ಬೆಂಗಳೂರಿಗೆ ಬರುತ್ತಿದ್ದ ಕಳಪೆ ಹಾಲು: ಗಡಿಯಲ್ಲಿ ಎಫ್‌ಎಸ್‌ಎಸ್‌ಎಐ ಭರ್ಜರಿ ಕಾರ್ಯಾಚರಣೆ, 30 ಕ್ಕೂ ಹೆಚ್ಚು ವಾಹನಗಳು ಜಪ್ತಿ!

ಬೆಂಗಳೂರಿನ ಹೋಟೆಲ್, ಬೇಕರಿ ಹಾಗೂ ಚಹಾ ಅಂಗಡಿಗಳಿಗೆ ನೆರೆ ರಾಜ್ಯ ತಮಿಳುನಾಡಿನಿಂದ ಹರಿದು ಬರುತ್ತಿದ್ದ ಪರವಾನಗಿ ರಹಿತ ಮತ್ತು ಕಲಬೆರಕೆ ಶಂಕಿತ ಅಗ್ಗದ ಹಾಲಿನ ಜಾಲವನ್ನು ಆಹಾರ ಸುರಕ್ಷತಾ ಅಧಿಕಾರಿಗಳು (FSSAI) ಪತ್ತೆಹಚ್ಚಿದ್ದಾರೆ. ಗಡಿಯ ಅತ್ತಿಬೆಲೆ, ಹೊಸಕೋಟೆ ಚೆಕ್‌ಪೋಸ್ಟ್‌ಗಳಲ್ಲಿ ದಾಳಿ ನಡೆಸಿ 30ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದು, ಹಾಲಿನ ಮಾದರಿಯನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ.

ಬೆಂಗಳೂರಿಗೆ ಬರುತ್ತಿದ್ದ ಕಳಪೆ ಹಾಲು: ಗಡಿಯಲ್ಲಿ ಎಫ್‌ಎಸ್‌ಎಸ್‌ಎಐ ಭರ್ಜರಿ ಕಾರ್ಯಾಚರಣೆ, 30 ಕ್ಕೂ ಹೆಚ್ಚು ವಾಹನಗಳು ಜಪ್ತಿ!
ಸಾಂದರ್ಭಿಕ ಚಿತ್ರ
Image Credit source: gettyimages.com

Updated on: Jun 21, 2026 | 2:07 PM

ಬೆಂಗಳೂರು, ಜೂನ್ 21: ಬೆಂಗಳೂರಿನ ಚಹಾ, ಕಾಫಿ ಅಂಗಡಿಗಳು, ಬೇಕರಿಗಳು ಹಾಗೂ ಹೋಟೆಲ್‌ಗಳಿಗೆ ನೆರೆ ರಾಜ್ಯದಿಂದ ಆಮದು ಆಗುತ್ತಿದ್ದ ಪರವಾನಗಿ ರಹಿತ ಹಾಗೂ ಕಲಬೆರಕೆ ಶಂಕಿತ ಹಾಲಿನ ಜಾಲವನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಪತ್ತೆಹಚ್ಚಿದೆ. ಶನಿವಾರ ಬೆಳಗ್ಗೆ ತಮಿಳುನಾಡು-ಕರ್ನಾಟಕ ಗಡಿಯ ಆಯಕಟ್ಟಿನ ಚೆಕ್‌ಪೋಸ್ಟ್‌ಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ ಅಧಿಕಾರಿಗಳು 30 ಕ್ಕೂ ಹೆಚ್ಚು ಹಾಲಿನ ಟ್ಯಾಂಕರ್ ಹಾಗೂ ವಾಹನಗಳನ್ನು ತಡೆದು ತಪಾಸಣೆ ನಡೆಸಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರಿಗೆ ತಮಿಳುನಾಡಿನಿಂದ ಬರುತ್ತಿದ್ದ ಪರವಾನಗಿ ರಹಿತ ಹಾಲಿನ ಜಾಲದ ಮೇಲೆ FSSAI ದಾಳಿ.
  • ಕೆಎಂಎಫ್ (KMF) ದರಕ್ಕಿಂತ ಕಡಿಮೆ ಬೆಲೆಗೆ ಬೇಕರಿ, ಹೋಟೆಲ್‌ಗಳಿಗೆ ಸರಬರಾಜಾಗುತ್ತಿದ್ದ ಕಳಪೆ ಹಾಲು.
  • ಕೋಲ್ಡ್ ಸ್ಟೋರೇಜ್ ಇಲ್ಲದೆ ಸಾಗಣೆಯಾಗುತ್ತಿದ್ದ ಹಾಲಿನ ಮಾದರಿಗಳು ಲ್ಯಾಬ್ ಟೆಸ್ಟಿಂಗ್‌ಗೆ ರವಾನೆ.

ವಂಚನೆಯ ಜಾಲ ಪತ್ತೆಯಾಗಿದ್ದು ಹೇಗೆ?

ಕರ್ನಾಟಕ ಹಾಲು ಮಹಾಮಂಡಳಿ (KMF) ನಿಗದಿಪಡಿಸಿರುವ ದರಕ್ಕಿಂತ ಅತ್ಯಂತ ಕಡಿಮೆ ಬೆಲೆಗೆ ಬೆಂಗಳೂರಿನ ಮುಕ್ತ ಮಾರುಕಟ್ಟೆಯಲ್ಲಿ ಹಾಲಿನ ಮಾರಾಟವಾಗುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಬೆಂಗಳೂರು ದಕ್ಷಿಣ ವಿಭಾಗದ ಸಹಾಯಕ ಕಮಿಷನರ್ ವಿಶ್ವನಾಥ್ ವಿ.ಆರ್. ನೇತೃತ್ವದ ವಿಶೇಷ ತಂಡವು ಹೊಸಕೋಟೆ, ಅತ್ತಿಬೆಲೆ ಮತ್ತು ಹೊಸೂರು ಚೆಕ್‌ಪೋಸ್ಟ್‌ಗಳಲ್ಲಿ ಮುಂಜಾನೆ ಜಂಟಿ ಕಾರ್ಯಾಚರಣೆ ಕೈಗೊಂಡಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಯಾವುದೇ ಬ್ರ್ಯಾಂಡ್ ಇಲ್ಲ, ಲೈಸೆನ್ಸ್ ಇಲ್ಲ

ದಾಳಿ ಮಾಡಲಾದ ಯಾವುದೇ ವಾಹನಗಳಲ್ಲಿದ್ದ ಹಾಲು ಯಾವುದೇ ಪ್ರಸಿದ್ಧ ಬ್ರ್ಯಾಂಡ್‌ಗೆ ಸೇರಿರಲಿಲ್ಲ. ಮುಖ್ಯವಾಗಿ, ಈ ಹಾಲಿನ ಸಾಗಣೆದಾರರು ಅಥವಾ ವಿತರಕರು ಯಾವುದೇ ಸಿಂಧುತ್ವ ಹೊಂದಿರುವ ಎಫ್‌ಎಸ್‌ಎಸ್‌ಎಐ (FSSAI) ಪರವಾನಗಿ ಹೊಂದಿರಲಿಲ್ಲ. ತಮಿಳುನಾಡಿನ ಖಾಸಗಿ ಡೈರಿಗಳಿಂದ ಬೆಂಗಳೂರಿಗೆ ತರಲಾಗುತ್ತಿದ್ದ ಈ ಹಾಲಿನ ವಾಹನಗಳಲ್ಲಿ ರೆಫ್ರಿಜರೇಷನ್ ವ್ಯವಸ್ಥೆ ಇರಲಿಲ್ಲ. ದೀರ್ಘ ಪ್ರಯಾಣದ ವೇಳೆ ತಾಪಮಾನ ಕಾಯ್ದುಕೊಳ್ಳದಿದ್ದರೆ ಹಾಲಿನಲ್ಲಿ ಬ್ಯಾಕ್ಟೀರಿಯಾಗಳು ಅತ್ಯಂತ ವೇಗವಾಗಿ ಬೆಳೆಯುತ್ತವೆ. ಇದು ಸಾರ್ವಜನಿಕರ ಆರೋಗ್ಯಕ್ಕೆ ತೀವ್ರ ಹಾನಿಕರವಾಗಿದೆ.

ಹಾಲಿನ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಅದು ಕೆಡದಂತೆ ತಡೆಯಲು ಕೆಮಿಕಲ್ ಅಥವಾ ಇತರೆ ಪದಾರ್ಥಗಳನ್ನು ಬೆರೆಸಿರುವ ಶಂಕೆಯಿದ್ದು, ಅಧಿಕಾರಿಗಳು ಹಾಲಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ತಪಾಸಣೆಗೆ ಕಳುಹಿಸಿದ್ದಾರೆ.

ಹಾಲಿನ ಗ್ರಾಹಕರು ಯಾರು?

ಈ ಕಳಪೆ ಮತ್ತು ಅಗ್ಗದ ಹಾಲನ್ನು ಬೆಂಗಳೂರಿನ ಸಣ್ಣಪುಟ್ಟ ಹೋಟೆಲ್‌ಗಳು, ಬೇಕರಿಗಳು, ಚಹಾ-ಕಾಫಿ ಅಂಗಡಿಗಳು, ಸಿಹಿ ತಿಂಡಿ ತಯಾರಕರು (ಸ್ವೀಟ್ ಮಾರ್ಟ್ಸ್) ಮತ್ತು ಮಸಾಲಾ ಪದಾರ್ಥಗಳ ತಯಾರಕರು ತಮ್ಮ ಲಾಭದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಖರೀದಿಸುತ್ತಿದ್ದರು. ತಮಿಳುನಾಡಿನಿಂದ ತರಲಾಗುತ್ತಿದ್ದ ಈ ಹಾಲನ್ನು ಸ್ಥಳೀಯವಾಗಿ ಪ್ಯಾಕ್ ಮಾಡಿ, ಹೆಸರಿಲ್ಲದ ಸ್ಥಳೀಯ ಬ್ರ್ಯಾಂಡ್‌ಗಳ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ. ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಹಾಲಿನ ಸರಬರಾಜು ಜಾಲ ನಡೆಸುತ್ತಿದ್ದ ಹಲವು ವಿತರಕರಿಗೆ ಅಧಿಕಾರಿಗಳು ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us