ಹೋಲಿಕೆಯೇ ಅಸಂಬದ್ಧ: ಬೆಂಗಳೂರು ಬಿಟ್ಟು ಹೈದರಾಬಾದ್ಗೆ ಬರಲು ಉದ್ಯಮಿಗಳನ್ನು ಆಹ್ವಾನಿಸಿದ್ದಕ್ಕೆ ಸಿಎಂ ಬೊಮ್ಮಾಯಿ ತಿರುಗೇಟು
ಬೆಂಗಳೂರಿನಿಂದ ಉದ್ಯಮಿಗಳು ಗಂಟುಮೂಟೆ ಕಟ್ಟಿಕೊಂಡು ಹೈದರಾಬಾದ್ಗೆ ಬರಬೇಕು ಎಂದು ತೆಲಂಗಾಣ ಸಚಿವ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ
ಬೆಂಗಳೂರು: ನಗರದಿಂದ ಉದ್ಯಮಿಗಳು ಗಂಟುಮೂಟೆ ಕಟ್ಟಿಕೊಂಡು ಹೈದರಾಬಾದ್ಗೆ ಬರಬೇಕು ಎಂದು ತೆಲಂಗಾಣ ಸಚಿವ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಪ್ರತಿಕ್ರಿಯಿಸಿದ್ದಾರೆ. ‘ಬೆಂಗಳೂರನ್ನು ಹೈದರಾಬಾದ್ಗೆ ಹೋಲಿಸುವುದೇ ಹಾಸ್ಯಾಸ್ಪದ ಸಂಗತಿ. ಇಡೀ ಜಗತ್ತಿನ ಜನರು, ಉದ್ಯಮಿಗಳು ಬೆಂಗಳೂರಿಗೆ ಬರುತ್ತಿದ್ದಾರೆ. ಅತಿಹೆಚ್ಚು ಸ್ಟಾರ್ಟಪ್‌ಗಳು ಬೆಂಗಳೂರಿನಲ್ಲಿವೆ. ಕರ್ನಾಟಕದ ಆರ್ಥಿಕತೆಯು ಕಳೆದ ಮೂರು ತ್ರೈಮಾಸಿಕತೆಯಲ್ಲಿ ಉನ್ನತ ಸ್ತರದಲ್ಲಿದೆ. ಬೆಂಗಳೂರಿಗೆ ಭಾರತದ ಉದ್ಯಮಿಗಳು ಮಾತ್ರವಲ್ಲ, ವಿಶ್ವದೆಲ್ಲೆಡೆಯಿಂದ ಜನರು ಬರುತ್ತಿದ್ದಾರೆ. ಬೆಂಗಳೂರನ್ನು ಹೈದರಾಬಾದ್ಗೆ, ಕರ್ನಾಟವನ್ನು ತೆಲಂಗಾಣಕ್ಕೆ ಹೋಲಿಸುವುದು ಸರಿಯಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.
ತಮ್ಮ ದೆಹಲಿ ಯಾತ್ರೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇಂದು ಸಂಜೆ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗುತ್ತೇನೆ. ಮೇಕೆದಾಟು, ಮಹದಾಯಿ ಬಗ್ಗೆ ಚರ್ಚೆ ನಡೆಸುತ್ತೇನೆ. ನಾಳೆ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಗೆ ಸಮಯ ನಿಗದಿಯಾಗಿದೆ. ಅಮಿತ್ ಶಾ, ಮತ್ತು ಜೆ.ಪಿ.ನಡ್ಡಾ ಭೇಟಿಗೂ ಸಮಯ ಕೇಳಿದ್ದೇನೆ. ಸಂಗೊಳ್ಳಿ ರಾಯಣ್ಣ ಶಾಲೆಯನ್ನು ಸೈನಿಕ ಶಾಲೆಗೆ ಸೇರಿಸಲು ಒಪ್ಪಿಗೆ ಸಿಕ್ಕಿದೆ’ ಎಂದು ಪ್ರತಿಕ್ರಿಯಿಸಿದರು. ಸಂಪುಟ ವಿಸ್ತರಣೆ ಬಗ್ಗೆ ದೆಹಲಿ ವರಿಷ್ಠರಿಂದ ಯಾವುದೇ ಮೆಸೇಜ್ ಬಂದಿಲ್ಲ. ಬಿಜೆಪಿ ವರಿಷ್ಠರ ಭೇಟಿ ಬಳಿಕ ವಿಸ್ತರಣೆ ಬಗ್ಗೆ ಅವರ ಇಂಗಿತ ತಿಳಿಯಲಿದೆ. ಹೈಕಮಾಂಡ್ ಮಟ್ಟದಲ್ಲಿಯೂ ಸಂಪುಟ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ನಡ್ಡಾ, ಅಮಿತ್ ಶಾ ಅವರ ಭೇಟಿ ವೇಳೆ ಈ ವಿಚಾರ ಬರಬಹುದು. ಈ ಸಮಯದಲ್ಲಿ ದೆಹಲಿಗೆ ಶಾಸಕರು ಹೋಗುವುದು ಸ್ವಾಭಾವಿಕ ಎಂದಷ್ಟೇ ಹೇಳಿದರು.
‘ಈ ಸರ್ಕಾರದ ರಿಮೋಟ್ ಕಂಟ್ರೋಲ್ ಆರ್ಎಸ್ಎಸ್ ಬಳಿಯಿದೆ’ ಎನ್ನುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕುಮಾರಸ್ವಾಮಿ ಅವರದು ಆಧಾರರಹಿತ ಆರೋಪ. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಪೂರಕ ಆಡಳಿತ ನೀಡಲು ಯತ್ನಿಸುತ್ತೇನೆ. ಕೆಲವು ಹೇಳಿಕೆಗಳಿಂದ ಸಮಸ್ಯೆಗಳು ಪರಿಹಾರ ಆಗಲ್ಲ’ ಎಂದು ಹೇಳಿದರು.
ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆ ವಿವಾದ ವಿಚಾರ ಕುರಿತು ಪ್ರತಿಕ್ರಿಯಿಸಿ, ನಾವು ಯಾವುದೇ ಹೊಸ ಆದೇಶವನ್ನ ಮಾಡಿಲ್ಲ. ಯಾವುದೇ ಸಮಾಜ ಅಥವಾ ಸಂಘಟನೆ ಕಾನೂನು ಪಾಲಿಸಬೇಕು. ಕಾನೂನು, ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳುತ್ತೇವೆ. ಆಜಾನ್ ಬಗ್ಗೆ ಹೈಕೋರ್ಟ್ ಆದೇಶ ನೀಡಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಪು ಪಾಲಿಸುತ್ತೇವೆ. ಪೊಲೀಸ್ ಠಾಣೆ ಮಟ್ಟದಲ್ಲಿ ಈಗಾಗಲೇ ಸಭೆ ಮಾಡಿದ್ದೇವೆ ಎಂದು ಹೇಳಿದರು. ಮೈಕ್ಗಳಿಂದ ಹೊರಹೊಮ್ಮುವ ಶಬ್ದ ಎಷ್ಟು ಡೆಸಿಬಲ್ ಇರಬೇಕು ಎನ್ನುವ ಕುರಿತು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ತಿಳಿಸಿದೆ ಎಂದರು.
ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೈದರಾಬಾದ್ಗೆ ಬನ್ನಿ ಎಂದ ತೆಲಂಗಾಣ ಮಂತ್ರಿ
ಬೆಂಗಳೂರಿನ ಕಳಪೆ ರಸ್ತೆಗಳ ಕುರಿತು ನವೋದ್ಯಮಿಯೊಬ್ಬರು ಮಾಡಿರುವ ಟ್ವೀಟ್ಗೆ ಪ್ರತಿಕ್ರಿಯಿಸಿರುವ ತೆಲಗಾಣದ ಸಚಿವ ಕೆ.ಟಿ.ರಾಮಾರಾವ್ ಒಂದು ಆಫರ್ ಕೊಟ್ಟಿದ್ದಾರೆ. ‘ನಿಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಂಡು, ಹೈದರಾಬಾದ್ಗೆ ಬಂದು ಬಿಡಿ’ ಎಂದು ಸಲಹೆ ಮಾಡಿದ್ದಾರೆ. ಹಣಕಾಸು ನಿರ್ವಹಣೆಗೆ ಸಂಬಂಧಿಸಿದ ಹಲವು ಸೇವೆಗಳನ್ನು ಒದಗಿಸುವ ‘ಖಾತಾಬುಕ್’ ಕಂಪನಿಯ ಸ್ಥಾಪಕ ಮತ್ತು ಸಿಇಒ ರವೀಶ್ ನರೇಶ್ ಬೆಂಗಳೂರಿನ ರಸ್ತೆಗಳ ಬಗ್ಗೆ ಬೇಸರದಿಂದ ಟ್ವೀಟ್ ಮಾಡಿದ್ದರು. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಮತ್ತು ಕೋರಮಂಗಲ ಪ್ರದೇಶದಲ್ಲಿರುವ ಸಮಸ್ಯೆಗಳನ್ನು ಟ್ವಿಟರ್ನಲ್ಲಿ ಪ್ರಸ್ತಾಪಿಸಿದ್ದರು. ‘ಕೋಟ್ಯಂತರ ಡಾಲರ್ ಮೊತ್ತದ ತೆರಿಗೆ ಪಾವತಿಸಿದರೂ ಈ ಪ್ರದೇಶದಲ್ಲಿ ರಸ್ತೆಗಳು ಸರಿಯಿಲ್ಲ. ಪವರ್ ಕಟ್ ಪ್ರತಿದಿನ ಆಗುತ್ತಿದೆ. ನೀರು ಸರಿಯಾಗಿ ಬರುತ್ತಿಲ್ಲ, ಫುಟ್ಪಾತ್ ಇಲ್ಲ. ವಿಮಾನ ನಿಲ್ದಾಣಕ್ಕೆ ಹೋಗಬೇಕೆಂದರೆ ಮೂರು ಗಂಟೆ ಬೇಕಾಗುತ್ತದೆ. ಭಾರತದ ಸಿಲಿಕಾನ್ ವ್ಯಾಲಿಗಿಂತಲೂ ಗ್ರಾಮೀಣ ಪ್ರದೇಶದಲ್ಲಿಯೇ ಅತ್ಯುತ್ತಮ ಸೌಕರ್ಯಗಳಿವೆ ಎಂದು ಹೇಳಿದ್ದರು.
ಇದನ್ನೂ ಓದಿ: ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ: ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಗರಿಗೆದರಿದ ಆಸೆ
ಇದನ್ನೂ ಓದಿ: Karnataka Rain: ಬೆಂಗಳೂರು, ಉತ್ತರ ಕನ್ನಡ, ಕರಾವಳಿ, ಮಲೆನಾಡಿನಲ್ಲಿ ಇನ್ನೆರಡು ದಿನ ಗುಡುಗು ಸಹಿತ ಮಳೆ