— DRM Bengaluru (@drmsbc) August 1, 2024
ವಂದೇ ಭಾರತ್ ಪ್ರಯಾಣದ ಸಮಯ
06001 ಎರ್ನಾಕುಲಂ-ಬೆಂಗಳೂರು ಕಂಟೋನ್ಮೆಂಟ್ ವಂದೇ ಭಾರತ್ ಎಕ್ಸ್‌ಪ್ರೆಸ್ ವಿಶೇಷ ರೈಲು ಎರ್ನಾಕುಲಂ ಜಂಕ್ಷನ್‌ನಿಂದ (ERS) ಮಧ್ಯಾಹ್ನ 12:50 ಕ್ಕೆ ಪ್ರಯಾಣವನ್ನು ಆರಂಭಿಸಿ ರಾತ್ರಿ 10 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣವನ್ನು ತಲುಪಲಿದೆ. 06002 ಬೆಂಗಳೂರು ಕಂಟೋನ್ಮೆಂಟ್-ಎರ್ನಾಕುಲಂ ವಂದೇ ಭಾರತ್ ರೈಲು ಬೆಂಗಳೂರಿನಿಂದ ಬೆಳಗ್ಗೆ 5:30ಕ್ಕೆ ಹೊರಟು 2.20 ಕ್ಕೆ ಎರ್ನಾಕುಲಂ ತಲುಪಲಿದೆ.
ಇದನ್ನೂ ಓದಿ: ಬೆಂಗಳೂರು ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ಬುಧವಾರದಿಂದ ಆರಂಭ; ಇಲ್ಲಿದೆ ರೈಲಿನ ಸಮಯ, ವೇಳಾಪಟ್ಟಿ
ವಂದೇ ಭಾರತ್ ಎಕ್ಸ್‌ಪ್ರೆಸ್ ವಿಶೇಷ ರೈಲು ಸೇವೆ ಎರ್ನಾಕುಲಂನಿಂದ ಬುಧವಾರ, ಶುಕ್ರವಾರ ಮತ್ತು ಭಾನುವಾರದಂದು ಪ್ರತಿ ವಾರ ಲಭ್ಯವಾಗಲಿದೆ. ಬೆಂಗಳೂರಿನಿಂದ ಪ್ರತಿ ವಾರ ಗುರುವಾರ, ಶನಿವಾರ ಮತ್ತು ಸೋಮವಾರ ಲಭ್ಯವಿರುತ್ತವೆ.
ಎಲ್ಲೆಲ್ಲಿ ನಿಲುಗಡೆ?
ಈ ರೈಲು ತ್ರಿಶೂರ್, ಪಾಲಕ್ಕಾಡ್, ಪೊದನೂರ್, ತಿರುಪ್ಪೂರ್, ಈರೋಡ್ ಮತ್ತು ಸೇಲಂನಲ್ಲಿ ನಿಲುಗಡೆ ಹೊಂದಿರಲಿದೆ.
ವಂದೇ ಭಾರತ್ ಟಿಕೆಟ್ ದರ
ಹೊಸ ವಂದೇ ಭಾರತ್ ರೈಲಿನ ಟಿಕೆಟ್ ಅನ್ನು ಐಆರ್ಸಿಟಿಸಿ (ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್) ಮೂಲಕ ಮುಂಗಡ ಕಾಯ್ದಿರಿಸಬಹುದಾಗಿದೆ. ಎರ್ನಾಕುಲಂ ಮತ್ತು ಬೆಂಗಳೂರು ನಡುವಿನ ಪ್ರಯಾಣದ ದರ ಎಸಿ ಚೇರ್ ಕಾರ್‌ಗೆ 1,465 ರೂ. ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್‌ಗೆ 2,945 ರೂ. ಆಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ