ಕ್ಷುಲ್ಲಕ ಕಾರಣಕ್ಕೆ ಜಿಮ್​​ ಟ್ರೈನರ್​​ಗಳ ನಡುವೆ ಗಲಾಟೆ: ಗಂಭೀರ ಗಾಯಗೊಂಡಿದ್ದ ಓರ್ವ ಚಿಕಿತ್ಸೆ ಫಲಿಸದೆ ಸಾವು

ಬೆಂಗಳೂರಿನಲ್ಲಿ ಜಿಮ್​​ ಆ್ಯನಿವರ್ಸರಿ ಪಾರ್ಟಿ ವೇಳೆ ಕ್ಷುಲ್ಲಕ ಕಾರಣಕ್ಕೆ ಟ್ರೈನರ್‌ಗಳ ನಡುವೆ ನಡೆದ ಗಲಾಟೆಯಲ್ಲಿ ತೀವ್ರ ಗಾಯಗೊಂಡಿದ್ದ 25 ವರ್ಷದ ಯುವಕ ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಯಾಕೆ ಗಲಾಟೆ ಆಯ್ತು? ಕೊಲೆ ಯಾಕೆ ಮಾಡಿದ್ರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಮೃತ ಯುವಕನ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.

ಕ್ಷುಲ್ಲಕ ಕಾರಣಕ್ಕೆ ಜಿಮ್​​ ಟ್ರೈನರ್​​ಗಳ ನಡುವೆ ಗಲಾಟೆ: ಗಂಭೀರ ಗಾಯಗೊಂಡಿದ್ದ ಓರ್ವ ಚಿಕಿತ್ಸೆ ಫಲಿಸದೆ ಸಾವು
ಮೃತ ನಂದನ್​​
Image Credit source: Tv9 Kannada
Edited By:

Updated on: Oct 05, 2026 | 12:20 PM

ಬೆಂಗಳೂರು, ಅಕ್ಟೋಬರ್ 05: ಹಲ್ಲೆಗೆ ಒಳಗಾಗಿದ್ದ ಜಿಮ್​ ಟ್ರೈನರ್​​ ಸಾವು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಂದನ್ (25) ಮೃತ ದುರ್ದೈವಿಯಾಗಿದ್ದು, ಆ್ಯನಿವರ್ಸರಿ ವೇಳೆ ನಡೆದ ಗಲಾಟೆಯಲ್ಲಿ ನಂದನ್​ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರು ಕೊನೆಯುಸಿರೆಳೆದಿದ್ದಾರೆ. ಶನಿವಾರ ಜಿಮ್​​​​ ಮೊದಲ ವರ್ಷದ ಕಾರ್ಯಕ್ರಮ ಇತ್ತು. ರಾತ್ರಿ ಬರೋದು ತಡವಾದರೆ ಬೆಳಗ್ಗೆ ಬರೋದಾಗಿ ನಂದನ್ ಮನೆಯಲ್ಲಿ ಹೇಳಿದ್ದರು. ಕಾರ್ಯಕ್ರಮ ಮುಗಿಸಿ ಸಿಬ್ಬಂದಿ, ಪರಿಚಿತರ ಜೊತೆ ನಂದನ್​​ ಅಪಾರ್ಟ್​ಮೆಂಟ್​​ಗೆ ತೆರಳಿದ್ದು, ಈ ವೇಳೆ ಗಲಾಟೆ ನಡೆದಿತ್ತು ಎನ್ನಲಾಗಿದೆ.

ಪಾರ್ಟಿ ಬಳಿಕ ನಡೆದಿದ್ದ ಗಲಾಟೆ

ಮಾಹಿತಿಯ ಪ್ರಕಾರ ಆ್ಯನಿವರ್ಸರಿ ಬಳಿಕ ಪಾರ್ಟಿ ನಡೆದಿತ್ತು. ಆ ವೇಳೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆರಂಭವಾಗಿ, ವಾಶ್​​ರೂಂನಲ್ಲಿ ಹೊಡೆದಾಡಿಕೊಂಡಿದ್ದರು. ಆಗ ಗಾಜಿನ ವಸ್ತು ಒಡೆದು ಅದು ನಂದನ್​​ ತಲೆ ಭಾಗಕ್ಕೆ ಚುಚ್ಚಿತ್ತು ಎನ್ನಲಾಗಿದೆ. ಪ್ರಕರಣ ಸಂಬಂಧ ವಿಶ್ವನಾಥ, ವಿಜಯ್, ಶರತ್ ಮತ್ತು ನಿಶಾಂತ್ ಎಂಬವರನ್ನು ವಶಕ್ಕೆ ಪಡೆದು ಅಮೃತಹಳ್ಳಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಈಶಾನ್ಯ ವಿಭಾಗದ ಡಿಸಿಪಿ ಜಿ.ಕೆ ಮಿಥುನ್ ಕುಮಾರ್, ಕೊಲೆಯಾದ 25 ವರ್ಷದ ನಂದನ್​​ ಜಿಮ್​​ ಟ್ರೈನರ್​​ ಆಗಿದ್ದರು. ವಿಶ್ವನಾಥ, ವಿಜಯ್, ಶರತ್ ಮತ್ತು ನಿಶಾಂತ್ ಎಲ್ಲರೂ ಟ್ರೈನರ್​​ಗಳೇ. ಅನುಷ್ ಎಂಬಾತನಿಗೆ ನಂದನ್ ಪರ್ಸನಲ್ ಟ್ರೈನರ್ ಆಗಿದ್ದರು. ಅನುಷ್ ಮನೆಗೆ ಪಾರ್ಟಿಗೆ ಅಂತಾ ಹೋದಾಗ ಘಟನೆ ನಡೆದಿದೆ. ವೈಯಕ್ತಿಕ ಕಾರಣಗಳಿಗೆ ಈ ರೀತಿ ನಡೆದಿರುವ ಸಾಧ್ಯತೆ ಇದೆ. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದ್ದು, ಯಾಕೆ ಗಲಾಟೆ ಆಯ್ತು? ಕೊಲೆ ಯಾಕೆ ಮಾಡಿದ್ರು ಎಂಬುದರ ಬಗ್ಗೆ ತನಿಖೆ ನಡೆಸಲಾಗ್ತಿದೆ ಎಂದಿದ್ದಾರೆ.

ಇದನ್ನೂ ಓದಿ:  ಕ್ವಾರಿಯಲ್ಲಿ ಬಿದ್ದಿದ್ದ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್; ಎರಡು ದಿನಗಳ ಹುಡುಕಾಟದ ಬಳಿಕ ಶವವಾಗಿ ಪತ್ತೆ

ತನ್ನ ಮಗನ ಮೇಲೆ ನಾಲ್ಕು ಜನ ಸೇರಿ ಹಲ್ಲೆ ಮಾಡಿರುವ ಅನುಮಾನ ಇದೆ. ದೇಹದ ಮೇಲೆ ಹಲ್ಲೆ ನಡೆಸಿರುವ ಮತ್ತು ಕಚ್ಚಿರುವ ಗುರುತುಗಳಿದ್ದು, ತಲೆಯ ಹಿಂಭಾಗದಲ್ಲಿ ಗಾಯವಾಗಿದೆ. ಆತನೇ ತನ್ನ ಜೀವನಕ್ಕೆ ಆಧಾರವಾಗಿದ್ದ. ಇಷ್ಟು ದಿನ ನನಗಾಗಿ ಕಷ್ಟ ‌ಪಟ್ಟಿದೆ. ಈಗ ನೀನು ಸುಖವಾಗಿ ಇರು ಅಮ್ಮ ಎಂದಿದ್ದ. ಮನೆಯಲ್ಲಿ ಎಲ್ಲಾ ಕೆಲಸ ಮಾಡಿ ಜಿಮ್​​ಗೆ ಹೋಗ್ತಿದ್ದ. ಈಗ ಇದ್ದ ಒಬ್ಬ ಮಗನೂ ಇಲ್ಲದಂತಾಗಿದೆ ಎಂದು ಮೃತ ನಂದನ್​​ ತಾಯಿ ಕಣ್ಣೀರಿಟ್ಟಿದ್ದಾರೆ.’

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:17 pm, Mon, 5 October 26

ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
Loading...
Unable to load recommendations.
Follow Us