Karnataka Rain: ರಾಜ್ಯದಲ್ಲಿ ಇನ್ನೂ 4 ದಿನ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ
ಮಳೆ ನಿಂತರೂ ನದಿಪಾತ್ರದ ಪ್ರದೇಶಗಳಲ್ಲಿ ನೆರೆ ನಿಂತಿಲ್ಲ. ಉಪ್ಲಾಡಿ, ಬೆಟ್ಲಕ್ಕಿ, ಬನ್ನಾಡಿ ಪರಿಸರದಲ್ಲಿ ನಿನ್ನೆ ಕೆಲ ಮನೆಗಳಿಗೆ ನೆರೆ ನುಗ್ಗಿದ್ದು, ಬೆಳ್ಳಂಬೆಳಿಗ್ಗೆ ಜನರ ರಕ್ಷಣೆಗೆ ಕುಂದಾಪುರ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಧಾವಿಸಿದರು.
ಬೆಂಗಳೂರು: ರಾಜ್ಯದಲ್ಲಿ ಇನ್ನೂ 4 ದಿನ ಭಾರಿ ಮಳೆಯಾಗುವ (Rain) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಬೀದರ್, ಬೆಳಗಾವಿ, ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 3 ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಮಳೆ ನಿಂತರೂ ನಿಲ್ಲದ ನೆರೆ:
ಉಡುಪಿ: ಮಳೆ ನಿಂತರೂ ನದಿಪಾತ್ರದ ಪ್ರದೇಶಗಳಲ್ಲಿ ನೆರೆ ನಿಂತಿಲ್ಲ. ಕೋಟ ಸಮೀಪದ ಉಪ್ಲಾಡಿಯಲ್ಲಿ ನೆರೆಯಿಂದ ದಿಗ್ಬಂಧನ ಮಾಡಲಾಗಿದೆ. ಉಪ್ಲಾಡಿ, ಬೆಟ್ಲಕ್ಕಿ, ಬನ್ನಾಡಿ ಪರಿಸರದಲ್ಲಿ ನಿನ್ನೆ ಕೆಲ ಮನೆಗಳಿಗೆ ನೆರೆ ನುಗ್ಗಿದ್ದು, ಬೆಳ್ಳಂಬೆಳಿಗ್ಗೆ ಜನರ ರಕ್ಷಣೆಗೆ ಕುಂದಾಪುರ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಧಾವಿಸಿದರು. ನೆರೆ ನೀರು ಸುತ್ತುವರಿದ ಮನೆಗಳಿಂದ ಸ್ಥಳೀಯರ ರಕ್ಷಣಾ ಕಾರ್ಯ ಮಾಡಲಾಗಿದೆ. ಇನ್ನೂ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಕೋಟ ಸಮೀಪದ ಬನ್ನಾಡಿ ಹಡೋಲು ಬಳಿ ನೆರೆ ನೀರಿನಲ್ಲೇ ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟನೆ ಮಾಡಿದರು. ಕೃಷಿಕರು ಕೋಟ-ಗೋಳಿಯಂಗಡಿ ಸಂಪರ್ಕ ರಾಜ್ಯ ಹೆದ್ದಾರಿ ಬಂದ್ ಮಾಡಿದರು. ಪ್ರತಿವರ್ಷ ಮಳೆಗಾಲದಲ್ಲಿ ಭಾರಿ ಮಳೆಗೆ ಇಲ್ಲಿನ ಕೃಷಿ ಭೂಮಿ ಮುಳುಗಡೆ ಹಿನ್ನಲೆ, ಮಡಿವಾಳ ಸಾಲು ಹೊಳೆ ಮತ್ತು ಕೃಷಿ ಭೂಮಿ ಮಧ್ಯೆ ರಾಜ್ಯ ಹೆದ್ದಾರಿ ಹಾದು ಹೋಗುತ್ತದೆ.
ಇದನ್ನೂ ಓದಿ: Virat Kohli: ಟೀಮ್ ಇಂಡಿಯಾದಿಂದ ವಿರಾಟ್ ಕೊಹ್ಲಿಗೆ ಗೇಟ್ಪಾಸ್..?
ರಾಜ್ಯ ಹೆದ್ದಾರಿಯ ಬಲಭಾಗದಿಂದ ಎಡಭಾಗಕ್ಕೆ ನೀರು ಹರಿಯುವ ಸೇತುವೆ ಸಮಸ್ಯೆಯಿದ್ದು, ಸಂಪರ್ಕ ಸೇತುವೆ ಇಲ್ಲದ ಹಿನ್ನೆಲೆ ಕೃತಕ ನೆರೆ ಈ ಭಾಗದ ಜನರಿಗೆ ತೊಂದರೆ ಉಂಟು ಮಾಡಿದೆ. ನೆರೆಯಿಂದಾಗಿ ಕೃಷಿ ಭೂಮಿಗೆ ಹರಿದು ಬರುವ ಅಂತರಗಂಗೆಯಿಂದ ಕೃಷಿ ನಾಶವಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕೋರಿ ಈ ಭಾಗದ ಜನ ರಾಜ್ಯ ಹೆದ್ದಾರಿ ಬಂದ್ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕುಂದಾಪುರ ಎಸಿ ರಾಜು ಅವರಿಗೆ ಸ್ಥಳೀಯರಿಂದ ಮನವಿ ಮಾಡಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ 66 ಬಂದ್ ಮಾಡಿವ ಎಚ್ಚರಿಕೆ ನೀಡಿದ್ದಾರೆ.
ಇಂದು ಯಾವೆಲ್ಲ ರಾಜ್ಯಗಳಲ್ಲಿ ಮಳೆ?:
ಕೊಂಕಣ, ಗೋವಾ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಮಧ್ಯಪ್ರದೇಶ, ವಿದರ್ಭ, ಛತ್ತೀಸ್‌ಗಢ, ಒಡಿಶಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ನಾಗಾಲ್ಯಾಂಡ್, ಮಣಿಪುರ, ಮೇಘಾಲಯ, ತ್ರಿಪುರಾ, ಗುಜರಾತ್, ಮರಾಠವಾಡ, ಕರಾವಳಿ ಆಂಧ್ರ ಪ್ರದೇಶ, ಯಾನಂ, ತೆಲಂಗಾಣದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು, ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ ಮತ್ತು ಮಾಹೆಯಲ್ಲಿ ಕೂಡ ಮಳೆಯಾಗಲಿದೆ.
ಇದನ್ನೂ ಓದಿ: ಅಗ್ನಿಪಥ್ ಯೋಜನೆ ದೇಶದಲ್ಲಿ ತರಬೇತಿ ಪಡೆದ ಉಗ್ರರನ್ನು ಹೊಂದುವಂತೆ ಮಾಡುತ್ತದೆ: ರಾಜಸ್ಥಾನದ ಸಚಿವ
Published On - 1:33 pm, Wed, 6 July 22