ಗ್ರೇಟರ್ ಬೆಂಗಳೂರು ಅಥಾರಿಟಿಯ 5 ಪಾಲಿಕೆಗಳ ವಾರ್ಡ್ ಮೀಸಲಾತಿ ಪಟ್ಟಿ ಪ್ರಕಟ
ಗ್ರೇಟರ್ ಬೆಂಗಳೂರು ಅಥಾರಿಟಿ ಜಾರಿ ಬಳಿಕ ಜಿಬಿಎ ಚುನಾವಣೆಯ ಚರ್ಚೆ ನಡೆಯುತ್ತಿರೋ ಹೊತ್ತಲ್ಲೇ ಬೆಂಗಳೂರಿನ ಐದು ಪಾಲಿಕೆಗಳ ಹೊಸ ವಾರ್ಡ್ ರಚನೆ ಅಂತಿಮಗೊಳಿಸಿರೋ ಸರ್ಕಾರ, ಇದೀಗ ಅಂತಿಮ ವಾರ್ಡ್ ಪಟ್ಟಿ ರಿಲೀಸ್ ಮಾಡಿದೆ. ಸದ್ಯ ಜಿಬಿಎ ವ್ಯಾಪ್ತಿಯಲ್ಲಿ 369 ವಾರ್ಡ್ ರಚನೆ ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಿದೆ. ಇತ್ತ ಜಿಬಿಎ ಚುನಾವಣೆಯ ಚರ್ಚೆ ಹೊತ್ತಲ್ಲೇ ವಾರ್ಡ್ ಪುನರ್ ವಿಂಗಡನೆ ಮಾಡಿರೋದು ಜಿಬಿಎ ವ್ಯಾಪ್ತಿಯಲ್ಲಿ ಕುತೂಹಲ ಕೆರಳಿಸಿದೆ.

ಬೆಂಗಳೂರು, (ನವೆಂಬರ್ 20): ಬಿಬಿಎಂಪಿಗೆ ಗುಡ್ ಬೈ ಹೇಳಿ ಗ್ರೇಟರ್ ಬೆಂಗಳೂರು ಅಥಾರಿಟಿ ಜಾರಿ ಮಾಡಿದ್ದ ಸರ್ಕಾರ, ಇದೀಗ ಐದು ನಗರ ಪಾಲಿಕೆಗಳ ವಾರ್ಡ್ ಮೀಸಲಾತಿ ಪಟ್ಟಿ ರಿಲೀಸ್ ಮಾಡಿದೆ. ಅಂತಿಮ ವಾರ್ಡ್‌ಗಳ ಪಟ್ಟಿ ಪ್ರಕಟಿಸಿರೋ ಸರ್ಕಾರ ಇದೀಗ ಈ ಹಿಂದೆ ಇದ್ದ 368 ಇದ್ದ ವಾರ್ಡ್‌ಗಳ ಸಂಖ್ಯೆಯನ್ನ 369ಕ್ಕೆ ಹೆಚ್ಚಿಸಿದೆ. ಬೆಂಗಳೂರು ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಹೆಚ್ಚುವರಿ ವಾರ್ಡ್ ಸೇರ್ಪಡೆ ಮಾಡಿದ್ದು, 369 ವಾರ್ಡ್‌ಗಳಿಗೆ ಸೀಮಿತಗೊಳಿಸಲಾಗಿದೆ. ವಾರ್ಡ್ ಮೀಸಲಾತಿ ಪಟ್ಟಿ ಪ್ರಕಟಿಸಲು ಅಕ್ಟೋಬರ್ 15ರ ಒಳಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ್ದ ಜಿಬಿಎ, ಇದೀಗ ಅಧಿಕೃತವಾಗಿ 369 ವಾರ್ಡ್ ವಿಂಗಡಿಸಿ ಅಧಿಕೃತ ಪಟ್ಟಿ ಬಿಡುಗಡೆಗೊಳಿಸಿದೆ
ಜಿಬಿಎಗೆ ಚುನಾವಣೆ ಯಾವಾಗ?
ಇನ್ನು ಬೆಂಗಳೂರಿನ ಸ್ಥಳೀಯ ಸಂಸ್ಥೆ ಚುನಾವಣೆ ನಡೆದು ಬರೋಬ್ಬರಿ 10 ವರ್ಷ ಕಳೆದಿದೆ. 2015ರಲ್ಲಿ ಬಿಬಿಎಂಪಿಯ 198 ವಾರ್ಡ್‌ಗೆ ಚುನಾವಣೆ ನಡೆದಿತ್ತು. ಆಯ್ಕೆಯಾದ ಜನಪ್ರತಿನಿಧಿಗಳು ಐದು ವರ್ಷ ಆಡಳಿತ ನಡೆಸಿ 2020ರ ಸೆಪ್ಟಂಬರ್‌ಗೆ ಅಧಿಕಾರ ಪೂರ್ಣಗೊಳಿಸಿದ್ದರು. ಆ ಬಳಿಕ 2 ಬಾರಿ ವಾರ್ಡ್ ವಿಂಗಡಣೆ ನಡೆಸಲಾಗಿತ್ತು. ಆದ್ರೆ, ಚುನಾವಣೆ ನಡೆದಿರಲಿಲ್ಲ. ಇದೀಗ ಬಿಬಿಎಂಪಿ ವಿಸರ್ಜನೆ ಮಾಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಿ, ಅದರ ಅಡಿಯಲ್ಲಿ ಐದು ನಗರ ಪಾಲಿಕೆ ಸೃಷ್ಟಿ ಮಾಡಲಾಗಿದ್ದು, ಈ ಐದು ಪಾಲಿಕೆಗೆ ವಾರ್ಡ್ ವಿಂಗಡಣೆ ಅಂತಿಮಗೊಳಿಸಲಾಗಿದೆ. ಹೀಗಾಗಿ ವಾರ್ಡ್‌ಗೆ ಮೀಸಲಾತಿ ನಿಗದಿ ಪಡಿಸಿ ಚುನಾವಣೆ ಅಧಿಸೂಚನೆ ಹೊರಡಿಸುವುದಷ್ಟೇ ಬಾಕಿ ಇದೆ. ಅಂದುಕೊಂಡಂತೆ ಆದ್ರೆ ಫೆಬ್ರವರಿ ಅಂತ್ಯದೊಳಗೆ ಜಿಬಿಎಗೆ ಚುನಾವಣೆ ನಡೆಯುವ ನಿರೀಕ್ಷೆಯಿದೆ.
ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಚುನಾವಣೆಗೆ ಸಿದ್ದತೆ: 11 ಸಂಯೋಜಕರನ್ನು ನೇಮಿಸಿದ ಬಿಜೆಪಿ
ಯಾವ್ಯಾವ ಪಾಲಿಕೆಗೆ ಎಷ್ಟು ವಾರ್ಡ್?
ಸದ್ಯ ಈ ಹಿಂದೆ ವಾರ್ಡ್ ಗಳಿಗೆ ನಾಡಪ್ರಭು ಕೆಂಪೇಗೌಡರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ಕುವೆಂಪು, ಕರ್ನಾಟಕ ರತ್ನ ನಟ ಪುನೀತ್ ರಾಜಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪ, ಕೆಂಗಲ್ ಹನುಮಂತಯ್ಯ ಹೀಗೆ ಕೆಲವು ಹೆಸರುಗಳನ್ನ ವಾರ್ಡ್‌ಗೆ ನಾಮಕರಣ ಮಾಡಲಾಗಿತ್ತು. ಪರಿಷ್ಕರಣೆ ವೇಳೆ ಕೆಲವು ಹೆಸರು ಕೈ ಬಿಡಲಾಗಿದೆ. ಸದ್ಯ ಯಾವ್ಯಾವ ಪಾಲಿಕೆಗೆ ಎಷ್ಟು ವಾರ್ಡ್ ಗಳನ್ನ ವಿಂಗಡನೆ ಮಾಡಲಾಗಿದೆ ಎನ್ನುವ ವಿವರ ಈ ಕೆಳಗಿನಂತಿದೆ.
- ಬೆಂಗಳೂರು ದಕ್ಷಿಣ ನಗರ ಪಾಲಿಕೆ – 72 ವಾರ್ಡ್.
- ಬೆಂಗಳೂರು ಉತ್ತರ ನಗರ ಪಾಲಿಕೆ – 72 ವಾರ್ಡ್
- ಬೆಂಗಳೂರು ಪಶ್ಚಿಮ ನಗರ ಪಾಲಿಕೆ – 112 ವಾರ್ಡ್
- ಬೆಂಗಳೂರು ಪೂರ್ವ ನಗರ ಪಾಲಿಕೆ – 50 ವಾರ್ಡ್
- ಬೆಂಗಳೂರು ಕೇಂದ್ರ ನಗರ ಪಾಲಿಕೆ – 63 ವಾರ್ಡ್
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ನಂತರ ಸೆಪ್ಟೆಂಬರ್ 2ರಂದು ಜಿಬಿಎ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ವಾರ್ಡ್ ವಿಂಗಡಣಾ ಆಯೋಗ ರಚನೆ ಮಾಡಲಾಗಿತ್ತು. ಆಯೋಗದ ವರದಿ ಆಧರಿಸಿ ನಗರಾಭಿವೃದ್ಧಿ ಇಲಾಖೆ ಸೆಪ್ಟೆಂಬರ್ 30 ರಂದು ಐದು ನಗರ ಪಾಲಿಕೆಯ ವಾರ್ಡ್ ವಿಂಗಡಣೆಯ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಕೆಗೆ 15 ದಿನ ಕಾಲಾವಕಾಶ ನೀಡಿತ್ತು. ಸದ್ಯ ಇದೆಲ್ಲದರ ಬಳಿಕ ಅಂತಿಮ ಪಟ್ಟಿ ರಿಲೀಸ್ ಆಗಿದ್ದು, ಜಿಬಿಎ ಚುನಾವಣೆಗೆ ಈ ವಾರ್ಡ್ ವಿಂಗಡನೆ ವರವಾಗುತ್ತ, ಶಾಪವಾಗುತ್ತ ಅನ್ನೋದನ್ನ ಕಾದುನೋಡಬೇಕಿದೆ.
Published On - 10:40 pm, Thu, 20 November 25



