AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಜಾನ್, ಸುಪ್ರಭಾತ ಈಗಿನದಲ್ಲ ಮೊದಲಿಂದಲೂ ಬಂದಿರುವುದು; ದೇವಾಲಯಗಳಲ್ಲಿ ಭಜನೆ, ಸುಪ್ರಭಾತ ಪುನರುದ್ಧಾರ ಮಾಡೋಣ -ಹೆಚ್ಡಿಕೆ

ಮಸೀದಿ, ದೇವಸ್ಥಾನಗಳಲ್ಲಿ ಆಜಾನ್, ಸುಪ್ರಭಾತ ಈಗಿನದಲ್ಲ. ಮೊದಲಿಂದಲೂ ಬಂದಿರುವುದು ಎಂದು ಸುಪ್ರಭಾತ, ಆಜಾನ್ ಬಗ್ಗೆ ಬಾಲ್ಯದ ನೆನಪುಗಳನ್ನು ಹೆಚ್ಡಿ ಕುಮಾರಸ್ವಾಮಿ ಹಂಚಿಕೊಂಡಿದ್ದಾರೆ.

ಆಜಾನ್, ಸುಪ್ರಭಾತ ಈಗಿನದಲ್ಲ ಮೊದಲಿಂದಲೂ ಬಂದಿರುವುದು; ದೇವಾಲಯಗಳಲ್ಲಿ ಭಜನೆ, ಸುಪ್ರಭಾತ ಪುನರುದ್ಧಾರ ಮಾಡೋಣ -ಹೆಚ್ಡಿಕೆ
ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ
TV9 Web
| Edited By: |

Updated on:Apr 05, 2022 | 11:59 AM

Share

ಬೆಂಗಳೂರು: ಆಜಾನ್(Azaan) ಸಂಘರ್ಷ ವಿಚಾರಕ್ಕೆ ಸಂಬಂಧಿಸಿ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಸರಣಿ ಟ್ವೀಟ್ ಮೂಲಕ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಮಸೀದಿ, ದೇವಸ್ಥಾನಗಳಲ್ಲಿ ಆಜಾನ್, ಸುಪ್ರಭಾತ ಈಗಿನದಲ್ಲ. ಮೊದಲಿಂದಲೂ ಬಂದಿರುವುದು ಎಂದು ಸುಪ್ರಭಾತ, ಆಜಾನ್ ಬಗ್ಗೆ ಬಾಲ್ಯದ ನೆನಪುಗಳನ್ನು ಹೆಚ್ಡಿ ಕುಮಾರಸ್ವಾಮಿ ಹಂಚಿಕೊಂಡಿದ್ದಾರೆ. ದೇವಾಲಯಗಳಲ್ಲಿ ನಡೆಯುತ್ತಿದ್ದ ಭಜನೆ, ಸುಪ್ರಭಾತ, ಶ್ಲೋಕ ಕ್ರಮೇಣ ಕಡಿಮೆಯಾಗುತ್ತಿದೆ. ನಾವೆಲ್ಲರೂ ಸೇರಿ ಅವುಗಳನ್ನು ಮತ್ತೆ ಪುನರುದ್ಧಾರ ಮಾಡೋಣ ಎಂದು ಕರೆ ನೀಡಿದ್ದಾರೆ.

ಹೆಚ್ಡಿ ಕುಮಾರಸ್ವಾಮಿ ಮಾಡಿರುವ ಟ್ವೀಟ್ ಈ ರೀತಿ ಇದೆ ದೇವಾಲಯಗಳಲ್ಲಿ ಸೂರ್ಯೋದಯಕ್ಕೆ ಮುನ್ನವೇ ಸುಪ್ರಭಾತ ಕೇಳಿಸುವುದು, ಮಸೀದಿಗಳಲ್ಲಿ ಅಲ್ಲಾಹ್ ಕೂಗುವುದನ್ನು ನಾನು ಬಾಲ್ಯದಿಂದಲೂ ಕೇಳಿಕೊಂಡೇ ಬೆಳೆದಿದ್ದೇನೆ. ನಮ್ಮ ಊರಿನಲ್ಲಿ ನಿತ್ಯವೂ ನಾನು ಕೇಳುತ್ತಿದ್ದ ಸದ್ದುಗಳಾಗಿದ್ದವು ಇವು. ಅದೇ ರೀತಿ ಊರಿನ ಸಿನಿಮಾ ಟೆಂಟಿನಲ್ಲಿ ರಾತ್ರಿಯ ಸೆಕೆಂಡ್ ಶೋ ಆರಂಭಕ್ಕೆ ಮುನ್ನ ಘಂಟಸಾಲ ಅವರು ಭಕ್ತಿಪರವಶರಾಗಿ ಹಾಡಿರುವ ʼನಮೋ ವೆಂಕಟೇಶʼ ಎನ್ನುವ ಶ್ರೀ ವೆಂಕಟೇಶ್ವರ ಸ್ವಾಮಿಯವರ ಕೀರ್ತನೆಯನ್ನು ಧ್ವನಿವರ್ಧಕದಲ್ಲಿ ಕೇಳಿಸುತ್ತಿದ್ದನ್ನು ನನ್ನಂತೆಯೇ ಅನೇಕರು ಕೇಳಿರುತ್ತಾರೆ. ಅಷ್ಟೇ ಅಲ್ಲ, ಸಂಜೆಯಾದರೆ ಇಡೀ ಊರಿನ ಜನರೆಲ್ಲ ಗುಡಿಯಲ್ಲಿ ಸೇರಿ ಭಜನೆ ಮಾಡುತ್ತಿದ್ದದ್ದು, ಕರತಾಳ ಹಿಡಿದು ರಾತ್ರಿ ಹತ್ತು ಗಂಟೆವರೆಗೂ ಭಗವಂತನ ಭಜನೆಯಲ್ಲಿ ಲೀನವಾಗುತ್ತಿದ್ದ ದಿನಗಳು ಇನ್ನೂ ನನ್ನ ಸ್ಮೃತಿಪಟಲದಲ್ಲಿ ಹಚ್ಚಹಸಿರಾಗಿವೆ. ನಾನೂ ಬಹಳ ಶ್ರದ್ಧೆಯಿಂದ ಭಜನೆಯಲ್ಲಿ ಪಾಲ್ಗೊಳ್ಳುತ್ತಿದ್ದೆ.

ನಸುಕಿನಲ್ಲಿ ಸುಪ್ರಭಾತ & ಅಲ್ಲಾಹ್ ಕೂಗುವ ಪರಿಪಾಠ ನಿನ್ನೆ-ಇಂದಿನದಲ್ಲ. ಅನಾದಿ ಕಾಲದಿಂದಲೂ, ಧರ್ಮಗಳು ಹುಟ್ಟಿದಾಗಿನಿಂದಲೂ ನಡೆದುಕೊಂಡೇ ಬಂದಿವೆ. ನಮ್ಮ ಮನೆಗಳಲ್ಲೂ ಬೆಳಗ್ಗೆಯೇ ಪೂಜೆ ನೆರೆವೇರಿಸಿ ಮಂಗಳಕರವಾದ ಘಂಟೆ ಭಾರಿಸುವುದನ್ನು ನಿತ್ಯವೂ ಕೇಳುತ್ತೇವೆ. ದೈವಕ್ಕೆ ಪ್ರಿಯವಾದ ಆ ಘಂಟೆಯ ಸದ್ದು ಯಾರಿಗೂ ಕಿರಿಕಿರಿ ಉಂಟು ಮಾಡಿಲ್ಲ. ಅದೂ ಅನಾದಿ ಕಾಲದಿಂದಲೂ ನಡೆದುಕೊಂಡೇ ಬಂದಿದೆ. ಅಲ್ಲದೆ, ದೇವಾಲಯಗಳಲ್ಲಿ ಮಹಾ ಮಂಗಳಾರತಿ ಸಂದರ್ಭಗಳಲ್ಲಿ ಢಮರುಗ, ಜಾಗಟೆ, ಘಂಟೆ ಇತ್ಯಾದಿಗಳನ್ನು ಭಾರಿಸುವ ಸಂಪ್ರದಾಯ ಇದ್ದೇ ಇದೆ. ಶಿವನಿಗೆ ಪ್ರಿಯವಾದ ಢಮರುಗ ಯಾರಿಗಾದರೂ ಕಿರಿಕಿರಿ ಮಾಡಿದೆಯೇ? ಇಲ್ಲವಲ್ಲ. ಹಿಂದುಗಳಾದ ನಾವು ನಮ್ಮ ದೇವರಿಗೆ ಭಕ್ತಿಯಿಂದ ಸಲ್ಲಿಸುವ ಸೇವೆಗಳಿಗೆ ಮುಸ್ಲೀಮರು ಸೇರಿ ಅನ್ಯ ಧರ್ಮದ ಯಾರಿಂದಲೂ ಆಕ್ಷೇಪ ಇಲ್ಲದಿರುವಾಗ ಮಸೀದಿಗಳ ಧ್ವನಿವರ್ಧಕಗಳ ಬಗ್ಗೆ ತಕರಾರು ತೆಗೆಯುವುದು ಏಕೆ? ಅಗತ್ಯಬಿದ್ದರೆ, ಶಬ್ದದ ಪ್ರಮಾಣವನ್ನು ವೈಜ್ಞಾನಿಕವಾಗಿ ಚಿಂತಿಸಿ ಕಡಿಮೆ ಮಾಡಲಿ. ಆ ಬಗ್ಗೆ ಮುಸ್ಲಿಂ ಧರ್ಮಗುರುಗಳೂ ಆಲೋಚನೆ ಮಾಡಲಿ.

ಭಾರತೀಯ ಸಂವಿಧಾನವು ಜಗತ್ತಿನ ಸರ್ವಶ್ರೇಷ್ಠ ಸಂವಿಧಾನ. ಅದರಲ್ಲಿ ಅಡಕವಾಗಿರುವ ಸಹಿಷ್ಣುತೆಯ ಆಶಯಕ್ಕೆ ಧಕ್ಕೆ ತರುವುದು ಬೇಡ. ಸಂಸತ್ತಿನಲ್ಲಿರುವ ಸಂವಿಧಾನ ಪ್ರತಿಗೆ ಶಿರಬಾಗಿ ನಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಆಶಯವನ್ನು ಹಿಂದೂ ಸಂಘಟನೆಗಳು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ನಾಯಕರು ಮೋದಿ ಅವರ ಮೇಲ್ಪಂಕ್ತಿಯನ್ನು ಗೌರವಿಸಬೇಕು. ದೇವಾಲಯಗಳಲ್ಲಿ ನಡೆಯುತ್ತಿದ್ದ ನಿತ್ಯ ಭಜನೆ, ಸುಪ್ರಭಾತ ವೇಳೆ ಕೇಳಿಬರುತ್ತಿದ್ದ ಶ್ಲೋಕ, ಕೀರ್ತನೆ, ಭಜನೆಗಳು ಕ್ರಮೇಣ ಕಣ್ಮರೆಯಾಗಿವೆ. ನಾವೆಲ್ಲರೂ ಸೇರಿ ಅವುಗಳ ಪುನರುದ್ಧಾರ ಮಾಡೋಣ. ಮಕ್ಕಳಲ್ಲಿ ಸಾತ್ವಿಕ ಸಂಸ್ಕಾರವನ್ನು ಬೆಳೆಸೋಣ. ಮಕ್ಕಳಲ್ಲಿ ಸಾತ್ವಿಕ ಸಂಸ್ಕಾರವನ್ನು ಬೆಳೆಸೋಣ. ಅದರ ಹೊರತಾಗಿ ಇನ್ನೊಂದು ಧರ್ಮದ ನಂಬಿಕೆಗಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸೋಣ ಎಂದು ಸರಣಿ ಟ್ವೀಟ್ ಮೂಲಕ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಇದನ್ನೂ ಓದಿ: ಆಜಾನ್​ಗೆ ಮಾತ್ರ ಶಬ್ದ ಮಿತಿ ಇಲ್ಲ, ಬಸ್​ಗೂ ಶಬ್ದ ಮಿತಿಯ ಆದೇಶವಿದೆ; ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

ತುಮಕೂರಿನಲ್ಲಿ ಮದುವೆಯಾದ ಏಳೇ ದಿನಕ್ಕೆ ಯುವಕ ಎಸ್ಕೇಪ್! ಪ್ರೀತಿಸಿ ಅಂತರ್ಜಾತಿ ವಿವಾಹ ಆಗಿದ್ದ ಹುಡುಗಿ ಈಗ ಬೀದಿಪಾಲು

Published On - 11:58 am, Tue, 5 April 22