ಮಂಗಳೂರು: ಪುತ್ತೂರಿನಲ್ಲಿ ಗುಡ್ಡ ಕುಸಿತ, ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್
ಒಂದೆಡೆ ಮಂಗಳೂರು ಹಾಗೂ ಘಟ್ಟದ ಮೇಲಿನ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ನಲ್ಲಿ ಗುಡ್ಡ ಕುಸಿತದಿಂದ ಸಂಚಾರ ದುಸ್ತರವಾಗಿದೆ. ಮತ್ತೊಂದೆಡೆ, ಚಾರ್ಮಾಡಿ ಘಾಟ್ ರಸ್ತೆಯಲ್ಲಿಯೂ ಅಲ್ಲಲ್ಲಿ ಭೂಕುಸಿತವಾಗುತ್ತಿದೆ. ಇದೀಗ ಸಂಪಾಜೆ ಘಾಟಿಯ ಮೂಲಕ ಮಡಿಕೇರಿ, ಮೈಸೂರಿಗೆ ಸಂಪರ್ಕ ಬೆಸೆಯುವ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲೂ ಭೂಕುಸಿತವಾಗಿ ಸಂಚಾರ ಬಂದ್ ಆಗಿದೆ.
ಮಂಗಳೂರು, ಆಗಸ್ಟ್ 2: ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಗುಡ್ಡ ಕುಸಿದ ಪರಿಣಾಮ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಸದ್ಯ ಮಣ್ಣು ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ. ಪುತ್ತೂರಿನ ಬೈಪಾಸ್ ರಸ್ತೆಯ ತೆಂಕಿಲ ಎಂಬಲ್ಲಿ ಹೆದ್ದಾರಿ ಮೇಲೆ ಶುಕ್ರವಾರ ಮುಂಜಾನೆ ಗುಡ್ಡ ಕುಸಿದು ಬಿದ್ದಿದೆ. ಪರಿಣಾಮವಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸದ್ಯ ಮಡಿಕೇರಿ ಹಾಗೂ ಮೈಸೂರು ಕಡೆಗೆ ಪ್ರಯಾಣಿಸುವವರಿಗೆ ಬದಲಿ ರಸ್ತೆಯಾಗಿ ಪುತ್ತೂರು ಸಿಟಿ ಮೂಲಕ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ನಸುಕಿನ ಜಾವ ಯಾವುದೇ ವಾಹನ ಸಂಚಾರ ಇಲ್ಲದ ಸಮಯ ಗುಡ್ಡ ಕುಸಿತವಾಗಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಸದ್ಯ ಹೆದ್ದಾರಿ ಮೇಲೆ ಬಿದ್ದಿರುವ ಮಣ್ಣು ತೆರವು ಮಾಡುವ ಕಾರ್ಯಾಚರಣೆ ನಡೆಯುತ್ತಿದೆ.
ಮಂಗಳೂರಿಗೆ ಇಂದು ಉಸ್ತುವಾರಿ ಸಚಿವರು
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಸಾಕಷ್ಟು ಹಾನಿ ಸಂಭವಿಸಿದೆ. ಹೀಗಾಗಿ ನೆರೆ, ಮಳೆ ಹಾನಿ ಪ್ರದೇಶಗಳಿಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ದಿನೇಶ್ ಗುಂಡೂರಾವ್ ಮಂಗಳೂರಿನ ಅದ್ಯಪಾಡಿ, ಕೆತ್ತಿಕಲ್, ಪಂಜಿಮೊಗರು, ಬಿ.ಸಿ ರೋಡ್ಗೆ ಭೇಟಿ ನೀಡಲಿದ್ದಾರೆ.
ಮಳೆ ಹಾನಿ ಪ್ರದೇಶಗಳ ಭೇಟಿ ಬಳಿಕ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಮಳೆಹಾನಿ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ, ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಸಭೆ ನಡೆಸಲಿದ್ದಾರೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಯಲಿದೆ.
ಇದನ್ನೂ ಓದಿ: ಶಿರಾಡಿ ಘಾಟ್ನಲ್ಲಿ ಮಣ್ಣು ತೆರವು: ಚಿಕ್ಕಮಗಳೂರಿನಲ್ಲಿ ಸಾಲು ಸಾಲು ಗುಡ್ಡ ಕುಸಿತ, ಹೆಚ್ಚಾದ ಆತಂಕ
ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಇಂದು ಕೂಡ ರಜೆ ಘೋಷಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ