Ganesha Chaturthi 2021: ಗಣೇಶೋತ್ಸವಕ್ಕೆ ಅನುಮತಿ ನೀಡುವುದೇ ಆದಲ್ಲಿ ಈ ಮಾರ್ಗಸೂಚಿಗಳ ಪಾಲನೆ ಕಡ್ಡಾಯ

ಗಣೇಶೋತ್ಸವಕ್ಕೆ ಒತ್ತಡ ಹೇರಿದ್ದೇ ಆದಲ್ಲಿ ಕಟ್ಟುನಿಟ್ಟಿನ, ಕಠಿಣ ಮಾರ್ಗಸೂಚಿ ಸಲಹೆ ನೀಡುತ್ತೇವೆ ಎಂದು ಈಗಾಗಲೇ ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಅನುಮತಿ ನೀಡುವುದಾದರೆ ಪರತ್ತುಬದ್ಧ ಆಚರಣೆಗೆ ಅವಕಾಶ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.

Ganesha Chaturthi 2021: ಗಣೇಶೋತ್ಸವಕ್ಕೆ ಅನುಮತಿ ನೀಡುವುದೇ ಆದಲ್ಲಿ ಈ ಮಾರ್ಗಸೂಚಿಗಳ ಪಾಲನೆ ಕಡ್ಡಾಯ
ಗಣೇಶ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 07, 2021 | 5:12 PM

ಬೆಂಗಳೂರು: ಕಳೆದ ಒಂದೂವರೆ ವರ್ಷದಿಂದ ಆತಂಕದ ನಡುವೆಯೇ ಹಬ್ಬ ಹರಿದಿನಗಳನ್ನು ಆಚರಿಸಿ ತೃಪ್ತಿಪಟ್ಟುಕೊಳ್ಳುವ ಅನಿವಾರ್ಯತೆಯನ್ನು ಕೊರೊನಾ ಸೃಷ್ಟಿಸಿದೆ. ಕೇರಳ ಸೇರಿದಂತೆ ಕೆಲವೆಡೆ ಹಬ್ಬಗಳ ಸಂದರ್ಭದಲ್ಲಿ ನಿಯಮಾವಳಿಗಳನ್ನು ಸಡಿಲಿಸಿದ ಪರಿಣಾಮ ಸೋಂಕು ಏಕಾಏಕಿ ಉಲ್ಬಣಿಸಿರುವುದು ಸಹಜವಾಗಿಯೇ ಉಳಿದ ರಾಜ್ಯಗಳಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಆದರೆ, ಇದೀಗ ಗಣೇಶ ಚತುರ್ಥಿ ಹತ್ತಿರಾಗಿರುವ ಸಂದರ್ಭದಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವಕ್ಕೆ ಅವಕಾಶ ನೀಡಲು ಸಂಘ ಸಂಸ್ಥೆಗಳು, ಉತ್ಸವ ಸಮಿತಿಗಳು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದು, ಸರ್ಕಾರ ಇಕ್ಕಳದಲ್ಲಿ ಸಿಲುಕಿಕೊಂಡಂತೆ ವರ್ತಿಸುತ್ತಿದೆ. ಅನುಮತಿ ನೀಡಿದರೆ ಕೊರೊನಾ ಸೋಂಕು ಹೆಚ್ಚಾಗುವ ಆತಂಕ ಇರುವ ಕಾರಣ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಲು ರಾಜ್ಯ ಆರೋಗ್ಯ ಇಲಾಖೆ ಹಿಂದೇಟು ಹಾಕುತ್ತಿದೆ.

ಕೇರಳದಲ್ಲಿ ಓಣಂ, ಮೊಹರಂನಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳಗೊಂಡಿದ್ದು, ರಾಜ್ಯದಲ್ಲಿ ಇಂಥ ಸ್ಥಿತಿ ಬರಬಾರದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸುತ್ತಿದೆ. ತಜ್ಞರು ಸಹ ಆತಂಕ ವ್ಯಕ್ತಪಡಿಸಿದ ಹಿನ್ನೆಲೆ ಅನುಮತಿಗೆ ಹಿಂದೇಟು ಹಾಕಲಾಗುತ್ತಿದ್ದೆಯಾದರೂ ಸಂಘ, ಸಂಸ್ಥೆಗಳು ರಾಜ್ಯ ಸರ್ಕಾರವನ್ನು ಭಾವನಾತ್ಮಕವಾಗಿ ಕಟ್ಟಿಹಾಕುವ ಯತ್ನದಲ್ಲಿವೆ. ಹೀಗಾಗಿ ಸದ್ಯ ರಾಜ್ಯ ಸರ್ಕಾರದ ಪರಿಸ್ಥಿತಿ ಅತ್ತ ದರಿ, ಇತ್ತ ಪುಲಿ ಎಂಬಂತಾಗಿದ್ದು, ಸೆಪ್ಟೆಂಬರ್ ಐದರಂದು ಅಂತಿಮ ನಿರ್ಧಾರ ಕೈಗೊಳ್ಳುವ ಬಗ್ಗೆ ಸರ್ಕಾರ ತಿಳಿಸಿದೆ.

ಗಣೇಶೋತ್ಸವಕ್ಕೆ ಒತ್ತಡ ಹೇರಿದ್ದೇ ಆದಲ್ಲಿ ಕಟ್ಟುನಿಟ್ಟಿನ, ಕಠಿಣ ಮಾರ್ಗಸೂಚಿ ಸಲಹೆ ನೀಡುತ್ತೇವೆ ಎಂದು ಈಗಾಗಲೇ ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಅನುಮತಿ ನೀಡುವುದಾದರೆ ಪರತ್ತುಬದ್ಧ ಆಚರಣೆಗೆ ಅವಕಾಶ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಆರೋಗ್ಯ ಇಲಾಖೆ ಸಲಹೆ ನೀಡಿಯಾಗಿದೆ. ಆದರೆ, ಉತ್ಸವ ಸಮಿತಿಗಳು ಮಾತ್ರ ಹಟಕ್ಕೆ ಬಿದ್ದಿದ್ದು, ರಾಜ್ಯದಲ್ಲಿ ಎಲ್ಲ ಚಟುವಟಿಕೆಗಳಿಗೂ ಅನುಮತಿ ನೀಡಲಾಗಿದೆ, ಹೀಗಾಗಿ ಗಣೇಶೋತ್ಸವಕ್ಕೂ ಅನುಮತಿ ನೀಡಬೇಕೆಂದು ಒತ್ತಡ ಹೇರುತ್ತಿವೆ. ಸದ್ಯ ಈ ವಿಚಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಂಗಳದಲ್ಲಿದ್ದು ಅವರ ನೇತೃತ್ವದ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ.

ನಾಳೆ (ಸೆಪ್ಟೆಂಬರ್​ 5) ಗಣೇಶೋತ್ಸವ ಅನುಮತಿ ಮಾರ್ಗಸೂಚಿ ಕುರಿತಂತೆ ಸಿಎಂ ಸಭೆ ನಡೆಯಲಿದೆ. ಕಳೆದ ವರ್ಷ ಕೊರೊನಾ ಹಿನ್ನೆಲೆ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ಸಿಕ್ಕಿರಲಿಲ್ಲವಾದ್ದರಿಂದ ಈ ಬಾರಿ ಅನುಮತಿ ನೀಡುವುದೇ ಆದಲ್ಲಿ ಹೇಗೆ ನಿಯಮ ರೂಪಿಸಬೇಕೆಂಬ ಚರ್ಚೆ ನಡೆಯಲಿದೆ. ಸರ್ಕಾರದ ಮೇಲಿರುವ ಒತ್ತಡವನ್ನು ನೋಡಿದರೆ ಕೊರೊನಾ ಮಾರ್ಗಸೂಚಿ ಪ್ರಕಾರ ಮನೆ, ದೇವಸ್ಥಾನಗಳಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ನೀಡುವ ಸಾಧ್ಯತೆ ಕಾಣುತ್ತಿದೆಯಾದರೂ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ಬಹುತೇಕ ಅನುಮಾನವಿದೆ. ಒಂದು ವೇಳೆ ಅನುಮತಿ ನೀಡಿದರೂ ಕಟ್ಟುನಿಟ್ಟಿನ ಮಾರ್ಗಸೂಚಿ ಇರಲಿದೆ. ಶೇ.2ಕ್ಕಿಂತ ಹೆಚ್ಚು ಪಾಸಿಟಿವಿಟಿ ಪ್ರಮಾಣ ಇರುವ ಜಿಲ್ಲೆಗಳಲ್ಲಿ, ಗಡಿ ಜಿಲ್ಲೆಗಳಲ್ಲಿ ಗಣೇಶೋತ್ಸವ ನಿರ್ಬಂಧಕ್ಕೆ ತಜ್ಞರ ಸಲಹೆ ಇದ್ದು, ಬೇರೆಡೆಯೂ ಪ್ರತಿಷ್ಠಾಪಿಸುವ ಗಣಪತಿ ವಿಗ್ರಹ 3 ಅಡಿ ಮೀರುವಂತಿಲ್ಲ, ಪ್ರತಿಷ್ಠಾಪನೆ ದಿನದಿಂದ 3 ದಿನಗಳು ಮಾತ್ರ ಅವಕಾಶ ಎಂದು ನಿರ್ಬಂಧ ವಿಧಿಸುವ ಸಾಧ್ಯತೆ ದಟ್ಟವಾಗಿದೆ.

ಗಣಪತಿ ಹಬ್ಬದ ಪ್ರಯುಕ್ತ ಯಾವುದೇ ರೀತಿಯ ಮೆರವಣಿಗೆಗೆ ಅವಕಾಶ ಇರುವುದಿಲ್ಲ. ಗಣೇಶ ಮೂರ್ತಿ ತರುವ ವೇಳೆಯಾಗಲೀ, ವಿಸರ್ಜನೆ ಮಾಡುವ ವೇಳೆಯಾಗಲೀ ಮೆರವಣಿಗೆ ಮಾಡುವಂತಿಲ್ಲ. ಗಣೇಶೋತ್ಸವ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಮನರಂಜನಾ ಕಾರ್ಯಕ್ರಮಗಳಿಗೆ ಅವಕಾಶ ನೀಡುವಂತಿಲ್ಲ. ಗಣೇಶ ಮೂರ್ತಿಯನ್ನು ಮನೆಯಲ್ಲೇ ವಿಸರ್ಜನೆ ಮಾಡಬೇಕು ಅಥವಾ ಪಾಲಿಕೆ, ಜಿಲ್ಲಾಡಳಿತ ಸೂಚಿಸಿದ ಸ್ಥಳದಲ್ಲಿ ವಿಸರ್ಜಿಸಬೇಕು. ಗಣೇಶೋತ್ಸವ ವೇದಿಕೆಯಲ್ಲಿ ಪ್ರತಿನಿತ್ಯ ಸ್ಯಾನಿಟೈಸ್ ಕಡ್ಡಾಯ, ದೇಗುಲಕ್ಕೆ ಬರುವ ಭಕ್ತರಿಗೆ ಮಾಸ್ಕ್, ಥರ್ಮಲ್ ಸ್ಕ್ರೀನಿಂಗ್, 6 ಅಡಿಗೆ ಒಂದು ಮಾರ್ಕಿಂಗ್ ವ್ಯವಸ್ಥೆ, ಜನರು ಗುಂಪಾಗಿ ಸೇರದಂತೆ ನಿಗಾವಹಿಸುವುದು ಕೊವಿಡ್ ನಿಯಮ ಪಾಲನೆ ಕಡ್ಡಾಯ ಎಂದು ಹೇಳುವ ಸಾಧ್ಯತೆ ದಟ್ಟವಾಗಿದೆ.

ಗೌರಿ ಗಣೇಶ ಹಬ್ಬದ ಆಚರಣೆಗೆ ಏನೆಲ್ಲಾ ನಿರ್ಬಂಧ ಇರುತ್ತೆ? ಯಾವೆಲ್ಲಾ ಮಾರ್ಗಸೂಚಿ ಇರುತ್ತೆ ? 1 ಗಣೇಶ ಹಬ್ಬವನನ್ನ ಸರಳವಾಗಿ ತಮ್ಮ ತಮ್ಮ ಮನೆಯಲ್ಲಿ ಹಾಗೂ ದೇವಸ್ಥಾನಗಳಲ್ಲಿ ಆಚರಿಸಲು ಅವಕಾಶ 2 ಸಾರ್ವಜನಿಕ ಸ್ಥಳ, ಹೊರಾಂಗಣ ವೇದಿಕೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಈ ವರ್ಷವೂ ಅವಕಾಶ ಅನುಮಾನ 3 ಹೊರಾಂಗಣ ವೇದಿಕೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿದರೂ ಕಡ್ಡಾಯ ಮಾರ್ಗಸೂಚಿ ಪಾಲನೆ ಮಾಡಬೇಕು 4 ಗಣೇಶ ಮೂರ್ತಿ ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ಮೆರವಣಿಗೆ ಮಾಡಲು ನಿರ್ಬಂಧ 5 ಉತ್ಸವ ಹಾಗೂ ಮನರಂಜನಾ ಕಾರ್ಯಕ್ರಮಕ್ಕೆ ನಿರ್ಬಂಧ 6 ಪಾರಂಪರಿಕ ಮೂರ್ತಿಗಳನ್ನ ಮನೆಯಲ್ಲಿಯೇ ವಿಸರ್ಜನೆ ಮಾಡಬೇಕು ಅಥವಾ ಸಮಿಪದ ಪಾಲಿಕೆಯ ಜಿಲ್ಲಾಡಳಿತ ಹೊಂಡ ಕಲ್ಯಾಣಿಗಳಲ್ಲಿ ವಿಸರ್ಜನೆ ಮಾಡಬೇಕು 7 ಗಣೇಶ ಚತುರ್ಥಿ ಆಚರಿಸುವ ದೇವಸ್ಥಾನಗಳಲ್ಲಿ ದಿನನಿತ್ಯ ಸ್ಯಾನಿಟೈಸ್ ಕಡ್ಡಾಯ 8 ದೇವಸ್ಥಾನಗಳಲ್ಲಿ ದರ್ಶನಕ್ಕೆ ಬರುವ ಭಕ್ತರಿಗೆ ಮಾಸ್ಕ್​, ಥರ್ಮಲ್ ಸ್ಕೀನಿಂಗ್ ಕಡ್ಡಾಯ 9 ದೇವಸ್ಥಾನಗಳಲ್ಲಿ ಆರು ಅಡಿಗೊಂದರಂತೆ ಮಾರ್ಕ್ ಮಾಡಬೇಕು ಭಕ್ತರು ಕಡ್ಡಾಯ ಸಾಮಾಜಿಕ ಅತಂರ ಕಾಪಾಡುವಂತೆ ನೋಡಿಕೊಳ್ಳಬೇಕು 10 ಗೌರಿ – ಗಣೇಶ ಹಬ್ಬದ ವೇಳೆ ಹೆಚ್ಚು ಜನದಟ್ಟಣೆಯಾಗದಂತೆ ಕ್ರಮವಹಿಸುವುದು 11 ಪಾಸಿಟಿವಿಟಿ ರೇಟ್ ಶೇಕಡಾ ಎರಡಕ್ಕಿಂತ ಹೆಚ್ಚಿರುವ ಕಡೆ ಹಬ್ಬಕ್ಕಿಲ್ಲ ಅವಕಾಶ 12 ಗಡಿ ಜಿಲ್ಲೆಗಳಲ್ಲಿ ಗೌರಿ ಗಣೇಶ ಹಬ್ಬಕ್ಕೆ ನಿರ್ಬಂಧಕ್ಕೆ ತಜ್ಞರ ಸಲಹೆ

ಇದನ್ನೂ ಓದಿ: Ganesha Chaturthi 2021: ಬೆಂಗಳೂರಿನ ಕೆಲವು ಪ್ರಸಿದ್ಧ ಗಣಪತಿ ದೇವಸ್ಥಾನಗಳು 

ಗಲ್ಲಿಗಲ್ಲಿಯಲ್ಲಿ ಗಣೇಶ ಮೂರ್ತಿ ಕೂರಿಸುವಂತಿಲ್ಲ; ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ

(Ganesha Chaturthi 2021 Karnataka Government likely to impose tight restrictions for festival)

Published On - 7:15 am, Sat, 4 September 21