ಸಾವಿರಾರು ಮನೆಗಳಿರುವ ಅಪಾರ್ಟ್​​ಮೆಂಟ್​​ಗಿಲ್ಲ ಸುಸಜ್ಜಿತ ರಸ್ತೆ ಭಾಗ್ಯ: ಪ್ರತಿವರ್ಷ ನಿವಾಸಿಗಳ ದುಡ್ಡಲ್ಲಿಯೇ ನಡೆಯುತ್ತಿದೆ ರೋಡ್​​ ದುರಸ್ತಿ!

ಬೆಂಗಳೂರಿನ ಜಾಲಹಳ್ಳಿ ಪೂರ್ವದ ಅಪಾರ್ಟ್‌ಮೆಂಟ್ ನಿವಾಸಿಗಳು ರಸ್ತೆ ದುರಸ್ತಿಗಾಗಿ ಪ್ರತಿವರ್ಷ ತಮ್ಮದೇ ಹಣ ಖರ್ಚು ಮಾಡುತ್ತಿದ್ದಾರೆ. ಜಮೀನು ವಿವಾದದಿಂದಾಗಿ ಪಾಲಿಕೆ ರಸ್ತೆ ಅಭಿವೃದ್ಧಿಪಡಿಸದ ಹಿನ್ನೆಲೆ ಸಾರ್ವಜನಿಕರು ಹೈರಾಣಾಗಿದ್ದಾರೆ. ಕಾನೂನು ವಿವಾದ ಬಗೆಹರಿಯುವವರೆಗೂ ಕನಿಷ್ಠ ರಸ್ತೆಯನ್ನು ಸುರಕ್ಷಿತವಾಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿವಾಸಿಗಳು ಮನವಿ ಮಾಡಿದ್ದಾರೆ.

ಸಾವಿರಾರು ಮನೆಗಳಿರುವ ಅಪಾರ್ಟ್​​ಮೆಂಟ್​​ಗಿಲ್ಲ ಸುಸಜ್ಜಿತ ರಸ್ತೆ ಭಾಗ್ಯ: ಪ್ರತಿವರ್ಷ ನಿವಾಸಿಗಳ ದುಡ್ಡಲ್ಲಿಯೇ ನಡೆಯುತ್ತಿದೆ ರೋಡ್​​ ದುರಸ್ತಿ!
ಸಂಪೂರ್ಣ ಹದಗೆಟ್ಟಿರುವ ರಸ್ತೆ
Image Credit source: Times Of India

Updated on: Jun 04, 2026 | 8:41 AM

ಬೆಂಗಳೂರು, ಜೂನ್​​ 04: ಮಳೆಗಾಲದಲ್ಲಿ ರಸ್ತೆ ಸಂಚಾರ ಯೋಗ್ಯವಾಗಿರಲೆಂದು ಬೆಂಗಳೂರಿನ (Bengaluru) ಜಾಲಹಳ್ಳಿ ಪೂರ್ವದ ಬೃಹತ್ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ನಿವಾಸಿಗಳು ಪ್ರತಿವರ್ಷ ತಮ್ಮ ಹಣದಲ್ಲಿಯೇ ರಸ್ತೆ ದುರಸ್ತಿ ಮಾಡಿಸುತ್ತಿದ್ದಾರೆ. ನಗರ ಪಾಲಿಕೆ ಅಥವಾ ಜನಪ್ರತಿನಿಧಿಗಳು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ವಿಫಲರಾಗಿರುವ ಕಾರಣ 1,000ಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ಅಪಾರ್ಟ್‌ಮೆಂಟ್ ನಿವಾಸಿಗಳಿಗಿದು ಅನಿವಾರ್ಯವಾಗಿದೆ. ಗಂಗಮ್ಮ ಗುಡಿ ಪೊಲೀಸ್ ಠಾಣೆ ರಸ್ತೆಯನ್ನು ಕುವೆಂಪುನಗರಕ್ಕೆ ಸಂಪರ್ಕಿಸುವ ಸುಮಾರು 100 ಮೀಟರ್ ಉದ್ದದ ರಸ್ತೆಯಲ್ಲಿ ಜಲ್ಲಿ ಕಲ್ಲು ಹಾಕಲು ವರ್ಷಕ್ಕೆ ಸುಮಾರು 80,000 ವೆಚ್ಚವನ್ನು ಇವರು ಮಾಡುತ್ತಿದ್ದಾರೆ ಎನ್ನಲಾಗಿದೆ.

ನಿವಾಸಿಗಳ ಪ್ರಕಾರ ವಿವಿಧ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಹಾಗೂ ನಾಗರಿಕ ಸಂಸ್ಥೆಗಳ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಅಧಿಕಾರಿಗಳು ಸ್ಥಳಕ್ಕೂ ಭೇಟಿ ನೀಡಿದ್ದಾರೆ. ಆದರೆ ಇದುವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ನಿವೃತ್ತ ನೌಕಾಪಡೆ ಅಧಿಕಾರಿ ಹಾಗೂ ನಿವಾಸಿ ಉನ್ನಿ ಕೃಷ್ಣನ್ ಮೆನನ್ ತಿಳಿಸಿದ್ದಾರೆ. ರಸ್ತೆ ಅಭಿವೃದ್ಧಿಯಾಗದ ಕಾರಣ ಅದರ ಸುತ್ತಮುತ್ತಲಿನ ಪ್ರದೇಶ ಕಸದ ತಾಣವಾಗಿ ಮಾರ್ಪಟ್ಟಿದೆ. ಜೊತೆಗೆ ಮಾದಕ ವಸ್ತು ವ್ಯಸನಿಗಳು ಈ ಪ್ರದೇಶವನ್ನು ತಮ್ಮ ಚಟುವಟಿಕೆಗಳಿಗೆ ಬಳಸುತ್ತಿರುವುದು ಮತ್ತೊಂದು ಸಮಸ್ಯೆಯಾಗಿದೆ ಎಂದು ನಿವಾಸಿ ವಿವೇಕ್ ಬಾಲಾಜಿ ಹೇಳಿದ್ದಾರೆ.

ಇದನ್ನೂ ಓದಿ: ಪರೀಕ್ಷೆಗೆ ಹಾಜರಾಗದೆ ಜರ್ಮನ್ ಭಾಷಾ ಪ್ರಮಾಣಪತ್ರ ಪಡೆಯಲು ಹೋಗಿ ಲಕ್ಷಾಂತರ ಹಣ ಕಳೆದುಕೊಂಡ ವ್ಯಕ್ತಿ!

ನ್ಯಾಯಾಲಯದಲ್ಲಿರುವ ಜಮೀನು ವಿವಾದ

ಜಮೀನು ವಿವಾದಕ್ಕೆ ಸಂಬಂಧಿಸಿದ ನ್ಯಾಯಾಲಯದ ವ್ಯಾಜ್ಯ ಬಾಕಿ ಇರುವುದರಿಂದ ಸರ್ಕಾರಿ ಸಂಸ್ಥೆಗಳು ಶಾಶ್ವತ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯಿಂದ ಕುಡಿಯುವ ನೀರಿನ ಸಂಪರ್ಕ ಮತ್ತು ಬಿಎಂಟಿಸಿ ಬಸ್ ಸೇವೆಗಳ ಮೇಲೂ ಪರಿಣಾಮ ಬೀರಿದೆ. ಈ ರಸ್ತೆ ಕಳೆದ ಹತ್ತು ವರ್ಷಗಳಿಂದ ಸಂಪರ್ಕ ರಸ್ತೆಯಾಗಿ ಬಳಕೆಯಲ್ಲಿದೆ. ಆದರೂ ಇದು ಇನ್ನೂ ಸುರಕ್ಷಿತವಾಗಿಲ್ಲ. ಇಲ್ಲಿ ಹಲವರು ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ. ಕಾನೂನು ವಿವಾದ ಬಗೆಹರಿಯುವವರೆಗೂ ಕನಿಷ್ಠ ರಸ್ತೆಯನ್ನು ಸುರಕ್ಷಿತವಾಗಿಸುವಂತೆ ನಮ್ಮ ಮನವಿ ಎಂದು ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ಕಾರ್ಯದರ್ಶಿ ನಟೇಶ್ ಮುತ್ತಣ್ಣ ಹೇಳಿದ್ದಾರೆ.

ಬೆಂಗಳೂರು ಉತ್ತರ ನಗರ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ನಾಗಪ್ಪ ಕಾಮಾಟಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಹಿಂದಿನ ಕಾರ್ಪೊರೇಟರ್‌ಗಳು ಜಮೀನಿನ ಹಕ್ಕುದಾರರ ಒಪ್ಪಿಗೆ ಪಡೆಯಲು ಹಲವು ಪ್ರಯತ್ನಗಳನ್ನು ನಡೆಸಿದ್ದರು. ಅನುಮತಿ ದೊರೆತ ತಕ್ಷಣ ರಸ್ತೆ ಡಾಂಬರೀಕರಣ ಕಾಮಗಾರಿ ಕೈಗೊಳ್ಳಬಹುದು ಎಂದು ತಿಳಿಸಿರೋದಾಗಿ ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 8:40 am, Thu, 4 June 26

Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us