ರಸ್ತೆ ಗುಂಡಿಗೆ ಬಿದ್ದು ಮೂಳೆ ಮುರಿದುಕೊಂಡ ಮಹಿಳೆ; 1.97 ಲಕ್ಷ ರೂ. ಆಸ್ಪತ್ರೆ ಬಿಲ್, ಜಿಬಿಎ ವಿರುದ್ದ ಯುವತಿ ಗರಂ!

ಬೆಂಗಳೂರಿನಲ್ಲಿ ಮಳೆನೀರಿನಲ್ಲಿ ಅಡಗಿದ್ದ ರಸ್ತೆ ಗುಂಡಿಗೆ ಬಿದ್ದು ಮಹಿಳೆಯೊಬ್ಬರ ಹಿಮ್ಮಡಿ ಮೂಳೆ ತೀವ್ರವಾಗಿ ಮುರಿದಿದೆ. ಅನಿವಾರ್ಯವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಸಂತ್ರಸ್ತೆಗೆ ಬರೋಬ್ಬರಿ 1.97 ಲಕ್ಷ ರೂಪಾಯಿ ಆಸ್ಪತ್ರೆ ಬಿಲ್ ಬಂದಿದ್ದು, ಜಿಬಿಎ ನಿರ್ಲಕ್ಷ್ಯ ಮತ್ತು ಕಳಪೆ ರಸ್ತೆಗಳ ವಿರುದ್ಧ ಯುವತಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ರಸ್ತೆ ಗುಂಡಿಗೆ ಬಿದ್ದು ಮೂಳೆ ಮುರಿದುಕೊಂಡ ಮಹಿಳೆ; 1.97 ಲಕ್ಷ ರೂ. ಆಸ್ಪತ್ರೆ ಬಿಲ್, ಜಿಬಿಎ ವಿರುದ್ದ ಯುವತಿ ಗರಂ!
ರಸ್ತೆ ಗುಂಡಿಗೆ ಬಿದ್ದು ಮೂಳೆ ಮುರಿದುಕೊಂಡ ಮಹಿಳೆ

Updated on: Sep 06, 2026 | 1:36 PM

ಮುಖ್ಯಾಂಶಗಳು

  • ಬೆಂಗಳೂರಿನ ಮಳೆನೀರು ಗುಂಡಿಗೆ ಬಿದ್ದು ಮಹಿಳೆಯ ಹಿಮ್ಮಡಿ ಮೂಳೆ ಮುರಿದಿದೆ.
  • ಶಸ್ತ್ರಚಿಕಿತ್ಸೆಗೆ ಒಳಪಟ್ಟ ಸಂತ್ರಸ್ತೆಗೆ 1.97 ಲಕ್ಷ ರೂಪಾಯಿ ಆಸ್ಪತ್ರೆ ಬಿಲ್ ಆಗಿದೆ.
  • ಬಿಬಿಎಂಪಿ ನಿರ್ಲಕ್ಷ್ಯದ ವಿರುದ್ಧ ಸಂತ್ರಸ್ತ ಕುಟುಂಬ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಬೆಂಗಳೂರು, ಸೆಪ್ಟೆಂಬರ್ 06: ನಗರದಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಹೆಚ್ಚುತ್ತಲೇ ಇದೆ. ಮಳೆ ನೀರು ತುಂಬಿದ್ದ ಗುಂಡಿಯನ್ನು ಗಮನಿಸದೆ ಬಿದ್ದು, ಬೆಂಗಳೂರಿನ ನಿವಾಸಿ ಮಹಿಳೆ ಐಶಾನಿ ತಮ್ಮ ಹಿಮ್ಮಡಿಯ ಮೂಳೆಯನ್ನು ಮುರಿದುಕೊಂಡಿದ್ದಾರೆ. ಈ ಅಪಘಾತದಿಂದಾಗಿ ಅವರು ಅನಿವಾರ್ಯವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸದ್ಯ 1.97 ಲಕ್ಷ ರೂಪಾಯಿಗಳ ಬೃಹತ್ ಆಸ್ಪತ್ರೆ ಬಿಲ್ ಪಾವತಿಸುವಂತಾಗಿದೆ ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ನಡೆದಿದ್ದೇನು?

ಬೆಂಗಳೂರಿನ ನಿವಾಸಿ ಐಶಾನಿ ತಮ್ಮ ದೈನಂದಿನ ಕೆಲಸಕ್ಕಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮಳೆಯಿಂದಾಗಿ ರಸ್ತೆಯ ತುಂಬೆಲ್ಲಾ ನೀರು ನಿಂತಿದ್ದರಿಂದ ಅಡಿಯಲ್ಲಿದ್ದ ದೊಡ್ಡ ಗುಂಡಿ ಆಕೆಗೆ ಕಾಣಿಸಲಿಲ್ಲ. ಕಾಲಿಡುತ್ತಿದ್ದಂತೆ ಆಯತಪ್ಪಿ ಗುಂಡಿಗೆ ಬಿದ್ದ ಆಕೆಯ ಕಾಲಿಗೆ ಪೆಟ್ಟಾಗಿದೆ. ತಕ್ಷಣವೇ ಆಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಪಾಸಣೆ ನಡೆಸಿದ ವೈದ್ಯರು ಹಿಮ್ಮಡಿಯ ಮೂಳೆಗಳು ನಜ್ಜುಗುಜ್ಜಾಗಿರುವುದನ್ನು ದೃಢಪಡಿಸಿದ್ದಾರೆ.

ಜಿಬಿಎ ವಿರುದ್ಧ ಆಕ್ರೋಶ

ಗಂಭೀರವಾಗಿ ಪೆಟ್ಟಾಗಿದ್ದರಿಂದ ಆಕೆಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಆಪರೇಷನ್ ಮಾಡಲಾಗಿದೆ. ಆಸ್ಪತ್ರೆಯ ವೆಚ್ಚ ಬರೋಬ್ಬರಿ 1.97 ಲಕ್ಷ ರೂಪಾಯಿ ದಾಟಿದ್ದು, ಮಧ್ಯಮ ವರ್ಗದ ಈ ಕುಟುಂಬಕ್ಕೆ ಆರ್ಥಿಕವಾಗಿ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಈ ಬಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಐಶಾನಿ, ‘ನಾವು ಕಟ್ಟುವ ತೆರಿಗೆಯ ಹಣ ಎಲ್ಲಿಗೆ ಹೋಗುತ್ತಿದೆ? ಬಿಬಿಎಂಪಿಯ (ಜಿಬಿಎ) ನಿರ್ಲಕ್ಷ್ಯಕ್ಕೆ ನಾವು ನಮ್ಮ ದೇಹದ ಭಾಗಗಳನ್ನು ಕಳೆದುಕೊಂಡು ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳಬೇಕೇ?’ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಳೆಯಾಗುತ್ತಿದ್ದಂತೆ ರಸ್ತೆಗಳ ಗುಂಡಿಗಳು ಕಾಣಿಸದೆ ಜೀವಕ್ಕೆ ಅಪಾಯ ತರುತ್ತಿದ್ದರೂ ನಾಗರಿಕ ಸಂಸ್ಥೆಗಳು ಕಣ್ಣುಮುಚ್ಚಿ ಕುಳಿತಿವೆ. ತಕ್ಷಣವೇ ಸಂಬಂಧಪಟ್ಟ ರಸ್ತೆಯ ಗುಂಡಿಗಳನ್ನು ಮುಚ್ಚಿ, ತಮಗೆ ಆದ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಸಂತ್ರಸ್ತೆ ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us